Site icon Vistara News

ಸಿದ್ದರಾಮೋತ್ಸವ | ಜನುಮ ದಿನಾಚರಣೆ ಬೇಡ ಎನ್ನುವ ಸಿದ್ದರಾಮಯ್ಯ ಸಿದ್ದರಾಮೋತ್ಸವಕ್ಕೆ ಒಪ್ಪಿದ್ದೇಕೆ?

siddaramaiah

ರಾಜ್ಯದಲ್ಲೆಲ್ಲ ಸಿದ್ದರಾಮೋತ್ಸವದ್ದೇ ಮಾತು, ಚರ್ಚೆ. ಬೇಕು – ಬೇಡಗಳ, ಪರ ವಿರೋಧದ ವಾದ-ಪ್ರತಿವಾದಕ್ಕೂ ಇದೇ ಮುಖ್ಯ ಸರಕು. ರಾಜ್ಯದ ಮಾಸ್ ಲೀಡರ್‌ಗಳಲ್ಲಿ ನಿಸ್ಸಂಶಯವಾಗಿ ಒಬ್ಬರೆನಿಸಿರುವ ಸಿದ್ದರಾಮಯ್ಯ ಅವರಿಗೆ ಈ ಉತ್ಸವ ವಿಜೃಂಭಣೆ ಮೆರವಣಿಗೆ ಬೇಕಾಗಿತ್ತೆ ಎಂದು ಕೇಳಿದರೆ ಸಿದ್ದರಾಮಯ್ಯನವರ ಬಹಿರಂಗದ ಉತ್ತರ ‘ಬೇಡ’ ಎನ್ನುವುದೇ ಆಗಿದೆ. ಆದರೆ ಅವರ ಅಂತರಂಗದ ಬಯಕೆ ತದ್ವಿರುದ್ಧ. “ಇದೆಲ್ಲ ಬೇಡʼ ಎಂದು ಅವರು ತಮ್ಮ ಅಭಿಮಾನಿಗಳಿಗೆ ಖಡಕ್ಕಾಗಿ ಹೇಳಿಲ್ಲ; ಬದಲಿಗೆ ಹುಡುಗರು ಏನೋ ಮಾಡುತ್ತಿದ್ದಾರೆ, ಮಾಡಿಕೊಳ್ಳಲಿ ಬಿಡಿ ಎಂಬ ಸದರ ಕೊಟ್ಟಿದ್ದರ ಫಲವೇ ಸಿದ್ದರಾಮೋತ್ಸವ.

1. ಸಿದ್ದರಾಮಯ್ಯ ಹೇಳಿಕೊಂಡಂತೆ ಅವರ ಜನ್ಮ ಜಾತಕವಿಲ್ಲ. ಶಾಲೆಗೆ ಕರೆದು ಸೇರಿಸಿದ ಶಿಕ್ಷಕರು ಜನ್ಮ ದಿನ ಎಂದು ಒಂದು ದಿನಾಂಕ ಬರೆದರು. ಮುಂದೆ ಅದೇ ಅವರ ಜನ್ಮ ದಿನವಾಯಿತು. ಸಿದ್ದರಾಮೋತ್ಸವದ ಭಾಗವಾಗಿ ಪ್ರಕಟವಾಗಿರುವ ಜಾಹೀರಾತಿನಲ್ಲಿ ಅವರ ಜನ್ಮ ದಿನಾಂಕವನ್ನು ೧೯೪೮ರ ಆಗಸ್ಟ್ ೧೨ ಎಂದು ಹೇಳಲಾಗಿದೆ. ದಾವಣಗೆರೆಯಲ್ಲಿ ನಡೆದಿರುವ ಜನ್ಮದಿನೋತ್ಸವ ಈ ತಾರೀಖಿಗೆ ಒಂಭತ್ತು ದಿವಸ ಮೊದಲೇ ನಡೆದಿದೆ. ತಾವು ಹುಟ್ಟಿದ ದಿನ ತಾರೀಖು ವಾರ ನಕ್ಷತ್ರ ಖಚಿತವಾಗಿ ಗೊತ್ತಿರದ ಅಸಂಖ್ಯ ಜನ ದೇಶದಲ್ಲಿ ಈಗಲೂ ಇದ್ದಾರೆ. ಅಂಥವರೆಲ್ಲರ ಸಂಕೇತ ರೂಪವಾಗಿಯೂ ಸಿದ್ದರಾಮೋತ್ಸವವನ್ನು ನೋಡುವ ಪ್ರಯತ್ನ ಮಾಡಬಹುದಾಗಿದೆ. ಸ್ವಾತಂತ್ರ್ಯ ಬಂದು ೭೫ ವರ್ಷ ಆಯಿತೆಂಬ ಸಂಭ್ರಮದ ಆಚರಣೆಗೆ ದೇಶ ಸಿದ್ಧವಾಗಿರುವ ಸಮಯದಲ್ಲೇ ಸಿದ್ದರಾಮೋತ್ಸವ ನಡೆದಿದೆ. ಕಾಂಗ್ರೆಸ್‌ಗೆ ಕಾಯಕಲ್ಪ ನೀಡುವ ಮತ್ತೊಂದು ಯತ್ನ ಇದು ಎಂಬ ವ್ಯಾಖ್ಯಾನವೂ ಇದೆ.

2. ಸಿದ್ದರಾಮಯ್ಯನವರು ಸವೆಸಿ ಬಂದ ರಾಜಕೀಯ ಹಾದಿಯನ್ನು ನೋಡುವುದಕ್ಕೆ ಇದು ಸಕಾಲ. ಅದಕ್ಕಿಂತಲೂ ಮೊದಲು ಅವರ ರಾಜಕೀಯ ಮಹತ್ವಾಕಾಂಕ್ಷೆಯ ವಿವಿಧ ಮಜಲನ್ನು ಅವಲೋಕಿಸುವುದು ಒಳಿತು ಎನಿಸುತ್ತಿದೆ. ಸಿದ್ದರಾಮಯ್ಯನವರದು, ಸಮಾಜವಾದಿ ನೇತಾರ ರಾಮಮನೋಹರ ಲೋಹಿಯಾರ ಪ್ರಭಾವಕ್ಕೆ ಒಳಗಾದ ರಾಜಕೀಯ ಬದುಕು. ‘ಕಟ್ಟ ಕಡೆಯವನಿಗೆ ಮೊಟ್ಟ ಮೊದಲ ಮನ್ನಣೆ’ ಎಂದು ಬದುಕಿನುದ್ದಕ್ಕೂ ಬಡಿದಾಡಿದ ಲೋಹಿಯಾ ವಾದಕ್ಕೆ ತುರ್ತು ಪರಿಸ್ಥಿತಿ ಹಾಗೂ ನಂತರದ ರಾಜಕೀಯ ಬೆಳವಣಿಗೆಗಳಿಂದ ಗ್ರಹಣ ಕವಿದಿದೆ. ಗ್ರಹಣ ಎಂದರೆ ಶಾಶ್ವತ ಮಂಕು ಅಲ್ಲ. ಅದಕ್ಕೆ ಅದರದೇ ಆದ ಮೋಕ್ಷ ಮುಹೂರ್ತವೂ ಇದೆ. ಆ ಮುಹೂರ್ತ ಯಾವಾಗ ಎನ್ನುವುದು ಮಾತ್ರ ಗೊತ್ತಿಲ್ಲ. ಆದರೆ ಅಲ್ಲೊಬ್ಬರು ಇಲ್ಲೊಬ್ಬರು ಲೋಹಿಯಾ ವಾದದ ಮಿಂಚು ಬೆಳಕಾಗಿ ಕಾಣಿಸುತ್ತಾರೆ. ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ಇಂಥದೊಂದು ಮಿಂಚು.

3. ವಿಧಾನಸಭೆಗೆ ಸಿದ್ದರಾಮಯ್ಯ ೧೯೮೩ರಲ್ಲಿ ಆಯ್ಕೆಯಾದಾಗ ಅವರಲ್ಲಿದ್ದ “ಹಿಡನ್ ರಾಜಕಾರಣಿʼಯನ್ನು ಮೊದಲಿಗೆ ಗುರುತಿಸಿದ್ದು ರಾಮಕೃಷ್ಣ ಹೆಗಡೆ. ವಿಧಾನಸಭೆಯಲ್ಲಿ ಬೆಂಬಲದ ಕೊರತೆಯಲ್ಲಿದ್ದ ಹೆಗಡೆ, ಅನೇಕ ಪಕ್ಷೇತರರಿಗೆ ರಾಜಕೀಯ ಸ್ಥಾನಮಾನ ನೀಡಿ ಬಹುಮತ ಗಳಿಸಿಕೊಂಡರು. ಭಾರತೀಯ ಲೋಕದಳದ ಟಿಕೆಟ್ ಪಡೆದು ಸಿದ್ದರಾಮಯ್ಯ ಆಯ್ಕೆ ಆಗಿದ್ದರು. ಅವರನ್ನು ಕರ್ನಾಟಕ ಕಾವಲು ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಲಾಯಿತು. ೧೯೮೫ರಲ್ಲಿ ಜನತಾ ಪಕ್ಷದ ಟಿಕೆಟ್ ಪಡೆದು ಮತ್ತೆ ಗೆದ್ದು, ಹೆಗಡೆ ಸಂಪುಟದಲ್ಲಿ ಸಚಿವರೂ ಆದರು. ೧೯೯೧ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಜನತಾ ದಳದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಕಾಂಗ್ರೆಸ್‌ನ ಬಸವರಾಜ ಪಾಟೀಲ ಅನ್ವರಿ ಎದುರು ಸೋತರು. ತಮ್ಮ ಮೆಚ್ಚಿನ ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಸೋಲು ಕಂಡರು. ಚುನಾವಣೆಯಲ್ಲಿ ಸೋಲು ಅಥವಾ ಗೆಲುವು ಸಾಮಾನ್ಯ. ಇದು ಸಿದ್ದರಾಮಯ್ಯನವರನ್ನು ಅಷ್ಟೆಲ್ಲ ವಿಚಲಿತರನ್ನಾಗಿ ಮಾಡಿಲ್ಲ. ಆದರೆ ಕನಸು ಕಾಣುವುದನ್ನು ಅವರು ಬಿಟ್ಟುಕೊಟ್ಟಿಲ್ಲ. ಈಗ ನಡೆದಿರುವ ಸಿದ್ದರಾಮೋತ್ಸವ ಮತ್ತೊಮ್ಮೆ ಮುಖ್ಯಮಂತ್ರಿ ತಾವಾಗಬೇಕೆಂಬ ಕನಸಿನ ಮೂರ್ತ ರೂಪ ಎನ್ನುವುದು ಅವರ ಅಂತರಂಗ ಬಲ್ಲವರ ಅಭಿಮತ.

4. ಮುಖ್ಯಮಂತ್ರಿ ಪದವಿಯ ಕನಸನ್ನು ಸಿದ್ದರಾಮಯ್ಯನವರು ಮೊದಲಿಗೆ ಕಂಡಿದ್ದು ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿ ಆಯ್ಕೆಯಾದ ೧೯೯೬ರಲ್ಲಿ. ತಾವು ಹೊಂದಿದ್ದ ಮುಖ್ಯಮಂತ್ರಿ ಸ್ಥಾನವನ್ನು ಗೌಡರು ತೆರವು ಮಾಡಲಿದ್ದರು. ಖಾಲಿಯಾಗಲಿದ್ದ ಕುರ್ಚಿಗೆ ಯಾರೆಂಬ ಪ್ರಶ್ನೆ ಎದುರಾದಾಗ ಕನಸಿನ ಸೌಧ ಕಟ್ಟಿದವರು ಸಿದ್ದರಾಮಯ್ಯ. ಆ ಹೊತ್ತಿಗೆ ಜನತಾ ದಳದಲ್ಲಿ ಬಣ ರಾಜಕೀಯ ಹದ್ದು ಮೀರಿತ್ತು. ಹೆಗಡೆ ಬಣ, ದೇವೇಗೌಡ ಬಣ ಎಂದು ಎರಡಾಗಿ ಪಕ್ಷ ಮೇಲಿಂದ ಕೆಳಗಿನವರೆಗೂ ಹೋಳಾಗಿ ಹೋಗಿತ್ತು. ಹಾಳಾಗಿ ಹೋಗಿತ್ತು ಎಂದರೂ ತಪ್ಪಲ್ಲ! ಜನತಾ ಪರಿವಾರಕ್ಕೆ ಆಗ ಹೈಕಮಾಂಡ್ ಎಂಬುದು ಇರಲಿಲ್ಲ. ಹಾಗಾಗಿ ಹೇಳುವವರಾಗಲೀ ಕೇಳುವವರಾಗಲೀ ಇರಲಿಲ್ಲ. ರಾಜ್ಯ ರಾಜಕೀಯದಲ್ಲಿ ಒಬ್ಬೊಬ್ಬರೂ ಒಂದೊಂದು ದ್ವೀಪವಾಗಿ ಪಕ್ಷ ಚಿಂದಿ ಚಿತ್ರಾನ್ನವಾಗಿತ್ತು. ಆ ವೇಳೆಗೆಲ್ಲ ಸಮರ್ಥನೀಯವಲ್ಲ ಕಾರಣಗಳಿಗಾಗಿ ಹೆಗಡೆಯವರಿಂದ ಅಂತರ ಕಾಯ್ದುಕೊಂಡಿದ್ದ ಸಿದ್ದರಾಮಯ್ಯ ಗೌಡರ ಬಣದಲ್ಲಿ ʼಹಿಂದುಳಿದ ವರ್ಗಗಳ ಆಶಾಕಿರಣʼವಾಗಿ ಕಾಣಿಸಿಕೊಂಡಿದ್ದರು. ಒಕ್ಕಲಿಗರ ಪಕ್ಷ ಎನ್ನುವ ಅನಪೇಕ್ಷಿತ ಮಾತನ್ನು ಕೇಳುವ ಇಚ್ಚೆ ಇಲ್ಲವಾಗಿದ್ದ ಗೌಡರ ಪಾಳಯದಲ್ಲಿ ಸಿದ್ದರಾಮಯ್ಯ ಎದ್ದು ಕಾಣಿಸುತ್ತಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ಜೆ.ಎಚ್.ಪಟೇಲರನ್ನು ಹೆಗಡೆ ಸೂಚಿಸಿದಾಗ ಗೌಡರೂ ಸೇರಿದಂತೆ ಕೆಲವು ಮುಖಂಡರು ಸುಲಭದಲ್ಲಿ ಅದನ್ನು ಒಪ್ಪಲಿಲ್ಲ. ಸಿದ್ದರಾಮಯ್ಯ ಹೆಸರನ್ನು ಸ್ವತಃ ಗೌಡರೇ ಮುಂದಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಆ ಸಂದರ್ಭದಲ್ಲಿ ಎರಡೂ ಬಣಗಳ ನಡುವೆ ಅಸಹ್ಯಕರ ಮಾತಿನ ಚಕಮಕಿ ನಡೆಯಿತು. ಕೈಕೈ ಮಿಲಾಯಿಸುವ ಹಂತಕ್ಕೂ ಅದು ಹೋಗಿತ್ತೆಂದು ಶಾಸಕಾಂಗ ಪಕ್ಷದ ಸಭೆಯ ಒಳಗಿದ್ದ ಅನೇಕರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ದೆಹಲಿಗೆ ಧಾವಿಸುವ ಧಾವಂತದಲ್ಲಿದ್ದ ಗೌಡರಿಗೆ ರಾಜ್ಯ ರಾಜಕೀಯದಲ್ಲಿ ಅಷ್ಟೆಲ್ಲ ತೊಡಗಿಸಿಕೊಳ್ಳುವ ಸಮಯವಾಗಲಿ, ವ್ಯವಧಾನವಾಗಲಿ ಇರಲಿಲ್ಲ. ಪಕ್ಷದಲ್ಲಿ ಪಟೇಲರಿಗಿದ್ದ ಹಿರಿತನದ ಮುಂದೆ ಸಿದ್ದರಾಮಯ್ಯ ಕನಸು ಕೊನರದೆ ಕಮರಿತು.

5. ಪಟೇಲರ ಸಂಪುಟದಲ್ಲಿ ಸಿದ್ದರಾಮಯ್ಯ ಒಂಥರಾ ಕಸಿವಿಸಿಯಲ್ಲೇ ಉಪ ಮುಖ್ಯಮಂತ್ರಿಯಾದರು. ಪ್ರಧಾನಿ ಮನಸ್ಸು ಮಾಡಿದ್ದರೆ ತಾವು ಸಿಎಂ ಆಗುವುದು ಕಷ್ಟವಿರಲಿಲ್ಲ ಎಂಬ ಅವರ ನೋವು ಈಗಲೂ ಕಾಡುತ್ತದೆ. ಪಟೇಲ್ ಅಧಿಕಾರದ ಕೊನೆಯಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಬರಲಿಲ್ಲ. ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂತು. ಅದಾಗಿ ನಾಲ್ಕೂವರೆ ವರ್ಷದಲ್ಲೆ ನಡೆದ ಚುನಾವಣೆ ಕಾಂಗ್ರೆಸ್‌ಗೆ ಬಹುಮತ ತರಲಿಲ್ಲ. ಅತಂತರ ವಿಧಾನ ಸಭೆ ೨೦೦೪ರ ಚುನಾವಣೆ ಫಲಿತ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಅದು ನೆಪ. “ನಂಬರ್ ಒನ್ ಸಿಎಂ” ಎಂದು ಮಾಧ್ಯಮದ ಅಲ್ಲಲ್ಲಿ ಪಡೆದುಕೊಂಡಿದ್ದ ಪ್ರಚಾರ ಮುಖ್ಯಮಂತ್ರಿಯಾಗಿದ್ದ ಕೃಷ್ಣರ ಕೈ ಹಿಡಿಯಲಿಲ್ಲ. ಬಹುಮತ ಕಳೆದುಕೊಂಡಿದ್ದ ಕಾಂಗ್ರೆಸ್‌ ಸರ್ಕಾರ ರಚನೆಗೆ ಜೆಡಿಎಸ್‌ನಿಂದ ಸಹಕಾರದ ಭಿಕ್ಷೆ ಬೇಡಿತು. ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟ ಕೃಷ್ಣ, ಗೌಡರನ್ನು ಭೇಟಿಯಾಗಿ ತಾವು ಮತ್ತೆ ಮುಖ್ಯಮಂತ್ರಿ ಆಗುವುದಕ್ಕೆ ಬೆಂಬಲ ನೀಡಿರೆಂದು ಯಾಚಿಸಿದರು. ಗೌಡರಲ್ಲಿ ಅವರದೇ ಆದ ಲೆಕ್ಕಾಚಾರವಿತ್ತು. ಧರ್ಮ ಸಿಂಗ್ ಅವರನ್ನು ಸಿಎಂ ಮಾಡಿದರೆ ಮಾತ್ರವೇ ಬೆಂಬಲಿಸುವುದಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಸ್ಪಷ್ಟವಾಗಿ ಹೇಳಿದರು. ಗೌಡರ ಅಪೇಕ್ಷೆಯಂತೆ ಧರ್ಮಸಿಂಗ್ ಸಮ್ಮಿಶ್ರ ಸರ್ಕಾರದ ಸಿಎಂ ಆದರು. ಸಿದ್ದರಾಮಯ್ಯ ಮತ್ತೆ ಕಸಿವಿಸಿಯಿಂದಲೇ ಡಿಸಿಎಂ ಆದರು. ಸರ್ಕಾರ ರಚನೆಯ ಮಾತುಕತೆ ನಡೆಯುತ್ತಿದ್ದ ಸಮಯದಲ್ಲಿ ತಾನು ಸಿಎಂ ಆಗುವ ಆಸೆ ಸಿದ್ದರಾಮಯ್ಯನವರಲ್ಲಿ ಮತೆ ಕೊನರಿತ್ತು. ಗೌಡರು ಅಂದು ಮನಸ್ಸು ಮಾಡಿದ್ದರೆ ೨೦೦೪ರಲ್ಲಿ ತಾವು ಸಿಎಂ ಆಗುವುದು ಸಾಧ್ಯವಿತ್ತು ಎನ್ನುವುದು ಅವರಲ್ಲಿ ಅಳಿಸದೆ ಉಳಿದಿರುವ ನಂಬಿಕೆ. ಅವರು ಅದನ್ನು ಬಾಯಿಬಿಟ್ಟು ಹೇಳಿದ್ದೂ ಇದೆ. ಗೌಡರು ಅನ್ಯಾಯ ಮಾಡಿದರೆಂದು ಈಗಲೂ ಸಿದ್ದರಾಮಯ್ಯ ಹೇಳುತ್ತಿರುತ್ತಾರೆ. ಆಗ ಚಿಕ್ಕದಾಗಿದ್ದ ಗೌಡರೊಂದಿಗಿನ ರಾಜಕೀಯ ವೈಮನಸ್ಯ ಈಗ ಬಹುದೊಡ್ಡ ಹಗೆತನವಾಗಿ ರೂಪಾಂತರಗೊಂಡಿದೆ.

6. ಮನಸ್ಸು ಮುರಿದುಕೊಂಡಿದ್ದ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನವನ್ನು ತಾವೇ ರೂಪಿಸಿಕೊಳ್ಳಬೇಕೆಂಬ ತೀರ್ಮಾನಕ್ಕೆ ಬಂದ ಕ್ಷಣ ಅದಾಯಿತು. ಮೇಲ್ಜಾತಿ, ಪ್ರಬಲ ಜಾತಿ ರಾಜಕಾರಣಕ್ಕೆ ಪರ್ಯಾಯವಾದುದನ್ನು ಹುಟ್ಟು ಹಾಕುವ ಸಂಕಲ್ಪವನ್ನು ಅವರು ಮಾಡಿದರು. ಅದರ ಫಲಿತವೇ “ಅಹಿಂದʼ (ಅಲ್ಪ ಸಂಖ್ಯಾತರು, ಹಿಂದುಳಿದವರು, ದಲಿತರು). ಇಡೀ ರಾಜ್ಯದಲ್ಲಿ ಅಹಿಂದ ಸಂಘಟನೆಗೆ ಮಹತ್ವ ದೊರೆಯಲಾರಂಭವಾಯಿತು. ತುಸು ಹೆಚ್ಚೂ ಕಡಿಮೆ ಅದೇ ಸಮಯದಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಅಹಿಂದ ಸಮಾವೇಶ ಜರುಗಿತು. ಯು.ಆರ್.ಅನಂತಮೂರ್ತಿ ಅಲ್ಲಿ ಮಾಡಿದ ಭಾಷಣ ಸಂಘಟನೆಗೆ ಒಂದು ಸ್ಪಷ್ಟವಾದ ದಿಕ್ಸೂಚಿಯಾಗಿತ್ತು. ಸಿದ್ದರಾಮಯ್ಯ ಆ ಸಂದರ್ಭದಲ್ಲಿ ಹೇಳಿದ ಮಾತು “ಅನಂತಮೂರ್ತಿಯವರ ಈ ಭಾಷಣ ನಮಗೆ ಚುನಾವಣಾ ಪ್ರಣಾಳಿಕೆಯಾಗುವಂತಿದೆʼ. ಈ ಸಭೆ ಅಹಿಂದ ಸಮಾವೇಶಗಳನ್ನು ರಾಜ್ಯದ ಅಲ್ಲಲ್ಲಿ ಸಂಘಟಿಸುವುದಕ್ಕೆ ಮತ್ತಷ್ಟು ಉತ್ತೇಜನ ನೀಡಿತೆನ್ನಬೇಕು. ಪರ್ಯಾಯ ರಾಜಕೀಯಕ್ಕೆ ತಿದಿ ಕೊಡುವ ಯತ್ನಕ್ಕೆ ಸಿದ್ದರಾಮಯ್ಯ ಮತ್ತು ಅವರ ಸ್ವಾಮಿನಿಷ್ಟ ಅನುಯಾಯಿಗಳು ಮುಂದಾದರು. ಅಹಿಂದ ಸಮಾವೇಶಕ್ಕೂ ತಾವು ಇರುವ ಜನತಾ ದಳಕ್ಕೂ ಸಂಬಂಧವೇ ಇಲ್ಲ ಎಂಬಂತೆ ಸಿದ್ದರಾಮಯ್ಯ ನಡೆದುಕೊಳ್ಳಲಾರಂಭಿಸಿದ್ದು ಗೌಡರಿಗೆ ಸಮ್ಮತವಾಗಲಿಲ್ಲ. ಅಹಿಂದ ಸಮಾವೇಶಗಳಿಂದ ಗೌಡರನ್ನು ದೂರವೇ ಇಟ್ಟ ಸಿದ್ದರಾಮಯ್ಯ, ಪಕ್ಷದ ನಾಯಕತ್ವದ ಕಣ್ಣು ಕೆಂಪಾಗುವಂತೆ ಮಾಡಿದರು. ಅದರ ಫಲವೆಂದರೆ ಪಕ್ಷದಿಂದ ಉಚ್ಚಾಟನೆ. ಡಿಸಿಎಂ ಸ್ಥಾನ, ಶಾಸಕ ಸ್ಥಾನ ಸಿದ್ದರಾಮಯ್ಯನವರ ರಾಜಕೀಯ ಮಹತ್ವಾಂಕಾಕ್ಷೆಗೆ ಅಡ್ಡಿ ಬರಲಿಲ್ಲ. ಆ ದಿನಗಳಲ್ಲಿ ಸಿದ್ದರಾಮಯ್ಯ ಬಿಜೆಪಿಗೆ ಸೇರುವ ಯೋಚನೆಯಲ್ಲಿದ್ದಾರೆಂಬ ಮಾತೂ ಕೇಳಿ ಬಂದಿತ್ತು. ಆ ಸಂಬಂಧವಾಗಿ ಅವರ ಮತ್ತು ಬಿ.ಎಸ್.ಯಡಿಯೂರಪ್ಪ ನಡುವೆ ಮಾತುಕತೆ ನಡೆದಿರುವ ಮಾತೂ ವದಂತಿಯಾಗಿ ಹರಡಿತ್ತು.

7. ಗೌಡರನ್ನು ಹಣಿಯುವುದಕ್ಕೆ ಸಿದ್ದರಾಮಯ್ಯನವರನ್ನು ಬಳಸಿಕೊಳ್ಳುವ ಯೋಚನೆ ಸೋನಿಯಾ ಗಾಂಧಿಯವರಿಗೆ ಬಂದಿದ್ದೇ ತಡ, ಅದಕ್ಕೆ ವೇದಿಕೆ ಸಿದ್ಧವಾಯಿತು. ಆಗ ಕಾಂಗ್ರೆಸ್‌ನಲ್ಲಿದ್ದ ಎಚ್. ವಿಶ್ವನಾಥ್ ಜತೆಗೆ ಎಚ್.ಎಂ. ರೇವಣ್ಣ, ಎಚ್.ವೈ.ಮೇಟಿ, ಕಾಂಗ್ರೆಸ್‌ನತ್ತ ಸಿದ್ದರಾಮಯ್ಯನವರನ್ನು ಕೈಹಿಡಿದು ಕರೆತಂದರು. ಆದರೆ ಸಿದ್ದರಾಮಯ್ಯ ಇದಕ್ಕಾಗಿ ಈ ಮೂವರಿಗೆ ಕ್ರೆಡಿಟ್ ಕೊಡಲು ಒಪ್ಪುತ್ತಿಲ್ಲ! ಬೀದರ್‌ನ ಉದ್ಯಮಿಯೊಬ್ಬರು ಸೋನಿಯಾರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹ್ಮದ್ ಪಟೇಲರನ್ನು ಭೇಟಿ ಮಾಡಿಸಿ ಕಾಂಗ್ರೆಸ್ ಸೇರಲು ನೆರವಾದರು ಎನ್ನುವುದು ಅವರ ವಿವರಣೆ. ಅದೇನೇ ಇರಲಿ, ಕಾಂಗ್ರೆಸ್ ಸೇರಿದರು. ತಾವೇ ರಾಜೀನಾಮೆ ಕೊಟ್ಟಿದ್ದರಿಂದ ತೆರವಾಗಿದ್ದ ವರುಣಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಅಂತೂ ಇಂತೂ ಎಂಬಂತೆ ಗೆದ್ದರು. ಆ ವೇಳೆಗೆ ಧರ್ಮ ಸಿಂಗ್ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಂಡು, ಎಚ್.ಡಿ. ಕುಮಾರಸ್ವಾಮಿ ನೃತೃತ್ವದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಬಂದಿತ್ತು. ಸಂಪುಟಕ್ಕೆ ಸಂಪುಟವೇ ವರುಣಾ ಕ್ಷೇತ್ರದಲ್ಲಿ ಬೀಡುಬಿಟ್ಟು ಸಿದ್ದರಾಮಯ್ಯ ಸೋಲಿಗೆ ಶ್ರಮಿಸಿತ್ತು. ಆದರೆ ಜನ ಸಿದ್ದರಾಮಯ್ಯ ಕೈ ಹಿಡಿದರು.

8. ವಿಧಾನಸಭೆಯೊಳಗೆ ಕಾಂಗ್ರೆಸ್‌ನ ಅತ್ಯಂತ ಕಿರಿಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯನವರಲ್ಲಿ ಅಜೆಂಡಾ ನಿಚ್ಚಳವಾಗಿತ್ತು. ಆಗ ಅವರ ಮೊದಲ ಆಯ್ಕೆ ಆಗಿದ್ದು ವಿರೋಧ ಪಕ್ಷದ ನಾಯಕ ಸ್ಥಾನ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾತು ಕೇಳಿದ ಮಲ್ಲಿಕಾರ್ಜುನ ಖರ್ಗೆ ಅದನ್ನು ಸಿದ್ದರಾಮಯ್ಯನವರಿಗಾಗಿ ʼತ್ಯಾಗʼ ಮಾಡಿದರು. ಅವಧಿಗೆ ಮುನ್ನವೇ 2013ರ ಚುನಾವಣೆ ಬಂದು ಸಿದ್ದರಾಮಯ್ಯ ತಮ್ಮ ಕನಸಿನ ಸಿಎಂ ಸ್ಥಾನದಲ್ಲಿ ವಿರಾಜಮಾನರಾದರು. ಕಾಂಗ್ರೆಸ್‌ನ ಹಲವಾರು ಹಿರಿತಲೆಗಳನ್ನೆಲ್ಲ ಬದಿಗೊತ್ತಿ ಅವರನ್ನು ಸಿಎಂ ಮಾಡಿದ ಕ್ರಮಕ್ಕೆ ಬಹಿರಂಗ ಆಕ್ಷೇಪ ಬರಲಿಲ್ಲ. ಆದರೆ ಕ್ರಮೇಣವಾಗಿ ಮೂಲ ಕಾಂಗ್ರೆಸ್, ವಲಸೆ ಕಾಂಗ್ರೆಸ್ ಎಂಬ ಒಳಗುದಿ ಹೆಚ್ಚುತ್ತ ಹೋಯಿತು. ಈ ಒಳಗುದಿಯ ನಾಯಕರಾಗಿದ್ದವರು ಡಿ.ಕೆ.ಶಿವಕುಮಾರ್ ಎನ್ನುವುದನ್ನು ನೆನಪು ಮಾಡಿಕೊಳ್ಳಬೇಕು. ಈಗಲೂ ಅದು ಪಕ್ಷದ ಒಂದು ವಲಯದಲ್ಲಿ ಅಂತರ್ಗಾಮಿಯಾಗಿ ಸಾಗಿದೆ. ಈ ಬಣ ರಾಜಕೀಯ ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯನವರಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂಬ ಕನಸಿದೆ. ಅದಕ್ಕೆ ಇಂಬು ಕೊಡುವಂತೆ ಅವರ ಬೆಂಬಲಿಗರು ಒಂದಲ್ಲಾ ಒಂದು ಬಗೆಯ ಕಾರ್ಯಕ್ರಮವನ್ನೋ ಕಿತಾಪತಿಯನ್ನೋ ಮಾಡುತ್ತಿದ್ದಾರೆ. ಈಗ ನಡೆದಿರುವ ಸಿದ್ದರಾಮೋತ್ಸವ ಅವರಿಗೆ ಇರುವ ಜನ ಬೆಂಬಲವನ್ನು ತೋರಿಸುವ ಮತ್ತೊಂದು ಯತ್ನ. ಕೂಸು ಹುಟ್ಟುವುದಕ್ಕೆ ಮೊದಲೇ ಕುಲಾಯಿ ಸಿದ್ಧಪಡಿಸಿಕೊಂಡಿರುವ ರಾಜ್ಯ ಕಾಂಗ್ರೆಸ್‌ನ ಕೆಲವು ನಾಯಕರ ಆಸೆ ಆಕಾಂಕ್ಷೆಗಳಿಗೆ ಜನ ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ. ಪಕ್ಷದ ಹೈಕಮಾಂಡ್ ಇದನ್ನೆಲ್ಲ ಹೇಗೆ ನಿಭಾಯಿಸುತ್ತದೆ ಎನ್ನುವುದು ಕೂಡ ನಿಗೂಢ.

ಇದನ್ನೂ ಓದಿ | Siddaramotsava | ರಾರಾಜಿಸುತ್ತಿವೆ ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಬ್ಯಾನರ್‌, ಕಟೌಟ್‌ಗಳು

Exit mobile version