“ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಅವರ (ಮುಸ್ಲಿಮರ) ನಿಶ್ಚಿತ ಠೇವಣಿಗಳು. ಅವರೆಡೂ ಇಸ್ಲಾಮಿಕ್ ದೇಶಗಳು. ಅವೆರಡರ ಮೇಲೆ ಬೇರೆ ಯಾರೂ ಹಕ್ಕುಸ್ವಾಮ್ಯ ಸಾಧಿಸಲು ಸಾಧ್ಯವಿಲ್ಲ. ಆದರೆ ಭಾರತ ಜಂಟಿ ಖಾತೆ. ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡಬಹುದು.”
-ಹೀಗೆಂದಿದ್ದರು ಖ್ಯಾತ ಬಂಗಾಳಿ ಲೇಖಕ ಶಿವಪ್ರಸಾದ್ ರಾಯ್. ಅನೇಕ ದಶಕಗಳ ಹಿಂದೆಯೇ ರಾಯ್ ನೀಡಿದ ಈ ಹೇಳಿಕೆಯನ್ನು ಖ್ಯಾತ ಲೇಖಕ, ಸಂಶೋಧಕ ಹಾಗೂ ಇತಿಹಾಸಕಾರ ಸೀತಾರಾಂ ಗೋಯೆಲ್ ಅವರು ತಮ್ಮ ʼಮುಸ್ಲಿಂ ಪ್ರತ್ಯೇಕತಾವಾದʼ ಕೃತಿಯ ಮೊದಲ ಸಾಲಿನಲ್ಲೇ ಉಲ್ಲೇಖಿಸಿದ್ದಾರೆ. ಸೀತಾರಾಂ ಗೋಯೆಲ್ ಅವರ ಈ ಮಾತನ್ನು ಹಿಡಿದುಕೊಂಡು ಇಲ್ಲಿಯವರೆಗೆ ಯಾರೂ ಭಾರತದ ಮುಸ್ಲಿಮರೆಲ್ಲರೂ ಪ್ರತ್ಯೇಕತಾವಾದಿಗಳು ಎಂದು ಹೇಳಿಲ್ಲ. ನಮ್ಮ ಪಕ್ಕದ ಮನೆಯಲ್ಲಿರುವ ಇಲ್ಲವೇ ಕಾಲೇಜಿನಲ್ಲಿರುವ ಮುಸ್ಲಿಂ ಸ್ನೇಹಿತರನ್ನು ಯಾರೊಬ್ಬರು ಭಯೋತ್ಪಾದಕರಂತೆ ಕಂಡಿಲ್ಲ. ಬೆಂಗಳೂರು ಸೇರಿ ಅನೇಕ ಕಡೆಗಳಲ್ಲಿ ತಮ್ಮ ಜತೆಗೆ ಓದುತ್ತಿದ್ದ ಮುಸ್ಲಿಂ ಸ್ನೇಹಿತರೇ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿ, ಸಿಕ್ಕಿ ಹಾಕಿಕೊಂಡರೂ, ಉಳಿದ ಮುಸ್ಲಿಂ ಸ್ನೇಹಿತರನ್ನು ಯಾರೂ ಅನುಮಾನಿಸಿಲ್ಲ. ಅವರನ್ನು ಭಾರತೀಯರು ನಂಬಿದ್ದಾರೆ. ನೆನಪಿರಲಿ- ಹೊರದೇಶಗಳಲ್ಲಿ, ತಮ್ಮ ಧರ್ಮೀಯ ಮತಾಂಧರು ಎಸಗುವ ಭಯೋತ್ಪಾದನಾ ಕೃತ್ಯಗಳ ಕಾರಣಕ್ಕೆ ಸಾಮಾನ್ಯ ಮುಸ್ಲಿಮರು ಘೋರ ಅನುಮಾನಕ್ಕೆ, ಅವಮಾನಕ್ಕೆ ತುತ್ತಾಗುತ್ತಾರೆ.
ಆದರೆ, ಭಾರತೀಯ ಸಮಾಜ ಹಾಗಲ್ಲ. ಎಲ್ಲರನ್ನೂ ನಂಬುತ್ತಲೇ ಭಾರತೀಯರು ಪರಸ್ಪರ ಸಹಬಾಳ್ವೆಯ ಜೀವನ ಮುಂದುವರಿಸಿದೆ. ಇದು ನಿಜವಾದ ಹಿಂದು ಸಮಾಜದ ಮಾನಸಿಕತೆ. ಇಷ್ಟಾದರೂ, ಮುಸ್ಲಿಮರ ಕುರಿತ ಹಿಂದೂಗಳ ಸಹಬಾಳ್ವೆ ನಿಲುವು ಕುರಿತು ನಮ್ಮ ದೇಶದ ಬುದ್ಧಿಜೀವಿಗಳು ಯಾವತ್ತೂ ಮಾತನಾಡಿಲ್ಲ. ಹಿಂದೂ ಸಮಾಜ ಎಷ್ಟು ವಿಶಾಲವಾಗಿ ಯೋಚನೆ ಮಾಡುತ್ತದೆ ಎಂದು ಉದಾರವಾಗಿ ಯಾರೊಬ್ಬರು ಹೇಳಿದ್ದನ್ನು ನಾವ್ಯಾರು ಕೇಳಿಲ್ಲ.
ಆದರೆ, ದೇಶದ ಯಾವುದೋ ಒಂದು ಮೂಲೆಯಲ್ಲಿ ಬಜರಂಗದಳದ ಮಾಜಿ ಸದಸ್ಯನೊಬ್ಬ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದು ಕೇಳಿದರೆ ಸಾಕು, ನಮ್ಮ ಬುದ್ಧಿಜೀವಿಗಳೆಲ್ಲರೂ ಅಲರ್ಟ್ ಆಗಿಬಿಡುತ್ತಾರೆ. “ಇಡೀ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಅಪಾಯವಾಗುತ್ತಿದೆ. ಅವರಿಗೆ ಉಳಿಗಾಲವಿಲ್ಲ. ಹಿಂದೂ ಸಮಾಜ ಮೂಲಭೂತವಾದಿತನವನ್ನು ಅಳವಡಿಸಿಕೊಂಡಿದೆ,” ಎಂದು ಬೊಬ್ಬೆ ಹಾಕುತ್ತಾರೆ.
ಬುದ್ಧಿಜೀವಿಗಳೆನ್ನಲಾದ ಇಂಥಾ ಜೀವಿಗಳ ತರ್ಕಹೀನ ಬೊಬ್ಬೆಗೆ ಕರ್ನಾಟಕದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮತ್ತೆ ಓಗೊಟ್ಟಂತೆ ಕಾಣುತ್ತಿದೆ. ಉದಾಹರಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಸಂಗತಿಯನ್ನು ಗಮನಿಸಿ. “ಬಜರಂಗದಳ ಮತ್ತು ಪಿಎಫ್ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಯಾವುದೇ ಸಂಘಟನೆಗಳು, ಸಂವಿಧಾನ ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಇಂತಹ ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು” ಎಂದು ಮೂರು ದಿನದ ಹಿಂದೆ ಬಿಡುಗಡೆಯಾದ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಎಚ್ಚರಿಸಿದೆ.
ಹಿಂದುಗಳನ್ನು ಈ ದೇಶದಲ್ಲಿ ದಮನಿಸುವ ಕೆಲಸ ಆಗುತ್ತಿದೆ ಎನ್ನುವುದು ಹಳಹಳಿಕೆಯ, ಕ್ಲೀಷೆಯ ಮಾತೇ ಆದರೂ ಕಾಂಗ್ರೆಸ್ಸಿನ ಇಂಥಾ ನಡೆಗಳು, ಹಿಂದೂ ದಮನಕ್ಕೆ ನಿದರ್ಶನಗಳಾಗುತ್ತವೆ.
ಆದರೆ, ನಿಜಕ್ಕೂ ಬಜರಂಗದಳ ನಿಷೇಧಿಸಲು ಸಾಧ್ಯವೇ? ಅದು ನಿಷೇಧಿಸುವಂಥ ಸಂಘಟನೆಯೇ? ಅದನ್ನು ಪಿಎಫ್ಐನಂಥ ಸಂಘಟನೆ ಜತೆ ಹೋಲಿಸುವುದು ತರವೇ ? ಈ ಕುರಿತು ವಿವರವಾಗಿ ಚರ್ಚಿಸೋಣ.
ಮೊದಲನೆಯದು: ಬಜರಂಗದಳವನ್ನು ತಾಂತ್ರಿಕವಾಗಿ ಬ್ಯಾನ್ ಮಾಡುವ ಅಧಿಕಾರವೇ ರಾಜ್ಯ ಸರಕಾರಕ್ಕಿಲ್ಲ. ಒಂದು ವೇಳೆ ಈ ಸಂಘಟನೆಯೇನಾದರೂ ಸಂವಿಧಾನ ವಿರೋಧಿ ಕೃತ್ಯದಲ್ಲಿ ತೊಡಗಿದ್ದರೆ, ನಿಷೇಧಿಸುವ ಅಧಿಕಾರವಿರುವುದು ಕೇಂದ್ರ ಸರಕಾರಕ್ಕೆ. ಹಾಗಾಗಿ ಇದು ಅಸಾಧ್ಯದ ಮಾತು. ಇನ್ನೂ ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರಕಾರ ಈಗಾಗಲೇ ನಿಷೇಧಿಸಿದೆ. ಕರ್ನಾಟಕದಲ್ಲಿ ಪ್ರವೀಣ್ ನೆಟ್ಟಾರು ಸೇರಿದಂತೆ ಕೇರಳ, ಅಸ್ಸಾಂ ಮುಂತಾದ ರಾಜ್ಯಗಳಲ್ಲಿ ಆ ಸಂಘಟನೆ ಎಸಗಿದ ಹತ್ಯೆಗಳನ್ನು ಪರಿಗಣಿಸಿ, ಎನ್ಐಎ ಶಿಫಾರಸು ಅನ್ವಯ ಈಗಾಗಲೆ ಬ್ಯಾನ್ ಮಾಡಿದೆ. ಹಾಗಾಗಿ, ಅದನ್ನು ಮತ್ತೆ ಬ್ಯಾನ್ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಚ್ಚರಿಸಿರುವುದೇ ಬಾಲಿಶತನ.
ಎರಡನೆಯ ವಿಚಾರ, ಈ ಪ್ರಸ್ತಾವನೆ ಮೂಲಕ ಕಾಂಗ್ರೆಸ್ ರಾಜಕೀಯ ಲೆಕ್ಕಾಚಾರಕ್ಕೆ ಇಳಿದಿರುವುದು ಸ್ಪಷ್ಟ. ಬಜರಂಗದಳ ನಿಷೇಧದ ಮಾತು ಮುಂದಿಡುವ ಮೂಲಕ, ತನ್ನಿಂದ ಚದುರಿ ಹೋಗುತ್ತಿದ್ದ ಮುಸ್ಲಿಮರ ಮತಗಳನ್ನು ಭದ್ರ ಪಡಿಸಲು ಆ ಪಕ್ಷ ಮುಂದಾಗಿದೆಯಷ್ಟೆ. ಆದರೆ, ಈ ನಡೆ ಬಿಜೆಪಿಗೆ ಅನುಕೂಲ ಮಾಡಿಕೊಡಬಹುದು ಎಂದು ಲೆಕ್ಕಾಚಾರ ಹಾಕುವಲ್ಲಿ ಆ ಪಕ್ಷ ಸೋತಿದೆಯಷ್ಟೆ. ತಮ್ಮ ಸಂಘಟನೆಯ ನಿಷೇಧದ ಪ್ರಸ್ತಾವನೆ ಎದ್ದತಕ್ಷಣ, ಬಜರಂಗದಳದ ಕಾರ್ಯಕರ್ತರು ಮತ್ತು ನಾಯಕರು ಹನುಮ ಭಜನೆಗೆ ಇಳಿದಿದ್ದಾರೆ. ಹನುಮಾನ್ ಚಾಲೀಸಾ ಪ್ರತಿಗಳನ್ನು ಮುದ್ರಣ ಮಾಡಿಕೊಂಡು ಗುರುವಾರ ಪಠಣ ಮಾಡಿ ʼಪ್ರತಿಭಟಿಸಿದ್ದಾರೆʼ. ಇದರಿಂದ ಹಿಂದೂ ಮತಗಳು ಬಿಜೆಪಿ ಕಡೆಗೆ ಹೊರಳುತ್ತದೆ ಎನ್ನುವುದು ಅವರ ಲೆಕ್ಕ.
ಇಂಥಾ ಲೆಕ್ಕಾಚಾರ ಏನೇ ಇರಲಿ, ಪ್ರಮುಖವಾಗಿ ಚರ್ಚಿಸಬೇಕಾದ ಮೂರನೆಯ ವಿಷಯ ಏನೆಂದರೆ, ಬಜರಂಗದಳ ಹಾಗೂ ಪಿಎಫ್ಐ ನಡುವೆ ಹೋಲಿಕೆ ಸರಿಯೇ ? ಕಾಂಗ್ರೆಸ್ ಯಾಕೆ ಹೀಗೆ ಮಾಡಿತು ? ಇದು ನಿಜವಾಗಲೂ ಗಂಭೀರ ವಿಚಾರ. ಮೊದಲು ಈ ಎರಡೂ ಸಂಘಟನೆಗಳ ಹುಟ್ಟು-ಉದ್ದೇಶ-ಬೆಳವಣಿಗೆ ಗಮನಿಸೋಣ.
ಕೇರಳ ಸರಕಾರ ಅಧಿಕೃತವಾಗಿ ಹೇಳಿರುವ ಪ್ರಕಾರ, ಪಿಎಫ್ಐ ಎಂಬುದು ನಿಷೇಧಿತ ಸಿಮಿಯ ಹೊಸ ರೂಪವಷ್ಟೆ. ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾತ್ರವಿದ್ದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ-SIMI)ದ ಕಾರ್ಯಚಟುವಟಿಕೆಗಳನ್ನು ಪಿಎಫ್ ಐ ಮುಂದುವರಿಸಿತ್ತು.
ಈ ಪಿಎಫ್ಐ ಹುಟ್ಟಿದ್ದು ಕೂಡ ಸ್ವಾರಸ್ಯಕರ. ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ (ಕೆಎಫ್ಡಿ) ಹಾಗೂ ನ್ಯಾಷನಲ್ ಡೆವಲಪ್ಮೆಂಟ್ ಫೋರಂ (ಎನ್ಡಿಎಫ್) ವಿಲೀನ ಮಾಡುವುದರ ಮೂಲಕ 2006ರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಜನ್ಮ ತಾಳಿತು.
ಹಾಗಾದರೆ ಸಿಮಿ ಆರಂಭವಾಗಿದ್ದು ಹೇಗೆ?
ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ 1977ರಲ್ಲಿ ಸಿಮಿ ಆರಂಭವಾಯಿತು. ಇದರ ಘೋಷಿತ ಉದ್ದೇಶವೇ- ʼಭಾರತವನ್ನು ಸ್ವತಂತ್ರವಾಗಿಸುವುದುʼ. ಭಾರತ 1947ರಲ್ಲೇ ಸ್ವತಂತ್ರವಾಯಿತು. ಅಂದಮೇಲೆ ಇದ್ಯಾವ ಸ್ವತಂತ್ರ ಎಂದು ಹುಬ್ಬೇರಿಸುವಿರಾ ? ಭಾರತವನ್ನು ಇಸ್ಲಾಂ ದೇಶವಾಗಿಸುವ ಮೂಲಕ ಇಲ್ಲಿನ ಜನರನ್ನು, ದೇಶವನ್ನು ಸ್ವತಂತ್ರವಾಗಿಸುವ ಉದ್ದೇಶವನ್ನು ಈ ಸಿಮಿ ಸಂಘಟನೆ ಹೊಂದಿತ್ತು. ದಾರ್ ಉಲ್ ಹರಾಂ (ಅಂದರೆ ಅಪವಿತ್ರ ನಾಡು) ನೆಲವನ್ನು ದಾರ್ ಉಲ್ ಇಸ್ಲಾಂ (ಪವಿತ್ರ ನೆಲ) ಮಾಡುವುದು ಉದ್ದೇಶ. ಇದನ್ನೇನು ಅವು ಭಯೋತ್ಪಾದನೆ ಎಂದು ಅವರು ಹೇಳಿಲ್ಲ. ಯಾರು ಈ ಸಂಘಟನೆಯನ್ನು ಆರಂಭಿಸಿದರೋ ಅವರಿಗೆ ಇದು ಪವಿತ್ರ ಕೆಲಸ.
ಹಾಗೆ ನೋಡಿದರೆ, ಇಂಥದ್ದೊಂದು ಕೆಟ್ಟ ಆಲೋಚನೆ ಹರಿಯಬಿಟ್ಟಿದ್ದು ಮೊಹಮ್ಮದ್ ಅಲಿ ಜಿನ್ನಾ. ಅವರ ʼದ್ವಿರಾಷ್ಟ್ರ ಸಿದ್ಧಾಂತʼದ ಪ್ರಕಾರ, ಮುಸ್ಲಿಂ ಹಾಗೂ ಹಿಂದುಗಳು ಎರಡು ಪ್ರತ್ಯೇಕ ಸಮುದಾಯಗಳು. ಒಂದು ಸಮುದಾಯವನ್ನು ಮತ್ತೊಂದು ಪ್ರಭಾವಿಸದೆ, ದಮನ ಮಾಡದೆ ಒಂದೇ ವ್ಯವಸ್ಥೆಯಲ್ಲಿ ಸಹಜೀವನ ನಡೆಸಲು ಸಾಧ್ಯವಿಲ್ಲ ಎಂದು ಜಿನ್ನಾ ಹೇಳಿದ್ದರು. ಇದರ ಕಾರಣವೇ ದೇಶ 1947ರಲ್ಲಿ ಎರಡು ತುಂಡಾಯಿತು. ಹೀಗೆ, ಇಂದು ಕಾಂಗ್ರೆಸ್ ಹೇಳಿರುವ ಪಿಎಫ್ಐ ಸಂಘಟನೆಗಳೂ, 1947ರ ದೇಶ ವಿಭಜನೆಗೂ ನೇರ ಸಂಬಂಧವಿದೆ.
ಹಾಗಾದರೆ ಬಜರಂಗದಳ ಆರಂಭವಾಗಿದ್ದು ಹೇಗೆ? ಕಾಕತಾಳೀಯ ಎಂಬಂತೆ ಬಜರಂಗ ದಳ ಆರಂಭವಾಗಿದ್ದೂ ಅದೇ ಉತ್ತರ ಪ್ರದೇಶದ ನೆಲದಲ್ಲಿ, 1984ರಲ್ಲಿ. ಅದಾಗಲೇ ಸ್ಥಾಪನೆಯಾಗಿ ಅನೇಕ ಸಾಮಾಜಿಕ ಜಾಗೃತಿಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ವಿಶ್ವ ಹಿಂದು ಪರಿಷತ್ ನ ಯುವ ವಿಭಾಗವಾಗಿ ಬಜರಂಗದಳ ಆರಂಭವಾಯಿತು. ಬಜರಂಗದಳದ ಘೋಷ ವಾಕ್ಯ ʼಸೇವಾ-ಸುರಕ್ಷಾ- ಸಂಸ್ಕೃತಿʼ. ಸಾಮೂಹಿಕ ಮತಾಂತರ ಆಗುತ್ತಿದ್ದಾಗ ನುಗ್ಗಿ ಎಚ್ಚರಿಕೆ ನೀಡುವಂತಹ ಕಾರ್ಯ ನಡೆಸುತ್ತಿರುವ ಬಜರಂಗ ದಳದ ಕಾರ್ಯಕರ್ತರನ್ನು ಅನೇಕರು ನೋಡಿರುತ್ತಾರೆ. ಏಕೆಂದರೆ ಇಂತಹ ಘಟನೆಗಳು ಹೆಚ್ಚೆಚ್ಚು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಬಜರಂಗದಳ ಸ್ಥಾಪನೆಯ ಉದ್ದೇಶ, ವಿಶ್ವ ಹಿಂದು ಪರಿಷತ್ ಸ್ವತಃ ಘೋಷಿಸಿಕೊಂಡಿರುವಂತೆ, “ಶ್ರೀರಾಮನ ಕಾರ್ಯಕ್ಕೆ ಹನುಮಂತನು ಸದಾ ಇರುತ್ತಾನೆ. ಅದೇ ರೀತಿ ಇಂದಿನ ಯುಗದಲ್ಲಿ ಶ್ರೀರಾಮನ ಕಾರ್ಯಕ್ಕೆ ಈ ಬಜರಂಗದಳ ಕೆಲಸ ಮಾಡಲಿದೆ. ಬಜರಂಗದಳದ ಸಂಘಟನೆಯು ಯಾರ ವಿರುದ್ಧವೂ ಅಲ್ಲ. ಆದರೆ ಸಮಾಜ ವಿರೋಧಿ ಶಕ್ತಿಗಳಿಂದ ಹಿಂದೂಗಳನ್ನು ರಕ್ಷಿಸಲು” ಎಂದು ಹೇಳಿದೆ.
ಜತೆಗೆ, ಬಜರಂಗದಳಕ್ಕೆ ದೇಶ ಮತ್ತು ಧರ್ಮ ಫಸ್ಟ್. ಉಳಿದಿದ್ದಲ್ಲವೂ ನೆಕ್ಸ್ಟ್. ಇಂಥಾ ಬಜರಂಗದಳವನ್ನು ಕಾಂಗ್ರೆಸ್, ತನಗೆ ಅಧಿಕಾರವೇ ಇಲ್ಲದಿದ್ದರೂ ನಿಷೇಧಿಸಲು ಹೊರಟಿದೆ.
ಹಾಗೆ ನೋಡಿದರೆ ಬಜರಂಗದಳವನ್ನು ನಮ್ಮ ಸಮಾಜದ ಸಾಂಸ್ಕೃತಿಕ ಸಂಘಟನೆಯನ್ನಾಗಿಯೋ, ದೇಶವಿರೋಧಿಗಳ ವಿರುದ್ಧದ ಪ್ರತಿರೋಧ ಸಂಘಟನೆಯನ್ನಾಗಿಯೇ ಬಹುಜನರು ಪರಿಗಣಿಸುತ್ತಾರೆ. ಕಾಂಗ್ರೆಸ್, ಜೆಡಿಎಸ್, ಅಷ್ಟೇ ಏಕೆ, ಕಮ್ಯುನಿಷ್ಟ್ ಪಕ್ಷದಲ್ಲಿರುವ ಬಹಳಷ್ಟು ಜನ, ಬಜರಂಗದಳ ಸಂಘಟನೆಯ ಚಟುವಟಿಕೆಯನ್ನು ಒಳಗೊಳಗೆ ಬೆಂಬಲಿಸುತ್ತಾರೆ. ಪ್ರತ್ಯೇಕತವಾದಿ ಸಂಘಟನೆಗಳು ಹಾಗೂ ಹಿಂದೂ ಸಂಸ್ಕೃತಿ ವಿರುದ್ಧದ ಸಂಘಗಳನ್ನು ಬಜರಂಗದಳ ಯಾವುದೇ ಮುಲಾಜು ಇಲ್ಲದೇ ವಿರೋಧಿಸುತ್ತದೆ. ಖಂಡಿಸುತ್ತದೆ. ಒಂದು ಸಮಾಜಕ್ಕೆ ಇಂಥಾ ಸಂಘಟನೆ ಬೇಕೆ ಬೇಕು. ಹಾಗೆ ನೋಡಿದರೆ, ಎಲ್ಲ ದೇಶ, ಎಲ್ಲ ಸಮಾಜಗಳು ಇಂಥಾ ಸಂಘಟನೆಗಳನ್ನು ಪೋಷಿಸುತ್ತಲೇ ಇರುತ್ತವೆ. ಇದೊಂದು ರೀತಿ ಸ್ವಾತಂತ್ರ್ಯಪೂರ್ವದ ಮಂದಗಾಮಿಗಳು ಹಾಗೂ ತೀವ್ರಗಾಮಿಗಳ ಕಥೆ ಇದ್ದಂತೆ. ಮಂದಗಾಮಿಗಳಿಂದ ಆಗದ ಕೆಲಸ ತೀವ್ರಗಾಮಿಗಳಿಂದ ಆಗುತ್ತಿತ್ತು.
ಇದರರ್ಥ, ಬಜರಂಗದಳ ಕಾರ್ಯಕರ್ತರಿಂದ ತಪ್ಪುಗಳು ನಡೆದೇ ಇಲ್ಲ ಎಂದೇನಿಲ್ಲ. ಸುದ್ದಿಗೋಷ್ಠಿ ನಡೆಯುತ್ತಿರುವಾಗ ದಾಳಿ ಮಾಡಿರುವ, ವ್ಯಾಲೆಂಟೈನ್ಸ್ ಡೇ ದಿನದಂದು ಪ್ರೇಮಿಗಳ ಮೇಲೆ ದಾಳಿ ಮಾಡುವುದು, ಗೋ ಸಂರಕ್ಷಣೆ ಹೆಸರಿನಲ್ಲಿ ಅನೇಕ ಬಾರಿ ವಿಪರೀತ ವರ್ತನೆ ಮಾಡಿರುವ ಘಟನೆಗಳು ಕಣ್ಣಮುಂದಿವೆ. ಈ ಎಲ್ಲವೂ ವಿಪರೀತ ಎನಿಸಿದರೂ, ಅದರ ಉದ್ದೇಶವನ್ನು ಪ್ರಶ್ನೆ ಮಾಡುವಂತಿರಲಿಲ್ಲ.
“ಕನ್ನಡ ವಿರೋಧಿಗಳ ಮುಖಕ್ಕೆ ಮಸಿ ಬಳಿಯದೇ, ಫೇರ್ ಅಂಡ್ ಲವ್ಲಿ ಮೆತ್ತಲು ಸಾಧ್ಯವೇ,” ಎಂದು ಪೂರ್ಣಚಂದ್ರ ತೇಜಸ್ವಿ ಅವರು ಪ್ರಶ್ನೆ ಬಜರಂಗಿಗಳಿಗೂ ಸಲ್ಲುತ್ತದೆ.
ಜತೆಗೆ, ದೋಷಗಳೂ ಇರಬಹುದು. ಇಡೀ ದೇಶದಲ್ಲಿ ವ್ಯಾಪಿಸಿರುವ ಸಂಘಟನೆ ಎಂದ ಮೇಲೆ, ಅಲ್ಲಿ ಎಲ್ಲರೂ ಒಂದೇ ಆಲೋಚನೆಯವರು ಇರುತ್ತಾರೆ ಎಂದೇನಿಲ್ಲ. ಕೆಲವರು ತಮ್ಮ ಸ್ವಾರ್ಥಕ್ಕಾಗಿಯೂ ಸೇರಿಕೊಂಡಿರುತ್ತಾರೆ. ಸಂಘಟನೆಯಲ್ಲಿ ಸೇರಿದ್ದರೂ ಅನೇಕರ ವೈಯಕ್ತಿಕ ಸ್ವಭಾವಗಳಲ್ಲಿ ಬದಲಾವಣೆ ಆಗಿರುವುದಿಲ್ಲ. ಅಂಥವರಿಂದ ಈ ರೀತಿಯ ಕೆಲಸಗಳು ಆಗುತ್ತವೆ. ಆದರೆ ಇಂತಹ ಕೃತ್ಯಗಳು ನಡೆದಾಗ ಆ ಸಂಘಟನೆಯ ಪ್ರಮುಖರು ಏನು ಹೇಳಿದರು, ಏನು ಕ್ರಮ ಕೈಗೊಂಡರು ಎನ್ನುವುದು ಮುಖ್ಯ. ಕಾರ್ಯಕರ್ತರು ಸಂಘಟನೆಯ ಮೂಲ ಆಶಯಕ್ಕೆ ವಿರುದ್ಧವಾಗಿ ಸ್ವಹಿತಾಸಕ್ತಿಗೆ ದುಡಿಯುತ್ತಿರುವಾಗ, ಜಾತಿ ಆಧಾರಿತ ನಡೆ ಪ್ರದರ್ಶಿಸಿದಾಗ ಅಂಥವರನ್ನು ಹೊರಗೆ ಕಳಿಸಲಾಗಿದೆ. ಎರಡು ವರ್ಷದ ಹಿಂದೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಇಂಥವರಿಗೆ ಎಚ್ಚರಿಕೆ ನೀಡಿದ್ದರು. ಗೋ ಸಂರಕ್ಷಣೆ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದು ಸ್ಪಷ್ಟ ಧ್ವನಿಯಲ್ಲಿ ಹೇಳಿದ್ದರು.
ಸಮಾಜ ಸೇವೆ ಮತ್ತು ರಕ್ಷಣೆಯಲ್ಲಿ ಬಜರಂಗದಳ ಕಾರ್ಯಕರ್ತರು ತೊಡಗಿದ್ದಾರೆ. ಯುವಕರು ವ್ಯಸನದಿಂದ ಮುಕ್ತವಾಗಬೇಕು ಎಂದು ಶ್ರಮಿಸುತ್ತಿದೆ. ಸಾವಿರಾರು ಕಡೆಗಳಲ್ಲಿ ರಕ್ತದಾನದ ಮೂಲಕ ಸೇವೆ ಸಲ್ಲಿಸುತ್ತಿದೆ. ಹನುಮನ ಜನ್ಮಸ್ಥಾನ ಅಂಜನಾದ್ರಿಯನ್ನು ಸಮಾಜದಲ್ಲಿ ಪ್ರಖ್ಯಾತಗೊಳಿಸಿ ಇಂದು ತೀರ್ಥ ಸ್ಥಳ ಹಾಗೂ ಪ್ರವಾಸಿ ತಾಣವಾಗಿಸಿದ್ದು ಬಜರಂಗದಳ. ಅದಕ್ಕಿಂತಲೂ ಮೊದಲು ದತ್ತಪೀಠ ಹೋರಾಟವನ್ನು ಕೈಗೆತ್ತಿಕೊಂಡು ತಾರ್ಕಿಕ ಅಂತ್ಯ ಮುಟ್ಟಿಸಿದ್ದು ಬಜರಂಗ ದಳದ ಸಾಧನೆ.
ಇಂಥಾ ಸಂಘಟನೆಯನ್ನು ನಿಷೇಧಿಸಬೇಕು ಎಂದು ಕಾಂಗ್ರೆಸ್ ಹೇಳಿದ್ದೇಕೆ ? ಅಂಥಾ ಯಾವ ಕೃತ್ಯವನ್ನು ಎಸಗಿದೆ ? ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆ (UAPA) ಅಡಿಯಲ್ಲಿ ಬಜರಂಗದಳ ವಿರುದ್ಧ ಯಾವುದಾದರೂ ಪ್ರಕರಣ ದಾಖಲಾಗಿದೆಯೇ? ಅಷ್ಟಕ್ಕೂ ಬಜರಂಗದಳ ಹಾಗೂ ಆರ್ಎಸ್ಎಸ್ನಂತಹ ಸಂಘಟನೆಗಳು ಅಂತಹ ಯಾವ ದೇಶ ವಿರೋಧಿ ಕೆಲಸ ಮಾಡಿವೆ? ಆರ್ ಎಸ್ ಎಸ್ ಸಂಸ್ಥಾಪಕ ಡಾ. ಹೆಗಡೆವಾರ್ ಅವರೇ, “ಈ ದೇಶದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲದಿದ್ದರೂ ತಾನು ಆರ್ ಎಸ್ ಎಸ್ ಸ್ಥಾಪನೆ ಮಾಡುತ್ತಿದ್ದೆ” ಎಂದು ಹೇಳಿದ್ದರು. ಆರ್ ಎಸ್ ಎಸ್ ಸ್ಥಾಪನೆಯಾಗಿದ್ದು ಹಿಂದುಗಳಲ್ಲಿ ಕಣ್ಮರೆಯಾಗಿರುವ ಒಗ್ಗಟ್ಟು, ಸ್ವಾಭಿಮಾನವನ್ನು ಜಾಗೃತಗೊಳಿಸಲೇ ಹೊರತು ಇನ್ಯಾರದ್ದೋ ವಿರೋಧಕ್ಕಲ್ಲ. ಇಂತಹ ಆರ್ ಎಸ್ ಎಸ್ ಸಂಘಟನೆಯನ್ನು ಮಹಾತ್ಮಾ ಗಾಂಧಿ ಹತ್ಯೆ ಆರೋಪದಲ್ಲಿ ಜವಾಹರಲಾಲ್ ನೆಹರೂ ಅವರ ಸರ್ಕಾರ 1948ರಲ್ಲಿ ಬ್ಯಾನ್ ಮಾಡಿತು, ನಂತರ ನಿಷೇಧವನ್ನು ಹಿಂಪಡೆಯಿತು.. ಆದರೆ 1962ರಲ್ಲಿ ಚೀನಾ ಯುದ್ಧದ ಸಂದರ್ಭದಲ್ಲಿ ಆರ್ ಎಸ್ ಎಸ್ ಸ್ವಯಂಸೇವಕರು ಅಪಾರ ಸೇವೆ ಸಲ್ಲಿಸಿದರು. ಸೈನಿಕರ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತ ಆರ್ ಎಸ್ ಎಸ್ ಕಾರ್ಯಕ್ಕೆ ಸ್ವತಃ ಜವಾಹರಲಾಲ್ ನೆಹರೂ ಮೆಚ್ಚುಗೆ ಸೂಚಿಸಿ 1963ರ ಜನವರಿ 26ರಂದು ನವದೆಹಲಿಯಲ್ಲಿ ನಡೆದ ಗಣರಾಜ್ಯ ಪಥ ಸಂಚಲನದಲ್ಲಿ ಮೂರು ಸಾವಿರ ಆರ್ ಎಸ್ ಎಸ್ ಸ್ವಯಂಸೇವಕರು ಭಾಗವಹಿಸಲು ಅವಕಾಶ ನೀಡಿದರು.
ಇದನ್ನೂ ಓದಿ: Mann Ki Baat: ವಿಸ್ತಾರ ಅಂಕಣ; ಮನ್ ಕಿ ಬಾತ್ ಮೂಲಕ ಭಾರತೀಯರೊಂದಿಗೆ ಮೋದಿ ಕುಶಲೋಪರಿ
ಸ್ವತಃ ಮಹಾತ್ಮ ಗಾಂಧಿಯವರು 1940ರ ಆಸುಪಾಸಿನಲ್ಲಿ ಆರ್ ಎಸ್ ಎಸ್ ಶಿಬಿರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಶಿಬಿರದಲ್ಲಿದ್ದ ಶಿಸ್ತನ್ನು ಕಂಡು ಮೆಚ್ಚಿದ್ದರು. ಅದಕ್ಕಿಂತಲೂ ಹೆಚ್ಚಾಗಿ, ಅಲ್ಲಿ ಅಸ್ಪೃಶ್ಯತೆಯ, ಮೇಲು ಕೀಳು ಭಾವನೆಯ ಲವಲೇಷವೂ ಇಲ್ಲದ್ದನ್ನು ಕಂಡು ಅಪಾರ ಸಂತಸಗೊಂಡಿದ್ದರು. ತಾವು ಅಸ್ಪೃಶ್ಯತೆಯ ನಿರ್ಮೂಲನೆಗೆ ಕೈಗೊಳ್ಳುತ್ತಿರುವ ಕಾರ್ಯವನ್ನು ಅತ್ಯಂತ ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿರುವ ಸಂಘಟನೆ ಎಂದು ತಿಳಿಸಿದ್ದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ನೇರವಾಗಿ ಆರ್ಎಸ್ಎಸ್ ಸಂಪರ್ಕಕ್ಕೆ ಬರಲಿಲ್ಲವಾದರೂ ಎರಡು ಬಾರಿ ಮುಂಬೈಯಲ್ಲಿ ಚುನಾವಣೆ ಎದುರಿಸಿದಾಗಲೂ ಅವರ ಚುನಾವಣಾ ಏಜೆಂಟರಾಗಿ, ಪ್ರಚಾರ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದು ಆರ್ಎಸ್ಎಸ್ ಪ್ರಚಾರಕರಾಗಿದ್ದ ಹಾಗೂ ಕಾರ್ಮಿಕ ಸಂಘಟನೆಯ ಪ್ರಮುಖರಾಗಿದ್ದ ದತ್ತೋಪಂಥ ಠೇಂಗಡಿ ಅವರು. ಈ ಎರಡೂ ಚುನಾವಣೆಗಳಲ್ಲಿ ಅಂಬೇಡ್ಕರ್ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅವರನ್ನು ಸೋಲಿಸಿದ್ದು ಅಂದಿನ ಕಾಂಗ್ರೆಸ್ ಪಕ್ಷ ಎನ್ನುವುದು ಸತ್ಯವಾದರೂ, ರಾಜಕೀಯ ವಿಷಯವಾದ್ದರಿಂದ ಇಲ್ಲಿ ಚರ್ಚಿಸುತ್ತಿಲ್ಲ.
ಇದನ್ನೂ ಓದಿ: ವಿಸ್ತಾರ ಅಂಕಣ: ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿದ್ದರ ಹಿಂದೆ ಬಿ.ಎಲ್ ಸಂತೋಷ್ ಸ್ವಹಿತಾಸಕ್ತಿ ಏನಿದೆ?
ದೇಶದ ಮೇಲೆ 1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದರು. ಜನತಾ ಪಕ್ಷದ ಹಾಗೂ ಜನಸಂಘದ ಅನೇಕ ನಾಯಕರುಗಳನ್ನು ಸರ್ಕಾರ ಬಂಧಿಸಿತು. ಈ ಸಂದರ್ಭದಲ್ಲಿ ದೇಶಾದ್ಯಂತ ತುರ್ತು ಪರಿಸ್ಥಿತಿ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತ, ಮತ್ತೆ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಶ್ರಮಿಸಿದ್ದು ಆರ್ಎಸ್ಎಸ್ ಕಾರ್ಯಕರ್ತರು. ತುರ್ತು ಪರಿಸ್ಥಿತಿಯನ್ನು ತೆರವುಗೊಳಿಸಿದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳೀಪಟವಾಗಿ ಜನತಾ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜನಸಂಘವೂ ಅದರ ಭಾಗವಾಗಿತ್ತು. ಈ ಸಮಯದಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಆರ್ಎಸ್ಎಸ್ ಕುರಿತು ಮಾತನಾಡಿದ್ದರು. ಆರ್ಎಸ್ಎಸ್ ಒಂದು ದೇಶಭಕ್ತ ಸಂಘಟನೆ. ಆ ಸಂಘಟನೆ ಸಿದ್ಧಾಂತದ ಕುರಿತು ನಮಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಆದರೆ ದೇಶ ಭಕ್ತಿ ಹಾಗೂ ಸಂಸ್ಕೃತಿಯನ್ನು ಕಾಪಾಡಲು, ಬೆಳೆಸಲು ಆರ್ಎಸ್ಎಸ್ನಂತಹ ಸಂಘಟನೆಗಳ ಅವಶ್ಯಕತೆ ಇದೆ ಎಂದಿದ್ದರು.
ಇಂತಹ ಆರ್ ಎಸ್ ಎಸ್ ವಿಚಾರಧಾರೆಯಿಂದ ಪ್ರೇರಿತಗೊಂಡಿರುವುದು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ. ಕೆಲವು ಮೂಲಭೂತವಾದಿ ಮುಸ್ಲಿಮರು ಭಯೋತ್ಪಾದಕ ಕೃತ್ಯಗಳಲ್ಲಿ, ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿದ ತಕ್ಷಣ ಹೇಗೆ ಇಡೀ ದೇಶದ ಎಲ್ಲ ಮುಸ್ಲಿಮರನ್ನೂ ಭಯೋತ್ಪಾದಕರು ಎನ್ನಲು ಸಾಧ್ಯವಿಲ್ಲವೊ, ಹಾಗೆಯೇ ಸಂಘಟನೆಯ ಕೆಲವು ಕಾರ್ಯಕರ್ತರು ಅಲ್ಲಲ್ಲಿ ಮಾಡಿದ ತಪ್ಪು ಹಾಗೂ ಕಾನೂನು ಬಾಹಿರ ಕೃತ್ಯಗಳನ್ನು ಇಡೀ ಸಂಘಟನೆಯ ಮೇಲೆ ಹೊರಿಸಲು ಸಾಧ್ಯವಿಲ್ಲ. ಹಾಗೆಯೇ, ಬಜರಂಗದಳದ ಮೂಲ ಸಿದ್ಧಾಂತದಲ್ಲೇ ದೇಶವಿರೋಧ ಎನ್ನುವ ಸೂತ್ರ ಇಲ್ಲ. ಇಂತಹ ಮೂಲ ಅಂಶಗಳನ್ನು ಅರ್ಥ ಮಾಡಿಕೊಂಡು ಎಲ್ಲರೂ ನಡೆಯಬೇಕು.
ಈ ಬಾರಿಯ ವಿಧಾನಸಭೆ ಚುನಾವಣೆ ಮೇ 10ಕ್ಕೆ ಬರುತ್ತಿದೆ. ನಂತರ 2024ರಲ್ಲಿ ಲೋಕಸಭೆ ಚುನಾವಣೆ ಬರುತ್ತದೆ. ನಂತರ ಐದು ವರ್ಷಕ್ಕೆ ಮತ್ತೆ ಇದೇ ಪ್ರಕ್ರಿಯೆಗ ಪುನರಾವರ್ತನೆ ಆಗುತ್ತದೆ. ಯಾವುದೇ ಪಕ್ಷ ಗೆಲ್ಲಬಹುದು, ಯಾವುದೇ ಸೋಲಬಹುದು. ಆದರೆ ಈ ದೇಶದ ಸಂಸ್ಕೃತಿ, ಪರಂಪರೆ ನಿರಂತರ ಹಾಗೂ ಶಾಶ್ವತವಾದದ್ದು. ಕ್ಷಣಿಕ ಚುನಾವಣಾ ವಿಜಯಕ್ಕಾಗಿ ಶಾಶ್ವತ ಮೌಲ್ಯಗಳು ಹಾಗೂ ಸಂಸ್ಕೃತಿಯ ಮೇಲೆ, ಅವನ್ನು ರಕ್ಷಣೆ ಮಾಡುತ್ತಿರುವವರ ವಿರುದ್ಧ ನಡೆಸುವ ದಾಳಿ ಅಪಾರ ಹಾನಿಯನ್ನು ಉಂಟು ಮಾಡುತ್ತದೆ. ಕಾಂಗ್ರೆಸ್ ಪಕ್ಷ ಇಂತಹ ಅನವಶ್ಯಕ ನಡೆಗಳಿಂದಲೇ ದೇಶಾದ್ಯಂತ ನೆಲಕಚ್ಚಿದೆ. ಕರ್ನಾಟಕದಲ್ಲಿ ಸ್ಥಳೀಯ ನಾಯಕತ್ವದ ಸಲುವಾಗಿ ಇನ್ನೂ ಸದೃಢವಾಗಿದೆ. ಮುಸ್ಲಿಂ ಮತಗಳು ಲಭಿಸಿಬಿಡುತ್ತವೆ ಎಂಬ ಆಸೆಯಲ್ಲಿ ಬಜರಂಗದಳವನ್ನೂ ಬ್ಯಾನ್ ಮಾಡುತ್ತೇವೆ ಎನ್ನುವಂತಹ ಬಾಲಿಷ ಮಾತುಗಳ ಮೂಲಕ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳಬಾರದು ಎನ್ನುವ ಸಣ್ಣ ಸಾಮಾನ್ಯ ಜ್ಞಾನ, ರಾಜಕೀಯ ಜಾಣತನವನ್ನಾದರೂ ಕಾಂಗ್ರೆಸ್ ಪ್ರದರ್ಶಿಸಬೇಕಿದೆ.
ಇದನ್ನೂ ಓದಿ: ವಿಸ್ತಾರ ಅಂಕಣ: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆಯನ್ನು ಆಯೋಗಕ್ಕೆ ಮಾತ್ರ ಹೊರಿಸುವುದು ಹೊಣೆಗೇಡಿತನ