Site icon Vistara News

ಬಾಹ್ಯಾಕಾಶ | ಇಸ್ರೋದ ನೂತನ SSLV ನಿಜಕ್ಕೂ ವಿಫಲವಾಯಿತೇ?

sslv

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೂತನವಾಗಿ ನಿರ್ಮಾಣವಾದ ಸಣ್ಣ ಉಪಗ್ರಹ ಉಡಾವಣಾ ರಾಕೆಟ್‌ನ (ಎಸ್ಎಸ್ಎಲ್‌ವಿ) ಪ್ರಥಮ ಹಾರಾಟವನ್ನು ಆಗಸ್ಟ್ 7ರ ಬೆಳಗ್ಗೆ 9.18ಕ್ಕೆ ಶ್ರೀಹರಿಕೋಟಾದ ಉಡಾವಣಾ ಕೇಂದ್ರದಿಂದ ನಡೆಸುವ ಮೂಲಕ ನೂತನ ಇತಿಹಾಸವನ್ನೇ ನಿರ್ಮಿಸಿತು.

ಎಸ್ಎಸ್ಎಲ್ವಿ ಎಂದರೇನು?

ಸ್ಮಾಲ್ ಲಿಫ್ಟ್ ಲಾಂಚ್ ವೆಹಿಕಲ್ ಎನ್ನುವುದು ಒಂದು ರಾಕೆಟ್ ಆರ್ಬಿಟಲ್ ಲಾಂಚ್ ವೆಹಿಕಲ್. 2,000 ಕೆಜಿಯ (4,400 ಎಲ್‍ಬಿ) ತನಕದ ಭಾರವನ್ನು ಹೊತ್ತೊಯ್ಯುವ (ನಾಸಾದ ಪ್ರಕಾರ) ಅಥವಾ 5,000 ಕೆಜಿ (11,000 ಎಲ್‍ಬಿ) ತನಕ (ರಾಸ್‍ಕಾಸ್ಮೋಸ್ ಪ್ರಕಾರ) ಭಾರವನ್ನು ಹೊತ್ತು ಭೂಮಿಯ ಕೆಳ ಕಕ್ಷೆಗೆ (ಎಲ್‍ಇಓ) ಸೇರಿಸುವ ಸಾಮರ್ಥ್ಯ ಹೊಂದಿವೆ. ಇದರ ನಂತರದ ದೊಡ್ಡ ಉಡಾವಣಾ ರಾಕೆಟ್ ವರ್ಗದಲ್ಲಿ ಮೀಡಿಯಂ ಲಿಫ್ಟ್ ಲಾಂಚ್ ವೆಹಿಕಲ್ ಬರುತ್ತದೆ.

ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ್ ಮತ್ತವರ ತಂಡದ ಹೇಳಿಕೆಯ ಪ್ರಕಾರ, ಉಡಾವಣೆಯ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ವಿಯ ಎಲ್ಲ ಹಂತಗಳೂ ಸರಿಯಾಗಿಯೇ ಕಾರ್ಯ ನಿರ್ವಹಿಸಿದರೂ, ರಾಕೆಟ್ ಉಡಾವಣೆಗೊಂಡ ಕೆಲ ಸಮಯದ ಬಳಿಕ ರಾಕೆಟ್ ಮಾಹಿತಿ ಒದಗಿಸುವುದನ್ನು ನಿಲ್ಲಿಸಿತ್ತು. ಆ ಬಳಿಕ ರಾಕೆಟ್ ತನ್ನ ಉದ್ದೇಶಿತ ಕಕ್ಷೆಯನ್ನು ತಪ್ಪಿಸಿಕೊಂಡಿತ್ತು.

ಹಾಗಾದರೆ ನಿಜಕ್ಕೂ ತಪ್ಪಾಗಿದ್ದೆಲ್ಲಿ?

ಎಸ್ಎಸ್ಎಲ್‍ವಿ ಮೂರು ಹಂತಗಳ ರಾಕೆಟ್. ಘನ ಇಂಧನದಿಂದ ಶಕ್ತಿ ಪಡೆದುಕೊಳ್ಳುತ್ತಿತ್ತು. ಇದನ್ನು 500 ಕೆಜಿ ತೂಕದ ಉಪಗ್ರಹವನ್ನು ಭೂಕಕ್ಷೆಗೆ ತಲುಪಿಸುವ ಉದ್ದೇಶದಿಂದ ನಿರ್ಮಾಣಗೊಳಿಸಲಾಗಿತ್ತು. ಆದರೆ ಈ ರಾಕೆಟ್ ತನ್ನ ಉದ್ದೇಶಿತ ಕಕ್ಷೆಯನ್ನು ತಲುಪಲು ವಿಫಲಗೊಂಡ ಪರಿಣಾಮವಾಗಿ, ಎರಡು ಪರೀಕ್ಷಣಾ ಉಪಗ್ರಹಗಳು, ಇಒಎಸ್– 02 ಹಾಗೂ ಆಜಾ಼ದಿ ಸ್ಯಾಟ್ ಉಪಯೋಗಕ್ಕೆ ಲಭ್ಯವಿಲ್ಲ ಎಂದು ಘೋಷಿತವಾದವು.

ಎಸ್‌ಎಸ್ಎಲ್‌ವಿಯ ಉಡಾವಣೆಯ ಅಂತಿಮ ಹಂತದಲ್ಲಿ, ವೆಲೋಸಿಟಿ ಟ್ರಿಮ್ಮಿಂಗ್ ಮಾಡ್ಯುಲ್‍ನಲ್ಲಿ (ವಿಟಿಎಂ) ಸಮಸ್ಯೆ ಎದುರಾಗಿತ್ತು. ರಾಕೆಟ್ ಉಡಾವಣೆಗೊಂಡ 653 ಸೆಕೆಂಡುಗಳ ಬಳಿಕ, ವಿಟಿಎಂ 20 ಸೆಕೆಂಡುಗಳ ಕಾಲ ಉರಿಯಬೇಕಾಗಿತ್ತು. ಆದರೆ ಅದು ಕೇವಲ 0.1 ಸೆಕೆಂಡುಗಳ ಕಾಲ ಉರಿದಿತ್ತು. ಇದರ ಪರಿಣಾಮವಾಗಿ ರಾಕೆಟ್‌ಗೆ ಮೇಲಕ್ಕೇರಲು ಅಗತ್ಯವಿದ್ದ ಎತ್ತರದ ವರ್ಧನೆ ದೊರೆಯಲಿಲ್ಲ.

ಇದನ್ನೂ ಓದಿ: ಸಮರಾಂಕಣ | ಏನನ್ನೂ ಧ್ವಂಸಗೊಳಿಸದೆ ಶತ್ರುವಿಗೆ ಸಾವು ತಂದೊಡ್ಡುವ ಅಸ್ತ್ರ Hellfire R9X

ಅದರ ಪರಿಣಾಮವಾಗಿ ಎಸ್ಎಸ್ಎಲ್‍ವಿ ಉಪಗ್ರಹಗಳನ್ನು 356 ಕಿಲೋಮೀಟರ್‌ನ ವೃತ್ತಾಕಾರದ ಕಕ್ಷೆಗೆ ಸೇರಿಸುವ ಬದಲು, 365 ಕಿಲೋಮೀಟರ್ × 76 ಕಿಲೋಮೀಟರ್‌ನ ದೀರ್ಘವೃತ್ತದ ಕಕ್ಷೆಗೆ ಸೇರಿಸಿತು.  

ವರದಿಗಳ ಪ್ರಕಾರ, ಅದು ವಿಟಿಎಂನ ತರ್ಕವಾಗಿರದೆ, ಉಡಾವಣಾ ರಾಕೆಟ್‍ನ ತರ್ಕವಾಗಿದ್ದು, ಅದರಿಂದಲೇ ಈ ತೊಂದರೆ ಉಂಟಾಯಿತು ಎನ್ನಲಾಗುತ್ತದೆ. ಯಾವುದೇ ಉಡಾವಣಾ ರಾಕೆಟ್ಟನ್ನು ವಿನ್ಯಾಸಗೊಳಿಸುವಾಗ ಅದು ಎದುರಿಸಬಹುದಾದ ಹಲವು ವೈಫಲ್ಯಗಳ ಸಾಧ್ಯತೆ ಮತ್ತು ಅದನ್ನು ಪರಿಹರಿಸಿಕೊಳ್ಳುವ ಅವಕಾಶಗಳನ್ನೂ ಆಲೋಚಿಸಲಾಗಿರುತ್ತದೆ. ಅಂತಹ ವೈಫಲ್ಯಗಳಲ್ಲಿ ಆಕ್ಸೆಲೆರೋಮೀಟರಿನ ವೈಫಲ್ಯವೂ ಒಂದು. ರಾಕೆಟ್‍ನ ಆಕ್ಸೆಲರೇಷನ್ ಮುಂದಿನ ದಿಕ್ಕಲ್ಲಿ ಇದ್ದುದರಿಂದ, ಒಂದು ವೈಫಲ್ಯದ ಹೊರತಾಗಿಯೂ ಅದು ಉದ್ದೇಶಿತ ಕಕ್ಷೆಯಲ್ಲೇ ಉಪಗ್ರಹಗಳನ್ನು ಸೇರಿಸುವಂತೆ ವಿನ್ಯಾಸಗೊಳಿಸಲಾಗಿತ್ತು.

ಒಂದು ವೇಳೆ ಏನಾದರೂ ಅನಿರೀಕ್ಷಿತ ತಪ್ಪು ಎದುರಾದರೂ, ಎಲ್ಲಾ ರಾಕೆಟ್‍ಗಳಲ್ಲೂ ಒಂದು ‘ಸಾಲ್ವೇಜ್’ (ರಕ್ಷಣೆ) ಆಯ್ಕೆ ಇದ್ದೇ ಇರುತ್ತದೆ. ಈ ಬಾರಿ ಎಸ್ಎಸ್ಎಲ್‍ವಿಯ ವಿಚಾರದಲ್ಲಿ ಆಕ್ಸೆಲೆರೋಮೀಟರ್ ಎರಡನೇ ಹಂತದ ಬೇರ್ಪಡುವಿಕೆಯ ಕೊಂಚ ಮೊದಲು ಒಂದು ಸಮಸ್ಯೆಯನ್ನು ಪತ್ತೆ ಹಚ್ಚಿ, ಸಾಲ್ವೇಜ್ ಆಯ್ಕೆಯನ್ನು ಆರಂಭಿಸಿತು.

ಇಸ್ರೋ ಮುಖ್ಯಸ್ಥರ ಪ್ರಕಾರ, ಕಂಪ್ಯೂಟರ್ ಏನನ್ನು ಮಾಡಬೇಕಾಗಿತ್ತೋ ಅದನ್ನೇ ಮಾಡಿತ್ತು. ಆದರೂ ಆ ಸಂದರ್ಭದಲ್ಲಿ ಅದು ಸಣ್ಣ ಪ್ರಮಾಣದ ವೇಗವನ್ನು ಕಳೆದುಕೊಂಡಿತ್ತು. ಈ ಸಣ್ಣ ಪ್ರಮಾಣದ ವೇಗವೂ ಸಹ ಸಂಪೂರ್ಣ ಕಾರ್ಯಾಚರಣೆಗೆ ಅತ್ಯಂತ ಪ್ರಮುಖವಾಗಿತ್ತು. ಒಂದು ಬಾರಿ ಉಪಗ್ರಹ ತನ್ನ ಗುರಿಯನ್ನು ತಪ್ಪಿ, ದೀರ್ಘವೃತ್ತಾಕಾರದ ಕಕ್ಷೆಯನ್ನು ಪ್ರವೇಶಿಸಿದರೆ ಅದು ವಾತಾವರಣದ ಎಳೆತಕ್ಕೆ ಒಳಗಾಗುತ್ತದೆ. ಈ ಎಳೆತ ಅತ್ಯಂತ ವೇಗವಾಗಿ ಉಪಗ್ರಹವನ್ನು ಸೆಳೆದುಕೊಳ್ಳಬಲ್ಲದು. ಈ ರೀತಿ ಆದರೆ, ಉಪಗ್ರಹ ತನ್ನ ಕಕ್ಷೆಯನ್ನು ಕೇವಲ 20 ನಿಮಿಷಗಳ ಒಳಗೆ ಕಳೆದುಕೊಳ್ಳಬಲ್ಲದು. ವರದಿಗಳ ಪ್ರಕಾರ ಎಸ್‍ಎಸ್ಎಲ್‍ವಿಯ ವಿಚಾರದಲ್ಲೂ ಇದೇ ರೀತಿ ಆಗಿತ್ತು.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಉಡಾವಣೆಯ ಎಲ್ಲ ಹಂತಗಳೂ ಸರಿಯಾಗಿಯೇ ಕಾರ್ಯ ನಿರ್ವಹಿಸಿದರೂ, ಈ “2 ಸೆಕೆಂಡುಗಳ ಅಸಂಗತತೆ” ಈ ಉಡಾವಣೆಯಲ್ಲಿ ವೈಫಲ್ಯವನ್ನು ಉಂಟುಮಾಡಿತು.

ಇದನ್ನೂ ಓದಿ: ಸಮರಾಂಕಣ | ಗೇಮ್ ಆಫ್ ಡ್ರೋನ್ಸ್: ಚೀನಾದ ಯುಎವಿ ಸಾಮರ್ಥ್ಯದ ಎದುರು ಭಾರತದ ಪವರ್‌ ಏನು?

ಒಂದು ವೇಳೆ ಆ 2 ಸೆಕೆಂಡುಗಳ ಅಸಂಗತತೆಯ ಬದಲು, ಅದೇನಾದರೂ ಮೂರು ಸೆಕೆಂಡುಗಳ ಕಾಲ ನಡೆದಿದ್ದರೆ ಈ ಕಾರ್ಯಾಚರಣೆಯಲ್ಲಿ ಏನಾದರೂ ಬದಲಾವಣೆ ಕಂಡುಬರುತ್ತಿತ್ತೇ? ಮೇಲ್ನೋಟಕ್ಕೆ ಕಂಡು ಬರುತ್ತಿತ್ತು ಎನಿಸುತ್ತದೆ. ಆ ಎರಡು ಸೆಕೆಂಡುಗಳ ಅಸಂಗತತೆಯನ್ನು ಗಮನಿಸಿದ ಕಂಪ್ಯೂಟರ್ ಅದನ್ನು ವೈಫಲ್ಯ ಎಂದು ಘೋಷಿಸಿಬಿಟ್ಟಿತು. ಒಂದು ವೇಳೆ ಅದೇನಾದರೂ ಮೂರು ಸೆಕೆಂಡುಗಳ ಕಾಲ ಘಟಿಸಿದ್ದರೆ, ಈ ಸಮಸ್ಯೆ ಎದುರಾಗುತ್ತಿರಲಿಲ್ಲವೇನೋ! ಬಹುಶಃ ಸೆನ್ಸರ್‌ಗಳಲ್ಲಿ ಏನಾದರೂ ತೊಂದರೆ ಅಥವಾ ಬೇರೆ ಏನಾದರೂ ಸಮಸ್ಯೆಗಳು ಎದುರಾಗಿರಲೂಬಹುದು. ಅದೇನು ಎಂಬುದನ್ನು ಇನ್ನು ಪತ್ತೆ ಮಾಡಬೇಕಾಗಿದೆ.

ಮುಂದಿನ ಹಾದಿ ಏನು?

ಇಸ್ರೋ ಇನ್ನು ಮುಂದಿನ ದಿನಗಳಲ್ಲಿ ತಮಿಳುನಾಡಿನ ಕುಲಸೇಕರಪಟ್ಟಿನಂ ಉಡಾವಣಾ ಕೇಂದ್ರದಿಂದ ಎಸ್ಎಸ್ಎಲ್‍ವಿಯ ಮುಂದಿನ ಉಡಾವಣೆ ನಡೆಸಲು ಉದ್ದೇಶಿಸಿದೆ. ಇದು ರಾಕೆಟ್ ಅನ್ನು ಪೋಲ್ ಟು ಪೋಲ್, ಅಥವಾ ಪೋಲಾರ್ ಆರ್ಬಿಟ್‍ಗೆ ಭೂಮಿಯ ಮೇಲಿನ ನೇರ ಜಿಯೋಡೆಸಿಕ್‍ಗೆ ಪ್ರವೇಶಿಸಲು ಸಹಕರಿಸುತ್ತದೆ. ಆದರೆ ಎಸ್ಎಸ್ಎಲ್‍ವಿಯನ್ನು ಶ್ರೀಹರಿಕೋಟಾದಿಂದ ಉಡಾವಣೆಗೊಳಿಸಿದ ಪರಿಣಾಮವಾಗಿ ಉಪಗ್ರಹಗಳು ದೀರ್ಘವೃತ್ತಾಕಾರದ ಕಕ್ಷೆಗೆ ಪ್ರವೇಶಿಸಿದವು.

ಇದನ್ನೂ ಓದಿ: Isro | ಉಪಗ್ರಹಗಳು ಗುರಿ ಮುಟ್ಟಿಲ್ಲ ಎಂದ ಇಸ್ರೊ, ವಿದ್ಯಾರ್ಥಿನಿಯರಿಗೆ ನಿರಾಸೆ

Exit mobile version