Site icon Vistara News

ವಿಶೇಷ ಲೇಖನ | ಮೋಹನ್‌ ಭಾಗವತ್‌ ಅವರ ಮಾತುಗಳ ಅರ್ಥವೇನು?

Mohan Bhagwat

Destructive forces attack on cultural Marxists: RSS Chief Mohan Bhagwat

| ರಾಮ್‌ ಮಾಧವ್‌

ತುಂಬಾ ಮಂದಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್‌ ಅವರ ಸಂದರ್ಶನವನ್ನು ಪೂರ್ತಿಯಾಗಿ ಓದದೆ ಅವರ ಮಾತುಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ಅವರ ಸಂದರ್ಶನ ಸಮಗ್ರವಷ್ಟೇ ಅಲ್ಲ, ತುಂಬಾ ಮುನ್ನೋಟವುಳ್ಳದ್ದೂ ಆಗಿದೆ. ಆಂಶಿಕವಾಗಿ ಅದನ್ನು ಗ್ರಹಿಸಿದರೆ, ಮಾತನಾಡಿದರೆ, ಆರೆಸ್ಸೆಸ್ಸನ್ನು ಭಂಗಿಸಲು ಹೊರಟವರಿಗೆ ಶಸ್ತ್ರಾಸ್ತ್ರ ಒದಗಿಸಿಕೊಟ್ಟಂತೆ ಆಗುತ್ತದೆ ಅಷ್ಟೇ.

ಅಮೆರಿಕದ ಹಿರಿಯ ಬರಹಗಾರ ವಾಲ್ಟರ್‌ ಆಂಡರ್‌ಸನ್‌ ಅವರು ಒಮ್ಮೆ ʼʼಆರೆಸ್ಸೆಸ್‌ ಅರ್ಥ ಮಾಡಿಕೊಳ್ಳುವುದಕ್ಕೆ ಕಷ್ಟ ಹಾಗೂ ಅಪಾರ್ಥ ಮಾಡಿಕೊಳ್ಳುವುದಕ್ಕೆ ಸುಲಭವಾದ ಸಂಸ್ಥೆʼʼ ಎಂದಿದ್ದರು. ಇದು ಕೆಲವೊಮ್ಮೆ ಸಂಘದ ಬಗ್ಗೆ ದುರುದ್ದೇಶಪೂರಿತ ಅಪಪ್ರಚಾರದಿಂದಲೂ, ಕೆಲವೊಮ್ಮೆ ಸಂಘದಿಂದಲೇ ಸ್ಪಷ್ಟ ಮಾಹಿತಿಯ ಕೊರತೆಯಿರುವುದರಿಂದಲೂ ಆಗಿದೆ. ಪ್ರಸ್ತುತ ಸನ್ನಿವೇಶದಲ್ಲಿ, ಸಂದರ್ಶನ ದೀರ್ಘವಾಗಿರುವುದರಿಂದ ಹಾಗೂ ಅದು ಹಿಂದಿಯಲ್ಲಿ ಇರುವುದರಿಂದ, ಹೆಚ್ಚಿನವರು ಅದನ್ನು ಪೂರ್ತಿ ಓದಿಲ್ಲ. ಪಾಂಚಜನ್ಯ ಪತ್ರಿಕೆಯು ಅದನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸಬೇಕಿತ್ತು.

ಆರೆಸ್ಸೆಸ್‌ ಎಂಬುದು ಅವಶೇಷವಲ್ಲ, ಪಳೆಯುಳಿಕೆಯಲ್ಲ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅದೂ ಬದಲಾಗಿದೆ. ಸ್ವಾತಂತ್ರ್ಯ ದೊರೆತ ಬಳಿಕ, ಗುರೂಜಿ ಗೋಳ್ವಲ್ಕರ್‌ ಅವರು, ಇಂದಿನ ಆರೆಸ್ಸೆಸ್‌ಗೆ ಆಧಾರಭೂತವಾದ ಅನೇಕ ಬದಲಾವಣೆಗಳನ್ನು ತಂದರು. ಬಾಳಾಸಾಹೇಬ ದೇವರಸ್‌, ರಾಜೇಂದ್ರ ಸಿಂಗ್‌, ಕೆ.ಎಸ್‌ ಸುದರ್ಶನ್‌ ಸಂಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಉಂಟುಮಾಡಿರು.

ಭಾಗವತ್‌ ಅವರು ಈ ಬದಲಾವಣೆಗಳನ್ನು ಇನ್ನೊಂದು ಹಂತಕ್ಕೆ, ಇನ್ನಷ್ಟು ಮುಕ್ತತೆಯಿಂದ ತೆಗೆದುಕೊಂಡು ಹೋಗುತ್ತಿದ್ದಾರೆ. ಇಂದಿನ ಕಾಲಮಾನದ ಎಲ್ಲ ಬದಲಾವಣೆಗಳು, ಸವಾಲುಗಳನ್ನು ಎದುರಿಸುವಂತೆ ಸಂಘವು ಸಜ್ಜುಗೊಳ್ಳುತ್ತಿದೆ.

ಭಾಗವತ್‌ ಅವರು ಎಲ್‌ಜಿಬಿಟಿಕ್ಯುನಂಥ ವಿಷಯಗಳ ಬಗ್ಗೆಯೂ ಮುಕ್ತವಾಗಿ ಮಾತಾಡಿದ್ದಾರೆ. 2000ದಲ್ಲಿ ಸಂಘದ ವಕ್ತಾರನಾಗಿದ್ದಾಗ, ʼನೈಸರ್ಗಿಕವಲ್ಲದ ಲೈಂಗಿಕ ಕ್ರಿಯೆʼಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಬ್ರಿಟಿಷ್‌ ಕಾಲದ ಕಾಯಿದೆಗಳನ್ನು ಪುನರ್‌ಪರಿಶೀಲಿಸಬೇಕು ಎಂದು ಹೇಳಿದ್ದೆ. ಸಲಿಂಗಕಾಮ ಒಂದು ಕ್ರಿಮಿನಲ್‌ ಅಪರಾಧ ಎಂದು ನನಗನಿಸುವುದಿಲ್ಲ. ಎರಡು ವರ್ಷಗಳ ಬಳಿಕ, ಅಂದರೆ 2018ರಲ್ಲಿ ಸಲಿಂಗಕಾಮವನ್ನು ಅಪರಾಧೀಕರಣಗೊಳಿಸುವ ಐಪಿಸಿಯ ಸೆಕ್ಷನ್‌ 377ನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತು.

ಭಾಗವತ್‌ ಅವರು ಈ ಚರ್ಚೆಯನ್ನು ಇನ್ನಷ್ಟು ಮುಂದಕ್ಕೆ ಒಯ್ದಿದ್ದಾರೆ. ʼಸಲಿಂಗಕಾಮಿಗಳು ಜೈವಿಕʼ ಎಂದೂ, ಉಭಯಕಾಮಿಗಳು ಸಮಸ್ಯೆಯಲ್ಲʼ ಎಂದೂ ಹೇಳಿದ್ದಾರೆ. ಅವು ಹಿಂದೂ ಸಮಾಜದ ಭಾಗವಾಗಿಯೇ ಇದ್ದವು ಎಂದಿದ್ದಾರೆ. ಅದರ ಬಗ್ಗೆ ಹೆಚ್ಚಿನ ಕೋಲಾಹಲ ಎಬ್ಬಿಸುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಜನಸಂಖ್ಯೆಯ ಸವಾಲಿಗೆ ಸಂಬಂಧಿಸಿ, ಕಾನೂನು ಕಾಯಿದೆಗಳಲ್ಲಿ ಬದಲಾವಣೆ ತರುವುದಕ್ಕಿಂತಲೂ ಜನಾಭಿಪ್ರಾಯವನ್ನು ರೂಪಿಸುವುದು ಮುಖ್ಯವೆಂದು ಭಾಗವತ್‌ ಅವರ ಅಭಿಪ್ರಾಯವಾಗಿದೆ. ದೇಶದಲ್ಲಿರುವ ಹಿಂದೂ ಸಮುದಾಯಕ್ಕೆ ಇಂದು ಸವಾಲಾಗಿರುವ ವಿಷಯವೆಂದರೆ ಜನಸಂಖ್ಯೆಯದು. ಮತೀಯ ಜನಸಂಖ್ಯೆಯಲ್ಲಿ ಉಂಟಾಗುತ್ತಿರುವ ಏರುಪೇರುನಿಂದಾಗಿ, ಮುಂದೊಂದು ದಿನ ಈ ದೇಶದಲ್ಲಿ ನಾವು ಅಲ್ಪಸಂಖ್ಯಾತರಾಗಬಹುದು ಎಂಬ ಆತಂಕ ಹಿಂದೂಗಳಿಗೆ ಇದೆ.

ಯಾಕೆಂದರೆ, 1947ರಲ್ಲಿ ಮತೀಯ ಜನಸಂಖ್ಯೆಯ ಹಿನ್ನೆಲೆಯಲ್ಲಿಯೇ ಈ ದೇಶ ಎರಡಾಗಿ ಒಡೆಯಿತು. ಜನಸಂಖ್ಯೆ ಅಸಮತೋಲನದ ಬಗ್ಗೆ ಹಿಂದೂ ಮನಸ್ಥಿತಿಯಲ್ಲಿರುವ ಆತಂಕ ಈ ಹಿನ್ನೆಲೆಯದು. ಇಂಡೋನೇಷ್ಯಾದಿಂದ ಒಡೆದು ಪೂರ್ವ ತಿಮೋರ್‌ ಅನ್ನು ಸೃಷ್ಟಿಸಿದ್ದು, ಸುಡಾನ್-‌ ಸೆರ್ಬಿಯಾಗಳ ನಡುವಿನ ಗಲಭೆ ಮುಂತಾದ ಜಾಗತಿಕ ಸಂಗತಿಗಳೂ ಇದನ್ನು ಖಚಿತಪಡಿಸಿವೆ.‌

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಆರೆಸ್ಸೆಸ್‌ನ ಸಮಕಾಲೀನ ಸ್ಪಂದನ ಬಿಂಬಿಸಿದ ಮೋಹನ್‌ ಭಾಗವತ್‌

ಭಾರತದಲ್ಲಿ ಈ ಆತಂಕಕ್ಕೆ ಕಾರಣವಿದೆ. ದೇಶದಲ್ಲಿ ಫಲವತ್ತತೆ ದರ (TFR), ಅಂದರೆ ಒಬ್ಬ ತಾಯಿ ಜನ್ಮ ನೀಡುವ ಸರಾಸರಿ ಮಕ್ಕಳ ಸಂಖ್ಯೆ ದೊಡ್ಡ ಧರ್ಮಗಳಲ್ಲಿ ಕುಸಿದಿದೆ. ಹಿಂದೂಗಳಲ್ಲಿ TFR 1.94 ಇದ್ದರೆ, ಕ್ರೈಸ್ತ ಮತ್ತು ಸಿಕ್ಖರಲ್ಲಿ 1.88 ಹಾಗೂ 1.61 ಇವೆ. ಆದರೆ ಮುಸ್ಲಿಮರಲ್ಲಿ ಅದು 2.3ರಷ್ಟಿದೆ. ಅಂದರೆ ಇತರ ಧರ್ಮಗಳಿಗಿಂತ ಮುಸ್ಲಿಮರ ಸಂಖ್ಯೆ ಹೆಚ್ಚು ವೇಗದಲ್ಲಿ ಬೆಳೆಯುತ್ತಿದೆ. ಆದರೆ ಕೆಲವು ಮಾಹಿತಿಗಳು ತೋರಿಸುವಂತೆ ಮುಸ್ಲಿಂ ಮಹಿಳೆಯರಲ್ಲೂ TFR ಕಳೆದ ಮೂರು ದಶಕಗಳಲ್ಲಿ 46%ದಷ್ಟು ಕುಸಿದಿದೆ.

ಭಾಗವತ್‌ ಅವರು ಈ ಅಸಮತೋಲನವನ್ನು ತಾರ್ಕಿಕವಾಗಿ ಎತ್ತಿ ತೋರಿಸಿದ್ದಾರೆ. ಇದಕ್ಕೆ ಕಾನೂನು ಪರಿಹಾರವಲ್ಲವೆಂದೂ, ಜನಜಾಗೃತಿಯೇ ಪರಿಹಾರವೆಂದೂ ತಿಳಿಸಿದ್ದಾರೆ. ನಾವು ಯಾರನ್ನೂ ಬಲವಂತ ಮಾಡಲಾಗದು. ಇದು ಕೇವಲ ಫಲವತ್ತತೆ ದರದ ಬಗ್ಗೆ ಅಲ್ಲ. ಮತಾಂತರ, ವಲಸೆಗಳೂ ಸಾಕಷ್ಟು ಅಸಮತೋಲನ ಸೃಷ್ಟಿಸುತ್ತಿವೆ. ಇಂಥವುಗಳನ್ನು ಕಠಿಣವಾಗಿ ತಡೆಯಬೇಕು ಎಂದು ಅವರು ಹೇಳಿದ್ದಾರೆ.

ʼ1000 ವರ್ಷಗಳ ಸಮರʼದ ಬಗ್ಗೆ ಅವರ ಮಾತುಗಳನ್ನು ವರದಿ ಮಾಡಲಾಗಿದೆ. ಯುನೆಸ್ಕೋ ಸಂವಿಧಾನವು, ʼಯುದ್ಧವು ಆರಂಭವಾಗುವುದು ಮನುಷ್ಯನ ಮನಸ್ಸಿನಲ್ಲಿʼ ಎಂದು ಶುರುವಾಗುತ್ತದೆ. ಸಮರದ ಮನಸ್ಥಿತಿಯನ್ನು ಇಲ್ಲವಾಗಿಸಬೇಕು ಎಂಬ ಆಶಯ ಭಾಗವತ್‌ರದ್ದಾಗಿದೆ. ಶತಮಾನಗಳಿಂದಲೂ ಭಾರತದ ಮೇಲೆ ಅನೇಕ ಅನ್ಯ ಆಕ್ರಮಣಗಳಾಗಿವೆ. ಅದು ನಮ್ಮ ಮನದಲ್ಲಿ ಗಾಯಗಳನ್ನು ಉಳಿಸಿದೆ. ಹೀಗಾಗಿ ಆಗಾಗ ಹಿಂದೂ ಸಮುದಾಯದಲ್ಲೂ ಆಕ್ರಮಣಕಾರಿ ಭಾವ ಪುಟಿದೇಳುತ್ತದೆ. ʼʼಅಂಥ ಆಕ್ರಮಣಕಾರಿತನ ಅಗತ್ಯವಿಲ್ಲ. ಅದು ಸದಾ ಕಾಲ ಉಪಯೋಗಕಾರಿಯಲ್ಲʼʼ ಎಂದೂ ಭಾಗವತ್‌ ಅವರು ಹೇಳಿದ್ದಾರೆ.

ಇದನ್ನೂ ಓದಿ | Mohan Bhagwat | ಮುಸ್ಲಿಮರು ಶ್ರೇಷ್ಠರೆಂಬ ಅಬ್ಬರ ಬಿಡಲಿ, ಭಾಗವತ್‌ ಹೇಳಿಕೆಗೆ ಓವೈಸಿ ಸೇರಿ ಹಲವರಿಂದ ಆಕ್ರೋಶ

ಮುಸ್ಲಿಮರು ತಾವು ಶ್ರೇಷ್ಠರೆಂಬ ಭಾವವನ್ನು ಬಿಟ್ಟುಕೊಡಬೇಕು ಎಂದು ಅವರು ಹೇಳಿರುವ ಮಾತನ್ನು ಅಗತ್ಯಕ್ಕಿಂತ ಹೆಚ್ಚು ಹಿಗ್ಗಿಸಲಾಗಿದೆ. ʼʼನಾವು ಇನ್ನೊಬ್ಬರೊಂದಿಗೆ ಬಾಳಲಾರೆವುʼʼ ಎಂಬ ಭೇದ ಭಾವ ಇರಕೂಡದು ಎಂಬುದು ಅವರು ಹೇಳಿದ ಮಾತಿನ ಅರ್ಥ. ಇದು ಎಲ್ಲರಿಗೂ ಅನ್ವಯವಾಗುತ್ತದೆ. ಈ ಭಾವನೆ ಹಿಂದೂವಿನಲ್ಲಿದ್ದರೆ, ಕಮ್ಯುನಿಸ್ಟ್‌ನಲ್ಲಿದ್ದರೆ, ಅದನ್ನೂ ಕೂಡ ಬಿಡಬೇಕು ಎಂದರ್ಥ.

ನೆಹರೂ ಅವರು ಕೂಡ ಅಲಿಗಢ ಯುನಿವರ್ಸಿಟಿಯಲ್ಲಿ 1948ರಲ್ಲಿ ಭಾಷಣ ಮಾಡುತ್ತಿದ್ದಾಗ, ನೀವು ನಿಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಹೊಂದಿದ್ದೀರಾ? ಅದು ಎಲ್ಲಿಂದ ಬಂದಿದೆ ಎಂಬುದನ್ನು ಗುರುತಿಸಿದ್ದೀರಾ? ಅಥವಾ ಹಾಗೆಯೇ ಅದನ್ನು ಮುಂದಿನ ತಲೆಮಾರಿಗೆ ದಾಟಿಸಲು ಇಷ್ಟಪಡುತ್ತೀರಾ?ʼ ಎಂದು ಪ್ರಶ್ನಸಿದ್ದರು.

ಭಾಗವತ್‌ ಅವರನ್ನು ಅದದೇ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಲಾಗುತ್ತಿದೆ. ಪ್ರಶ್ನೆ ಕೇಳುವ ಮುನ್ನ ತಾವಾಡುವ ಮಾತಿನ ಅರ್ಥ ಗೊತ್ತಿರಬೇಕು, ಜೀಸಸ್‌ ಹೀಗೆ ಪ್ರಶ್ನೆ ಕೇಳುವವರಿಗೆ ಅವರ ಪದಗಳ ಅರ್ಥ ವಿವರಿಸುವಂತೆ ಹೇಳುತ್ತಿದ್ದರು. ಪ್ರತೀ ಪದವೂ ಬೇರೆ ಬೇರೆಯವರಿಗೆ ಬೇರೆ ಬೇರೆ ಅರ್ಥಗಳನ್ನು ಸ್ಫುರಿಸುತ್ತದೆ, ಅವು ಅವರ ಪೂರ್ವಾಗ್ರಹ, ನೋಟಗಳಿಗೆ ತಕ್ಕಂತಿರುತ್ತವೆ. ಭಾಗವತ್‌ ಅವರ ಭಾರತವು, ಇಂಥ ಪೂರ್ವಾಗ್ರಹದ ಪಟ್ಟಕದಿಂದ ನೋಡದಿರಲು ಆಗ್ರಹಿಸುತ್ತದೆ.

ಇದನ್ನೂ ಓದಿ | LGBTQ ಸಮುದಾಯದ ಖಾಸಗಿತನ ಗೌರವಿಸಿ: ಮೋಹನ್‌ ಭಾಗವತ್‌

(ಲೇಖಕರು ಇಂಡಿಯಾ ಫೌಂಡೇಶನ್‌ ಆಡಳಿತ ಮಂಡಳಿಯ ಸದಸ್ಯರು)

Exit mobile version