Site icon Vistara News

ದಶಮುಖ ಅಂಕಣ: ನಾಕು ತಂತಿಯ ರಾಗ ಹೊಮ್ಮಿಸುವ ಅನುರಾಗ…

da ra bendre

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/02/dashamukh-bendre-1.mp3

ಪ್ರೇಮಿಗಳ ದಿನದ ಹವಾ ಎಲ್ಲೆಡೆ ಜೋರಾಗಿಯೇ ಬೀಸುತ್ತಿದೆ. ಪಾರ್ಕುಗಳು, ರೆಸ್ಟೋರೆಂಟುಗಳು, ಚಿತ್ರಮಂದಿರ, ಮಾಲು, ಅಂಗಡಿ, ಮರ, ಗಿಡ, ಹಾದಿ-ಬೀದಿಗಳಿಂದ ಹಿಡಿದು ಅಂಗೈಯಗಲ ಜಾಗವೂ ಇಂದು ಭರ್ತಿಯೋ ಭರ್ತಿ. ಹೂವು ಕೊಡುವ ನಮ್ರ ನಿವೇದನೆಯಿಂದ ಹಿಡಿದು ದುಬಾರಿ ಉಡುಗೊರೆಗಳನ್ನು ಕೊಡುವವರೆಗೆ ಪ್ರೇಮ ನಿವೇದನೆಯ ದುಂದು ನಡೆಯುತ್ತದೆ. ಈ ಎಲ್ಲರದ್ದೂ ತಂತಮ್ಮ ಕೆಲಸ-ಕಾರ್ಯಗಳಲ್ಲಿ ಎಂತಹ ತನ್ಮಯತೆಯೆಂದರೆ, ತಮ್ಮನ್ನುಳಿದು ಸುತ್ತಲೂ ಲೋಕವೇ ಇಲ್ಲ ಎಂಬಂಥ ಸ್ಥಿತಿಯಲ್ಲಿದ್ದಂತೆ ಕಾಣುತ್ತಿರುತ್ತಾರೆ. ಈಗ ಬಿಟ್ಟರೆ ಇನ್ನೆಂದಿಗೂ ಇದು ಸಂಭವಿಸುವುದಿಲ್ಲ ಎಂಬಂಥ ವಿಚಿತ್ರ ತಹತಹದಲ್ಲಿ ಎಲ್ಲರೂ ಆ ಕ್ಷಣದಲ್ಲಿ ಮೈಮರೆತಿರುತ್ತಾರೆ. ಇಷ್ಟೊಂದು ತಲ್ಲೀನತೆ ಮೂಡುವುದಕ್ಕೆ, ಲೋಕವನ್ನೇ ಮರೆಯುವಂಥ ವಿಷಯವೇನು ಜರುಗುತ್ತಿದೆ ಅಲ್ಲಿ ಎಂಬ ಸೋಜಿಗ ಮೂಡಿದರೆ ಹೆಚ್ಚಲ್ಲ. ಎಲ್ಲೆಡೆ ಪ್ರೀತಿ-ಪ್ರೇಮದ ಹುಚ್ಚು ಹೊನಲೇ ಹರಿಯುತ್ತಿರುವ ಇಂದಿನ ಈ ದಿನ, ವರಕವಿ ದ. ರಾ. ಬೇಂದ್ರೆಯವರ ಕಾವ್ಯ ಮಾರ್ಗದಲ್ಲಿನ ಅನುರಕ್ತಿಯ ಅನುಭವ ಪಡೆಯುವ ಚುಟುಕು ಪ್ರಯತ್ನವಿದು.

ಬಹುಶಃ, ನಿತ್ಯದ ಬದುಕೇ ನೂತನವಾಗುವುದೆಂದರೆ ಇದೇ ಇರಬೇಕು. ಸರಳ ಎನಿಸುವ ವಿಷಯಗಳಲ್ಲೂ ಒಂದು ಅಲೌಕಿಕ ರಸ ಹರಿಯುತ್ತದೆ, ಅಲ್ಲೊಂದು ಉತ್ಕಟ ಭಾವ ಮೂಡುತ್ತದೆ. ಹೀಗೆನ್ನುವಾಗಲೆಲ್ಲಾ ನೆನಪಾಗುತ್ತಾರೆ ನಮ್ಮ ಬೇಂದ್ರೆ ಅಜ್ಜ. ಯಾವುದೋ ಪಾರ್ಕಿನ ಮೂಲೆಯ ಬೆಂಚೊಂದರಲ್ಲಿ ಕುಳಿತು, “ಕವಿ ಜೀವದ ಬ್ಯಾಸರ ಹರಿಸಾಕ/ ಹಾಡ ನುಡಿಸಾಕ/ ಹೆಚ್ಚಿಗೇನು ಬೇಕ?/ ಒಂದು ಹೂತ ಹುಣಸಿಮರ ಸಾಕ/” ಎನ್ನುತ್ತಾ, ಮಾತಿನ ಮೂಲಕವೇ ಲಯಬದ್ಧವಾದ ನಾದಲೀಲೆಯನ್ನು ಸೃಷ್ಟಿಸಬಲ್ಲರು. “ತಾಳ್ಯಾಕ ತಂತ್ಯಾಕ/ ರಾಗದ ಚಿಂತ್ಯಾಕ/ ಹೆಜ್ಯಾಕ ಗೆಜ್ಯಾಕ ಕುಣಿಯೋಣು ಬಾ/” ಎನ್ನುತ್ತಾ ಜಡ್ಡುಗಟ್ಟಿ ಜಡವಾದ ಮನಗಳನ್ನೂ ಕುಣಿಸಬಲ್ಲರು. ಹೀಗೆ ರಾಗ-ತಾಳ-ಲಯವನ್ನು ಮೀರಿದ ಲೀಲೆಯನ್ನು ಸೃಷ್ಟಿಸಿ, ರಸದಲ್ಲಿ ಜನಿಸಿ, ವಿರಸದಲ್ಲಿ ಗತಿಸಿ, ಸಮರಸದಲ್ಲಿ ಜೀವಿಸುವ ಸರಳ ಹಾಗೂ ಮಹತ್ತರ ಭಾವ ಮಿಡಿಯುವುದಕ್ಕೆ ಅವರಿಗೆ ಬೇಕಾಗುವುದು ನಾಕೇ ನಾಕುತಂತಿ. ಬೇಂದ್ರೆಯವರ ಕಾವ್ಯ ಪ್ರವೇಶ ಮಾಡುವುದೆಂದರೆ ಸಾಗರವನ್ನು ಬೊಗಸೆಯಲ್ಲಿ ಹಿಡಿದಂತೆ. ಕಡೆಗೆ ನಮ್ಮ ಪ್ರಾಪ್ತಿ ಎಷ್ಟು ಎನ್ನುವುದನ್ನು ನಂನಮ್ಮ ಬೊಗಸೆಯನ್ನು ನೋಡಿ ನಾವೇ ಅರಿಯಬೇಕು. 

ದಾಂಪತ್ಯದ ವೈಯಕ್ತಿಕ ಮತ್ತು ಸಾಮಾಜಿಕ ಮುಖಗಳೆರಡನ್ನೂ ಒಂದು ಸರಳವಾದ ರಸಸೂತ್ರದಲ್ಲಿ ಪೋಣಿಸಬಹುದೇ ಎಂಬ ಪ್ರಶ್ನೆಗೆ, ʻಸಖೀಗೀತʼ ಎಂಬ ಆತ್ಮಗೀತೆಯಂಥ ಖಂಡಕಾವ್ಯವನ್ನು ಉತ್ತರವೆಂಬಂತೆ ಕೈಗಿತ್ತವರು ಬೇಂದ್ರೆ. ದಂಪತಿಗಳ ನಡುವೆ ಮಾತೇ ನಿಷಿದ್ಧ ಎಂಬ ಕಾಲದಲ್ಲಿ ಬರೆದ ಈ ಕಾವ್ಯದಲ್ಲಿ, ಹೆಂಡತಿಯನ್ನು ʻಸಖಿʼ ಎಂದು ಕರೆಯುವ ಮೂಲಕ ಹೊಚ್ಚಹೊಸ ʻಕಟುಮಧುರʼ ಆಖ್ಯಾನಕ್ಕೆ ನಾಂದಿ ಹಾಡಿದವರು ಅವರು. ಈ ಕಾವ್ಯದಲ್ಲಿ, ಅಂತಃಪಟದಾಚೆ ನಿಂತಿದ್ದ ʻವಿಧಿ ತಂದ ವಧುʼವಿನ ಜೊತೆಗೆ ಬದುಕಿನ ಅನುಭವಗಳೆಲ್ಲಾ ನಿಶ್ಚಿತವಾದ ಉದ್ದೇಶವಿದ್ದೇ ಸಂಭವಿಸುವಂಥದು. ಎಳೆಯ ವಯೋಮಾನದ ದಂಪತಿಯ ಹುಡುಗಾಟಿಕೆಗಳು ಕಳೆದು ಬದುಕಿನಲ್ಲಿ ಒಟ್ಟಾಗಿ ಮಾಗುವುದಕ್ಕೆ, ಕಷ್ಟಗಳ ತೇರನ್ನು ಜೊತೆಯಾಗಿ ಎಳೆಯುತ್ತಾ ಅನುರಾಗದಿಂದ ಅನುಭಾವದತ್ತ ತೆರಳುವುದಕ್ಕೆ, ದಾಂಪತ್ಯವೆಂಬ ಪವಿತ್ರ ಹಿನ್ನೆಲೆ ಬೇಕು ಎನ್ನುತ್ತದೆ ಕವಿಮನ. ಕನ್ನಡದ ಕಾವ್ಯ ಪರಂಪರೆಯಲ್ಲಿ ಅತ್ಯಪೂರ್ವ ಎನಿಸಿಕೊಂಡ ʻಸಖೀಗೀತʼದಲ್ಲಿ, ದಾಂಪತ್ಯದ ನಂಟು ಬೆಸೆಯುವ ದೈಹಿಕ ಸಂಬಂಧದ ಸ್ವರೂಪವನ್ನು ಅತ್ಯಂತ ನವಿರಾಗಿ, ಹದ ಮೀರದಂತೆ ಬೇಂದ್ರೆ ಚಿತ್ರಿಸಿದ್ದಾರೆ.

“ಹೆರಳಿನ ಮಾಲೆಯು ಕಣ್ಣಿನ ಕಾಡಿಗೆ/ ತುಟಿಯ ತಂಬುಲ ಉಗುರ ಮದರಂಗಿಯೇ

ಕೊಳಲ ನುಡಿಸುತ್ತಿತ್ತು ರಾಗ ಮಿಗುತಲಿತ್ತು/ ನಿಂತ ನಿಲುವೆಲ್ಲವೂ ತ್ರೀಭಂಗಿಯೇ…

… ಹಗಲೆಲ್ಲೊ ಹಾರಿದವು ಇರುಳೆಲ್ಲ ಜಾರಿದವು/ ಋತು ನಿದ್ದೆಯಾಡಿದವು ಬಗುರೆಯೊಲೆ

ನಗೆಯ ನೊರೆಯ ಕೆಳಗೆ ಮೊರೆವ ಬಯಕೆಯ ಕಡಲು/ ತೆರೆತೆರೆ ತೆರನಾಗಿ ತೆರೆಯುತಿರೇ”

ಹಾಗೆಂದು ಕಾವ್ಯದ ತುಂಬೆಲ್ಲ ಸಂತೋಷ, ಶೃಂಗಾರವೇ ಇರುವುದೆಂದಲ್ಲ. ಎಳೆಯ ಜೀವಗಳು ಒಂದಾದ ಸಂಭ್ರಮದ ನಡುವೆಯೇ ಅವರ ಚೊಚ್ಚಿಲ ಮಗು ಉಳಿಯದೆ, ಸಂಕಷ್ಟಗಳ ಸರಮಾಲೆ ಪ್ರಾರಂಭವಾಗುತ್ತದೆ.  ಮಕ್ಕಳನ್ನು ಕಳೆದುಕೊಂಡಾಗಿನ ದಾಂಪತ್ಯದ ಏರಿಳಿತ; ನಾಯಕನ ತಾಯಿಯ ಅಗಲುವಿಕೆ; ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರಿಂದ ನಾಯಕ ಅನುಭವಿಸಿದ ಸೆರೆವಾಸ; ʻನರಬಲಿʼ ಕವನ ಬರೆದಿದ್ದಕ್ಕೆ ಕವಿ ಮತ್ತವರ ಮಡದಿ ಅನುಭವಿಸುವ ಸಾಲು ಸಾಲು ಸಂಕಷ್ಟಗಳು- ಹೀಗೆ ಬಾಳಿನ ಸಂಕೀರ್ಣತೆಗಳೆಲ್ಲ ನಾನಾ ರೀತಿಯಲ್ಲಿ ಸಖ-ಸಖಿಗೆ ಮುಖಾಮುಖಿಯಾಗುತ್ತವೆ. ಬವಣೆಗಳಿಂದ ಸಾಂತ್ವನ ಹೊಂದಲು ಕವಿಯೇನೋ ಸಾಹಿತ್ಯದ ಕೆಲಸವನ್ನು ಹಚ್ಚಿಕೊಂಡರೂ ಅವರ ಪತ್ನಿಗೆ ಈ ಕಷ್ಟಗಳು ಸಹಿಸಲು ಅಸಾಧ್ಯ ಎಂಬಷ್ಟು ಸಂಕಟ ತರುತ್ತವೆ. ಬಂದಿದ್ದನ್ನೆಲ್ಲಾ ಎದುರಿಸಬೇಕು ಎಂದು ಕವಿ ತಾತ್ವಿಕತೆಯ ಮಾತಾಡಿದಾಗ-

“ನಿಮ್ಮ ಜೀವದ ಧ್ಯೇಯ ಗೌರೀಶಂಕರದಂತೆ ಶಿಖರವನೆತ್ತಿದೆ ಮುಗಿಲಿನೆಡೆಗೆ

ನನ್ನೆದೆ ತಿರುಗಿದೆ ಗಂಗೆಯು ಹರಿದಂತೆ ಜನರೀತಿಯಂತೆಯೇ ನೆಲದ ಕಡೆ…”

ಎನ್ನುವ ಮೂಲಕ ತಮ್ಮಿಬ್ಬರಲ್ಲಿ ಉಂಟಾಗಿರುವ ವಿರಸದ ವಿಪರ್ಯಾಸವನ್ನು ಸ್ಪಷ್ಟವಾಗಿಯೇ ಹೇಳುತ್ತಾಳೆ. ಹಾಗೆಯೇ ಮುಂದುವರಿದು- “ಗೆಳೆಯರ ಕೂಡಾಡಿ ಬಂದಾಗ, ನಾ ನಿಮ್ಮ ಮುಖದಲುಕ್ಕುವ ಗೆಲುವ ಕಂಡಿಲ್ಲವೇ!/ ಮನೆ ಬೆಳಕು ಮುಂದಿರೆ ಆ ಕಣ್ಣು ಕುಂದಿರೆ ನಾನೊಳಗೆ ನೊಂದಿರೇ ನೀವರಿಯರೇ” ಎನ್ನುತ್ತಾ ಕವಿಯ ಸಖತನವೇ ಮಾಯವಾಗುತ್ತಿರುವ ಬಗ್ಗೆ, ಸಖಿಯಾಗಿ ತಾನಿನ್ನು ಉಳಿದಿಲ್ಲದ ಬಗ್ಗೆ ಶೋಕಿಸುತ್ತಾಳೆ. ಆದರೊಂದು, ಈ ಸಾಲುಗಳನ್ನು ಬರೆದಿದ್ದು ಬೇಂದ್ರೆಯವರೇ ಹೊರತು ಅವರ ಪತ್ನಿಯಲ್ಲ. ಹಾಗಾದರೆ ಸಖಿಯೆಂದು ಕರೆದೂ ಆಕೆ ಸಖಿಯಾಗದ ಬಗ್ಗೆ, ಆಕೆಯ ಸಖನಾಗಿ ಉಳಿಯದ ಬಗ್ಗೆ ಬೇಂದ್ರೆಯವರನ್ನೂ ಕೊರಗು ಕಾಡಿತ್ತೇ? ಸಖಿಯ ಮೊಗದ ನಗೆ ಕುಂದಿರುವುದು ಅವರ ಗಮನಕ್ಕೆ ಬರಲೇಇಲ್ಲ ಎನ್ನುವುದೂ ಕಷ್ಟವೇ. ʻಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ ಏನೊಂದು ನಗಿ ಇತ್ತʼ ಎನ್ನುವ ಕವನದಲ್ಲಿ, ʻನಕ್ಕೊಮ್ಮೆ ಹೇಳ ಚೆನ್ನಿ, ಆ ನಗು ಇತ್ತಿತ್ತ ಹೋಗೇತಿ ಎತ್ತೆತ್ತʼ ಎಂದು ಕೇಳುತ್ತಾ ಕಕ್ಕುಲಾತಿ ತೋರುತ್ತಾರೆ. ಸ್ತ್ರೀ ಮನದಲ್ಲಿ ಇರುವುದೇನು ಎಂಬ ಬಗ್ಗೆ ಅವರು ತಿಳಿಯದವರಂತೂ ಖಂಡಿತ ಅಲ್ಲ. ʻನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕುʼ ಎಂಬ ಅವರ ಬೇರೆಯ ಕವನದ ಸಾಲುಗಳ ತೀವ್ರತೆಯನ್ನು ಗಮನಿಸಿ-

“ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು/ ತೋಳುಗಳಿಗೆ ತೋಳಬಂಧಿ ಕೆನ್ನೆ ತುಂಬ ಮುತ್ತು.

ಕುಂದುಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು/ ಹೊಟ್ಟೆಗಿತ್ತ ಜೀವ ಫಲವ ತುಟಿಗೆ ಹಾಲುಜೇನು”

ಎನ್ನುತ್ತಾ, ಸ್ತ್ರೀ ಮನದಲ್ಲಿ ಸಹಜವಾಗಿ ಬರಬಹುದಾದ ಸ್ವೈರವಿಲ್ಲದ ಅಪ್ಪಟ ಶೃಂಗಾರದ ಸಾಲುಗಳನ್ನೇ ಪೋಣಿಸುತ್ತಾರಲ್ಲ ಅವರು!

ʻಸಖೀಗೀತʼದ ಕೊನೆಯಲ್ಲಿ ಇವರಿಬ್ಬರ ಸಖ್ಯದ ವ್ಯಾಖ್ಯಾನವು ಬೇರೆಯದೇ ಹಂತಕ್ಕೆ ತಲುಪುತ್ತದೆ. ಅನ್ನಕ್ಕಾಗಿ ಬದುಕುವುದು, ಕಾಮಕ್ಕಾಗಿ ಮಗ್ಗುಲಾಗುವುದು, ಮಾನಕ್ಕಾಗಿ ಹೋರಾಡುವುದು ಬಾಳೂ ಅಲ್ಲ, ಬದುಕೂ ಅಲ್ಲ. ʻಜೀವಜೀವಕೆ ಉದ್ದೀಪನವಾದುದೆ ಜೀವನವುʼ ಎನ್ನುವ ಬೇಂದ್ರೆಯವರ ಪ್ರಕಾರ ಆ ಪ್ರೀತಿಯ ನದಿ ಇರುವುದೆಲ್ಲಿ?

ಇದನ್ನೂ ಓದಿ: ದಶಮುಖ ಅಂಕಣ: ಅದಲು ಬದಲು ಕಂಚಿ ಕದಲು

“ಅದು ಇದೆ ಎದೆಯಲ್ಲಿ, ಬೆಳಕಿನ ಬದಿಯಲ್ಲಿ/ ರಸಗಂಗಾ ನದಿಯಲ್ಲಿ ಅದರುಗಮ

ಹೆಸರದಕೆ ಪ್ರೀತಿಯು ಹಿಗ್ಗಿನ ರೀತಿಯು/ ಆತ್ಮದ ನೀತಿಯು ಮಧುಸಂಗಮ”

ಕೊನೆಯಲ್ಲಿ, ಪ್ರಪಂಚವನ್ನು ಸದಾ ಕಾಪಾಡುವ ಕಲ್ಯಾಣ ಶಕ್ತಿಯ ಹಾರೈಕೆಯಿಂದ ಪ್ರೇಮ ಹದವಾಗಿ ಪಾಕವಾಗಲಿ ಎನ್ನುತ್ತಾ ʻಸಖೀಗೀತʼ ಮುಕ್ತಾಯವಾಗುತ್ತದೆ. ʻಕೂಡಿರಲಿ ಬಾಳು ಇಡಿಗಾಳಿನಂತೆʼ ಎಂಬ ಜೀವನದರ್ಶನವನ್ನು ಅವರ ಕಾವ್ಯದಲ್ಲಿ ಸ್ಪಷ್ಟವಾಗಿ ಕಾಣಬಹುದು. ದಾಂಪತ್ಯ ಫಲಿಸಲು, ಜೀವನ ಮುಂದುವರಿಯಲು ಕಾಳು ಇಡಿಯಾಗಿರಬೇಕೆ ಹೊರತು, ಬೇಳೆಯಾಗಕೂಡದು ಎನ್ನುವಲ್ಲಿ ನಮಗೆ ಕಾಣುವುದು ದೇಹವನ್ನು ಮೀರಿದ ಆತ್ಮಸಾಂಗತ್ಯದ ಭಾವ. ದಾಂಪತ್ಯದಲ್ಲಿ ಸಖ-ಸಖಿಯರ ನಡುವಿನ ಸಖ್ಯದ ಮಾತುಗಳನ್ನು ಅವರ ಇನ್ನೂ ಕೆಲವು ಕವನಗಳಲ್ಲಿ ಕಾಣಬಹುದು. ಇನ್ನೊಂದು ಕವನದಲ್ಲಿ, ತಮ್ಮ ಮಡದಿಯೊಂದಿಗೆ ʻಬಂದಿತೇನೆ ನೆನಪಿಗೆ?ʼ ಎನ್ನುವ ಧಾಟಿಯಲ್ಲಿ ತಮ್ಮ ಮದುವೆಯ ಪ್ರಾರಂಭದ ದಿನಗಳ ಬಗ್ಗೆ ಹೀಗೆ ಕೇಳುತ್ತಾರೆ-

“ಬಂದಿತೇನೆ ನೆಪ್ಪಿಗೆ/ ನಮ್ಮ ನಿಮ್ಮ ಒಪ್ಪಿಗೆ/ ಎಲ್ಲೊ ಏನೊ ನೋಡಿದೆ/ ಹಾಗೆ ಬಂದು ಕೂಡಿದೆ”

ವಿವಾಹದ ಸಂದರ್ಭದಲ್ಲಿ ಬೇಂದ್ರೆಯವರ ಪ್ರಾಯ ೨೩, ಅವರ ಪತ್ನಿಯದ್ದು ೧೩! ಹಾಗಾಗಿ ನಮ್ಮ ಒಪ್ಪಿಗೆಯ ಹಂಗೇ ಇಲ್ಲದಂತೆ, ಅಂದಿನ ಕಾಲದ ಹಿರಿಯರು ಮಾಡಿದ್ದ ಮದುವೆಯದು ಎಂಬರ್ಥದಲ್ಲಿ ಆರಂಭವಾಗುತ್ತದೆ ಈ ಕವನ. ಆದರೆ ಅಂತ್ಯದಲ್ಲಿ ಅವರಾಡುವುದು-

“ಸಲ್ಲುವಲ್ಲಿ ಸಂದಿದೆ/ ನಿಲ್ಲುವಲ್ಲಿ ನಿಂದಿದೆ/ ಬರುವದೇನೆ ನೆಪ್ಪಿಗೆ/ ಜೀವಜೀವದಪ್ಪಿಗೆ”

ಇದಲ್ಲವೇ ಪ್ರೀತಿಯ ಸಫಲತೆ; ಇದಲ್ಲವೇ ದಾಂಪತ್ಯದ ಕಾಣ್ಕೆ!

ಇದನ್ನೂ ಓದಿ: ದಶಮುಖ ಅಂಕಣ | ಬಣ್ಣಿಸುವುದು ಹೇಗೆ ಬದುಕನ್ನು? ಬಣ್ಣಗಳ ಮೂಲಕ!

Exit mobile version