| ಎನ್. ರವಿಶಂಕರ್
ಹರಿಪ್ರಕಾಶ್ ಕೋಣೆಮನೆ, ಚಿಕ್ಕ ವಯಸ್ಸಿಗೇ ದೊಡ್ಡ ಸಾಧನೆಗೈದವರು. ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದವರು. ತಮ್ಮ ೩೮ನೇ ವಯಸ್ಸಿಗೆ ಕನ್ನಡದ ನಂಬರ್ ಒನ್ ಪತ್ರಿಕೆ ಕಟ್ಟಿ, ಅದರ ಸಂಪಾದಕರಾದರು. ಹಾಗಾದದ್ದು fluke ಅಲ್ಲ ಎಂದು ನಿರೂಪಿಸಲೆಂಬಂತೆ ಮತ್ತೊಂದು ಪತ್ರಿಕೆಯ ನೇತೃತ್ವ ವಹಿಸಿ, ಅಲ್ಪಾವಧಿಯಲ್ಲಿ ಅದನ್ನೂ ಅಗ್ರಸ್ಥಾನಕ್ಕೆ ಕೊಂಡೊಯ್ದರು. ಈ ಮಧ್ಯೆ (ನಂ.೧ ದಿನಪತ್ರಿಕೆಯ ಸಂಪಾದಕರಾಗಿರುವಾಗಲೇ) ಸುದ್ದಿವಾಹಿನಿಯೊಂದರ ಹೊಣೆ ಹೊತ್ತು, ಸ್ಪರ್ಧಾತ್ಮಕವಾದ ಸುದ್ದಿಮಾಧ್ಯಮಗಳ ಜಗತ್ತಿನಲ್ಲಿ ಅದಕ್ಕೊಂದು ಸ್ಥಾನ ಕಲ್ಪಿಸಿಕೊಟ್ಟರು. ಹರಿಪ್ರಕಾಶ್‌ರನ್ನು ಹತ್ತಿರದಿಂದ ಕಂಡಿರದವರಿಗೆ, ಇವರ ಸಾಧನೆಗಳನ್ನು ಹೊರಗಿನಿಂದ ನೋಡಿ ಇವರೊಬ್ಬ ಆಕ್ರಮಣಕಾರಿ ಪ್ರವೃತ್ತಿಯ ಪತ್ರಕರ್ತರಿರಬೇಕು ಎನ್ನಿಸಿದರೆ ಆಶ್ಚರ್ಯವಿಲ್ಲ!
ಆದರೆ, ಸತ್ಯವೇ ಬೇರೆ! ಹರಿಪ್ರಕಾಶ್ ಕೋಣೆಮನೆ, ತಮ್ಮ ನಡೆನುಡಿಯಲ್ಲೂ ತಾವು ಪಾಲಿಸುವ ಪತ್ರಿಕಾಧರ್ಮದಲ್ಲೂ ಘನತೆಗೆ ಪ್ರಾಶಸ್ತ್ಯವಿತ್ತವರು. ತಾವಿರುವೆಡೆಯೆಲ್ಲ Dignified Journalism / ಘನತೆಯುಳ್ಳ ಪತ್ರಿಕೋದ್ಯಮದ ಪ್ರವರ್ತಕರಾದವರು. ಪ್ರಯತ್ನಪೂರ್ವಕವಾಗಿ ತಾವೂ ಪಾಲಿಸಿ ಇತರರಿಗೂ ಅದನ್ನೇ ಬೋಧಿಸಿದವರು.
ಏನಿದು ಡಿಗ್ನಿಫೈಡ್ ಜರ್ನಲಿಸಮ್? ಮೇಲ್ನೋಟಕ್ಕೆ ಹಿಂಜರಿಕೆಯಂತೆಯೋ, ಆಷಾಢಭೂತಿತನದಂತೆಯೋ, ಬಲವಂತದ ತಾಟಸ್ಥ್ಯದಂತೆಯೋ ಕೇಳಿಸುತ್ತದೆಯಲ್ಲ! ಡಿಗ್ನಿಫೈಡ್ ಆಗುವುದೆಂದರೆ ಸತ್ಯವನ್ನು ಮೆದುವಾಗಿಸಿಯೋ, ಅರ್ಧಸತ್ಯವಾಗಿಸಿಯೋ, ಅರ್ಥವಾಗದಂತೆಯೋ ಹೇಳುವುದೇನು? ʼಎಲ್ಲರಿಗೂ ಒಳ್ಳೆಯವರಾಗುವುದುʼ ಎಂದೇನು? ಖಂಡಿತ ಅಲ್ಲ! ಹರಿಪ್ರಕಾಶ್‌ರ ಡಿಗ್ನಿಫೈಡ್ ಜರ್ನಲಿಸಮ್‌ನ ವ್ಯಾಖ್ಯೆಯೆಂದರೆ ಶಬ್ದಾಡಂಬರಕ್ಕಿಂತ ಹೆಚ್ಚಾಗಿ ವಿಷಯಕ್ಕೆ ಮಹತ್ವ ಕೊಡುವುದು. ಯಾವತ್ತಿಗೂ ವಸ್ತುನಿಷ್ಠರಾಗಿರುವುದು. ಏನನ್ನೂ, ಯಾರನ್ನೂ ಸಾರಾಸಗಾಟಾಗಿ ತಿರಸ್ಕರಿಸದೆ, ಧಿಕ್ಕರಿಸದೆ ವಿಷಯದ ಎಲ್ಲ ಮಗ್ಗಲುಗಳನ್ನೂ ನೋಡುವುದು. ಕೂಗದೆ, ಕಿರುಚದೆ, ರೇಗದೆ, ಎಗರಾಡದೆ ಮುಂದಿರುವ ವಿಚಾರಗಳನ್ನು ಸಮಾಧಾನದಿಂದ dissect ಮಾಡುವುದು. ಧ್ವನಿ ಎತ್ತರಿಸುವ ಬದಲು, ಚರ್ಚೆಯ ಗುಣಮಟ್ಟವನ್ನು ಎತ್ತರಿಸುವುದು. ವಿಚಾರದ ಮಂಡನೆಯನ್ನು ತಾರ್ಕಿಕವಾಗಿಸುವುದು. ಮೊನಚಾಗಿಸುವುದು.
ತಮ್ಮ ಪತ್ರಿಕೋದ್ಯಮದಲ್ಲಿ ಪಾಲಿಸಿಕೊಂಡು ಬಂದ ಇವೇ ಗುಣಗಳನ್ನು ಹರಿಪ್ರಕಾಶ್ ತಮ್ಮ ಅಂಕಣಬರಹಗಳಿಗೂ ಯಶಸ್ವಿಯಾಗಿ ತಂದಿದ್ದಾರೆ. ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಅವರ ʻವಿಸ್ತಾರʼ ಅಂಕಣದಲ್ಲಿ ನಾವಿದರ ಸಾಕಾರರೂಪವನ್ನು ಕಾಣಬಹುದು. .
ಹರಿಪ್ರಕಾಶ್‌ರ ಅಂಕಣಗಳು, ಕಾಲಕ್ಕೆ ಹಿಡಿದ ಕನ್ನಡಿ. ರಾಜಕೀಯದ ಕನ್ನಡಕದಿಂದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ನೈತಿಕ ವಿಷಯಗಳನ್ನು ವಿಶ್ಲೇಷಿಸಿದ್ದಾರೆ. ರಾಜಕೀಯ ಮತ್ತು ಆಡಳಿತಶಾಹಿ ತಂದೊಡ್ಡುವ ಸಮಸ್ಯೆಗಿಂತಲೂ, ಕಂಡುಕೊಳ್ಳಬಹುದಾದ ಪರಿಹಾರ ಮಾರ್ಗಗಳಿಗೆ ಮಹತ್ವ ನೀಡಿದ್ದಾರೆ. ನಾಯಕರೆನಿಸಿಕೊಂಡವರನ್ನು ನಿರ್ಭೀತಿಯಿಂದ ಪ್ರಶ್ನಿಸುತ್ತಲೇ ಜನಪರವಾದ ಉತ್ತರಗಳನ್ನೂ ಹುಡುಕುವ ಪ್ರಯತ್ನವನ್ನು ಮಾಡಿದ್ದಾರೆ. ಹೆಚ್ಚಿನ ರಾಜಕೀಯ ಟಿಪ್ಪಣಿ / ವಿಶ್ಲೇಷಣೆಗಳಲ್ಲಿ ಕಾಣುವಂತೆ, ಯಾರನ್ನೂ ಸೋಲಿಸಿ ಬಗ್ಗುಬಡಿಯುವುದು ಹರಿಪ್ರಕಾಶ್‌ರ ಬರಹಗಳ ಉದ್ದೇಶವಾಗಿ ಕಾಣುವುದಿಲ್ಲ. ಬದಲಿಗೆ ಸರಿ-ತಪ್ಪುಗಳನ್ನು ತೂಗಿ, ʼಪಾಠʼ ಹೇಳುವ ಪ್ರೌಢಿಮೆ ಕಾಣಿಸುತ್ತದೆ.
ಗಾಂಧಿ, ನೆಹರು, ವಾಜಪೇಯಿ, ಅಡ್ಚಾಣಿಗಳ ಹೆಸರು ಬಳಕೆ ದುರ್ಬಳಕೆ ಮಾಡುವವರ ವಿರುದ್ಧವೇ ಆ ಮಹನೀಯರುಗಳ ತತ್ವಗಳನ್ನೂ ದೃಷ್ಟಾಂತಗಳನ್ನೂ ಪ್ರಯೋಗಿಸಿ ಕಿವಿ ಹಿಂಡುವುದು. ಗೊಗೊಯಿ ನಿವೃತ್ತರಾಗುತ್ತಿದ್ದಂತೆಯೇ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಬಗ್ಗೆ ಬರೆಯುವಾಗ, ಕಾನೂನಾತ್ಮಕವಾಗಿ ಅದು ತಪ್ಪಲ್ಲದಿದ್ದರೂ ಅದರೊಳಗಿನ ನೈತಿಕ ತಲ್ಲಣಗಳನ್ನು ಹಿಂಜರಿಕೆಯಿಲ್ಲದೆ ಪ್ರಸ್ತಾಪಿಸುವುದು. ಇಂದಿನ ಕಾಲಮಾನದಲ್ಲಿ ಧರ್ಮಪೀಠಗಳು ಹೊರಬೇಕಾದ ಜವಾಬ್ದಾರಿಯ ಬಗ್ಗೆ ಎಚ್ಚರಿಸುವುದು. ನಾಯಕರ ಪೆದ್ದು / ದುಷ್ಟ / ಪೋಲಿ ನಡೆಗಳನ್ನು ವಿಮರ್ಶಿಸುವಾಗ ಕಾನೂನು ರೂಪಿಸುವ ಶಾಸಕ-ಸಂಸದರಿಗೆ ಶೈಕ್ಷಣಿಕ ಅರ್ಹತೆ ನಿಗದಿಪಡಿಸಲು ಇದು ಸಕಾಲ ಎಂದು ದಿಟ್ಟವಾಗಿ ಪ್ರತಿಪಾದಿಸುವುದು ಇವೆಲ್ಲವೂ ಅವರ ಸ್ಪಷ್ಟತೆಗೂ ನಿಸ್ಪೃಹತೆಗೂ ವಿಚಾರಮಂಡನೆಗೂ ಸಾಕ್ಷಿಯಾಗಿವೆ.
ಇದನ್ನೂ ಓದಿ | ವಿಸ್ತಾರ ಭಾಗ- 1 | ಹೊಸ ತಿಳಿವಿನ ಬಾಗಿಲು | ನೈತಿಕ ಶುದ್ಧತೆಯ ಬರಹಗಳು; ಹರಿಪ್ರಕಾಶ್ ಕೋಣೆಮನೆ ಅಂಕಣಗಳ ಸಂಗ್ರಹ
ಸರಳ ಭಾಷೆ. ಅದಕ್ಕಿಂತಲೂ ಸುಲಭವಾದ ನಿರೂಪಣಾಶೈಲಿ. ಎಲ್ಲಿಯೂ ಉತ್ಪ್ರೇಕ್ಷೆಯಾಗಲೀ ಭಾವಾತಿರೇಕವಾಗಲೀ ಕಂಡುಬರುವುದಿಲ್ಲ. ಇಂಪ್ರೆಸ್ ಮಾಡಲು ಬರೆದದ್ದಲ್ಲ, ಬದಲಿಗೆ ರಾಜಕೀಯ reformನಿಂದ ದೇಶ ಕಟ್ಟುವುದು ಸಾಧ್ಯ ಎನ್ನುವ ಅಚಲವಾದ ನಂಬಿಕೆಯಿಂದ ಹೆಣೆದದ್ದು ಎನ್ನುವುದು ಓದುತ್ತಾ ಹೋದಂತೆ ದಿಟವಾಗುತ್ತದೆ. ತಾವು ಹತ್ತಿರದಿಂದ ಬಲ್ಲ ರಾಜಕೀಯ ನಾಯಕರ ಬಗ್ಗೆಯೂ ಕಟುವಾಗಿ, ನಿಷ್ಠುರವಾಗಿ ಬರೆದಿರುವುದನ್ನು ನೋಡಿದಾಗ, ವೈಯಕ್ತಿಕ ಸ್ನೇಹಕ್ಕೂ ಸಾರ್ವಜನಿಕ ವ್ಯಕ್ತಿಗಳ ಮೌಲ್ಯಮಾಪನಕ್ಕೂ ಸಂಬಂಧವಿಲ್ಲ ಎನ್ನುವುದು ದೃಢವಾಗುತ್ತದೆ. ಎಲ್ಲೆಡೆಯೂ ಪತ್ರಿಕಾಧರ್ಮವೇ ಗೆದ್ದಿರುವುದು ಗೋಚರವಾಗುತ್ತದೆ, ಭಯವಿಲ್ಲದೆ ಬರೆಯಲೂಬಹುದು. ಅಜಾತಶತ್ರುವಾಗಿಯೂ ಉಳಿಯಬಹುದು ಎನ್ನುವುದನ್ನು ಹರಿಪ್ರಕಾಶ್ ತೋರಿಸಿಕೊಟ್ಟಿದ್ದಾರೆ. ತಣ್ಣನೆಯ ತರ್ಕ. ಅತೀವವಾದ ಸಾಮಾಜಿಕ ಕಾಳಜಿ. ಇವೆರಡೂ ಹರಿಪ್ರಕಾಶ್‌ರ ಬರಹಗಳನ್ನು ಎತ್ತರಕ್ಕೊಯ್ದಿವೆ.
ʻವಿಸ್ತಾರʼ ಪುಸ್ತಕದ ಮತ್ತೊಂದು ವಿಶೇಷವೆಂದರೆ ಇಲ್ಲಿನ ವಿಷಯವೈಶಾಲ್ಯ. ಹರಿಪ್ರಕಾಶ್ ತಮ್ಮ ಆಳವಾದ ಓದು-ಅಧ್ಯಯನಗಳನ್ನೂ, ಎರಡು ದಶಕಗಳಿಗೂ ಹೆಚ್ಚಿನ ಪತ್ರಿಕೋದ್ಯಮದ ಅನುಭವವನ್ನೂ ತಮ್ಮ ಬರವಣಿಗೆಯಲ್ಲಿ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಚುನಾವಣೆಗಳು, ಪ್ರಜಾಪ್ರಭುತ್ವ, ಸಂವಿಧಾನ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಅಮೆರಿಕ-ಚೀನಾ-ಪಾಕಿಸ್ತಾನಗಳು, ಅಂತರಾಷ್ಟ್ರೀಯ ಸಂಬಂಧಗಳು, ರಾಜ್ಯ-ರಾಜಕೀಯ, ಸ್ಥಳೀಯ ಆಡಳಿತ, ನಗರಾಭಿವೃದ್ಧಿ, ಹೆದ್ದಾರಿಗಳು, ಆರೋಗ್ಯಸೇವೆ, ಸಾಮಾಜಿಕ ಮಾಧ್ಯಮಗಳು, ಭಾಷೆ, ಸಂಸ್ಕೃತಿ, ಮತಾಂಧತೆ – ಪೂರ್ಣಪಟ್ಟಿ ಬಹಳ ದೊಡ್ಡದಿದೆ. ವಿಷಯಗಳ ಹರಿವೂ ಕೂಡ!
ಇದನ್ನೂ ಓದಿ | ವಿಸ್ತಾರ ಭಾಗ- 2 | ಹರಿವ ನದಿಗೆ ಸಾವಿರ ಕಾಲು | ಕಾಣದ್ದನ್ನೂ ಹೊಳೆಯಿಸುವ ಬರಹಗಳು | ಹರಿಪ್ರಕಾಶ್ ಕೋಣೆಮನೆ ಅಂಕಣಗಳ ಸಂಗ್ರಹ
ತಮ್ಮ ಬರಹಗಳನ್ನು ಕಾಲಾತೀತವಾಗಿಸುವ ಗೊಡವೆಗೆ ಬೀಳದೆ, ಸಮಾಜಕ್ಕೆ ಇಂತಹ ವೀಕ್ಷಕ-ವಿವರಣೆ, ವಿಶ್ಲೇಷಣೆ, ದೃಷ್ಟಿಕೋನ ಮತ್ತು ದೃಢ ಅಭಿಪ್ರಾಯ ಅಗತ್ಯ ಎನ್ನುವ ನಿಃಸ್ವಾರ್ಥದಿಂದ ಬರೆದ ಅಂಕಣಗಳಿವು. ಕನ್ನಡದ ಪತ್ರಿಕೋದ್ಯಮ ಲೋಕದಲ್ಲಿ ಹಲವು ವಿಕ್ರಮಗಳನ್ನು ಸ್ಥಾಪಿಸಿದ ಹರಿಪ್ರಕಾಶ್ ತಮ್ಮ (ನಂಬರ್ ಓನ್ ಪತ್ರಿಕೆಯ) ಸಂಪಾದಕರ ಕುರ್ಚಿಯಿಂದ ಕಂಡ ಸತ್ಯಗಳಿಗೆ ಹಿಡಿದ ದರ್ಪಣವೂ ಹೌದು. ಮುಂಬರುವವರ referenceಗಾಗಿ ಸಂಗ್ರಹಿಸಿಕೊಟ್ಟ ಅಭಿಪ್ರಾಯಗಳ ದಾಖಲೆಯೂ ಹೌದು.
ಕೃತಿ: ವಿಸ್ತಾರ, ಭಾಗ 1, ಹೊಸ ತಿಳಿವಿನ ಬಾಗಿಲು
ಲೇಖಕರು: ಹರಿಪ್ರಕಾಶ್ ಕೋಣೆಮನೆ
ಪ್ರಕಾಶನ: ವಿಸ್ತಾರ ಪ್ರಕಾಶನ, ಬೆಂಗಳೂರು
ಪುಟ: 218, ಬೆಲೆ: 225 ರೂ.
ವಿತರಣೆ ಹಾಗೂ ಮಾರಾಟ: ಸ್ನೇಹ ಬುಕ್‌ಹೌಸ್ (ಸಂಪರ್ಕ ಸಂಖ್ಯೆ: 9845031335)
(ಲೇಖಕರು ಅಂಕಣಕಾರರು, ಏಮ್ ಹೈ ಕನ್ಸಲ್ಟಿಂಗ್ ಸಂಸ್ಥೆಯ ಸಿಇಓ, ಸಂವಹನ ಸಲಹೆಗಾರರು)