Site icon Vistara News

ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?

karnataka government decision to revise textbook vistara column

“ಮೊಘಲ್ ಬಾದಶಹರಲ್ಲಿ ಕೊನೆಯವನಾದ ಔರಂಗಜೇಬನು ಕಾಲಚಕ್ರವನ್ನು ಹಿಂದಕ್ಕೆ ತಿರುಗಿಸಲು ಪ್ರಯತ್ನ ಮಾಡಿ ಪ್ರಗತಿಯನ್ನು ತಡೆದು, ಕಡೆಗೆ ನುಚ್ಚು ನೂರು ಮಾಡಿದನು. ಜನತೆಯ ಸ್ವಭಾವಕ್ಕನುಗುಣವಾಗಿ ಎಲ್ಲಿಯವರೆಗೆ ಎಲ್ಲರನ್ನೂ ಸಮಾನವಾಗಿ ಕಂಡು, ರಾಷ್ಟ್ರೀಯ ಭಾವನೆಯನ್ನು ಉದ್ದೀಪನಗೊಳಿಸಲು ಮೊಘಲ್ ರಾಜರು ಪ್ರಯತ್ನಿಸಿದರೋ, ಅಲ್ಲಿಯವರೆಗೂ ಅವರು ಬಲಿಷ್ಠರಾಗಿದ್ದರು. ಔರಂಗಜೇಬನು ಇದಕ್ಕೆ ವಿರುದ್ಧವಾಗಿ ನಡೆದುಕೊಂಡು, ಭಾರತೀಯನಲ್ಲದ ಮುಸ್ಲಿಂ ಚಕ್ರವರ್ತಿಯಾಗಲು ಪ್ರಯತ್ನಪಟ್ಟನೋ ಅಂದಿನಿಂದಲೇ ಮೊಘಲ್ ಚಕ್ರಾಧಿಪತ್ಯವು ಕುಸಿಯಲು ಆರಂಭವಾಯಿತು. ಅಕ್ಬರನೂ ಅವನ ವಂಶಿಕರೂ ಮಾಡಿದ ಕೆಲಸವೆಲ್ಲ ನಿರರ್ಥಕವಾಯಿತು. “
-ಜವಾಹರಲಾಲ್ ನೆಹರು

ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರು ತಮ್ಮ ʼಭಾರತ ದರ್ಶನʼ ಸರಣಿಯ ಮೊದಲ ಸಂಪುಟದಲ್ಲಿ ಬರೆದಿರುವ ಈ ಮಾತಿಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಬಹುದು. ಮೊಘಲ್ ವಂಶದ ಬಹುತೇಕ ರಾಜರು ಔರಂಗಜೇಬನ ರೀತಿಯೇ ಇದ್ದರು ಎನ್ನಲೂ ಬಹುದು. ಇನ್ನೂ ಕೆಲವರು ಇದು ನೆಹರು ಅವರ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಎನ್ನಲೂ ಬಹುದು. ಈ ಎಲ್ಲವೂ ಚರ್ಚೆಯ ವಿಷಯಗಳು. ಆದರೆ, ನೆಹರು ಅವರ ಈ ಮಾತಿನಲ್ಲಿ- ರಾಜನೊಬ್ಬ ಹೇಗಿರಬೇಕು ಎಂಬ ವಿವೇಕವನ್ನು ಗಮನಿಸಬೇಕು.

ಆಡಳಿತ ಎನ್ನುವುದು ಎಲ್ಲಿಯವರೆಗೆ ಜನರ ಭಾವನೆಗಳಿಗೆ ಅನುಗುಣವಾಗಿ ಇರುತ್ತದೆಯೋ ಅಲ್ಲಿಯವರೆಗೆ ನಿರಾತಂಕವಾಗಿ ನಡೆಯುತ್ತದೆ. ಆದರೆ ಎಂದು ಕೆಲವೇ ತನ್ನ ಸುತ್ತಮುತ್ತಲಿರುವವರ ವಿಷಯವನ್ನೋ ಅಥವಾ ತನ್ನ ಖಾಸಗಿ ನಂಬಿಕೆಯನ್ನೋ ಸಮಾಜದ ಮೇಲೆ ಹೇರಲು ಹೊರಟಾಗ ಸಮಾಜ ಅದನ್ನು ಪ್ರತಿಭಟಿಸುತ್ತದೆ. ಅದು ರಾಜಾಡಳಿತವಾದರೂ ಅಷ್ಟೆ, ಆಕ್ರಮಣಕಾರರಾದರೂ ಅಷ್ಟೆ, ಪ್ರಜಾಪ್ರಭುತ್ವವಾದರೂ ಅಷ್ಟೆ. ಈ ಸಂದೇಶವು ಕರ್ನಾಟಕದಲ್ಲಿ 10-15 ವರ್ಷದಿಂದ ನಡೆಯುತ್ತಿರುವ ಕದನಕ್ಕೆ ಹೊಂದಿಕೆಯಾಗುತ್ತದೆ.

2008ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಪೂರ್ಣಪ್ರಮಾಣದ ಸರ್ಕಾರ ರಚನೆಯಾದ ನಂತರ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ (textbook revision) ಕೈ ಹಾಕಲಾಯಿತು. ಪ್ರೊ. ಮುಡಂಬಡಿತ್ತಾಯ ಅವರ ಅಧ್ಯಕ್ಷತೆಯ ಸಮಿತಿ ರಚಿಸಿದ್ದ ಬಿಜೆಪಿ ಸರ್ಕಾರ, ಪಠ್ಯಪುಸ್ತಕ ಬದಲಾಯಿಸುವ, ವಿವಿಧ ಪಠ್ಯವನ್ನು ಸೇರಿಸುವ ಕೆಲಸ ಮಾಡಿತು. ಧರಣಿ ಮಂಡಲ ಮಧ್ಯದೊಳಗೆ ಪದ್ಯದ ಆಶಯವನ್ನೇ ಬಿಜೆಪಿ ತಿರುಚಿದೆ ಎಂದು ಆರೋಪಿಸಲಾಯಿತು. ಇದಕ್ಕೆ ಸಹಜವಾಗಿಯೇ ಕಾಂಗ್ರೆಸ್ ಹಾಗೂ ಎಡಪಂಥೀಯ ಒಲವುಳ್ಳ ಲೇಖಕರು ವಿರೋಧ ವ್ಯಕ್ತಪಡಿಸಿದರು.

2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಿಜೆಪಿ ಮಾಡಿದ ಈ ‘ತಪ್ಪನ್ನುʼ ಸರಿಮಾಡಲು ಮುಂದಾಯಿತು. ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ರಚನಾ ಸಮಿತಿಯನ್ನು ರಚಿಸಿತು. ಈ ಸಮಿತಿಯು ಅನೇಕ ಬದಲಾವಣೆಗಳನ್ನು ಮಾಡಿತು. ಆದರೆ, ಬ್ರಾಹ್ಮಣರು ಯಜ್ಞ ಯಾಗಾದಿಗಳನ್ನು ಮಾಡಲು ತುಪ್ಪವನ್ನು ಬಳಸಿದ್ದರಿಂದ ಪ್ರಪಂಚದಲ್ಲಿ ಆಹಾರದ ಅಭಾವ ಸೃಷ್ಟಿಯಾಯಿತು ಎಂಬ ಸಾಲುಗಳನ್ನು ಈ ಸಮಿತಿ ಸೇರಿಸಿತ್ತು. ಇದಕ್ಕೆ ಬಿಜೆಪಿ ವಲಯದಿಂದ ಸಹಜವಾಗಿ ವಿರೋಧ ವ್ಯಕ್ತವಾಯಿತು.

ಕಾಂಗ್ರೆಸ್ ಸಮಯದಲ್ಲಿ ಮಾಡಿದ್ದ ಈ ʼಮಹಾ ಪ್ರಮಾದʼವನ್ನು ಸರಿಪಡಿಸಲು 2019ರಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರ ಮುಂದಾಯಿತು. ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಸಮಿತಿ ರಚನೆ ಮಾಡಿ ಪಠ್ಯಪುಸ್ತಕವನ್ನು ತಿದ್ದಿತು. ಇದರಲ್ಲಿ ನಾರಾಯಣಗುರು, ಕುವೆಂಪು ಸೇರಿ ಅನೇಕರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಮತ್ತೊಮ್ಮೆ ಇನ್ನೊಂದು ತುದಿಯಲ್ಲಿದ್ದ ಕಾಂಗ್ರೆಸ್ ಹಾಗೂ ಎಡ ಪರ ಲೇಖಕರ ವಲಯದಿಂದ ಕೇಳಿಬಂದಿತು.
ಇದೀಗ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೇರಿ ಇನ್ನೂ ಒಂದು ತಿಂಗಳೂ ಕಳೆದಿಲ್ಲ. ಈಗಾಗಲೆ ಶಾಲೆಗಳು ಆರಂಭವಾಗಿದ್ದರೂ, ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡುವ ಮಾತುಗಳನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಆದಿಯಾಗಿ ಅನೇಕರು ಮಾತನಾಡುತ್ತಿದ್ದಾರೆ. ಸ್ವತಃ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪಠ್ಯಪುಸ್ತಕ ಪರಿಷ್ಕರಣೆ ಆಗುವುದು ಖಚಿತ ಎಂದಿದ್ದಾರೆ. ಇದೆಲ್ಲವೂ ರಾಜಕೀಯ ಪಕ್ಷಗಳು ತಮ್ಮ ಸೈದ್ಧಾಂತಿಕ ನೆಲೆಯನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರ ಸ್ಪಷ್ಟ ಸಂಕೇತ. ಆದರೆ, ಈ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಸಂತ್ರಸ್ತರಾಗುತ್ತಿದ್ದಾರೆ ಎಂಬುದನ್ನೇ ಸರಕಾರ ಮರೆತಿದೆ.

ದೇಶದ ಎರಡನೇ ರಾಷ್ಟ್ರಪತಿಯಾಗಿದ್ದ ಡಾ. ಎಸ್. ರಾಧಾಕೃಷ್ಣನ್ ಅವರು ಸ್ವತಃ ಶಿಕ್ಷಕರು, ಶಿಕ್ಷಣ ತಜ್ಞರೂ ಆಗಿದ್ದರು. ಅವರು ಹೇಳಿರುವಂತೆ, “ಶಿಕ್ಷಣದ ಅಂತಿಮ ಗುರಿಯು ಮುಕ್ತ ಆಲೋಚನೆಯ ಮನುಷ್ಯನನ್ನು ಸೃಜಿಸುವುದಾಗಿರಬೇಕು. ಈ ಮನುಷ್ಯನು ಐತಿಹಾಸಿಕ ಸನ್ನಿವೇಶಗಳು ಹಾಗೂ ನಿಸರ್ಗದ ಪ್ರತಿಕೂಲಗಳ ವಿರುದ್ಧ ಹೋರಾಡುವವನಾಗಿರಬೇಕು” ಎಂದರು. ಅಲ್ಲಿಗೆ, ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಪ್ರವಾಹವನ್ನು ಕಾಯ್ದುಕೊಳ್ಳಬೇಕು ಎಂಬ ಸಂದೇಶವನ್ನು ರಾಧಾಕೃಷ್ಣನ್ ಅವರು ನೀಡಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಐದು ವರ್ಷಕ್ಕೊಮ್ಮೆ ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನು ನಡೆಸಲಾಗುತ್ತದೆ. ತಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡುವವರನ್ನು ಜನರು ಆಯ್ಕೆ ಮಾಡಲಿ, ತಮಗೆ ಇಷ್ಟ ಇಲ್ಲದವರನ್ನು ಮನೆಗೆ ಕಳಿಸಲಿ ಎಂದು ಮಾಡಿಕೊಂಡಿರುವ ವ್ಯವಸ್ಥೆ. ಹೊಸ ಸರ್ಕಾರ ಬಂದ ಕೂಡಲೆ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಬೇಕು. ಹಳೆಯ ವ್ಯವಸ್ಥೆಯಲ್ಲಿರುವಲೋಪದೋಷಗಳನ್ನು, ವ್ಯವಸ್ಥೆಗೆ ಧಕ್ಕೆ ಆಗದಂತೆ ಹೊರತೆಗೆಯಬೇಕು ಎನ್ನುವುದು. ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಬರಬಹುದು, ಮತ್ತೆ ಕಾಂಗ್ರೆಸ್ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಬಹುದು. ಇಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಯಾವುದೇ ಪಕ್ಷಗಳು ಬದಲಾಗುತ್ತವೆಯೇ ವಿನಃ ಸರ್ಕಾರ ಅಲ್ಲ. ಸರ್ಕಾರ ಎನ್ನುವುದು ನಿರಂತರ ವ್ಯವಸ್ಥೆ. ಒಟ್ಟಾರೆಯಾಗಿ ಅದು ಕರ್ನಾಟಕ ಸರ್ಕಾರ, ಭಾರತ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಇತ್ಯಾದಿ ಇತ್ಯಾದಿ. ಪಕ್ಷಗಳೂ ಹೆಸರು ಹೇಳುವುದು, ಸಿಎಂ, ಪಿಎಂ ಇಲ್ಲವೇ ಪಕ್ಷಗಳ ಹೆಸರಿನಲ್ಲಿ ಸರ್ಕಾರವನ್ನು ಸಂಬೋಧಿಸುವುದು ನಮ್ಮ ಅನುಕೂಲಕ್ಕಾಗಿ ಮಾತ್ರ.

ಬಿಜೆಪಿ ಸರ್ಕಾರ ರಚನೆ ಮಾಡಿದ ಕೂಡಲೆ ಅದರ ಕಣ್ಣು ಶಾಲಾ ಮಕ್ಕಳ ಪಠ್ಯಪುಸ್ತಕದ ಮೇಲೆ ಹೋಗುತ್ತದೆ. ಅವರ ವಾದ ಏನು? ಭಾರತದ ಇತಿಹಾಸವನ್ನು ಕಳೆದ 75 ವರ್ಷಗಳಲ್ಲಿ ತಪ್ಪಾಗಿ ಹೇಳಲಾಗಿದೆ. ಅಲೆಕ್ಸಾಂಡರ್, ಅಕ್ಬರ್, ಟಿಪ್ಪುವನ್ನೇ ಮೆರೆಸಲಾಗಿದೆ. ನಮ್ಮದೇ ರಾಜರಾದ ಕೃಷ್ಣದೇವರಾಯ, ಶಿವಾಜಿ, ರಾಣಾ ಪ್ರತಾಪನನ್ನು ಮರೆತಿದ್ದಾರೆ. ಕೇವಲ ಮಹಾತ್ಮ ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಬಿಂಬಿಸಲಾಗಿದೆ. ಕ್ರಾಂತಿಕಾರಿಗಳನ್ನು ಕಡೆಗಣಿಸಲಾಗಿದೆ…. ಹೀಗೆ ಇತಿಹಾಸದಲ್ಲಿ ಆಗಿರುವ ಪ್ರಮಾದಗಳ ದೊಡ್ಡ ಪಟ್ಟಿಯೇ ಬಿಜೆಪಿ ಹಾಗೂ ಅದರ ಚಿಂತಕ ವಲಯದಲ್ಲಿದೆ. ಇದು ಸತ್ಯ ಕೂಡ. ನಮ್ಮ ದೇಶದ ಇತಿಹಾಸವನ್ನು ಮಕ್ಕಳಿಗೆ ತಿಳಿಸಿದರೆ ಅವರಲ್ಲಿ ಸ್ವಾಭಿಮಾನ ಜಾಗೃತಿಯಾಗುತ್ತದೆ. ಅವರು ಯಾವುದೇ ಭ್ರಷ್ಟಾಚಾರ, ಅನಾಚಾರಕ್ಕೆ ಮುಂದಾಗದೆ ದೇಶದ ಏಳಿಗೆಗಾಗಿ ದುಡಿಯುತ್ತಾರೆ. ಆಗ ದೇಶವು ಇಡೀ ವಿಶ್ವದಲ್ಲಿ ಗೌರವಯುತ ಸ್ಥಾನ ಪಡೆಯುತ್ತದೆ. ಇದರಲ್ಲಿ ತಪ್ಪೇನೂ ಇಲ್ಲ.

ಆದರೆ ಶಿಕ್ಷಣ ಎನ್ನುವುದು ಕೇವಲ ಪಠ್ಯಪುಸ್ತಕ ಎಂಬ ತಪ್ಪು ತಿಳುವಳಿಕೆ ಇಲ್ಲಿದೆ. ಸಮಾಜ ವಿಜ್ಞಾನ, ಕನ್ನಡ ಪಠ್ಯಪುಸ್ತಕ ಬದಲು ಮಾಡಿಬಿಟ್ಟರೆ ಇಡೀ ಮಕ್ಕಳ ಮನಸ್ಥಿತಿ ಬದಲಾಗಿಬಿಡುತ್ತದೆ ಎನ್ನುವುದು ಭ್ರಮೆ. ಒಟ್ಟಾರೆ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಪುಸ್ತಕವೂ ಒಂದು ಭಾಗ. ಇದರಲ್ಲಿ ಶಾಲಾ ಮೂಲಸೌಕರ್ಯ, ಶಿಕ್ಷಕರ ಗುಣಮಟ್ಟ, ಶಿಕ್ಷಕರ ತರಬೇತಿ, ಮೌಲ್ಯಮಾಪನ ವ್ಯವಸ್ಥೆ, ಬೋಧನಾ ವಿಧಾನ, ಆಟೋಟಗಳಿಗೆ ಪ್ರೋತ್ಸಾಹಕ, ವಿಜ್ಞಾನ ತಿಳಿವಳಿಕೆ… ಹೀಗೆ ಹತ್ತಾರು ವಿಚಾರಗಳು ಸೇರಿ ಒಬ್ಬ ಒಳ್ಳೆಯ, ದೇಶಭಕ್ತ ವಿದ್ಯಾರ್ಥಿ ತಯಾರಾಗುತ್ತಾನೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಮಾನವ ಸಂಪನ್ಮೂಲ ಸಚಿವರಾಗಿದ್ದ ಡಾ. ಮುರಳೀಮನೋಹರ ಜೋಶಿ ಅವರು ಪಠ್ಯಪುಸ್ತಕಗಳ ಪರಿಷ್ಕರಣೆಗೆ ಕೈಹಾಕಿದರು. ಆಗ ದೇಶಾದ್ಯಂತ ಕೇಸರೀಕರಣದ ಹುಯಿಲೆಬ್ಬಿಸಲಾಯಿತು. ಆನಂತರ 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಬಂದಾಗ, ಬಿಜೆಪಿ ಅವಧಿಯ ಅನೇಕ ಬದಲಾವಣೆಗಳನ್ನು ತೆಗೆದುಹಾಕಿತು. ಆಗ ಬಿಜೆಪಿ ಮತ್ತೆ, ಇದು ಹಿಂದುಗಳನ್ನು ದಮನ ಮಾಡುವ ಕ್ರಿಯೆ ಎಂದು ಬೊಬ್ಬೆ ಹಾಕಿತು.

ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸರಳ ಬಹುಮತ ಪಡೆದು ಸ್ಥಾಪನೆಯಾಗಿದೆ. ಯಾವುದೇ ಪಕ್ಷ ಸುಲಭವಾಗಿ ಆಪರೇಷನ್ ಮಾಡಿ ಸರ್ಕಾರವನ್ನು ಬೀಳಿಸಲು ಸಾಧ್ಯವಾಗದಿರುವಷ್ಟು ಸುಭದ್ರ ಸಂಖ್ಯೆಯನ್ನು ಜನರು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ. ಈಗ ಜನರಿಗೆ ಅತ್ಯಗತ್ಯವಾಗಿ ಬೇಕಾದ ಅನೇಕ ವಿಚಾರಗಳತ್ತ ಸರ್ಕಾರ ಗಮನ ಹರಿಸುವ ಅಗತ್ಯವಿದೆ.

ಈಗಾಗಲೆ ಚುನಾವಣೆಯಲ್ಲಿ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಒಟ್ಟಾರೆ ಪ್ರಣಾಳಿಕೆಯನ್ನು ಜಾರಿಗೆ ತರಬೇಕಿದೆ. ಪ್ರತಿ ವರ್ಷ ಬಜೆಟ್ ಮಂಡಿಸುವ ಮೂಲಕ ಒಂದೊಂದೇ ಹೆಜ್ಜೆ ರಾಜ್ಯವನ್ನು ಸುಭಿಕ್ಷದೆಡೆಗೆ ಕರೆದೊಯ್ಯಬೇಕಿದೆ. ಇದೆಲ್ಲದರ ನಡುವೆ ಎದುರಾಗುವ ಬರ, ನೆರೆ ಮುಂತಾದ ಪ್ರಕೃತಿ ವಿಕೋಪಗಳಿಗೂ ಸ್ಪಂದಿಸಬೇಕಿದೆ. ಆದರೆ ಕಾಂಗ್ರೆಸ್ ಸರ್ಕಾರ ಇದೆಲ್ಲವನ್ನೂ ಬಿಟ್ಟು ಮತ್ತೆ ಪಠ್ಯಪುಸ್ತಕಕ್ಕೆ ಕೈ ಹಾಕಿದೆ. ಬಿಜೆಪಿ ಅವಧಿಯಲ್ಲಿ ನಡೆಸಿದ ತಿದ್ದುಪಡಿಗಳನ್ನು ಬದಲಾಯಿಸಲು ಮುಂದಾಗಿದೆ. ಯಾರದ್ದೋ ಮೇಲಿನ ದ್ವೇಷವನ್ನು ಪಠ್ಯದ ಮೇಲೆ ತೀರಿಸಲು ಹೊರಟಿದೆ. ಸ್ವಾತಂತ್ರ್ಯ ಹೋರಾಟಗಾರರ ಕುರಿತ ಪಾಠ, ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು ರಚಿಸಿರುವ ಪಾಠ, ಆರ್ ಎಸ್ ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೆವಾರ್ ಅವರ ಭಾಷಣದ ಮೇಲೆ ಕಾಂಗ್ರೆಸ್ ಸರ್ಕಾರದ ಕಣ್ಣು ಬಿದ್ದಿದೆ. ಕಾಂಗ್ರೆಸ್ ಹೇಳುವ ಪ್ರಕಾರ ಈ ಪಠ್ಯಪುಸ್ತಕವನ್ನು ಸರಿಯಾದ ಕ್ರಮದಲ್ಲಿ ಪರಿಷ್ಕರಣೆ ಮಾಡಲಿಲ್ಲ. ಸಮಿತಿಯಲ್ಲಿ ಇದ್ದವರಿಗೆ ಅದಕ್ಕೆ ತಕ್ಕ ಅರ್ಹತೆ ಇರಲಿಲ್ಲ, ಒಟ್ಟಾರೆ ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ಆದೇಶವನ್ನೇ ನೀಡಿಲ್ಲ ಎಂಬಂತಹ ವಾದಗಳನ್ನು ಮುಂದಿಡಲಾಗುತ್ತಿದೆ. ಚಿಂತಕರು ಎಂದು ಹೇಳಿಕೊಂಡ, ಎಡ ಪರ, ಕಾಂಗ್ರೆಸ್ ಪರ ಸಾಹಿತಿಗಳ ನಿಯೋಗವೊಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೈಬಿಡಲು ಮನವಿ ಮಾಡಿದೆ.

ಈಗಾಗಲೆ ಚುನಾವಣೆ ಪ್ರಣಾಳಿಕೆಯಲ್ಲೂ ಕಾಂಗ್ರೆಸ್ ಈ ವಿಷಯವನ್ನು ಹೇಳಿರುವುದರಿಂದ ಅದಕ್ಕೆ ಬದ್ಧವಾಗಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಇಲ್ಲಿರುವ ಪ್ರಶ್ನೆ, ಇಷ್ಟೆಲ್ಲ ರಾದ್ಧಾಂತದ ನಂತರ ಶಾಲೆಯಲ್ಲಿ ಪಾಠ ಓದುವ ಮಕ್ಕಳ ಪಾಡೇನು? ಇಂತಹ ಪಾಠವನ್ನು ಈ ಬಾರಿ ಮೌಲ್ಯಮಾಪನಕ್ಕೆ ಪರಿಗಣನೆ ಮಾಡುವುದಿಲ್ಲ ಎಂದು ತಿದ್ದೋಲೆಯನ್ನು ಸರ್ಕಾರ ಕಳಿಸಬಹುದು. ಆಗ ಶಿಕ್ಷಕರು ಆ ಪಾಠವನ್ನು ಬೋಧನೆ ಮಾಡುವುದಿಲ್ಲ. ಆದರೆ ಆ ಪಾಠ ವಿದ್ಯಾರ್ಥಿಯ ಪುಸ್ತಕದಲ್ಲಿ ಆ ಪಾಠ ಹಾಗೆಯೇ ಇರುತ್ತದೆ ಅಲ್ಲವೇ? ಮೌಲ್ಯಮಾಪನ ಮಾಡದಿದ್ದ ಮಾತ್ರಕ್ಕೆ, ಶಿಕ್ಷಕರು ಬೋಧಿಸದ ಮಾತ್ರಕ್ಕೆ ವಿದ್ಯಾರ್ಥಿಗಳು ಆ ಪಾಠವನ್ನು ಓದುವುದನ್ನು ತಡೆಯಲು ಆಗುತ್ತದೆಯೇ? ಸ್ವಾತಂತ್ರ್ಯ ಹೋರಾಟಗಾರರ ಕುರಿತು ಇಂತಹ ಒಳ್ಳೆಯ ಪಾಠವನ್ನು ಸರ್ಕಾರ ಏಕೆ ನಿಷೇಧ ಮಾಡಿದೆ? ಎಂದು ವಿದ್ಯಾರ್ಥಿಗೆ ಅನ್ನಿಸುವುದಿಲ್ಲವೇ? ಆಗ ಸರ್ಕಾರದ ಬಗ್ಗೆ ಆತನಿಗೆ ಯಾವ ಅಭಿಪ್ರಾಯ ಬರಬಹುದು? ಇಂತಹ ಸೂಕ್ಷ್ಮ ಸಂಗತಿಗಳನ್ನೂ ಆಳುವವರು ಗಮನದಲ್ಲಿ ಇರಿಸಿಕೊಳ್ಳಬೇಕು. ಏಕೆಂದರೆ ರಾಧಾಕೃಷ್ಣನ್ ಅವರು ಹೇಳಿದಂತೆ ಶಿಕ್ಷಣ ಎನ್ನುವುದು ಮನುಷ್ಯನನ್ನು ಸೃಜನಶೀಲನನ್ನಾಗಿಸಬೇಕೆ ಹೊರತು ಈ ರೀತಿ ಒಟ್ಟಾರೆ ವ್ಯವಸ್ಥೆಯ ಮೇಲೆಯೇ ಅನುಮಾನವನ್ನು ಹುಟ್ಟುಹಾಕುವುದಲ್ಲ.

ಇದನ್ನೂ ಓದಿ: ವಿಸ್ತಾರ ಅಂಕಣ: ವಿದೇಶದಲ್ಲಿ ಕಾಲಿಟ್ಟ ತಕ್ಷಣ ರಾಹುಲ್ ಗಾಂಧಿ ಭಾರತ ವಿರೋಧಿ ಆಗುವುದೇಕೆ?

ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದ ತಪ್ಪನ್ನು ಈಗಿನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಲಿಲ್ಲ. ಕೇವಲ ಪಠ್ಯಪುಸ್ತಕ ಪರಿಷ್ಕರಣೆಯಿಂದ ಯಾವ ಉದ್ದೇಶವೂ ಈಡೇರುವುದಿಲ್ಲ ಎನ್ನುವುದು ಆ ಪಕ್ಷದ ಅರಿವಿಗೆ ಬಂದಿತ್ತು. ಹಾಗಾಗಿ ಒಟ್ಟಾರೆ ಶಿಕ್ಷಣ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಆರಂಭಿಸಿದೆ. ಹಂತಹಂತವಾಗಿ ಸುಮಾರು 10 ವರ್ಷದಲ್ಲಿ ಈ ಯೋಜನೆ ಜಾರಿಯಾದಾಗ ಒಟ್ಟಾರೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಎನ್ನುವುದು ನಿರೀಕ್ಷೆ.

ಈಗಂತೂ ಶಾಲೆಗಳು ಆರಂಭವಾಗಿವೆ. ಪ್ರಸಕ್ತ ವರ್ಷದಲ್ಲಿ ಪಾಠ ಪ್ರವಚನಗಳು ಎಂದಿನಂತೆ ನಡೆಯಲಿ. ಮುಖ್ಯವಾಗಿ ರಾಜ್ಯದ ಅನೇಕ ಸರ್ಕಾರಿ ಶಾಲೆಗಳು ಕಟ್ಟಡಗಳು ಬೀಳುವ ಹಂತದಲ್ಲಿವೆ. ವಿದ್ಯಾರ್ಥಿಗಳು ಕಿಲೋಮೀಟರ್ ಗಟ್ಟಲೆ ನಡೆದೇ ಶಾಲೆಗೆ ಹೋಗುತ್ತಿದ್ದಾರೆ. ಶಿಕ್ಷಕರ ಹತ್ತಾರು ಬೇಡಿಕೆಗಳನ್ನು ಈಡೇರಿಸಬೇಕಿದೆ. ಶಿಕ್ಷಕರ ತರಬೇತಿಯತ್ತಲೂ ಗಮನ ನೀಡಬೇಕಿದೆ. ಬೇಕಿದ್ದರೆ ಪಠ್ಯಪುಸ್ತಕ ಪರಿಷ್ಕರಣೆಗೊಂದು ತಜ್ಞರ ಸಮಿತಿಯನ್ನು ರಚನೆ ಮಾಡಿ ಕೆಲಸ ಆರಂಭಿಸಲಿ. ಅವರು ಈ ವರ್ಷದ ಅಂತ್ಯಕ್ಕೆ ವರದಿ ನೀಡಿ, ಆ ವರದಿಯ ಅನುಷ್ಠಾನದ ಕುರಿತು ಸರ್ಕಾರ ನಿರ್ಧಾರ ಮಾಡಲಿ. ಮುಂದಿನ ವರ್ಷದಿಂದ ಹೊಸ ಪಠ್ಯಕ್ರಮಕ್ಕೆ ತೆರೆದುಕೊಳ್ಳಬಹುದು. ಅದನ್ನು ಬಿಟ್ಟು, ಯಾವುದೋ ಒಂದು ಗುಂಪನ್ನು ಮೆಚ್ಚಿಸುವ ಸಲುವಾಗಿ ಹಾಗೂ ಸರ್ಕಾರದ ಮೇಲಿನ ಗಮನವನ್ನು ಬೇರೆಡೆ ಸೆಳೆಯಲು ದಿನಬೆಳಗಾದರೆ ಪಠ್ಯಪುಸ್ತಕ ಪರಿಷ್ಕರಣೆಯ ಮಾತನ್ನು ಸರ್ಕಾರದ ಭಾಗವಾಗಿರುವವರು ನಿಲ್ಲಿಸುವುದು ಒಳ್ಳೆಯದು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ಸಮಾಜ ಸುಧಾರಣೆಗೆ ಶ್ರಮಿಸಿದವರನ್ನು ರಾಜಕಾರಣ ಹಾಗೂ ಸ್ವಾರ್ಥಕ್ಕಾಗಿ ಅವಮಾನಿಸುವುದಕ್ಕೆ ಅಂತ್ಯ ಹಾಡುವ ಕೆಲಸ ಕಾಂಗ್ರೆಸ್ ಸರ್ಕಾರದಿಂದಲೇ ಆರಂಭವಾಗಲಿ.

ಇದನ್ನೂ ಓದಿ: ವಿಸ್ತಾರ ಅಂಕಣ: ಗ್ಯಾರಂಟಿ ಮರೆಮಾಚಲು ʼಗೋಹತ್ಯೆʼ ಗುರಾಣಿಯಾಗಬೇಕೆ?

ಕಡೆಯದಾಗಿ ನೆಹರು ಅವರು ಬರೆದಿರುವ ಮೊಘಲ್ ಚಕ್ರಾಧಿಪತ್ಯದ ಸಾಲುಗಳಿಗೆ ಮರಳೋಣ. ಅವರು ಹೇಳಿದರೆ, ನಾನು ಹಾಗೂ ನನ್ನ ವಯಸ್ಸಿನ(35ರಿಂದ 45) ತಲೆಮಾರು ಬಾಬರ್ ನಿಂದ ಔರಂಗಬೇಬ್ ವರೆಗೆ ಎಲ್ಲರನ್ನೂ ಓದಿದ್ದೇವೆ. ಅವರ ಚಿತ್ರಪಟುಗಳು ನಮ್ಮ ಸ್ಮೃತಿಪಟಲದಲ್ಲಿವೆ. ಆದರೆ, ಕೃಷ್ಣದೇವರಾಯ, ಶಿವಾಜಿ, ರಾಣಾ ಪ್ರತಾಪ ಬಗ್ಗೆ ನಾವು ಓದಿದ್ದು ಕಡಿಮೆ. ಅಂತೆಯೇ ನಮ್ಮ ರಾಜ್ಯದಲ್ಲೂ ಟಿಪ್ಪು, ಹೈದರಾಲಿ ಬಗ್ಗೆ ಓದಿದಷ್ಟು ನಾಲ್ವಡಿ, ಮುಮ್ಮಡಿ ಒಡೆಯರ್ ಬಗ್ಗೆ ಓದಿದ್ದು ಕಡಿಮೆ. ಏಕೆಂದರೆ, ಪಠ್ಯ ಪುಸ್ತಕದ ಮೇಲೆ ಬಹಳಷ್ಟು ವರ್ಷಗಳ ಕಾಲ ಎಡಪಂಥೀಯ ಸಿದ್ಧಾಂತವಾದಿಗಳ ಹಿಡಿತವಿತ್ತು. ಅವರು ಎಲ್ಲವನ್ನೂ ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿಯೇ ರೂಪಿಸಿದರು. ಬಳಿಕ ಬಂದ ಬಿಜೆಪಿ ಸರಕಾರ, ಈ ಪ್ರಮಾದವನ್ನು ಸರಿಪಡಿಸುತ್ತಲೇ, ತನಗಿಷ್ಟವಾದ ಸಿದ್ಧಾಂತವನ್ನು ಮೆರೆಸಲು ಯತ್ನಿಸಿತು. ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಈ ಎರಡೂ ತಪ್ಪೇ.

ಹಾಗಾಗಿ, ಪಠ್ಯ ಪುಸ್ತಕ ಪರಿಷ್ಕರಣೆಯ ಜವಾಬ್ದಾರಿಯನ್ನು. ಆಯಾ ಕಾಲದ ರಾಜಕೀಯ ಪಕ್ಷಗಳ ಸಿದ್ಧಾಂತವಾದಿಗಳಿಗೆ ಒಪ್ಪಿಸುವ ಬದಲು . ಚಿಂತನೆಯ ಸಂಸ್ಥೆಗೆ ಒಪ್ಪಿಸುವ ಅಗತ್ಯವಿದೆ. ಇದಕ್ಕಾಗಿ ಸರಕಾರ ರಾಜಕಿಯೇತರವಾದ ಒಂದು ಶಾಶ್ವತ ಸಾಂವಿಧಾನಿಕ ಸಂಸ್ಥೆಯನ್ನು ಹುಟ್ಟುಹಾಕಿದರೂ ತಪ್ಪಲ್ಲ. ಯಾವುದೇ ಪಂಥಕ್ಕೆ ಅಂಟಿಕೊಳ್ಳದ, ವೃತ್ತಿಪರವಾಗಿ ಆಲೋಚಿಸುವ ದೊಡ್ಡ ಮಾನವ ಸಂಪನ್ಮೂಲ ಭಾರತದಲ್ಲಿ ಇದೆ. ಅವರನ್ನು ದುಡಿಸಿಕೊಳ್ಳುವ ಜರೂರತ್ತೂ ಇದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಜನಕಲ್ಯಾಣದ ಕನಸಿಗೆ ಕಾರ್ಯಾಂಗವೂ ಕೈ ಜೋಡಿಸಲಿ

Exit mobile version