Site icon Vistara News

ವಿಸ್ತಾರ ಅಂಕಣ: ಮುಸ್ಲಿಂ ಮಹಿಳೆಯರನ್ನು ಒಳಗೊಳ್ಳದೆ ಸಮಾನ ನಾಗರಿಕ ಸಂಹಿತೆಯ ಚರ್ಚೆ ಅಪೂರ್ಣ

muslim woman

ಕಳೆದ ಶನಿವಾರ ಅಂದರೆ ಜುಲೈ 15ರಂದು ಕೇರಳದ ಕೋಯಿಕ್ಕೋಡ್ ನಗರದಲ್ಲಿ ಒಂದು ಸೆಮಿನಾರ್ ನಡೆಯಿತು. ಇದನ್ನು ಆಯೋಜನೆ ಮಾಡಿದ್ದು ಆಡಳಿತಾರೂಢ ಸಿಪಿಐ-ಎಂ. ವಿಷಯ ಏನು ಎಂದರೆ ಸಮಾನ ನಾಗರಿಕ ಸಂಹಿತೆ (Uniform civil code). ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರೇ ಬಂದು ಭರ್ಜರಿ ಭಾಷಣ ಮಾಡಿದರು.

ಕೇಂದ್ರ ಸರ್ಕಾರವು ಸಮಾನ ನಾಗರಿಕ ಸಂಹಿತೆಯನ್ನು ಹಿಂದು-ಮುಸ್ಲಿಂ ವಿಭಜನೆಗಾಗಿ ಬಳಸುತ್ತಿದೆ. ಏಕರೂಪತೆ ಎನ್ನುವುದು ಸಮಾನತೆ ಅಲ್ಲ. ಎಲ್ಲ ಸಮುದಾಯಗಳಿಗೂ ಅವರದ್ದೇ ಆದ ವೈಯಕ್ತಿಕ ಕಾನೂನುಗಳಿರುತ್ತವೆ. ಅವುಗಳನ್ನು ಸುಧಾರಣೆ ಮಾಡಬೇಕಾದರೆ ಆ ನಿರ್ದಿಷ್ಟ ಸಮುದಾಯಗಳ ಜತೆಗೆ ಚರ್ಚೆ ನಡೆಸಬೇಕು. ಎಲ್ಲರ ಪ್ರಜಾತಾಂತ್ರಿಕ ಭಾಗವಹಿಸುವಿಕೆಯ ಮೂಲಕ ಈ ಕೆಲಸ ನಡೆಯಬೇಕು. ಸಿಪಿಐ-ಎಂ ಪಕ್ಷವು ಕೇವಲ ಪುರುಷ-ಮಹಿಳೆಯ ನಡುವಿನ ಸಮಾನತೆಯಷ್ಟೆ ಅಲ್ಲ, ಜಾತಿ, ಮತದ ಆಧಾರದಲ್ಲೂ ಭೇದವಿಲ್ಲದೆ ಎಲ್ಲ ಮಾನವರಲ್ಲೂ ಸಮಾನತೆಗೆ ಒತ್ತಾಯಿಸುತ್ತದೆ. ಈ ವಿಷಯದಲ್ಲಿ ನಮ್ಮ ಪಕ್ಷವೇ ಮುಂಚೂಣಿಯಲ್ಲಿದೆ ಎಂದರು ಯೆಚೂರಿ.

ಇದೆಲ್ಲವೂ ಕೇಳಲು ಚೆನ್ನಾಗಿದೆ. ಸಮಾನತೆ, ಪ್ರಜಾಪ್ರಭುತ್ವ, ಮಾನವತೆ, ಚರ್ಚೆ… ಇಂತಹ ಪದಪುಂಜಗಳನ್ನು ಬಳಸಿ ಚೆನ್ನಾಗಿಯೇ ಭಾಷಣ ಮಾಡುತ್ತಾರೆ, ಎದುರು ಇರುವವರನ್ನು ಸಮ್ಮೋಹನಗೊಳಿಸುತ್ತಾರೆ. ಈ ಕಾರ್ಯಕ್ರಮ ಆಗಿ ಎರಡು ದಿನಕ್ಕೆ ಕೇರಳದ ಫೋರಮ್ ಫಾರ್ ಮುಸ್ಲಿಂ ವುಮೆನ್ಸ್ ಜೆಂಡರ್ ಜಸ್ಟೀಸ್ ವೇದಿಕೆ ಅಧ್ಯಕ್ಷೆ ಹಾಗೂ ಲೇಖಕಿ ಡಾ. ಖದೀಜ ಮುಮ್ತಾಜ್ ಮಾಧ್ಯಮಗಳ ಎದುರು ಮಾತನಾಡಿದರು. ಈ ಸೆಮಿನಾರ್ ಆಯೋಜನೆಯಾದಾಗ, ಅದರಲ್ಲಿ ಮಾತನಾಡಲು ಮುಸ್ಲಿಂ ಮಹಿಳೆಯರಿಗೂ ಅವಕಾಶ ನೀಡಿ ಎಂದು ಸಿಪಿಐಎಂ ಮುಖಂಡರಲ್ಲಿ ಕೇಳಿದ್ದೆ. ಆದರೆ ಆಯೋಜಕರು ಇದಕ್ಕೆ ಅವಕಾಶ ನೀಡಲಿಲ್ಲ. ಇಂದು ವೈಯಕ್ತಿಕ ಕಾನೂನುಗಳಿಂದ ಅತಿ ಹೆಚ್ಚು ಸಂಕಷ್ಟದಲ್ಲಿರುವುದು ಮುಸ್ಲಿಂ ಮಹಿಳೆಯರು. ಸಮಾನ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಮುಸ್ಲಿಂ ಮಹಿಳೆಯರ ಎದುರು ಜ್ವಲಂತ ಸಮಸ್ಯೆ ಇರುವುದರಿಂದ, ಮುಸ್ಲಿಂ ಮಹಿಳೆಗೂ ಅವಕಾಶ ನೀಡಬೇಕಿತ್ತು. ಆದರೆ ತನ್ನ ಜತೆಗಿದ್ದ ಮತೀಯ ನಾಯಕರನ್ನು ಓಲೈಸುವ ಸಲುವಾಗಿ ಸಿಪಿಐ-ಎಂ ಈ ಅವಕಾಶ ನೀಡಿಲ್ಲ ಎಂದರು.

“ಸಿಪಿಐಎಂ ಪಕ್ಷದ ಮುಖಂಡರು ಮಹಿಳೆ-ಪುರುಷರೆನ್ನದೆ ಎಲ್ಲರಲ್ಲೂ ಸಮಾನತೆಯನ್ನು ಬಯಸುತ್ತದೆ,” ಎಂದು ಹೇಳುವ ಸೀತಾರಾಮ ಯೆಚೂರಿ ಅವರು ತಮ್ಮ ಕಾರ್ಯಕ್ರಮಕ್ಕೆ, ಸ್ವತಃ ಮಹಿಳೆಯನ್ನು ಆಹ್ವಾನಿಸುವುದಿರಲಿ, ತಾವಾಗಿಯೇ ಮಾತನಾಡಲು ಬಂದ ಮಹಿಳೆಗೂ ಅವಕಾಶ ನೀಡಿಲ್ಲ. ಇದು ಸಮಾನತೆ ಹೇಗಾದೀತು, ಇದು ಯಾವ ಸೀಮೆಯ ಸಮಾನತೆ ಎಂಬುದನ್ನು ಯೆಚೂರಿ ಅವರೇ ಹೇಳಬೇಕು.

ಹಾಗೆ ನೋಡಿದರೆ, ಆ ಸೆಮಿನಾರ್‌ನಲ್ಲಿ ಅನೇಕ ಮುಸ್ಲಿಂ-ಕ್ರಿಶ್ಚಿಯನ್ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು. ಅವರ ಜತೆಗೆ ಮುಖ್ಯವಾಗಿ ʼಸಮಸ್ತ ಕೇರಳ ಜಮ್-ಈಯತ್ತುಲ್ ಉಲೇಮಾʼ ಸಂಸ್ಥೆಯ ನಾಯಕರು. ಸೀತಾರಾಮ್ ಯೆಚೂರಿಯವರು ಇದ್ದ ಸೆಮಿನಾರ್ ವೇದಿಕೆಯಲ್ಲಿ ಈ ಸಂಸ್ಥೆಯ ನಾಯಕರೂ ಇದ್ದರು.

ಸಮಸ್ತ ಎಂದೇ ಖ್ಯಾತಿ ಪಡೆದ ಈ ಉಲೇಮಾ ಸಂಸ್ಥೆ 2019ರಲ್ಲಿ ಸಿಎಎ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದಾಗ ಒಂದು ಹೇಳಿಕೆ ನೀಡಿತ್ತು. ಅದೆಂದರೆ, ಸಿಎಎ ವಿರುದ್ಧ ಪ್ರತಿಭಟನೆ ಒಳ್ಳೆಯದು. ಆದರೆ ಅದರಲ್ಲಿ ಭಾಗವಹಿಸುತ್ತಿರುವ ಮುಸ್ಲಿಂ ಮಹಿಳೆಯರು ʼತಮ್ಮ ಗಡಿಯನ್ನು ಮೀರಬಾರದುʼ ಎಂದು ತಿಳಿಸಿತ್ತು. ಗಡಿಯನ್ನು ಮೀರುವುದು ಎಂದರೆ ಏನು? ಪ್ರತಿಭಟನೆ ಮಾಡುವ ವೇಳೆ ಬಂಧನಕ್ಕೆ ಒಳಗಾಗಬಹುದು, ಅದು ಇಸ್ಲಾಮಿಗೆ ವಿರುದ್ಧವಾದದ್ದು. ಅದಕ್ಕಾಗಿ ಇಸ್ಲಾಮಿಕ್ ಮಾರ್ಗದಲ್ಲಿ ಪ್ರತಿಭಟನೆ ಮಾಡಬೇಕು ಎಂದು ಎಚ್ಚರಿಕೆ ನೀಡಿತ್ತು. ಇಂತಹ ಸಂಸ್ಥೆಗಳನ್ನು, ಮತೀಯ ನಾಯಕರನ್ನು ವೇದಿಕೆಯಲ್ಲಿ ಕೂರಿಸಿಕೊಂಡು, ಯೆಚೂರಿ ಅವರು ಸಮಾನತೆ ಕುರಿತು ಭರ್ಜರಿ ಭಾಷಣ ಮಾಡಿದರು. ಅದೂ ಒಬ್ಬರೂ ಮುಸ್ಲಿಂ ಮಹಿಳೆಗೆ ಅವಕಾಶ ನೀಡದೆ. ಮತೀಯ ನಾಯಕರನ್ನು ಓಲೈಸುತ್ತಿರುವವರು ಯಾರು? ಜಾತ್ಯತೀತ ಯೆಚೂರಿ ಅವರೇ ಉತ್ತರಿಸಬೇಕು.

ಇದು ಇವತ್ತು ದೇಶಾದ್ಯಂತ ಸಮಾನ ನಾಗರಿಕ ಸಂಹಿತೆಯ ಕುರಿತು ಚರ್ಚೆಗಳು ನಡೆಯುತ್ತಿರುವ ರೀತಿ. ಸಮಾನತೆಗಿಂತಲೂ ಇಲ್ಲಿ ಅನೇಕರಿಗೆ ಬೇಕಾಗಿರುವುದು ರಾಜಕೀಯ ಎನ್ನುವುದರಲ್ಲಿ ಅನುಮಾನವಿಲ್ಲ. ಯುಸಿಸಿ ವಿರೋಧಿಸುವ ಕಡೆ ಮಾತ್ರವಲ್ಲ, ಅದನ್ನು ಬೆಂಬಲಿಸುವವರ ಕಡೆಯೂ ಇರುವುದು ಹೆಚ್ಚು ರಾಜಕೀಯವೆ. ಜುಲೈ ಎರಡನೇ ವಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜತೆಗೆ ನಾಗಾ ನಿಯೋಗದ ಸಭೆ ನಡೆದಾಗ ಒಂದು ವಿಷಯ ಚರ್ಚೆಯಾಗಿದೆ. ತಮ್ಮ ಸಂಪ್ರದಾಯಗಳು, ಆಚರಣೆಗಳು ವಿಶಿಷ್ಟವಾಗಿದ್ದು, ಅವುಗಳನ್ನು ಸಮಾನ ನಾಗರಿಕ ಸಂಹಿತೆಯಿಂದ ಹೊರಗಿಡಬೇಕು ಎಂದು ಮನವಿ ಮಾಡಲಾಗಿದೆ. ಕೆಲವು ಬುಡಕಟ್ಟು ಸಮುದಾಯಗಳನ್ನು, ವಿಶೇಷವಾಗಿ ಈಶಾನ್ಯ ರಾಜ್ಯದ ಬುಡಕಟ್ಟು ಸಮುದಾಯಗಳನ್ನು ಸಮಾನ ನಾಗರಿಕ ಸಂಹಿತೆಯಿಂದ ಹೊರಗಿಡುವ ಕುರಿತು ಕಾನೂನು ಆಯೋಗ ಪರಿಶೀಲಿಸುತ್ತಿದೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರ ಬಗ್ಗೆ ಕೇಂದ್ರ ಸರ್ಕಾರವಾಗಲಿ, ಅಮಿತ್ ಶಾ ಅವರಾಗಲಿ ಅಧಿಕೃತವಾಗಿ ಏನೂ ಹೇಳಿಲ್ಲವಾದರೂ, ಈ ಸುದ್ದಿಯನ್ನು ನಿರಾಕರಿಸಿಯೂ ಇಲ್ಲ ಎನ್ನುವುದು ಗಮನಾರ್ಹ.

ಅಲ್ಲಿಗೆ, ಸಮಾನ ನಾಗರಿಕ ಸಂಹಿತೆ ಎನ್ನುವುದು ರಾಜಕೀಯವಾಗಿ ತಿರುವು ಪಡೆಯುತ್ತಿರುವುದು ಖಾತ್ರಿಯಾಯಿತು. ವೈಯಕ್ತಿಕ ಕಾನೂನುಗಳನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ಆ ನಿರ್ದಿಷ್ಟ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸೀತಾರಾಮ್ ಯೆಚೂರಿ ಹೇಳುತ್ತಾರೆ. ಹಾಗಾದರೆ ಭಾರತದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸುವಾಗ ಆ ನಿರ್ದಿಷ್ಟ ಆಚರಣೆ ಮಾಡುವವರನ್ನು ವಿಶ್ವಾಸಕ್ಕೆ ಪಡೆದು, ಅವರ ಒಪ್ಪಿಗೆ ನಂತರ ಮಾಡಲಾಗಿತ್ತೇ? ದೇವಸ್ಥಾನಕ್ಕೆ ದಲಿತರ ಪ್ರವೇಶ ನಿಷೇಧಿಸಿದ್ದನ್ನು ತೆರವುಗೊಳಿಸಲು ಆದೇಶ ನೀಡುವಾಗ, ಪ್ರವೇಶ ನಿರಾಕರಿಸಿದ್ದವರ ಅನುಮತಿ ಪಡೆಯಲಾಗಿತ್ತೇ? ಹೀಗೆ ಸಮಾಜದಲ್ಲಿರುವ ಅನಿಷ್ಠ ಆಚರಣೆಗಳನ್ನು ತೆಗೆದುಹಾಕುವಾಗ ಇಡೀ ಸಮುದಾಯದ ಒಪ್ಪಿಗೆ ಪಡೆಯಲು ಮುಂದಾದರೆ ಯಾವುದಾದರೂ ಸುಧಾರಣೆ ಆಗುತ್ತದೆಯೇ? ಅಷ್ಟಕ್ಕೂ ಹೆಚ್ಚಿನ ಸಮಯದಲ್ಲಿ ʼತಾವು ಸಮುದಾಯದ ಪ್ರತಿನಿಧಿಗಳುʼ ಎಂದು ಹೇಳಿಕೊಳ್ಳುವ ಸಂಘಟನೆಗಳು ಮೂಲಭೂತವಾದಿತನವನ್ನೇ ಹೊಂದಿರುತ್ತವೆ. ಸಮುದಾಯದಲ್ಲಿ ಮಹಿಳೆಯರು ತಮ್ಮ ನಿಯಂತ್ರಣದಲ್ಲಿರಬೇಕು ಎನ್ನುವುದೂ ಈ ಮೂಲಭೂತವಾದಿತನದ ಒಂದು ಅಂಶ. ಬೆರಳೆಣಿಕೆಯ ಈ ಗುಂಪು ಇಡೀ ಸಮುದಾಯವನ್ನು ಪ್ರತಿನಿಧಿಸುತ್ತದೆ ಎಂದು ಹೇಳುವುದೂ ಅನೇಕ ಸಂದರ್ಭದಲ್ಲಿ ಸಾಧ್ಯವಿರುವುದಿಲ್ಲ. ಹಾಗಿರುವಾಗ ಮುಸ್ಲಿಂ ಮಹಿಳೆಯರು ʼಗಡಿ ಮೀರಬಾರದುʼ ಎಂದು ಹೇಳುವ ಸಂಘಟನೆಯನ್ನು ಒಪ್ಪಿಸಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡಲು ಸಾಧ್ಯವೇ?

ಹಾಗೆಯೇ ಬುಡಕಟ್ಟು ಸಮುದಾಯದ ಸಂಪ್ರದಾಯಗಳು. ಅವುಗಳಲ್ಲಿ ದೇಶದ ವೈವಿಧ್ಯತೆಗೆ ಪೂರಕವಾದ ಅನೇಕ ಅಂಶಗಳಿರುತ್ತವೆ. ಅವುಗಳನ್ನು ಉಳಿಸಿಕೊಳ್ಳಬೇಕು ಎನ್ನುವುದು ಸರಿ. ಆದರೆ ಆ ಎಲ್ಲ ಸಂಪ್ರದಾಯಗಳು, ದೇಶವು 1949ರಂದು ಒಪ್ಪಿಕೊಂಡಿರುವ ಸಂವಿಧಾನದ ಆಶಯಕ್ಕೆ ಅನುಗುಣವಾಗಿರಬೇಕು ಅಷ್ಟೆ. ಕಾಲಕಾಲಕ್ಕೆ ತಿದ್ದುಪಡಿ ಆಗುತ್ತಿರುವ ಸಂವಿಧಾನದ ಆಶಯಕ್ಕೆ ಅನುಗುಣವಾಗಿರುವ ಎಲ್ಲ ಸಂಪ್ರದಾಯ, ಆಚರಣೆಗಳನ್ನು ಉಳಿಸಿಕೊಳ್ಳುತ್ತಲೇ ಅದರಲ್ಲಿರುವ ಮಹಿಳೆಯರು, ಮಕ್ಕಳ ಮೇಲೆ ಹೇರಿಕೆಗಳು ಆಗದಂತೆ ತಡೆಯಬೇಕು. ಒಂದು ಸಮುದಾಯಕ್ಕೆ ವಿಪರೀತ ಸ್ವಾತಂತ್ರ್ಯ ಕೊಟ್ಟು ಮತ್ತೊಂದು ಸಮುದಾಯಕ್ಕೆ ಸಂವಿಧಾನದ ಪಾಠ ಹೇಳುವುದೂ ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು.

ಸಮಾನ ನಾಗರಿಕ ಸಂಹಿತೆಯ ಕುರಿತು ಇಂದು ಕಾಂಗ್ರೆಸ್ ಸಹ ಅನುಮಾನದಲ್ಲಿ ಮಾತನಾಡುತ್ತದೆ. ಗಟ್ಟಿ ಧ್ವನಿಯಲ್ಲಿ ಹೇಳಿಬಿಟ್ಟರೆ ಎಲ್ಲಿ ಮುಸ್ಲಿಂ ಮತಗಳು ಕೈತಪ್ಪಿ ಹೋಗುತ್ತವೆಯೋ ಎನ್ನುವ ಆತಂಕ ಆ ಪಕ್ಷದ್ದು. ಅದೂ ಅಲ್ಲದೆ ತನ್ನ ನಾಯಕ ರಾಹುಲ್ ಗಾಂಧಿಯವರು ಸಂಸದ ಸ್ಥಾನದಿಂದ ಅನರ್ಹವಾಗುವವರೆಗೆ ಪ್ರತಿನಿಧಿಸುತ್ತಿದ್ದದ್ದು ಕೇರಳದ ವಯನಾಡು ಕ್ಷೇತ್ರ. ಇದು ಮುಸ್ಲಿಂ ಬಾಹುಳ್ಯದ ಪ್ರದೇಶ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದೇ ಕಾಂಗ್ರೆಸ್ ಪಕ್ಷದ ಹಾಗೂ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಮಾನ ನಾಗರಿಕ ಸಂಹಿತೆಯನ್ನು ಬಯಸಿದ್ದರು. ಆದರೆ ಮುಸ್ಲಿಂ ಸದಸ್ಯರು ವಿರೋಧಿಸಿದರು ಎಂಬ ಕಾರಣಕ್ಕೆ ಅದನ್ನು ಮಾರ್ಗದರ್ಶಿ ತತ್ವದಲ್ಲಿ ಸೇರಿಸಿ ಕೈತೊಳೆದುಕೊಂಡರು. ಆದರೆ ಸಮಾನ ನಾಗರಿಕ ಸಂಹಿತೆಯನ್ನು ಜಾರಿ ಮಾಡಲೇಬೇಕು ಎಂದು ಸ್ಪಷ್ಟವಾಗಿ ಹೇಳಿದವರು ಹಾಗೂ ಪಟ್ಟು ಹಿಡಿದವರು ಡಾ. ಬಿ.ಆರ್. ಅಂಬೇಡ್ಕರ್.

ಇದನ್ನೂ ಓದಿ: ವಿಸ್ತಾರ ಅಂಕಣ: ದೇಶದ ಒಳಿತಿಗಿಂತ ವೈಯಕ್ತಿಕ ನಂಬಿಕೆಯೇ ಮುಖ್ಯ ಎನ್ನುವವನು ನಾಗರಿಕನೇ ಅಲ್ಲ

ಆದರೆ ವಿಶೇಷವೆಂದರೆ ಈಗ ಸಮಾನ ನಾಗರಿಕ ಸಂಹಿತೆಯನ್ನು ಬೆಂಬಲಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪ್ರೇರಿತರಾದವರು ಹಾಗೂ ಜತೆಗಿದ್ದವರು ಆರಂಭದಲ್ಲಿ ಇದನ್ನು ವಿರೋಧಿಸಿದ್ದರು. ವಿರೋಧ ಎನ್ನುವುದಕ್ಕಿಂತಲೂ, ಮುಸ್ಲಿಮರಿಗಿಲ್ಲದ ಸಮಾನ ಕಾನೂನನ್ನು ಹಿಂದುಗಳ ಮೇಲೆ ಮಾತ್ರ ಹೇರುತ್ತೀರ ಎನ್ನುವುದು ಶ್ಯಾಂ ಪ್ರಸಾದ್ ಮುಖರ್ಜಿಯವರ ವಾದವೂ ಆಗಿತ್ತು. ಅನೇಕ ಸಾಧುಗಳು, ಮಠಾಧಿಪತಿಗಳು ನೇರವಾಗಿ ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸಿದ್ದರು. ಹಿಂದು ಧರ್ಮದಲ್ಲಿ ವಿವಾಹ ಎನ್ನುವುದು ಅತ್ಯಂತ ಪವಿತ್ರವಾದದ್ದು, ಅದರಲ್ಲಿ ಯಾವುದೇ ಹಸ್ತಕ್ಷೇಪವನ್ನು ಮಾಡುವುದು ಹಿಂದು ಸಂಪ್ರದಾಯದ ಮೇಲಿನ ಪ್ರಹಾರ ಎಂದಿದ್ದರು.

ಆದರೆ ಇಂದು ಅದೇ ಸಾಧುಗಳು, ಮಠಾಧಿಪತಿಗಳು ಸಮಾನ ನಾಗರಿಕ ಸಂಹಿತೆಯನ್ನು ಬೆಂಬಲಿಸುತ್ತಿದ್ದಾರೆ. ತಮ್ಮ ಅನೇಕ ಸಂಪ್ರದಾಯಗಳಿಗೂ ಇದರಿಂದ ನಿರ್ಬಂಧ ಬರಬಹುದು ಎಂಬ ಅಂದಾಜಿದ್ದರೂ ದೇಶದ ಒಳಿತಿಗಾಗಿ ಬದಲಾವಣೆಗೆ ಸಿದ್ಧ ಎನ್ನುತ್ತಿದ್ದಾರೆ. ಇಂದು ಭಾರತೀಯ ಸಂವಿಧಾನದ ಮೇಲೆ ಅಚಲ ನಂಬಿಕೆ ಹಾಗೂ ಶ್ರದ್ಧೆಯನ್ನು ಅಕ್ಷರ ಹಾಗೂ ಆಚರಣೆಯಲ್ಲಿ ಹೊಂದಿರುವುದು ಹಿಂದುಗಳು. ಸಿಪಿಐ-ಎಂನಂತಹ, ತಮ್ಮನ್ನು ತಾವು ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಪರೋಕ್ಷವಾಗಿಯಲ್ಲ, ನೇರವಾಗಿ ಮೂಲಭೂತವಾದಿತನಕ್ಕೆ ಬೆಂಬಲ ಸೂಚಿಸುತ್ತಿರುವುದು ಢಾಳಾಗಿ ಕಾಣುತ್ತದೆ. ಇಂತಹ ದ್ವಂದ್ವ ನೀತಿಯನ್ನು ಹೊರಗಿಟ್ಟು, ಶುದ್ಧ ಮನಸ್ಸಿನಿಂದ ಸಮಾನ ನಾಗರಿಕ ಸಂಹಿತೆಯನ್ನು ರೂಪಿಸುವ ಕಾರ್ಯದಲ್ಲಿ ಭಾಗವಹಿಸಬೇಕು. ಹಾಗೆಯೇ ಬುಡಕಟ್ಟು ಹಕ್ಕುಗಳು ಎಂಬ ಹಣೆಪಟ್ಟಿಯಲ್ಲಿ ಅನೇಕ ಸಮುದಾಯಗಳನ್ನು ಸಮಾನ ನಾಗರಿಕ ಸಂಹಿತೆ ಒಳಗೊಳ್ಳದೆಯೇ ಕೇವಲ ಒಂದೆರಡು ಸಮುದಾಯಗಳಿಗೆ ಅನ್ವಯವಾಗದಂತೆ ಮಾಡುವ ಹೊಣೆಗಾರಿಕೆಯೂ ಕೇಂದ್ರ ಸರ್ಕಾರದ ಮೇಲಿದೆ.

ಹಾಗೆ ನೋಡಿದರೆ, ಬುಡಕಟ್ಟು ಸೇರಿದಂತೆ ಎಲ್ಲ ಜನಾಂಗದ ಪದ್ಧತಿ, ಸಂಪ್ರದಾಯಗಳ ಆಚರಣೆ ತಪ್ಪಲ್ಲ. ನಮ್ಮ ಸಂವಿಧಾನವೇ ಅದಕ್ಕೆ ಅವಕಾಶ ನೀಡಿದೆ. ಆದರೆ, ಪ್ರಶ್ನೆ ಇರುವುದು ಮನುಷ್ಯನ ಒಳಿತಿಗೆ ಕೇಡು ಬಗೆಯುವ, ಕಾಲಕ್ಕೆ ತಕ್ಕಂತೆ ಬದಲಾವಣೆ ಬಯಸದ, ಮನುಷ್ಯನ ವೈಯಕ್ತಿಕ ವ್ಯವಹಾರ ನಡಾವಳಿಗೆ ಸಂಬಂಧಿಸಿದ ಕಾನೂನುಗಳು ಒಂದೇ ರೀತಿ ಇರಬೇಕು ಎಂಬುದಷ್ಟೇ!

ಇದನ್ನೂ ಓದಿ: ವಿಸ್ತಾರ ಅಂಕಣ: ಕಾಂಗ್ರೆಸ್ಸಿನ ಅಪೂರ್ಣ ಕಾರ್ಯವನ್ನು ಪೂರ್ಣಗೊಳಿಸುವುದೇ ಸಮಾನ ನಾಗರಿಕ ಸಂಹಿತೆ ಜಾರಿಯ ಗುರಿ!

Exit mobile version