ಇದೀಗ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಗದ್ದಲವೋ ಗದ್ದಲ. ಒಬ್ಬರ ಮಾತನ್ನು ಮತ್ತೊಬ್ಬರು ಕೇಳಲಾಗದಷ್ಟು ಗಲಾಟೆ. ಸ್ವತಃ ಪ್ರಧಾನಿಯೇ ಉತ್ತರ ನೀಡುತ್ತಿದ್ದರೂ, ತಾವು ಹೇಳಿದ ವಿಷಯಗಳಲ್ಲಿ ಪ್ರಧಾನಿ ಮಾತನಾಡಿಲ್ಲ ಎಂದು ಕಿರುಚಾಡುತ್ತಲೇ ಇರುವ ಪ್ರತಿಪಕ್ಷಗಳು. ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹದ ಕುರಿತು ಹಿಂಡನ್‌ಬರ್ಗ್ ಎಂಬ ಸಂಸ್ಥೆ ಬಿಡುಗಡೆ ಮಾಡಿದ ವರದಿಯಿಂದಾಗಿ ದೇಶದ ಷೇರು ಮಾರುಕಟ್ಟೆ ಅಲ್ಲೋಲಕಲ್ಲೋಲವಾಗಿದೆ. ಈ ಕುರಿತು ಪ್ರಧಾನಿ ಮಾತನಾಡಬೇಕು ಎನ್ನುವುದು ಪ್ರತಿಪಕ್ಷಗಳ ಟೀಕೆ. ಇದೆಲ್ಲ ಗಲಾಟೆ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸುದೀರ್ಘ ಭಾಷಣ ಮಾಡಿದರು. ಇಷ್ಟೆಲ್ಲ ಗದ್ದಲ, ಹಲ್ಲಾಬೋಲ್‌ಗಳ ನಡುವೆಯೂ ನಮ್ಮ ಸಂಸತ್ತಿನಲ್ಲಿ ಅನೇಕ ಉತ್ತಮ ಅಂಶಗಳು ನಡೆಯುತ್ತಿರುತ್ತವೆ.
ಭಾರತದ ಮಹಿಳಾ ಸಬಲೀಕರಣದ ಪ್ರತೀಕಗಳಲ್ಲೊಂದಾದ ಪಿ.ಟಿ. ಉಷಾ, ಅದೇ ಗುರುವಾರ ರಾಜ್ಯಸಭೆಯ ಅಧ್ಯಕ್ಷೆಯಾಗಿ ಕೆಲಕಾಲ ಕಾರ್ಯನಿರ್ವಹಿಸಿದರು. ಯಾರಾದರೂ ಹೆಣ್ಣುಮಗಳು ತಾನು ಜೋರಾಗಿ ಓಡುತ್ತೇನೆ ಎಂದು ಹೇಳಿದರೆ, ʼನೀನೇನು ಪಿ.ಟಿ. ಉಷಾನ?ʼ ಎಂದು ಹೇಳುವಷ್ಟು ಭಾರತದ ಜನಮಾನಸದಲ್ಲಿ ಪಿ.ಟಿ. ಉಷಾ ಹೆಸರು ಅಜರಾಮರ. ಕೇರಳದ ಒಂದು ಗ್ರಾಮದಲ್ಲಿ ಜನಿಸಿದ ಉಷಾ ಮನೆಯಲ್ಲಿ ಬಡತನ ಎಷ್ಟಿತ್ತೆಂದರೆ ಆಕೆಗೆ ಪೌಷ್ಟಿಕ ಆಹಾರ ಸಿಗದೆ ಅಪೌಷ್ಟಿಕತೆಗೆ ಒಳಗಾಗಿದ್ದರು. ಕೇರಳ ಸರ್ಕಾರ 1976ರಲ್ಲಿ ಮಹಿಳಾ ಕ್ರೀಡಾ ವಿಭಾಗವನ್ನು ತೆರೆದಾಗ ಅಲ್ಲಿಗೆ ಉಷಾ ಆಯ್ಕೆಯಾದರು. ಅಲ್ಲಿ ದೊರೆತ ಬೆಂಬಲವನ್ನು ಪೂರಕವಾಗಿ ಬಳಸಿಕೊಂಡು ಅಥ್ಲೆಟಿಕ್ಸ್ ಚಾಂಪಿಯನ್ ಆದರು. ಪ್ರಶಸ್ತಿಗಳ ಲೆಕ್ಕದಲ್ಲಿ ನೋಡಿದರೆ ಅವರೇನೂ ಒಲಿಂಪಿಕ್‌ನಲ್ಲಿ ಪದಕ ಗಳಿಸಲಿಲ್ಲ. ಆದರೆ ಭಾರತದ ಮಹಿಳಾ ಕ್ರೀಡಾಪಟುಗಳು ಇಂದು ತಾವೂ ಪದಕ ಗೆಲ್ಲಬಹುದು ಎಂದು ಉತ್ಸಾಹ ಮೂಡಿಸಿಕೊಂಡಿದ್ದರೆ ಅದಕ್ಕೆ ಪ್ರೇರಣೆ ಪಿ.ಟಿ. ಉಷಾ. ಇಂತಹ ಪಿ.ಟಿ. ಉಷಾ ಗುರುವಾರ ರಾಜ್ಯಸಭೆಯ ಸಭಾಪತಿಯಾಗಿ ಕೆಲಕಾಲ ಕಾರ್ಯನಿರ್ವಹಿಸಿದರು. ರಾಜ್ಯಸಭೆಯ ಸಭಾಪತಿಯೂ ಆದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಅನುಪಸ್ಥಿತಿಯಲ್ಲಿ ಈ ಅವಕಾಶ ಸಿಕ್ಕಿತ್ತು. ಈ ಕ್ಷಣದ ಕುರಿತು ಪಿ.ಟಿ. ಉಷಾ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.
ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಹೇಳಿದಂತೆ, ಹೆಚ್ಚು ಶಕ್ತಿಯ ಜತೆಗೆ ಹೆಚ್ಚು ಹೊಣೆಗಾರಿಕೆಯೂ ಇರುತ್ತದೆ ಎಂಬ ಮಾತುಗಳು ಆ ಸಮಯದಲ್ಲಿ ನನಗೆ ನೆನಪಾದವು. ಜನರು ನನ್ನ ಮೇಲೆ ಇರಿಸಿರುವ ನಂಬಿಕೆ ಹಾಗೂ ವಿಶ್ವಾಸದ ಈ ಪ್ರಯಾಣದಲ್ಲಿ ಮೈಲುಗಲ್ಲುಗಳ ಸ್ಥಾಪನೆಯ ನಿರೀಕ್ಷೆಯಲ್ಲಿದ್ದೇನೆ ಎಂದು ಉಷಾ ಹೇಳಿದ್ದಾರೆ. ಅತ್ಯಂತ ಸಾಮಾನ್ಯ ಹಿನ್ನೆಲೆಯ ಒಬ್ಬ ಹೆಣ್ಣು ಮಗಳು ಸಭಾಪತಿಯಾಗಿದ್ದರೆ ಕೆಳಗೆ ಕುಳಿತಿದ್ದವರಾರು? ಎಲ್ಲರೂ ಘಟಾನುಘಟಿಗಳು. ಪಿ.ಟಿ. ಉಷಾ ಅವರ ಜತೆಗೇ ರಾಜ್ಯಸಭೆಗೆ ನಾಮನಿರ್ದೇಶಿತರಾದ ಖ್ಯಾತ ಸಂಗೀತ ಸಂಯೋಜಕ ಇಳಯರಾಜ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು. ಇವರ ಜತೆಗೆ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಿದರೆಂದರೆ ಎಲ್ಲರೂ ಕೇಳಬೇಕು ಎನ್ನಿಸುವ ಮಹೇಶ್ ಜೇಠ್ಮಲಾನಿ, ಸುಮಾರು 5 ದಶಕಗಳ ರಾಜಕೀಯ ಅನುಭವವಿರುವ ಮಲ್ಲಿಕಾರ್ಜುನ ಖರ್ಗೆ, ಸ್ವತಃ ಪ್ರಧಾನಿ ನರೇಂದ್ರ ಮೋದಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಪಿ. ವತ್ಸ್…. ಹೀಗೆ ಘಟಾನುಘಟಿಗಳು, ಸರ್ವಮಾನ್ಯರು ಸದಸ್ಯರಾಗಿ ಕುಳಿತಿರುತ್ತಾರೆ. ಯಾರೂ ಸಹ, ಈ ಸಾಮಾನ್ಯ ಹುಡುಗಿಯ ಎದುರು ನಾವೇಕೆ ಎದ್ದು ನಿಂತು ಮಾತನಾಡಬೇಕು ಎಂದು ಹೇಳಲಿಲ್ಲ. ನಿನ್ನ ಜಾತಿ ಯಾವುದು? ನನ್ನದು ಮೇಲ್ಜಾತಿ, ನಿನ್ನ ಎದುರು ನಾನೇಕೆ ತಲೆಬಾಗಬೇಕು? ಎಂದು ಕೇಳಲಿಲ್ಲ. ಇದು ಭಾರತದ ಪ್ರಜಾಪ್ರಭುತ್ವದ ಸೌಂದರ್ಯ.
ಇದೇ ಚಿತ್ರಣವನ್ನು ನಾವು ಲೋಕಸಭೆಯಲ್ಲಿ, ವಿವಿಧ ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್‌ನಲ್ಲೂ ಕಾಣುತ್ತೇವೆ. ಉತ್ತರ ಪ್ರದೇಶದ ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮಠಕ್ಕೆ ತೆರಳಿದರೆ ಅವರ ಕಾಲಿಗೆ ನಮಸ್ಕರಿಸಬೇಕು. ರಾಜಸ್ಥಾನದ ರಾಜಮನೆತನದ ವಸುಂಧರಾ ರಾಜೆ ಸಿಂಧ್ಯಾ ತಮ್ಮ ಅರಮನೆಯಲ್ಲಿ ಇಂದಿಗೂ ರಾಣಿಯೇ ಆಗಿರಬಹುದು. ಆದರೆ ಒಮ್ಮೆ ಸದನಕ್ಕೆ ಬಂದರೆ ಅಲ್ಲಿನ ಸ್ಪೀಕರ್, ಸಭಾಪತಿಯೇ ಅತ್ಯುನ್ನತ ವ್ಯಕ್ತಿ. ಅವರೆದುರು ಮಾತನಾಡಬೇಕೆಂದರೆ ಎದ್ದು ನಿಲ್ಲಲೇಬೇಕು. ಯೋಗಿ ಆದಿತ್ಯನಾಥರಿಂದ ಯಾರೇ ಆದರೂ ಇದನ್ನು ಒಂದು ಅವಮಾನ ಎಂದು ಭಾವಿಸುವುದೇ ಇಲ್ಲ. ಅಷ್ಟು ಸರಳ, ಸಹಜವಾಗಿ ಭಾರತದಲ್ಲಿ ಪ್ರಜಾಪ್ರಭುತ್ವ ಅಂತರ್ಗತವಾಗಿದೆ. ಒಮ್ಮೆ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತರು ಎಂದರೆ ಅವರ ಹಿನ್ನೆಲೆ, ಶಿಕ್ಷಣ, ವಯಸ್ಸು ಎಲ್ಲವನ್ನೂ ಗೌಣವಾಗಿಸಿ ನಮಿಸುತ್ತದೆ ಭಾರತ. ಇದು ಅತ್ಯಂತ ಸಣ್ಣ ವಿಚಾರ, ಇದರಲ್ಲಿ ಅಂತಹ ವಿಶೇಷ ಏನಿದೆ? ಎಂದು ಎನ್ನಿಸಬಹುದು. ನಮ್ಮ ದೇಶದ ನೆರೆ ದೇಶಗಳ ಕಡೆ ಸ್ವಲ್ಪ ಗಮನ ನೀಡಿದರೆ ಇದರ ಮಹತ್ವ ಅರಿವಾಗುತ್ತದೆ.
ನಮ್ಮ ದೇಶದಿಂದಲೇ ಒಡೆದುಕೊಂಡು ಹೋಗಿ, ಹೊಸ ಸ್ವರ್ಗವನ್ನು ನಿರ್ಮಾಣ ಮಾಡುತ್ತೇವೆ ಎಂದುಕೊಂಡಿದ್ದ ಪಾಕಿಸ್ತಾನದಲ್ಲಿ, ಸ್ವಾತಂತ್ರ್ಯದ ಹತ್ತೇ ವರ್ಷದಲ್ಲಿ 1958ರಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಕೆಡವಿದ ಅಲ್ಲಿನ ಸೇನೆ ಅಧಿಕಾರ ವಹಿಸಿಕೊಂಡಿತು. ನಂತರ 1977, 1999 ಹಾಗೂ 2008ರಲ್ಲೂ ಪಾಕ್ ಸೇನೆಯು ಸರ್ಕಾರವನ್ನು ಮಗುಚಿ ತಾನೇ ಅಧಿಕಾರ ನಡೆಸಿತು. ಪಾಕಿಸ್ತಾನದ ದೌರ್ಜಜ್ಯದಿಂದ ನಲುಗಿದ್ದ ಪ್ರದೇಶವನ್ನು ಪ್ರತ್ಯೇಕವಾಗಿಸಿ ಬಾಂಗ್ಲಾವೆಂಬ ದೇಶದ ಉದಯಕ್ಕೆ ಭಾರತವೇ ಕಾರಣವಾಯಿತು. ಆ ದೇಶದಲ್ಲಿ 1975, 1981, 1982ರಲ್ಲಿ ಸಫಲಪೂರ್ವಕವಾಗಿ ಅಲ್ಲಿನ ಸೇನೆ ಅಧಿಕಾರಕ್ಕೆ ಏರಿದರೆ ಇನ್ನೂ ಮೂರ್ನಾಲ್ಕು ಬಾರಿ ವಿಫಲ ಯತ್ನ ನಡೆಸಿದೆ. ಜಪಾನ್‌ನಿಂದ ಮಾಲಿವರೆಗೆ, ನೇಪಾಳದಿಂದ ನೆದರ್‌ಲ್ಯಾಂಡ್‌ವರೆಗೆ ಅನೇಕ ದೇಶಗಳಲ್ಲಿ ಅಲ್ಲಿನ ಸೇನೆಯು ಪ್ರಜಾಪ್ರಭುತ್ವ ಸರ್ಕಾರವನ್ನು ಕೆಡವಿ ತಾನೇ ಅಧಿಕಾರ ನಡೆಸುವ ಸಫಲ ಹಾಗೂ ವಿಫಲ ಯತ್ನಗಳನ್ನು ನಡೆಸಿವೆ. ಭಾರತದಲ್ಲಿಯೂ ಇಂತಹ ಒಂದು ಮಾತು ಕೇಳಿಬಂದಿತ್ತು.
2012ರ ಏಪ್ರಿಲ್ 4ರಂದು ದೇಶದ ಪ್ರಮುಖ ಪತ್ರಿಕೆಯೊಂದು ವರದಿ ಪ್ರಕಟಿಸಿತು. ಭಾರತೀಯ ಸೇನೆಯ ಎರಡು ತುಕಡಿಗಳು ರೈಸಿನಾ ಹಿಲ್ ಕಡೆಗೆ ಗೌಪ್ಯವಾಗಿ ಸಾಗಿದವು ಎಂದು ತಿಳಿಸಿತ್ತು. ರೈಸಿನಾ ಹಿಲ್ಸ್ ಎಂದರೆ ರಾಷ್ಟ್ರಪತಿ ಭವನ ಸೇರಿದಂತೆ ಕೇಂದ್ರ ಸರ್ಕಾರದ ಪ್ರಮುಖ ಇಲಾಖೆಗಳಿರುವ ಪ್ರದೇಶ. ಸೇನಾ ತುಕಡಿಗಳು ಸರ್ಕಾರಕ್ಕೆ ಮಾಹಿತಿಯನ್ನು ನೀಡದೆ ಅಲ್ಲಿಗೆ ಹೋಗಿದ್ದರ ಉದ್ದೇಶ, ಇಲ್ಲಿನ ಸರ್ಕಾರವನ್ನು ಕೆಡವಿ ಸೇನಾ ಆಡಳಿತವನ್ನು ನಡೆಸುವುದು ಎಂಬಂತಹ ಮಾತುಗಳು ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಆದರೆ ಇದೊಂದು, ಸೇನೆಯ ಸಾಮಾನ್ಯ ಚಟುವಟಿಕೆಯಾಗಿದೆ ಎಂದು ನಂತರದಲ್ಲಿ ತಿಳಿದುಬಂದಿತು. ಅದರ ವಿಸ್ತಾರಕ್ಕೆ ನಾವು ಹೋಗುವುದು ಬೇಡ. ಒಟ್ಟಾರೆ, ಭಾರತದಲ್ಲಿ ಸೇನೆಯ ಮುಖ್ಯಸ್ಥರೊಬ್ಬರು ಆಡಳಿತ ನಡೆಸುವರು ಎನ್ನುವುದನ್ನು ಊಹಿಸಿಕೊಳ್ಳುವುದೇ ಅಸಾಧ್ಯ ಎನ್ನುವಷ್ಟು ಭಾರತವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದೆ.
ಭಾರತೀಯ ಸೇನೆಯ ಕುರಿತು ನಮಗೆಲ್ಲರಿಗೂ ಅಪಾರ ಗೌರವವಿದೆ. ಇರಲೇಬೇಕು. ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ವೈಯಕ್ತಿಕ ಲಾಭ ನಷ್ಟವನ್ನು ಮರೆತು ಪ್ರಾಣತ್ಯಾಗ ಮಾಡಲು ಈಗಲೂ ಸನ್ನದ್ಧವಾಗಿರುವ ದೇಶಭಕ್ತ ಪಡೆ ನಮ್ಮದು. ಆದರೆ ಭಾರತದ ಸಂವಿಧಾನ ಕರ್ತೃಗಳಿಗೆ ಪ್ರಜಾಪ್ರಭುತ್ವದ ಕುರಿತು ಇದ್ದ ನಂಬಿಕೆ ಅಪಾರವಾದದ್ದು. ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಸೇನಾ ಅಧಿಕಾರಿಗಳಿಗೆ ಅಪಾರ ಅಧಿಕಾರವಿತ್ತು. ದೇಶದ ಆಡಳಿತ, ನೀತಿ ನಿರೂಪಣೆಯಲ್ಲೂ ಸೇನಾಧಿಕಾರಿಗಳೇ ಮುಖ್ಯರಾಗುತ್ತಿದ್ದರು. ಅಂತಹದ್ದೇ ವ್ಯವಸ್ಥೆಯನ್ನು ಭಾರತದಲ್ಲೂ ಮುಂದುವರಿಸುವ ಸಾಧ್ಯತೆಯಿತ್ತು. ಆದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಜನಪ್ರತಿನಿಧಿಗಳು ಮಾತ್ರವೇ ನಿಜವಾದ ಉತ್ತರದಾಯಿಗಳು ಎನ್ನುವುದನ್ನು ಮನದಟ್ಟು ಮಾಡಲಾಯಿತು. ಭಾರತೀಯ ಸೇನೆಯು ಸರ್ಕಾರವನ್ನು ಕಿತ್ತೊಗೆಯುವ ಪ್ರಯತ್ನ ಮಾಡುವುದಿಲ್ಲ ಎಂಬ ನಮ್ಮ ನಂಬಿಕೆ ಒಂದೆಡೆಯಾದರೆ, ಅದಕ್ಕೆ ಅವಕಾಶವೇ ಇಲ್ಲದಂತೆ ಇಲ್ಲಿನ ವ್ಯವಸ್ಥೆಯನ್ನು ರೂಪಿಸಲಾಯಿತು. ಸಂವಿಧಾನದ ಮೂರು ಅಂಗಗಳಿವೆ. ಕಾರ್ಯಾಂಗ ಹಾಗೂ ನ್ಯಾಯಾಂಗದ ಜತೆಗೆ ಶಾಸಕಾಂಗವೂ ಒಂದು ಅಂಗ. ಆದರೆ ಎಲ್ಲ ಅಂಗಗಳನ್ನೂ ಮೀರಿ ನೀತಿಯನ್ನು ರೂಪಿಸುವ ಅಧಿಕಾರ ಇರುವುದು ಶಾಸಕಾಂಗಕ್ಕೆ ಮಾತ್ರವೇ.
ಇದನ್ನೂ ಓದಿ: ವಿಸ್ತಾರ ಅಂಕಣ: ʻಸಬ್ ಕಾ ಸಾಥ್-ಸಬ್ ಕಾ ವಿಕಾಸ್ʼ ಎಂದು ಹೇಳುವ ಅನಿವಾರ್ಯತೆ ತಂದಿಟ್ಟಿದ್ದು ಯಾರು?
ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೂ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಅಪಾರ ನಂಬಿಕೆ. ಇದೇ ಕಾರಣಕ್ಕೆ ಅವರು ಸೇನೆಯನ್ನು ಅಧಿಕಾರ ಕೇಂದ್ರದಿಂದ ಬಹಳ ದೂರವಿಟ್ಟರು. ಬ್ರಿಟಿಷ್ ಆಡಳಿತದಲ್ಲಿ ಸೇನಾಧಿಕಾರಿಗೆ ಮೀಸಲಿಟ್ಟಿದ್ದ ತೀನ್ ಮೂರ್ತಿ ಭವನವನ್ನು ಜವಾಹರಲಾಲ್ ನೆಹರು ತಮ್ಮ ನಿವಾಸವನ್ನಾಗಿಸಿಕೊಂಡರು. ಅನೇಕ ಸಂದರ್ಭದಲ್ಲಿ ಸೇನೆಯ ಕೆಲ ಅಧಿಕಾರಿಗಳು ಸರ್ಕಾರವನ್ನು ಇದಕ್ಕಾಗಿ ದೂರಿದ್ದೂ ಉಂಟು. ಪ್ರಜಾಪ್ರಭುತ್ವದ ಕುರಿತು ಅಪಾರ ನಂಬಿಕೆ ಜತೆಗೆ, ದೇಶವನ್ನು ಕಾಪಾಡಲು ಸೇನೆ ಅಷ್ಟು ಅವಶ್ಯಕವಲ್ಲ ಎಂಬ ಸಣ್ಣ ಅಸಡ್ಡೆಯೂ ನೆಹರು ಅವರಲ್ಲಿತ್ತು ಎನ್ನುವುದನ್ನು ನಾವು ಮರೆಯುವಂತಿಲ್ಲ. ಇದೇ ಕಾರಣಕ್ಕೆ ಚೀನಾ ಯುದ್ಧದ ಸುಳಿವನ್ನು ನಿರ್ಲಕ್ಷಿಸಿ ಅಪಾರ ನಷ್ಟ ತೆರುವಂತಾಯಿತು. ಆದರೆ ಪ್ರಜಾಪ್ರಭುತ್ವ ಎನ್ನುವುದನ್ನು ನಮ್ಮ ತಲೆಯಲ್ಲಿ ಎಷ್ಟರ ಮಟ್ಟಿಗೆ ಒಪ್ಪಿಸಲಾಗಿದೆ ಎಂದರೆ, ಇದೇ ಜವಾಹರ ಲಾಲ್ ನೆಹರು ಪುತ್ರಿ ಇಂದಿರಾಗಾಂಧಿ ಪ್ರಜಾಪ್ರಭುತ್ವವನ್ನು ಧಿಕ್ಕರಿಸಿದಾಗ ಆಕೆಯನ್ನು ಅಧಿಕಾರದಿಂದ ಕಿತ್ತೊಗೆಯಿತು ಭಾರತ.
ಭಾರತದಲ್ಲಿ ರಾಜಕೀಯ ಕ್ಷೇತ್ರವೇನು ಶುದ್ಧವಾಗಿಲ್ಲ. ಇಂದು ಕರ್ನಾಟಕದಲ್ಲಿ ಚುನಾವಣೆ ವಾತಾವರಣ ಮೂಡುತ್ತಿದೆ. ನಮ್ಮ ಸುದ್ದಿ ವಾಹಿನಿಯ ವರದಿಗಾರರು ಯಾವುದೇ ನಾಗರಿಕರ ಬಳಿ ತೆರಳಿ ಮಾತನಾಡಿದರೂ ಶೇ.90 ಜನರು ನಕಾರಾತ್ಮಕವಾಗಿಯೇ ಹೇಳುತ್ತಾರೆ. ಜನಪ್ರತಿನಿಧಿ ಕೈಗೆ ಸಿಗುತ್ತಿಲ್ಲ, ಭ್ರಷ್ಟನಾಗಿದ್ದಾನೆ, ಪಕ್ಷಪಾತಿ, ಕುಟುಂಬ ರಾಜಕಾರಣ ಅನುಸರಿಸುತ್ತಾನೆ… ಹೀಗೆ ನೂರಾರು ದೂರುಗಳು ಇಲ್ಲಿನ ವ್ಯವಸ್ಥೆ ಮೇಲೆ ಇವೆ. ಆದರೆ ಅದ್ಯಾವುದೂ, ಈ ವ್ಯವಸ್ಥೆಯನ್ನು ಕಿತ್ತು ಮಿಲಿಟರಿ ಆಡಳಿತವನ್ನೊ, ಪಾಲಿಟ್ ಬ್ಯೂರೊ ಮೂಲಕವೇ ದೇಶ ನಡೆಸುವ ಕಮ್ಯುನಿಸ್ಟರ ರೀತಿ ಆಡಳಿತವನ್ನೋ, ಸರ್ವಾಧಿಕಾರಿ ಸರ್ಕಾರವನ್ನೋ ಬೇಕು ಎಂದು ಯಾರ ಮನಸ್ಸಿನಲ್ಲಿಯೂ, ಅದೊಂದು ಆಲೋಚನೆಯಾಗಿಯೂ ಸುಳಿಯುವುದಿಲ್ಲ.
ಹತ್ತಾರು ಪವಾಡಗಳನ್ನು ನಮ್ಮ ಪ್ರಜಾಪ್ರಭುತ್ವ ದಿನನಿತ್ಯ ಮಾಡುತ್ತಲೇ ಇರುತ್ತದೆ. ಹೈದರಾಬಾದ್ ನಿಜಾಮನ ರಜಾಕಾರರ ದಾಳಿಯಲ್ಲಿ ಕೂದಲೆಳೆ ಅಂತರದಲ್ಲಿ ಬದುಕುಳಿದ ಮಲ್ಲಿಕಾರ್ಜುನ ಖರ್ಗೆ ಇಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದಾರೆ, ದೇಶದ ಅತ್ಯಂತ ಹಳೆಯ ಪಕ್ಷವೊಂದರ ಅಧ್ಯಕ್ಷರಾಗಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ನರೇಂದ್ರ ಮೋದಿ ಎಂಬ ವ್ಯಕ್ತಿ ಎರಡು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಒಬ್ಬ ಪಿ.ಟಿ. ಉಷಾ ಸಭಾಪತಿ ಸ್ಥಾನದಲ್ಲಿ ಕುಳಿತರು ಎನ್ನುವುದು ಒಂದು ಉದಾಹರಣೆ ಅಷ್ಟೆ.
ಇದನ್ನೂ ಓದಿ: ವಿಸ್ತಾರ ಅಂಕಣ : ಅಭಿವೃದ್ಧಿಗೆ ನಮ್ಮದೇ ಮಾದರಿಯತ್ತ ನೋಡಲು ಮಡಿವಂತಿಕೆ ಏಕೆ?
ಕಡೆ ಮಾತು:
ಹಾಗೆ ನೋಡಿದರೆ, ಭಾರತೀಯ ನೆಲದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಸಾಕ್ಷಿಯಾಗಿ ಜನಪದವೂ ಅನೇಕ ಕಥೆಗಳನ್ನು ಹೆಣೆದಿದೆ. ಇಂಥಾ ಕಥೆಗಳನ್ನು ನಾವೆಲ್ಲರೂ ಕೇಳಿ ಬೆಳೆದಿದ್ದೇವೆ. ಅಂಥದ್ದೊಂದು ಕಥೆ ಕೇಳಿ:
ಮಕ್ಕಳಿಲ್ಲದ ರಾಜನೊಬ್ಬ ಅಕಾಲಿಕವಾಗಿ ಮೃತಪಟ್ಟಾಗ, ಮುಂದೇನು ಎಂಬ ಪ್ರಶ್ನೆ ಎದುರಾಗುತ್ತದೆ. ಆಗ ಮಂತ್ರಿ, ಸೇನಾಧಿಪತಿಗಳೆಲ್ಲರೂ ಪಟ್ಟದಾನೆಗೆ ಹೂವಿನ ಹಾರ ನೀಡಿ, ಅದು ಯಾರ ಕೊರಳಿಗೆ ಮಾಲೆ ಹಾಕುವುದೋ, ಆತನೇ ರಾಜ ಎಂದು ನಿರ್ಧರಿಸುತ್ತಾರೆ. ಅಂತಿಮವಾಗಿ ಪಟ್ಟದಾನೆ, ದೇವರ ಗುಡಿಯ ಮುಂದೆ ಪ್ರಸಾದಕ್ಕಾಗಿ ಕಾದು ಕುಳಿತವನ ಕೊರಳಿಗೆ ಮಾಲೆ ಹಾಕುತ್ತದೆ. ಆತ ರಾಜನಾಗುತ್ತಾನೆ !
ಇದನ್ನು ಕೆಲವರು ತಿರುಕನ ಕನಸು ಎಂದು ಗೇಲಿ ಮಾಡುವುದುಂಟು. ಆದರೆ, ಇಂಥದ್ದೊಂದು ಕನಸಿನ ಆಲೋಚನೆಯೇ ಮಹೋನ್ನತವಾದುದು. ಕನಸಿನಲ್ಲಾದರೂ ಸರಿ- ಆ ಆನೆ ಏಕೆ ಮಂತ್ರಿ ಇಲ್ಲವೇ ಸೇನಾಧಿಪತಿಯ ಕೊರಳಿಗೆ ಹಾರ ಹಾಕಲಿಲ್ಲ ಮತ್ತು ಇದೇ ರೀತಿ ನಮ್ಮ ಜನಪದರು ಕಥೆ ಕಟ್ಟಲಿಲ್ಲ? ಸುಮ್ಮನೇ ಯೋಚಿಸಿ. ನಾನು ಮೊದಲೇ ಹೇಳಿದಂತೆ, ಪ್ರಜಾಪ್ರಭುತ್ವದ ಗುಣಲಕ್ಷಣ ಭಾರತೀಯರ ರಕ್ತದಲ್ಲಿ ಬೆರೆತು ಹೋಗಿದೆ!
ಇದನ್ನೂ ಓದಿ: ವಿಸ್ತಾರ ಅಂಕಣ | ರಾಜಕಾರಣಿಗಳು ನಮಗೆ ಹೇಳುತ್ತಿರುವ ʼಅಭಿವೃದ್ಧಿʼ, ನಿಜವಾಗಿಯೂ ಸಮಾಜದ ʼಅಧೋಗತಿʼ