Site icon Vistara News

ವಿಸ್ತಾರ ಅಂಕಣ: ಎನ್ಇಪಿ ವಿರೋಧಿಸುವ ರಾಜ್ಯ ಸರಕಾರ ಯಾರಿಗೆ ಅನ್ಯಾಯ ಮಾಡುತ್ತಿದೆ ಗೊತ್ತೇ?

nep vs sep

ಕಳೆದ ತಿಂಗಳು ಇದೇ ಅಂಕಣದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (national education policy- ಎನ್‌ಇಪಿ) ಹಾಗೂ ಇದೀಗ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ರೂಪಿಸಲು ಮುಂದಾಗಿರುವ ರಾಜ್ಯ ಶಿಕ್ಷಣ ನೀತಿಯ(ಎಸ್‌ಇಪಿ) ಸಾಧಕ ಬಾಧಕಗಳ ಕುರಿತು ಚರ್ಚಿಸಿದ್ದೆವು. ಅದರ ಲಿಂಕ್‌ ಇಲ್ಲಿದೆ.

ರಾಜ್ಯದಲ್ಲಿ ಎನ್‌ಇಪಿಯನ್ನೇ ಮುಂದುವರಿಸಬೇಕು, ಎಸ್‌ಇಪಿ (State education policy) ಬೇಡ ಎಂಬ ಕೂಗು ಜೋರಾಗಿದೆ. ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಶಿಕ್ಷಕರು, ವಿದ್ಯಾರ್ಥಿ ಸಮೂಹ, ವಿದ್ವಾಂಸರು, ರಾಜಕಾರಣಿಗಳು ಸರಣಿ ಸಭೆಗಳನ್ನು, ವಿಚಾರಸಂಕಿರಣಗಳನ್ನು ನಡೆಸಿ ಈ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಪೀಪಲ್ಸ್‌ ಫೋರಮ್‌ ಫಾರ್‌ ಕರ್ನಾಟಕ ಎಜುಕೇಷನ್‌ ಎಂಬ ಶೈಕ್ಷಣಿಕ ತಜ್ಞರ ಸಂಸ್ಥೆಯ ವತಿಯಿಂದ ಬೃಹತ್‌ ಪ್ರಮಾಣದ ಪ್ರಯತ್ನ ಭರದಿಂದ ಸಾಗಿದೆ. ರಾಜ್ಯದಲ್ಲೂ ಎನ್‌ಇಪಿಯನ್ನೇ ಜಾರಿ ಮಾಡಬೇಕು ಎಂದು ಸಹಿ ಸಂಗ್ರಹ ಅಭಿಯಾನ ನಡೆದಿದೆ. ಎನ್‌ಇಪಿ ರದ್ದುಪಡಿಸಬಾರದು ಎಂದು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಖಾಸಗಿ ಅನುದಾನ ರಹಿತ ಶಾಲೆಗಳ ಸಂಘಟನೆಯೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಇಷ್ಟೆಲ್ಲ ಆದರೂ ರಾಜ್ಯ ಸರ್ಕಾರ ಅದೇಕೋ ಎಸ್‌ಇಪಿಯನ್ನು ಜಾರಿ ಮಾಡುವುದರಿಂದ ಹಿಂದೆ ಸರಿಯುವಂತೆ ಕಾಣುತ್ತಿಲ್ಲ.

ಯಾರನ್ನೂ ಹೇಳದೇ, ಕೇಳದೇ ಎನ್‌ಇಪಿ ಜಾರಿ ಮಾಡಲಾಗಿದೆ ಎಂಬ ಹಸಿಹಸಿ ಸುಳ್ಳನ್ನು ಕೆಲವರು ಹೇಳುತ್ತಿದ್ದಾರೆ. ಯಾರು ಬೇಕಾದರೂ ಪರಿಶೀಲಿಸಬಹುದಾದಂತಹ ಸತ್ಯ ಸಂಗತಿಯೆಂದರೆ, ಬಹುಶಃ ಭಾರತದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಸಾರ್ವಜನಿಕ ಚರ್ಚೆಯ ನಂತರ, ಸರ್ಕಾರಗಳಿಂದ ಸಲಹೆ ಪಡೆದ ನಂತರ ಅತ್ಯಂತ ಪಾರದರ್ಶಕವಾಗಿ ಹಾಗೂ ಪ್ರಜಾತಾಂತ್ರಿಕವಾಗಿ ಜಾರಿಯಾಗಿರುವ ಏಕೈಕ ಕಾಯ್ದೆ ಎಂದರೆ ರಾಷ್ಟ್ರೀಯ ಶಿಕ್ಷಣ ನೀತಿ-2020. ಯಾರ ಮಾತನ್ನೂ ಕೇಳಲೇ ಇಲ್ಲ ಎಂದು ಹೇಳುತ್ತಿರುವ ಈಗಿನ ಕಾಂಗ್ರೆಸ್‌ ಸರ್ಕಾರದ ಹಿಂದಿನ ಅವತಾರ (2013-2018ರವರೆಗೆ) ಇದ್ದಾಗಲೇ ಎನ್‌ಇಪಿ ಕುರಿತು ಸಲಹೆಯನ್ನು ಪಡೆಯಲಾಗಿದೆ. ರಾಜ್ಯ ಸರ್ಕಾರದ ಅಧಿಕಾರಿಗಳೇ ತಮ್ಮ ಸಲಹೆಯನ್ನು ಅಧಿಕೃತವಾಗಿ ನೀಡಿದ್ದಾರೆ.

ಆದರೆ ಇದನ್ನು ಒಪ್ಪಿಕೊಳ್ಳಲು ಮನಸ್ಸಿಲ್ಲ ಎನ್ನುವುದೇ ದುರಂತ. ಯಾವುದೇ ವ್ಯವಸ್ಥೆ ಸರಿಯಿಲ್ಲದಿದ್ದರೆ, ಮೊದಲಿಗೆ ಅದನ್ನು ಒಪ್ಪಿಕೊಳ್ಳಬೇಕು. ಒಪ್ಪಿಕೊಂಡ ನಂತರ ಬದಲಾವಣೆಗೆ ಮುಂದಾಗಬೇಕು. ಬದಲಾವಣೆ ಆದ ನಂತರದ ಹೊಸ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಲೋಪಗಳಿದ್ದೇ ಇರುತ್ತವೆ, ಅವುಗಳನ್ನು ಸರಿಪಡಿಸಿಕೊಂಡು ನಡೆಯಬೇಕು. ಅದು ಬಿಟ್ಟು, ಇನ್ನೊಂದು ವ್ಯವಸ್ಥೆ ರೂಪಿಸುತ್ತೇನೆ ಎನ್ನುವುದು ಎಷ್ಟು ಸರಿ? ಈಗ ಕರ್ನಾಟಕದಲ್ಲಿ ಆಗುತ್ತಿರುವುದೂ ಅದೇ.

ಈಗಿನ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಹೊಸತರಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್‌ ಅವರು ಎನ್‌ಇಪಿ ಬಗ್ಗೆ ಪ್ರತಿಕ್ರಿಯಿಸಿದ್ದರು. ಹಾಗೆಲ್ಲ ಸುಖಾಸುಮ್ಮನೆ ಎನ್‌ಇಪಿಯನ್ನು ರದ್ದುಮಾಡಲು ಆಗುವುದಿಲ್ಲ, ಈ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ ಎಂಬಂತೆ, ಅತ್ಯಂತ ವೃತ್ತಿಪರವಾಗಿ ಮಾತನಾಡುತ್ತಿದ್ದರು. ಆದರೆ ಅದೇಕೋ ಮುಂದುವರಿದಂತೆ ರಾಜಕೀಯ ಒತ್ತಡಗಳಿಗೆ ಒಳಗಾಗಿರಬಹುದು. ಈಗ ನೇರವಾಗಿ ಎನ್‌ಇಪಿ ರದ್ದಿನ ವಿಚಾರವನ್ನೇ ಮಾತನಾಡುತ್ತಾರೆ. ಎನ್‌ಇಪಿ ರದ್ದು ಶತಃಸಿದ್ಧ ಎನ್ನುತ್ತಿದ್ದಾರೆ.

ಜೂನ್‌ನಲ್ಲಿ ಈ ಬಗ್ಗೆ ಮಾತನಾಡಿದ್ದ ಸುಧಾಕರ್‌ ಅವರು, ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ರದ್ದುಗೊಳಿಸಿ ರಾಜ್ಯ ಶಿಕ್ಷಣ ನೀತಿ(ಎಸ್ಇಪಿ) ಜಾರಿಗೊಳಿಸುತ್ತೇವೆ. ಈ ಹಿಂದೆ ತರಾತುರಿಯಲ್ಲಿ ಎನ್ಇಪಿ ಜಾರಿಗೊಳಿಸಲಾಗಿತ್ತು ಎಂದಿದ್ದರು.

ಆದರೆ ಈಗ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ. ಎಂ.ಸಿ. ಸುಧಾಕರ್‌ ಅವರು, ಡಾ. ಕಸ್ತೂರಿ ರಂಗನ್‌ 2016ರಲ್ಲಿ ಕರ್ನಾಟಕ ಸರಕಾರಕ್ಕೆ ನೀಡಿದ ವರದಿಯ ಹಲವು ಅಂಶಗಳನ್ನೇ ಎನ್‌ಇಪಿಯಲ್ಲೂ ಉಲ್ಲೇಖವಾಗಿ ತೆಗೆದು ಕೊಳ್ಳಲಾಗಿದೆ. ವಿದೇಶಗಳ ವಿಶ್ವ ವಿದ್ಯಾನಿಲಯಗಳ ಹಲವು ವಿಷಯಗಳನ್ನು ನಕಲು ಮಾಡಿ ಎನ್‌ಇಪಿ ರೂಪಿಸಿ ಅದನ್ನೇ ಕ್ರಾಂತಿಕಾರಕ ಎಂದು ಬಿಂಬಿಸಲಾಗುತ್ತಿದೆ. ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಇಲ್ಲಿನ ಸಂಸ್ಕೃತಿಗೆ ಏನು ಶಿಕ್ಷಣಬೇಕೋ ಅದನ್ನು ನೀಡುವುದಕ್ಕಾಗಿ ನಾವು ಎಸ್‌ಇಪಿ ಜಾರಿಗೆ ಮುಂದಾಗಿದ್ದೇವೆ ಎಂದಿದ್ದಾರೆ.

ಇನ್ನೂ ಮುಂದುವರಿದು, ಪೂರ್ವಸಿದ್ಧತೆ ಇಲ್ಲದೆ, ಅಗತ್ಯ ಸೌಕರ್ಯ ಕಲ್ಪಿಸದೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿಸಲು ಹಿಂದಿನ ಸರ್ಕಾರ ತರಾತುರಿಯಲ್ಲಿ ಎನ್‌ಇಪಿ ಜಾರಿಗೆ ತಂದಿತು. ಗುಜರಾತ್‌ ಸೇರಿದಂತೆ ಅವರದೇ ಪಕ್ಷದ ಆಡಳಿತವಿದ್ದ ರಾಜ್ಯಗಳಲ್ಲಿ ಇಂದಿಗೂ ಸಿದ್ಧತೆ ಪೂರ್ಣಗೊಂಡಿಲ್ಲ. ಪದವಿಯಲ್ಲಿ ಬಹು ನಿರ್ಗಮನ ಪದ್ಧತಿಯಿಂದಾಗಿ ಹಲವು ವಿದ್ಯಾರ್ಥಿಗಳು ಮಧ್ಯದಲ್ಲೇ ಪದವಿ ತೊರೆಯಲು ಕಾರಣವಾಗಿದೆ. ಏಕ ಕಾಲಕ್ಕೆ ಎರಡು ಕೋರ್ಸ್‌ ಮಾಡುವ ಅವಕಾಶವೂ ಅವೈಜ್ಞಾನಿಕ. ರಾಜ್ಯದಲ್ಲಿ ಬೋಧಕರ ಕೊರತೆ ಇದೆ. ಹಲವು ದಶಕಗಳಿಂದ ನೇಮಕಾತಿ ನಡೆದಿಲ್ಲ. ಕಲಾ ವಿದ್ಯಾರ್ಥಿಯೊಬ್ಬ ವಿಜ್ಞಾನದ ಒಂದು ವಿಷಯ ತೆಗೆದುಕೊಂಡರೆ ಆ ಕಾಲೇಜಿನಲ್ಲಿ ಅಗತ್ಯ ಪ್ರಯೋಗಾಲಯ ಬೇಕಿರುತ್ತದೆ. ಅದಕ್ಕೆ ತಕ್ಕಂತಹ ಸೌಕರ್ಯ ಒದಗಿಸದೇ ಹೊಸ ನೀತಿ ಅನುಷ್ಠಾನಗೊಳಿಸಿದರೆ ಆ ವಿದ್ಯಾರ್ಥಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಇಂತಹ ಎಲ್ಲ ನ್ಯೂನತೆಗಳನ್ನು ಸರಿಪಡಿಸಿಕೊಂಡು, ಇತರೆ ರಾಜ್ಯಗಳು, ಹಿಂದಿನ ಶಿಕ್ಷಣ ನೀತಿಯನ್ನು ಪರಿಶೀಲಿಸಿ, ಎನ್‌ಇಪಿಗೆ ವಿರುದ್ಧವಲ್ಲದ ಸಮಗ್ರ ಶಿಕ್ಷಣ ನೀತಿ ಜಾರಿಗೆ ತರಲಾಗುವುದು ಎಂದಿದ್ದಾರೆ.

ಸಚಿವರ ಮಾತು ಮೇಲ್ನೋಟಕ್ಕೆ ಸರಿ ಎಂದೇ ಕಾಣುತ್ತದಾದರೂ ಅನೇಕ ಗೊಂದಲಗಳಿಂದ ಕೂಡಿದೆ. ಪೂರ್ವಸಿದ್ಧತೆ ಇಲ್ಲದೇ ಎನ್‌ಇಪಿ ಅನುಷ್ಠಾನ ಮಾಡಲಾಗಿದೆ ಎಂದಿದ್ದಾರೆ. ಅಂದರೆ ಪೂರ್ವಸಿದ್ಧತೆ ಮಾಡಿಕೊಂಡು ಎನ್‌ಇಪಿ ಜಾರಿ ಮಾಡಿದ್ದರೆ ಒಳ್ಳೆಯದಿತ್ತು ಎಂದಲ್ಲವೇ? ಅಂದಮೇಲೆ ಎನ್‌ಇಪಿಯಲ್ಲಿ ಸಮಸ್ಯೆಯಿಲ್ಲ, ಜಾರಿಯಲ್ಲಿ ಮಾತ್ರ ಸಮಸ್ಯೆ ಎಂದಾಯಿತು ಅಲ್ಲವೇ? ಕಲಾ ವಿದ್ಯಾರ್ಥಿಯೊಬ್ಬ ವಿಜ್ಞಾನ ವಿಷಯ ತೆಗೆದುಕೊಂಡರೆ ಅಲ್ಲಿ ಪ್ರಯೋಗಾಲಯ ಬೇಕಾಗುತ್ತದೆ ಎಂದಿದ್ದಾರೆ. ಹಾಗಾದರೆ ಪ್ರಯೋಗಾಲಯ ಕಲ್ಪಿಸುವುದು ಮೂಲಸೌಕರ್ಯ ಸಮಸ್ಯೆ ಅಲ್ಲವೇ? ಅದನ್ನು ಕಲ್ಪಿಸುವುದು ಸರ್ಕಾರದ ಕೆಲಸವಲ್ಲವೇ? ಇಷ್ಟೆಲ್ಲದರ ನಂತರ ಸಚಿವರು ಹೇಳುವುದು, ಎನ್‌ಇಪಿಗೆ ವಿರುದ್ಧವಲ್ಲದ ಎಸ್‌ಇಪಿ ಜಾರಿ ಮಾಡುತ್ತೇವೆ ಎಂದು. ಎನ್‌ಇಪಿ ಸರಿಯಿಲ್ಲ ಎಂದಮೇಲೆ ಅದಕ್ಕೆ ವಿರುದ್ಧವಲ್ಲದ ನೀತಿಯನ್ನು ರೂಪಿಸುತ್ತೇವೆ ಎಂದು ಹೇಳುವ ಅಗತ್ಯವೇನಿದೆ?

ಒಟ್ಟಿನಲ್ಲಿ, ಈಗಾಗಲೇ ಹೇಳಿದಂತೆ ಡಾ. ಎಂ.ಸಿ. ಸುಧಾಕರ್‌ ಅವರು ವೃತ್ತಿಪರವಾಗಿಯೇ ಯೋಚಿಸುತ್ತಿದ್ದವರು. ಆದರೆ ಬಹುಶಃ ಪಕ್ಷದ ಹೈಕಮಾಂಡ್‌ ಸೂಚನೆಗೆ ಬದ್ಧರಾಗಿರಲು ಪ್ರಯತ್ನಿಸುತ್ತಾ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಲ್ಲಿ ಸಚಿವರನ್ನು ದೂಷಿಸಿ ಪ್ರಯೋಜನವಿಲ್ಲ. ಆದರೆ ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಶಿಕ್ಷಣ ಕ್ಷೇತ್ರದಲ್ಲಿ ಈ ರೀತಿ ಗೊಂದಲ ಮೂಡಿಸುವ ಅಗತ್ಯವಿರಲಿಲ್ಲ.

ಇದನ್ನೂ ಓದಿ: ವಿಸ್ತಾರ ಅಂಕಣ: ಮನಮೋಹನ್‌ ಸಿಂಗ್‌ ಮಾದರಿ ಅಥವಾ ನರೇಂದ್ರ ಮೋದಿ ಮಾದರಿ: ಮುಸ್ಲಿಂ ಕಲ್ಯಾಣಕ್ಕೆ ಯಾವುದು ಸರಿ?

ಇಷ್ಟೆಲ್ಲ ಸರ್ಕಸ್ಸಿನ ನಂತರ ಎಸ್‌ಇಪಿ ಜಾರಿಯಾಗುವುದು ಎಲ್ಲಿಗೇ? ಕರ್ನಾಟಕ ರಾಜ್ಯ ಸರ್ಕಾರದ ವ್ಯಾಪ್ತಿಯ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ, ಸರ್ಕಾರಿ ಶಾಲೆಗಳಿಗೆ, ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ. ಈಗಾಗಲೆ ಖಾಸಗಿ ಶಾಲೆಗಳು ಎಸ್‌ಇಪಿಯನ್ನು ವಿರೋಧಿಸುತ್ತಿವೆ. ಪೋಷಕರ ಒತ್ತಡವೂ ಹೆಚ್ಚಾದರೆ ಖಾಸಗಿ ಶಾಲೆಗಳು ಒಂದೊಂದಾಗಿ ಸಿಬಿಎಸ್‌ಇ, ಐಸಿಎಸ್‌ಇ ಕಡೆಗೆ ವಾಲುತ್ತವೆ. ಖಾಸಗಿ ವಿವಿಗಳು, ಡೀಮ್ಡ್‌ ವಿವಿಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ರಾಜ್ಯದ ಪ್ರತಿ ಜಿಲ್ಲೆಯಲ್ಲಿರುವ ಜವಾಹರ ನವೋದಯ ವಿದ್ಯಾಲಯಗಳು, ಪ್ರತಿ ಜಿಲ್ಲೆಯಲ್ಲೂ ಹತ್ತಾರು ಸಂಖ್ಯೆಯಲ್ಲಿರುವ ಖಾಸಗಿ ಸಿಬಿಎಸ್‌ಇ ಶಾಲೆಗಳು, ಕೇಂದ್ರೀಯ ಶಾಲೆಗಳು ಎಸ್‌ಇಪಿಯಿಂದ ಹೊರಗುಳಿಯುತ್ತವೆ. ಇವೆಲ್ಲ ಸಂಸ್ಥೆಗಳೂ ಎನ್‌ಇಪಿಯನ್ನು ಅಪ್ಪಿಕೊಂಡು ತಮ್ಮ ಮಕ್ಕಳನ್ನು ದೇಶದ ಮುಖ್ಯವಾಹಿನಿಯ ಶಿಕ್ಷಣ ವ್ಯವಸ್ಥೆಯಲ್ಲಿ ಮುಂದುವರಿಸುತ್ತವೆ. ಆದರೆ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಓದುತ್ತಿರುವ ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ, ಗ್ರಾಮೀಣ ಪೋಷಕರ ಮಕ್ಕಳು ಎನ್‌ಇಪಿಯಿಂದ ವಂಚಿತರಾಗುತ್ತಾರೆ. ಎನ್‌ಇಪಿ ಮೌಲ್ಯಮಾಪನ, ಕ್ರೆಡಿಟ್‌ ನೀಡಿಕೆ, ವ್ಯಾಸಂಗದ ವಿಧಾನಗಳು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿವೆ. ಆದರೆ ಇವ್ಯಾವುವೂ ಇರದ ಎಸ್‌ಇಪಿ ಶಿಕ್ಷಣ ಪಡೆದ ಬಡವರ, ಗ್ರಾಮೀಣರ ಮಕ್ಕಳು ಉನ್ನತ ವ್ಯಾಸಂಗಕ್ಕೆಂದು ಅನ್ಯ ರಾಜ್ಯ ಹಾಗೂ ಅನ್ಯ ದೇಶಗಳಿಗೆ ತೆರಳುವಾಗ ಅನೇಕ ಅಡಚಣೆಗಳನ್ನೂ ಎದುರಿಸುತ್ತಾರೆ. ಈಗಿನ ಸರ್ಕಾರ ತಾನು ಬಡವರ ಪರ, ಹಿಂದುಳಿದ ವರ್ಗಗಳ ಪರ, ಅಲ್ಪಸಂಖ್ಯಾತ ಪರ ಎಂದು ಘೊಷಿಸಿಕೊಳ್ಳುತ್ತದೆ. ಆದರೆ ಅಸಲಿಗೆ ಎನ್‌ಇಪಿ ಕುರಿತ ಆಲೋಚನೆಯು ಈ ವರ್ಗಗಳಿಗೇ ನೇರವಾಗಿ ಹೊಡೆತ ಕೊಡುತ್ತದೆ ಎನ್ನುವುದನ್ನು ಸರ್ಕಾರ ಅರಿತಂತೆ ಕಾಣುತ್ತಿಲ್ಲ.

ಶಿಕ್ಷಣ ಎನ್ನುವುದು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಆಗಮಿಸುತ್ತದೆ. ಇದೀಗ ಕೇಂದ್ರ ಸರ್ಕಾರವು ಎನ್‌ಇಪಿ-2020 ಜಾರಿ ಮಾಡಿದೆ. ಕರ್ನಾಟಕ ಸರ್ಕಾರವೂ ಇದನ್ನು ಮಾನ್ಯ ಮಾಡಿ, ರಾಜ್ಯಕ್ಕೆ ಅಗತ್ಯವಿರುವ ಸಣ್ಣಪುಟ್ಟ ಬದಲಾವಣೆಗಳನ್ನೂ ಮಾಡಿಕೊಂಡು ಜಾರಿ ಮಾಡಬಹುದು. ಜಾರಿ ಮಾಡದೇ ಇದ್ದರೆ ಏನಾಗುತ್ತದೆ? ಸಮವರ್ತಿ ಪಟ್ಟಿಯಲ್ಲಿರುವ ವಿಚಾರಗಳಲ್ಲಿ ಕೇಂದ್ರದ ನೀತಿಗೆ ವಿರುದ್ಧವಾಗಿ ರಾಜ್ಯದ ನೀತಿ ಇರುವಂತಿಲ್ಲ. ಹಾಗೊಮ್ಮೆ ಎರಡೂ ನೀತಿಗಳಲ್ಲಿ ವ್ಯತ್ಯಾಸಗಳು ಕಂಡುಬಂದರೆ, ಕೇಂದ್ರದ ನೀತಿಯೇ ಮಾನ್ಯವಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಕೇಂದ್ರ ಸರ್ಕಾರವು ತನ್ನ ಸಾಂವಿಧಾನಿಕ ಅಧಿಕಾರವನ್ನೇ ಬಳಸಿದರೂ ಎಸ್‌ಇಪಿ ಜಾರಿಗೆ ಅವಕಾಶ ಇರುವುದಿಲ್ಲ. ಇದೆಲ್ಲ ಅಂಶಗಳನ್ನೂ ರಾಜ್ಯ ಸರ್ಕಾರ ಮನಗಂಡು, ಕಾನೂನಾತ್ಮಕವಾಗಿ ನೈತಿಕವಾಗಿ, ಬಡವರ-ಹಿಂದುಳಿದವರ ಪರವಾದ ನಿರ್ಧಾರವನ್ನು ಕೈಗೊಳ್ಳಬೇಕು. ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಭೂ ಸುಧಾರಣಾ ಕಾಯ್ದೆ ರೂಪಿಸಿದ್ದರು. ಈ ಸಮಯದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಕಾಯ್ದೆಗೆ ತಿದ್ದುಪಡಿ ಮಾಡಿ ಇನ್ನಷ್ಟು ಬಲಪಡಿಸಿ ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ಅವರೇ ಎದೆತಟ್ಟಿ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಇದೇ ಮಾರ್ಗವನ್ನು ಎನ್‌ಇಪಿ ವಿಚಾರದಲ್ಲೂ ರಾಜ್ಯ ಸರ್ಕಾರ ಅನುಸರಿಸಲಿ. ಎನ್‌ಇಪಿ ರದ್ದುಪಡಿಸುತ್ತೇವೆ ಎನ್ನುವ ರಾಜಕೀಯ ಹೇಳಿಕೆಗಳನ್ನು ಬಿಟ್ಟು, ಎನ್‌ಇಪಿಯನ್ನು ಎಲ್ಲ ರಾಜ್ಯಗಳಿಗಿಂತ ಉತ್ತಮವಾಗಿ ಜಾರಿ ಮಾಡುತ್ತೇವೆ ಎನ್ನುವ ಸವಾಲನ್ನು ಸ್ವೀಕರಿಸಿ ಮುನ್ನಡೆಯುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದು ಅಲ್ಲವೇ?

ಇದನ್ನೂ ಓದಿ: ವಿಸ್ತಾರ ಅಂಕಣ: ಉಪರಾಷ್ಟ್ರೀಯತೆಯನ್ನು ಬೆಂಬಲಿಸುವ ರಾಷ್ಟ್ರೀಯ ಕಾಂಗ್ರೆಸ್‌!

Exit mobile version