ಅಕ್ಟೋಬರ್ ಕೊನೆಯ ವಾರ ಅಮೇರಿಕಾದಲ್ಲಿ ಹಾಲೋವಿನ್ ಹಬ್ಬವನ್ನು ಆಚರಿಸುತ್ತಾರೆ. ಈಗ ಇದು ನಮ್ಮ ಕಾರ್ಪೋರೇಟ್ ಆಫೀಸುಗಳಿಗೂ ಕಾಲಿಟ್ಟಿದೆ. ಆತ್ಮ, ದೆವ್ವ, ಭೂತ ಎಲ್ಲಾ ಮೂಢನಂಬಿಕೆ ಎಂದು 750 ಪದಗಳನ್ನು ಫೇಸ್ಬುಕ್ಕಿನಲ್ಲಿ ಬರೆಯುವವರೂ ಆಫೀಸಿನ ಎಚ್‌ಆರ್ ಮಾತನ್ನು ಮೀರಕ್ಕಾಗದೇ ಅವತ್ತು ಯಾವುದಾದರೂ ವೇಷ ಹಾಕಿಕೊಂಡು “ಟ್ರಿಕ್ ಆರ್ ಟ್ರೀಟ್” ಎಂದು ಹೇಳಿಕೊಂಡು ಆಫೀಸಿನಲ್ಲಿ ಓಡಾಡುತ್ತಾರೆ. ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ಉಕ್ತಿಯಂತೆ ಇದೂ ಆಫೀಸಿನ ಒಂದು ಅವಿಭಾಜ್ಯ ಅಂಗ.
ಅದೂ ಈ ರೋಬಾಟುಗಳನ್ನು ತಯಾರು ಮಾಡುವ ಅತೀ ಲಾಜಿಕಲ್ ಕಂಪನಿಗಳೂ ಸಹ ಇಂತಹದನ್ನು ಆಚರಣೆ ಮಾಡೋದಕ್ಕೆ ಶುರು ಮಾಡಿವೆ. ರೋಬಾಟಿನಲ್ಲೂ ದೇವರು, ದೆವ್ವ, ಶಕ್ತಿ, ಆತ್ಮ ಅಂತೆಲ್ಲಾ ಮಾಡಿಬಿಡೋಣ ಎಂಬ ಹುನ್ನಾರ ಇರಬೇಕು ಅಥವಾ ಮತ್ತೊಂದು ಆರ್ಗನೈಸ್ಡ್ ರಿಲೀಜಿಯನ್ ಹುಟ್ಟು ಹಾಕುವ ಹುಚ್ಚೂ ಇರಬಹುದು. ಒಂದು ರೋಬಾಟ್ ದೇವರಾಗಿ, ಅದರ ಸುತ್ತ ಒಂದಷ್ಟು ದಂತ ಕಥೆಗಳು ಹುಟ್ಟುಕೊಂಡರೆ ಎಷ್ಟು ಮಜವಾಗಿರುತ್ತದೆ ಅಲ್ಲವೇ? ಸೃಷ್ಟಿ ಮತ್ತು ಸಾವಿನ ಮರ್ಮವನ್ನು ತಿಳಿಯೋದಕ್ಕೆ ಸಾಧ್ಯ ಇಲ್ಲ ಎಂದೇ ಮನುಷ್ಯ ಇನ್ನೂ ದೇವರಾಗದೇ ದೇವರನ್ನು ತೋರಿಸುವ ಹಾದಿಯನ್ನು ಹಾಕಿಕೊಡುತ್ತೇನೆ ಎಂದು ಸಾವಿರಾರು ವರ್ಷಗಳ ಕಾಲ ಟೋಪಿ ಹಾಕುತ್ತಾ ಬಂದಿದ್ದಾನೆ. ದೇವರ ವಿಚಾರಕ್ಕೆ ಹೋದರೆ ಅಪಚಾರವಾದೀತು ಅಂತೇನೋ ಈ ಎಂಐಟಿ ಮೀಡಿಯಾ ಲ್ಯಾಬಿನವರು ನೇರ ದೆವ್ವದ ವಿಚಾರಕ್ಕೆ ಹೋಗಿದ್ದಾರೆ. ಇನ್ನೂ ಸರಿಯಾಗಿ ಹೇಳಬೇಕಾದರೆ ಮನುಷ್ಯನನ್ನು ಭಯಪಡಿಸುವ ಮುಖ, ವಿಷಯ ಅಥವಾ ವಸ್ತುವನ್ನು ಕಂಡುಹಿಡಿಯಲು ಸಜ್ಜಾಗಿದ್ದಾರೆ.
ಮನುಷ್ಯನ ಭಯಗಳು ಮತ್ತು ಇನ್‌ಸೆಕ್ಯೂರಿಟಿಗಳು ಮತ್ತೊಬ್ಬ ಮನುಷ್ಯನಿಗೆ ಗೊತ್ತಾಗಿಬಿಟ್ಟರೆ ಅವನನ್ನು ಬೇಕಾದ ಹಾಗೆ ಕುಣಿಸುವ ಕೆಟ್ಟ ಆಲೋಚನೆಯೊಂದು ಬಂದುಬಿಡುತ್ತದೆ. ಈಗೀಗ ಥೆರಪಿಸ್ಟುಗಳು ಯಾರ ಜೊತೆಗೆ ತಮ್ಮ ಜೀವನದ ಸೀಕ್ರೆಟ್ಟುಗಳನ್ನು ಹೇಳಿಕೊಳ್ಳುತ್ತಿದ್ದೀರಾ ಎಂಬುದನ್ನು ಸ್ವಲ್ಪ ಯೋಚನೆ ಮಾಡಿ ಎಂದು ಆಗಾಗ ವಾರ್ನ್ ಮಾಡುತ್ತಿದ್ದಾರೆ. ಯಾರಿಗಾದರೂ ನಮ್ಮ ನೋವನ್ನೋ, ಬೇಜಾರನ್ನೋ ಹೇಳಿಕೊಂಡು ಬಿಟ್ಟರೆ ಅಥವಾ ನಮ್ಮ ಜೀವನದ ಕರಾಳ ಸತ್ಯವನ್ನು ಹೇಳಿದರೆ ಎಲ್ಲಿ ಅದನ್ನೇ ಇಟ್ಟುಕೊಂಡು ನಮ್ಮನ್ನ ಆಟ ಆಡಿಸುತ್ತಾರೋ ಇಲ್ಲಾ ಬ್ಲಾಕ್‌ಮೈಲ್ ಮಾಡುತ್ತಾರೋ ಅಥವಾ ಇನ್ನು ಹೇಗೆ ನಮ್ಮ ಜೀವನವನ್ನು ನಿಯಂತ್ರಣ ಮಾಡುತ್ತಾರೋ ಎಂಬ ಭಯದೊಂದಿಗೆ ಬದುಕುತ್ತಿದ್ದೇವೆ.
ಇಂತಹ ಸಂದರ್ಭದಲ್ಲಿ ಈ ಎಂಐಟಿಯವರು ನೈಟ್‌ಮೇರ್ ಮೆಷೀನ್ ಅನ್ನು ಕಂಡುಹಿಡಿದಿದ್ದಾರೆ. ಮೆಷೀನ್ ಅನ್ನುವುದಕ್ಕಿಂತ ಒಂದು ವೆಬ್‌ಸೈಟ್ ಇದು. ಗೂಗಲ್ಲಿನಲ್ಲಿ ಬರೆದರೆ ಸಿಗುತ್ತದೆ. ಇದರ ಕೆಲಸ ಇಷ್ಟೇ, ನಿಮಗೆ ಒಂದಾದ ಮೇಲೆ ಒಂದು ಭಯಂಕರ ಚಿತ್ರಗಳನ್ನ ತೋರಿಸುತ್ತಾರೆ. ಓರೆಕೋರೆಯಾದ ಮುಖ, ಮೂಗಿನ ಜಾಗದಲ್ಲಿ ಕಣ್ಣು, ಕಣ್ಣಿನ ಜಾಗದಲ್ಲಿ ಕಿವಿ, ಮುಖದಲ್ಲೆಲ್ಲಾ ಕೀವು ತುಂಬಿಕೊಂಡ ಆಕೃತಿ ಇಂತಹ ಹಲವು ಉದಾಹರಣೆಗಳನ್ನು ತೋರಿಸುತ್ತದೆ. ಅದರ ಮೇಲೆ ನನಗಿದು ಭಯ ಆಗುತ್ತಿದೆ ಅಥವಾ ಭಯ ಆಗುತ್ತಿಲ್ಲ ಎಂದು ಹೇಳಬೇಕು. ಉತ್ತರ ಕೊಟ್ಟ ನಂತರ ಮುಂದಿನ ಚಿತ್ರಕ್ಕೆ ಹೋಗುತ್ತದೆ. ಇದೊಂದು ದೊಡ್ಡ ಟೈಂ ಪಾಸ್ ಆಟ ಎಂದು ಅನಿಸಿದರೂ ಇದರ ಮರ್ಮ ಬೇರೆಯೇ ಇದೆ. ಥೇಟ್ ʻಶ್ʼ ಕನ್ನಡ ಸಿನಿಮಾದ ದೆವ್ವದ ಹಾಗೆಯೇ ಕೆಲವು ಮುಖಗಳು ಇವೆ. ಮೊದಮೊದಲು ಅಷ್ಟೇನೂ ಭಯ ಪಡದೇ ಇರುವ ಚಿತ್ರಗಳು ಸಿಗುತ್ತವೆ. ಆಮೇಲಾಮೇಲೆ ಭಯಾನಕವಾದದ್ದು, ಕೆಲವೊಮ್ಮೆ ಅಸಹ್ಯಕರವಾದ ಮುಖಗಳು ಸಿಕ್ಕು ಎದ್ದು ಹೋಗಿಬಿಡುವ ಹಾಗೆ ಆಗುತ್ತದೆ.
ಹೀಗೆ ಭಯಪಡುವಂತಹ ಮುಖಗಳನ್ನು ಸೃಷ್ಟಿ ಮಾಡೋದಕ್ಕೆ ಒಂದು ರೆಫರೆನ್ಸ್ ಬೇಕಲ್ಲವೇ. ಅದು ಎಲ್ಲಿಂದ ತರೋದು. ಯಾವುದಾದರೂ ಬದುಕಿರುವ ಮನುಷ್ಯನೇ ತಾನೇ ಭಯ ಪಡುವ ದೆವ್ವ ಆಗೋದು. ಇದಕ್ಕೆ ಇವರು ಆಯ್ದುಕೊಂಡಿದ್ದು ಸೆಲೆಬ್ರಿಟಿಗಳನ್ನು. ದೊಡ್ಡ ದೊಡ್ಡ ನಟರು, ಆಟಗಾರರು, ಬರಹಗಾರರು ಹಾಗೂ ಸೋಷಿಯಲ್ ಮೀಡಿಯಾದ ದೊಡ್ಡ ಹೀರೋಗಳ ಫೋಟೋಗಳನ್ನು ಆಯ್ದುಕೊಂಡು ಅವುಗಳ ಮಿಶ್ರಣ ಮಾಡಿ ಭಯಾನಕವಾದ ಚಿತ್ರಗಳನ್ನು ಸಿದ್ಧಪಡಿಸಿದ್ದಾರೆ. 2 ಲಕ್ಷದಷ್ಟು ಫೋಟೋಗಳನ್ನು ಇಲ್ಲಿ ಉಪಯೋಗ ಮಾಡಲಾಗಿದೆ. ಒಬ್ಬನ ಕಣ್ಣಿಗೆ ಇನ್ನೊಬ್ಬನ ಮೂಗಿಟ್ಟು, ಮಗದೊಬ್ಬನ ಬಾಯಿಟ್ಟು ಇನ್ನು ಏನೇನೋ ತಲೆಹರಟೆ ಮಾಡಿದರೆ ಭಯಂಕರವಾದ ಚಿತ್ರವೇ ಕಣ್ಣಿಗೆ ಕಾಣಸಿಗೋದು. ಕೆಲವೊಮ್ಮೆ ಬಹಳ ಪ್ರಸಿದ್ಧರು ಆಂತರಿಕವಾಗಿ ಅದೆಷ್ಟು ಭಯಂಕರವಾಗಿರುತ್ತಾರೆ ಎಂದು ಹತ್ತಿರ ಹೋದರೆ ಗೊತ್ತಾಗುತ್ತದೆ, ಇನ್ನು ನೋಡೋಕೂ ಅಷ್ಟೇ ಭಯಾನಕರಾಗಿರುತ್ತಾರೆ ಎಂಬುದನ್ನು ಇದು ಸಾಬೀತು ಪಡಿಸಲು ಹೊರಟಿದೆ.
ಇದರಿಂದ ಮನುಷ್ಯ ಯಾವ ಲೆವಲ್ಲಿಗೆ ಭಯ ಪಟ್ಟುಕೊಂಡು ಓಡಿಹೋಗುತ್ತಾನೆ ಎಂದು ಗೊತ್ತಾಗುತ್ತದೆ. ನಾಳೆ ಈ ದತ್ತಾಂಶವನ್ನು ನಮ್ಮ ವಿರುದ್ಧವೇ ಬಳಸಿಕೊಳ್ಳಬಹುದು. ಫೇಸ್ಬುಕ್ಕಿನಲ್ಲಿ ಬರುವ ಕಾಮಿಡಿ ಆಟಗಳೂ ಇಂತಹದಕ್ಕೆ ಹಾತೊರೆಯುತ್ತಿರುತ್ತವೆ. ಈ ನೈಟ್‌ಮೇರ್ ಮೆಷೀನಿನಲ್ಲಿ ಮೊದಲು ಹಾಂಟೆಡ್ ಮುಖಗಳ ಬಗ್ಗೆ ಕೇಳಿದ ನಂತರ ಹಾಂಟೆಡ್ ಜಾಗಗಳನ್ನು ಪತ್ತೆ ಮಾಡಿ ಎಂದು ಕೇಳುವ ಕೆಲಸ ಮಾಡುತ್ತದೆ. ಯಾವುದ್ಯಾವುದೋ ಜಾಗ ತೋರಿಸಿ ಇದು ಭಯ ಪಡುವಂಥದ್ದೇ, ಇದು ಭಯ ಆಗುವ ಹಾಗೆ ಯಾಕೆ ಕಾಣುತ್ತದೆ ಎಂದೆಲ್ಲಾ ಪ್ರಶ್ನೆ ಕೇಳುತ್ತದೆ. ಅದಕ್ಕೆಲ್ಲಾ ನಾವು ನಮ್ಮ ಬುದ್ಧಿಯನ್ನೆಲ್ಲಾ ಖರ್ಚು ಮಾಡಿ ಉತ್ತರ ಬರೆಯುತ್ತೇವೆ. ಬರೆದರೆ ನಮ್ಮ ಸಮಯ ವಿನಿಯೋಗ ಆಗುತ್ತದೆ, ಆದರೆ ಅಷ್ಟು ಸಮಯ ನಾವು ಆ ವೆಬ್‌ಸೈಟಿನಲ್ಲಿ ಖರ್ಚು ಮಾಡಿದ್ದಕ್ಕೆ ಏನೂ ಯೋಚನೆ ಮಾಡದೇ ಕುಕ್ಕೀಸಿಗೆ ನಾವು ಹೂ ಅಂದಿರುತ್ತೇವೆ, ಜೊತೆಗೆ ಅಕ್ಕಪಕ್ಕದಲ್ಲಿ ಅದೆಷ್ಟೆಷ್ಟು ಟ್ಯಾಬ್ ತೆರೆದು ನಮ್ಮ ಮಾಹಿತಿಯನ್ನು ತುಂಬಿರುತ್ತೇವೋ ನಮಗೇ ಗೊತ್ತಾಗುವುದಿಲ್ಲ. ಅಲ್ಲಿ ಸರಿಯಾಗಿ ನಮ್ಮ ದತ್ತಾಂಶವನ್ನು ಅದು ತೆಗೆದುಕೊಂಡು ಹಾಯಾಗಿ ತನಗೆ ಬೇಕಾದ ಹಾಗೆ ನಮ್ಮನ್ನು ಮುಂದೆ ಆಟ ಆಡಿಸುವ ಕೆಲಸಕ್ಕೆ ಮುಂದಾಗುತ್ತದೆ.
ಇದನ್ನೂ ಓದಿ | ವಾಕಿಂಗ್ ಚಿತ್ರಗಳು ಅಂಕಣ | ಕೋಪದಿಂದ ಮೂಗು ಕೊಯ್ದುಕೊಂಡರೆ ಅಪಾಯವಿಲ್ಲ!
ಈ ನೈಟ್‌ಮೇರ್ ಮೆಷೀನ್‌ನ ಸುಮ್ಮನೆ ಕಟ್ಟಿದ್ದು ಎಂದು ಎಂಐಟಿ ಹೇಳುತ್ತಿದೆ. ಇನ್ನೂ ಹೇಳಬೇಕೆಂದರೆ, “ಸ್ಪಿರಿಟ್ ಆಫ್ ಹಾಲೋವೀನ್” ಎಂದು ಹೇಳಿ ಜನರನ್ನ ಖುಷಿ ಪಡಿಸುತ್ತದೆ. ನಮ್ಮ ಮನೆ ಹತ್ತಿರದ ಮಾರ್ವಾಡಿ ಅಂಗಡಿಯಲ್ಲಿ ದೀಪಾವಳಿ ಹಬ್ಬಕ್ಕೆ ಸೀರೆಗೆ ಡಿಸ್ಕೌಂಟ್ ಹಾಕಿದ ಹಾಗೆ. ಸೀರೆ ತೆಗೆದುಕೊಳ್ಳೋಕೆ ಬಂದವರು 700 ರುಪಾಯಿಯ ಸೀರೆಯನ್ನು 300 ರುಪಾಯಿಗೆ ತೆಗೆದುಕೊಂಡೆ ಎಂದು ಹೇಳಿ, ಮಿಕ್ಕ 400 ರೂಪಾಯಿಯನ್ನು ಆ ಅಂಗಡಿಯಲ್ಲೇ ಹೇಗಾದರೂ ಮಾಡಿ ಖರ್ಚು ಮಾಡಿಸುವ ಹುನ್ನಾರದಷ್ಟೇ ಇದೂ ಅಪಾಯಕಾರಿ.
ಮೆಷೀನುಗಳಿಗೆ ಭಾವನೆಗಳನ್ನು ತುಂಬಬಹುದು ಎಂದು ಕೆಲವರ ವಾದ, ಸದ್ಯಕ್ಕೆ ಅದು ಸ್ವಲ್ಪ ಕಷ್ಟ. ಆದರೆ ಇವುಗಳು ನಮ್ಮನ್ನು ಹೆದರಿಸುವುದಕ್ಕೆ ಆಗುತ್ತದಾ ಎಂಬ ಸಂಶೋಧನೆಯನ್ನು ಈ ಮೀಡಿಯಾ ಲ್ಯಾಬ್ ಮಾಡುತ್ತಿದೆ. 1816ರಲ್ಲಿ ಹಾರರ್ ಅನ್ನು ಆಂಗ್ಲ ಸಾಹಿತ್ಯದ ಪ್ರಕಾರ ಎಂದು ಪರಿಗಣಿಸಿದಾಗ ಮುಂಚೂಣಿ ಲೇಖಕರಾದ ಮೇರಿ ಶೆಲ್ಲಿ, ಜಾನ್ ವಿಲಿಯಮ್ ಪಾಂಡೂರಿ ಮತ್ತು ಲಾರ್ಡ್ ಬೈರನ್ ಜಿನೆವಾದ ಕೆರೆಯ ಹತ್ತಿರದ ಒಂದು ದೊಡ್ಡ ಬಂಗಲೆಯಲ್ಲಿ ಕೂತು ತಮ್ಮ ಪ್ರಸಿದ್ಧ ಹಾರರ್ ಕೃತಿಗಳಾದ ಫ್ರಾಂಕನ್‌ಸ್ಟೇನ್, ದ ವಾಂಪೈರ್ ಮತ್ತು ಡಾರ್ಕ್‌ನೆಸ್‌ನ್ನು ಬರೆದಿದ್ದರು. ಲಾರ್ಡ್ ಬೈರಾನ್ ಮಗಳಾದ ಅದಾ ಲವ್‌ಲೇಸ್ ಮೊದಲ ಮೆಷೀನ್ ಲರ್ನಿಂಗ್ ಅಲ್ಗಾರಿಥಮ್ ಒಂದನ್ನು ಬರೆದಿದ್ದಳು.
ಐಬಿಎಮ್ ಕಂಪೆನಿಯ ವಾಟ್ಸನ್ ಸಹ ಇಂತಹ ಒಂದು ಪ್ರಯೋಗ ಮಾಡಿತ್ತು. ತನ್ನ ಮೆಷೀನಿಗೆ 100 ಹಾರರ್ ಸಿನಿಮಾದ ಟ್ರೈಲರುಗಳನ್ನು ಫೀಡ್ ಮಾಡಿ ತನ್ನ ಹೊಸ ಚಿತ್ರ ಮಾರ್ಗನ್‌ನ ಟ್ರೈಲರ್ ಕಟ್ ಮಾಡಿತ್ತು. ಇದರಲ್ಲಿ ಮನುಷ್ಯನ ಯಾವುದೇ ಕೈವಾಡ ಇರಲಿಲ್ಲ. ತಾನೇ ತಾನಾಗಿ ನಿಜವಾಗಿಯೂ ಭಯಪಡಿಸುವ ಒಂದು ಟ್ರೈಲರನ್ನೇ ಸೃಷ್ಟಿ ಮಾಡಿತ್ತು. ಇನ್ನು ಮೊನ್ನೆ ಒಂದು ಸಿನಿಮಾದ ಟ್ರೈಲರ್ ಸಹ ನೋಡಿದೆ. ಮೇಗನ್ ಎಂಬ ಡಿಜಿಟಲ್ ಗೆಳತಿಯನ್ನು ಅಪ್ಪ ಅಮ್ಮ ಮಗಳಿಗೆ ನೀಡುತ್ತಾರೆ. ಆಮೇಲೆ ಆ ಗೆಳತಿಯ ಮೇಲೆ ಯಾವುದೋ ಶಕ್ತಿ ಅವಾಹನೆ ಆಗಿ ಅವಳನ್ನು ಬಿಟ್ಟೂ ಬಿಡದಂತೆ ಕಾಡತೊಡಗುತ್ತದೆ. ಹೀಗೆ ಈ ಏಐ ಬುದ್ಧಿವಂತಿಕೆ ತೋರಿಸಿ ನಮ್ಮನ್ನು ಮಂಗ ಮಾಡುತ್ತಿದೆಯೋ, ಅಥವಾ ದೆವ್ವಗಳಿಗೇ ಬುದ್ಧಿವಂತಿಕೆ ಜಾಸ್ತಿ ಆಗಿ ರೋಬಾಟುಗಳ ಮೇಲೆ ಬಂದು ಬೀಳುತ್ತಿವೆಯೋ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಎರಡೂ ಮನುಷ್ಯ ಸೃಷ್ಟಿಯೇ ಅಂದುಕೊಂಡುಬಿಟ್ಟರೆ ಜೀವನ ಸುಲಭ.
ಇದನ್ನೂ ಓದಿ | ವಾಕಿಂಗ್ ಚಿತ್ರಗಳು ಅಂಕಣ | ಮನಸ್ಸನ್ನು ಓದಿ ಕತೆ ಬರೆಯಬಲ್ಲ ಮೆಶೀನು!