Site icon Vistara News

Ajinomoto: ಅಜಿನೊಮೊಟೊ ಎಂಬ ಸೈಲೆಂಟ್‌ ಕಿಲ್ಲರ್: ನಾಲಿಗೆಗೆ ರುಚಿ, ಆರೋಗ್ಯಕ್ಕೆ ಕಹಿ

ajinomoto

:: ಸುಪ್ರೀತಾ ಬಿ.ಎಸ್., ವಾಷಿಂಗ್ಟನ್

ಬಾಯಲ್ಲಿ ನೀರೂರಿಸುವ ಗೋಬಿ ಮಂಚೂರಿಯನ್, ಫ್ರೈಡ್ ರೈಸ್, ನ್ಯೂಡಲ್ಸ್, ಹೀಗೆ ಹಲವಾರು ಸಂಜೆಯ ಸ್ನಾಕ್ಸ್‌ಗಳನ್ನು ಮನೆಯಲ್ಲಿ ತಯಾರಿಸಿ, ಎಷ್ಟೇ ಅನುಭವವಿದ್ದರೂ, ಕೈ ಪಳಗಿದ್ದರೂ, ಈ ಸ್ನಾಕ್ಸ್‌ಗಳನ್ನು ಹೊರಗಿನ ಈಟರಿಗಳಲ್ಲಿ ತಿನ್ನುವಾಗ ಸಿಗುವ ರುಚಿ ಬರಿಸಲು ಸಾಧ್ಯವೇ ಇಲ್ಲ. ಪಾಕತಜ್ಞರಿಗೆ ಈ ವಿಷಯದಲ್ಲಿ ಭಿನ್ನಾಭಿಪ್ರಾಯವಿದ್ದರೂ ಇದು ಒಪ್ಪಲೇಬೇಕಾದ ಸಂಗತಿ. ಏಕೆ ಹೀಗೆ ಎಂದು ಈ ವಿಷಯವನ್ನು ಬೆನ್ನಟ್ಟಿ ಹೋದಾಗ ನಮಗೆ ಸಿಗುವುದೇ ಟೇಸ್ಟಿಂಗ್ ಪೌಡರ್ ಎನಿಸಿಕೊಳ್ಳುವ ಅಜಿನೊಮೋಟೊ (Ajinomoto). ಅಸಲಿಗೆ ಇದು ಮೋನೊಸೋಡಿಯಂ ಗ್ಲುಟಾಮೇಟ್ (MSG). ಸೋಡಿಯಂ (ಉಪ್ಪು), ಅಮೈನೊ ಆಮ್ಲ ಮತ್ತು ಗ್ಲುಟಾಮೇಟ್‌ಗಳ ಸಂಯೋಜನೆಯಿದು.

ಒಮ್ಮೆ ನೀವು ಚೈನೀಸ್ ಫುಡ್ ಅಥವಾ ಸ್ನಾಕ್ಸ್‌ಗಳನ್ನು ಸವಿದರೆ ಮತ್ತೆ ಮತ್ತೆ ತಿನ್ನುವ ತವಕ. ನಾಲಿಗೆಯಲ್ಲಿ ಸಿಗುವ ರುಚಿಯ ಮಜಲನ್ನು ಪುನಃ ನೆನಪಿಸಿಕೊಂಡು ಪದೇ ಪದೆ ತಿನ್ನುವಂತೆ ಮಾಡುತ್ತಾ ಈ ಟೇಸ್ಟ್ enhancer (ರುಚಿ ಪ್ರವರ್ತಕ) ಕಾರ್ಯ ನಿರ್ವಹಿಸಿ ನಮಗೆ ಉಮಾಮಿ ರುಚಿಯನ್ನು ಅಂದರೆ ಉಪ್ಪು, ಹುಳಿ, ಖಾರ, ಸಿಹಿಗೆ ಮೀರಿದ ರುಚಿಯನ್ನು ನೀಡುತ್ತಾ ನಮ್ಮ ನಾಲಿಗೆಯನ್ನು ಮರಳು ಮಾಡುತ್ತಾ ಹೋಗುತ್ತದೆ. ಇದು ಚೀನಾದ ವಸ್ತುವಾದರೂ, ತಯಾರು ಮಾಡುವುದು ಜಪಾನಿನ ಟೋಕಿಯೋದ ಕಂಪನಿ ಅಜಿನೊಮೋಟೊ. ಹೀಗಾಗಿ ಅಜಿನೊಮೋಟೊ ಎಂಬುದೇ ಈ ಟೇಸ್ಟ್ ಪೌಡರ್‌ಗೆ ಪರ್ಯಾಯ ಹೆಸರಾಗಿದೆ.

ಇದೇನೂ ಹೊಸ ಸಂಶೋಧನೆಯಲ್ಲ. 1908ರಲ್ಲಿ ಜಪಾನಿ ಸಂಶೋಧಕ ‘ಕಿಕುನೆ ಇಕೆಡಾ’ ಎಂಬಾತ ಈ ರಾಸಾಯನಿಕವನ್ನು ಕಂಡು ಹಿಡಿದ. ಇದನ್ನು ಕಬ್ಬು, ಸಕ್ಕರೆ, ಜೋಳ ಅಥವಾ ಸೋಡಿಯಂ ಕ್ಯಸವ (cassava) ಇವುಗಳನ್ನು ಬಳಸಿ ತಯಾರಿಸುತ್ತಾರೆ. ಮೊದಲು ಅಂಗಡಿ ಮುಂಗಟ್ಟುಗಳಲ್ಲಿ ಸಿಗಲೊಲ್ಲದ್ದು, ಈಗ ಯಥೇಚ್ಛವಾಗಿ ಸಿಗುತ್ತಿರುವುದರಿಂದ ಅಸಮರ್ಪಕ ಬಳಕೆಯ ಬೆಳವಣಿಗೆ ಕಂಡುಬಂದಿದೆ. ಒಂದು ಚಿಟಿಕೆ ಬಳಕೆಗೆ ಸೂಕ್ತವಾದ ಈ ಟೇಸ್ಟಿಂಗ್ ಪುಡಿಯನ್ನು ನಾಲಿಗೆಯ ರುಚಿ ಹೆಚ್ಚಿಸಲು ಟೇಬಲ್ ಚಮಚಕ್ಕೂ ಹೆಚ್ಚು ಸುರಿಯುತ್ತಿರುವುದು ಖಂಡನೀಯ. ಅಷ್ಟೇ ಏಕೆ, ಹಿಂದೆ ಮುಂದೆ ತಿಳಿಯದೇ, ಸುಲಭವಾಗಿ ಸಿಗುತ್ತಿರುವ ಈ ಟೇಸ್ಟಿಂಗ್ ಪೌಡರ್ ಅನ್ನು ರುಚಿ ಒಂದನ್ನೇ ಗುರಿಯಾಗಿಟ್ಟುಕೊಂಡು ಇಡ್ಲಿ, ಸಾಂಬಾರ್, ಚಟ್ನಿ, ಸಾರು, ಚಿತ್ರಾನ್ನಕ್ಕೂ ಗೃಹಿಣಿಯರು ಬಳಸುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು.

ಅಜಿನೊಮೊಟೊದಲ್ಲಿ ಯಾವುದೇ ವಿಟಮಿನ್ಸ್, ಪ್ರೋಟೀನ್‌, ಫ್ಯಾಟ್‌ ಅಥವಾ ಇತರೆ ಆರೋಗ್ಯಕರ ಅಂಶಗಳು ಇಲ್ಲ. ಅಜಿನೊಮೊಟೊ ಆಹಾರದ ಪರಿಮಳವನ್ನು ಹೆಚ್ಚಿಸುತ್ತದೆ ಮತ್ತು ಆಹಾರದಲ್ಲಿನ ಇತರ ಎಲ್ಲಾ ರುಚಿಗಳನ್ನು ಸಮನ್ವಯಗೊಳಿಸುತ್ತದೆ. ಇದನ್ನು ಸಕ್ಕರೆ ಅಥವಾ ಮೊಲಾಸಸ್ ಬಳಸಿ ತಯಾರಿಸುತ್ತಾರೆ.

ಅಜಿನೊಮೊಟೊ ದುಷ್ಪರಿಣಾಮಗಳು

MSG ಮೊದಲಾಗಿ ನರಮಂಡಲಕ್ಕೇ ದಾಳಿ ಮಾಡುತ್ತದೆ. ಇದನ್ನು ಸೇವಿಸಿದ ಬಳಿಕ ಕೊಬ್ಬು ಶೇಖರಣೆಗೊಂಡು ದಪ್ಪಗಾಗುತ್ತಾರೆ. ರಕ್ತದೊತ್ತಡ ಏರಿಳಿತವಾಗುವುದು, ಮೆದುಳಿನ ಮೇಲೆ ಕೆಟ್ಟ ಪರಿಣಾಮ, ಮೈಗ್ರೇನ್ ಅಥವಾ ತಲೆನೋವು, ಉಸಿರಾಟದ ಸಮಸ್ಯೆಗಳು, ಹೆಚ್ಚು ಗೊರಕೆ, ನಿದ್ರಾಹೀನತೆ, ಎದೆ ನೋವು, ತಲೆ ಸುತ್ತುವಿಕೆ, ಹೊಟ್ಟೆ ನೋವು, ಹಸಿವಾಗದಿರುವುದು ಕಂಡುಬರುತ್ತದೆ. ಅಷ್ಟೇ ಏಕೆ, ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೂ ಕಾರಣವಾಗುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಅಜಿನೊಮೊಟೊದ ಹೆಚ್ಚಿನ ಸೇವನೆಯು ಕ್ಯಾನ್ಸರ್ ಕೋಶಗಳನ್ನು ಪುನರುತ್ಪಾದಿಸುತ್ತದೆ, ಕ್ಯಾನ್ಸರ್ ಹರಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಹೀಗಾಗಿ ಸೈಲೆಂಟ್ ಕಿಲ್ಲರ್ ಆದ MSG ಆಹಾರಗಳಿಂದ ಹುಷಾರಾಗಿರಿ.‌

ಇದನ್ನೂ ಓದಿ: Health Tips: ಮಲಬದ್ಧತೆ ಎಂಬ ಯಾತನೆ: ನಿತ್ಯ ಜೀವನದಲ್ಲಿದೆ ಸರಳ ಪರಿಹಾರ!

Exit mobile version