Site icon Vistara News

Justice B V Nagarathna | ಇತಿಹಾಸ ಸೃಷ್ಟಿಸಲಿದ್ದಾರೆ ಭಿನ್ನ ವ್ಯಕ್ತಿತ್ವದ ಕನ್ನಡತಿ ಜಸ್ಟೀಸ್ ಬಿ.ವಿ ನಾಗರತ್ನ!

Justice B V Nagarathna @ Supreme Court

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ ವಿ ನಾಗರತ್ನ (Justice B V Nagarathna) ಅವರು ಎರಡು ಪ್ರತ್ಯೇಕ ಪ್ರಮುಖ ಪ್ರಕರಣಗಳಲ್ಲಿ ಭಿನ್ನ ತೀರ್ಪು ನೀಡುವ ಮೂಲಕ ಕಳೆದ ಎರಡು ದಿನದಿಂದ ಸುದ್ದಿಯಲ್ಲಿದ್ದಾರೆ. 2016ರಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯ ಮಾಡಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ದಾಖಲಾಗಿದ್ದ ಎಲ್ಲ ಪ್ರಕರಣಗಳ ವಿಚಾರಣೆಗೆ ನೇಮಕವಾಗಿದ್ದ ಪಂಚಪೀಠದಲ್ಲಿ ಇವರೂ ಇದ್ದರು. ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ರಚಿಸಿದ್ದ ಐವರ ನ್ಯಾಯಮೂರ್ತಿಗಳ ಪೀಠದಲ್ಲೂ ಒಬ್ಬರಾಗಿದ್ದರು. ಆದರೆ, ಈ ಎರಡೂ ಪ್ರಕರಣಗಳಲ್ಲಿ ಅವರು ‘ಭಿನ್ನ’ ತೀರ್ಪು ನೀಡಿ, ಗಮನ ಸೆಳೆದಿದ್ದಾರೆ.

60 ವರ್ಷದ ಜಸ್ಟೀಸ್ ಬಿ.ವಿ.ನಾಗರತ್ನ ಅವರು ಕರ್ನಾಟಕದ ಹೆಣ್ಣುಮಗಳು; ಕನ್ನಡತಿ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಎಂದರೆ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕರ್ನಾಟಕದ ಮೊದಲ ವ್ಯಕ್ತಿ ಇ ಎಸ್ ವೆಂಕಟರಾಮಯ್ಯ ಅವರ ಪುತ್ರಿ. ಈಗ, ವೇಳಾಪಟ್ಟಿಯಂತೆ ನಡೆದರೆ ತಂದೆಯಂತೆ ಮಗಳು ಇತಿಹಾಸವನ್ನು ಬರೆಯಲಿದ್ದಾರೆ. 2027ರಲ್ಲಿ ಅವರು ಭಾರತದ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಅವರ ಅಧಿಕಾರಾವಧಿ ಕೇವಲ 36 ದಿನಗಳವರೆಗೆ ಇರಲಿದೆ. ಆದರೆ, ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಗೌರವವಂತೂ ದೊರೆಯಲಿದೆ.

ನಾಗರತ್ನ ಅವರು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ 1962ರ ಅಕ್ಟೋಬರ್ 30ರಂದು ಜನಿಸಿದರು. ತಂದೆ ಎಂಗಳಗುಪ್ಪೆ ಸೀತಾರಾಮಯ್ಯ ವೆಂಕಟರಾಮಯ್ಯ(19 ಜೂನ್ 1989ರಿಂದ 18 ಡಿಸೆಂಬರ್ 1989). ಇವರು ಕೂಡ ಸುಪ್ರೀಂ ಕೋರ್ಟ್‌ನ 19ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಬೆಂಗಳೂರಿನ ಸೋಫಿಯಾ ಮತ್ತು ದಿಲ್ಲಿಯ ಭಾರತೀಯ ವಿದ್ಯಾಭವನ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ನಾಗರತ್ನ ಅವರು ಪೂರೈಸಿದರು. ಬಳಿಕ ಜೀಸಸ್ ಆ್ಯಂಡ್ ಮೇರಿ ಕಾಲೇಜ್‌ನಿಂದ ಪದವಿ ಪಡೆದುಕೊಂಡು, ದಿಲ್ಲಿ ವಿವಿಯ ಫ್ಯಾಕಲ್ಟಿ ಆಫ್ ಲಾ‌ದಿಂದ ಎಲ್ಎಲ್‌ಬಿ ಕಾನೂನು ಪದವಿ ಗಳಿಸಿಕೊಂಡರು.

ಕಾನೂನು ಪದವಿ ಶಿಕ್ಷಣ ಪಡೆದುಕೊಂಡ ಬಳಿಕ ನಾಗರತ್ನ ಅವರು, 1987ರಲ್ಲಿ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಕೊಂಡು ವಕೀಲಿಕೆಯನ್ನು ಆರಂಭಿಸಿದರು. ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕವಾಗುವ ಮುಂಚೆ ಅವರು, ಬೆಂಗಳೂರಲ್ಲಿ ಕಮರ್ಷಿಯಲ್ ಲಾ ಪ್ರ್ಯಾಕ್ಟಿಸ್ ಮಾಡುತ್ತಿದ್ದರು. 2008ರಲ್ಲಿ ಅವರನ್ನು ಹೈಕೋರ್ಟ್‌ಗೆ ಹಂಗಾಮಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. ಮುಂದೆ 2010ರ ಫೆಬ್ರವರಿ 17ರಂದು ಕಾಯಂ ನ್ಯಾಯಮೂರ್ತಿಯಾದರು.

ಇದನ್ನೂ ಓದಿ | Supreme Court | ಸಚಿವರ ಹೇಳಿಕೆ ಸರ್ಕಾರದ ಹೇಳಿಕೆಯಲ್ಲ! ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯಕ್ಕೆ ಹೆಚ್ಚಿನ ನಿರ್ಬಂಧ ಇಲ್ಲ: ಸುಪ್ರೀಂ ಕೋರ್ಟ್

2020ರಲ್ಲಿ ಮೇ ತಿಂಗಳಲ್ಲಿ ನಾಗರತ್ನ ಅವರನ್ನು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ಭಡ್ತಿ ನೀಡಲಾಗುತ್ತಿದೆ ಎಂಬ ವರದಿಗಳು ಶುರುವಾದವು. ಆಗಲೇ ಮಾಧ್ಯಮಗಳಲ್ಲಿ, ನಾಗರತ್ನ ಅವರನ್ನು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡಿದರೆ, ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆಂಬ ಚರ್ಚೆಯೂ ಜೋರಾಗಿಯೇ ನಡೆಯಿತು. ಈ ಸುದ್ದಿಗಳ ಮಧ್ಯೆಯೇ 2021ರ ಆಗಸ್ಟ್ 26ರಂದು ಜಸ್ಟೀಸ್ ನಾಗರತ್ನ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. ಒಂದೊಮ್ಮೆ, ನಾಗರತ್ನ ಅವರು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾದರೆ, ತಂದೆ-ಮಕ್ಕಳು ಚೀಫ್ ಜಸ್ಟೀಸ್ ಹುದ್ದೆಗೇರಿದ ಸಾಧನೆ ಮಾಡಿದ ಎರಡನೇ ವ್ಯಕ್ತಿಯಾಗಲಿದ್ದಾರೆ.

ನಿನ್ನೆ(ಜ.2) ನೋಟು ಅಮಾನ್ಯ ಸಿಂಧುತ್ವ ಮತ್ತು ಇಂದು(ಜ.4) ಜನಪ್ರತಿನಿಧಿಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧ ಕುರಿತು ನೀಡಿದ ಎರಡೂ ಭಿನ್ನ ತೀರ್ಪುಗಳು ಜತೆಗೆ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಹಲವು ಪ್ರಮುಖ ತೀರ್ಪುಗಳನ್ನು ಬಿ. ವಿ. ನಾಗರತ್ನ ಅವರು ನೀಡಿದ್ದಾರೆ. ಸುದ್ದಿಯ ವೈಭವೀಕರಣ, ವಾಹನ ತೆರಿಗೆ, ದೇವಸ್ಥಾನಗಳಿಗೆ ವಾಣಿಜ್ಯೇತರ ಸ್ಥಾನಮಾನ, ಖಾಸಗಿ ಸಂಸ್ಥೆಗಳಿಗೆ ಸ್ವಾಯತ್ತ ಸ್ಥಾನಮಾನ, ನ್ಯಾಯವಾದಿಗಳ ವಶ ಮತ್ತು ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಸಂದರ್ಭದಲ್ಲಿ ಶಿಕ್ಷಣದ ಸ್ಥಿತಿ ಕುರಿತು ಜಸ್ಟೀಸ್ ಬಿ. ವಿ. ನಾಗರತ್ನ ಅವರು ತೀರ್ಪು ನೀಡಿ, ಗಮನ ಸೆಳೆದಿದ್ದಾರೆ.

ಶಾಂತ ಸ್ವಭಾವ ಜಸ್ಟೀಸ್ ಬಿ. ವಿ. ನಾಗರತ್ನ ಅವರು ಕಾನೂನು ಪಾಂಡಿತ್ಯ, ಪ್ರವೀಣರು. ಅವರು ತೀರ್ಪುಗಳಲ್ಲಿ ಸಂವೇದನೆಯನ್ನು ಕಾಣಬಹುದು. ಈ ಜಗತ್ತಿನಲ್ಲಿ ಯಾವುದೇ ಮಗು ತಂದೆ ಮತ್ತು ತಾಯಿ ಇಲ್ಲದೇ ಜನಿಸುವುದಿಲ್ಲ. ಮಗು ತನ್ನ ಹುಟ್ಟಿನಲ್ಲಿ ಯಾವುದೇ ಪಾತ್ರ ನಿರ್ವಹಿಸಲು ಸಾಧ್ಯವಿಲ್ಲ. ಹಾಗಾಗಿ, ಕಾನೂನು ಈ ಸಂಗತಿಯನ್ನು ಗುರುತಿಸಬೇಕು. ಅಕ್ರಮ ತಂದೆ ತಾಯಿ ಇರಬಹುದೇನೋ ಆದರೆ, ಅಕ್ರಮದ ಮಗು ಇರುವುದಿಲ್ಲ ಎಂದು ನ್ಯಾ. ನಾಗರತ್ನ ಅವರು ಪ್ರಕರಣವೊಂದರ ತೀರ್ಪು ಸಂಬಂಧ ಹೇಳಿದ್ದರು. ಇದು ಅವರ ಸಂವೇದನಾಶೀಲತೆಗೆ ಸಾಕ್ಷಿ. ಜಸ್ಟೀಸ್ ಬಿ. ವಿ. ನಾಗರತ್ನ ಅವರ ಪತಿಯ ಹೆಸರು ಬಿ.ಎನ್. ಗೋಪಾಲಕೃಷ್ಣ. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನಯನತಾರಾ ಬಿ ಜಿ. ಇವರೂ ಕೂಡ ವಕೀಲರು. ಮತ್ತೊಬ್ಬ ಮಗಳ ಹೆಸರು ಪ್ರೇರಣಾ ಬಿ ಜಿ. ಕನ್ನಡದ ಹೆಣ್ಣುಮಗಳೊಬ್ಬರು ಸುಪ್ರೀಂ ಕೋರ್ಟ್‌ನ ಉನ್ನತ ಸ್ಥಾನವನ್ನು ಅಲಂಕರಿಸುವ ಗಳಿಗೆಗೆ ಕರ್ನಾಟಕವು ಕಾತರದಿಂದ ಕಾಯುತ್ತಿದೆ.

ಪಾಂಡವಪುರದ ಇಂಗಳಗುಪ್ಪೆಯಲ್ಲಿರುವ ಜಸ್ಟೀಸ್ ಬಿ ವಿ ನಾಗರತ್ನ ಅವರ ಮನೆ.

ಇದನ್ನೂ ಓದಿ | Demonetisation verdict | ಮೋದಿ ಸರ್ಕಾರದ ನೋಟು ಅಮಾನ್ಯತೆ ವಿರುದ್ಧ ನ್ಯಾಯಮೂರ್ತಿ ಬಿವಿ ನಾಗರತ್ನ ಹೇಳಿದ್ದೇನು?

Exit mobile version