Site icon Vistara News

ವಾರದ ವ್ಯಕ್ತಿಚಿತ್ರ: ಅದಾನಿ ಷೇರು ಕುಸಿತಕ್ಕೆ ಕಾರಣವಾದ ಹಿಂಡೆನ್‌ಬರ್ಗ್‌ ಸ್ಥಾಪಕ ನಾಥನ್ ಆ್ಯಂಡರ್ಸನ್‌ ಯಾರು?

Who is Nathan Anderson, the founder of Hindenburg?

#image_title

ಕೇಶವ ಪ್ರಸಾದ್‌ ಬಿ. ಬೆಂಗಳೂರು.

ಹಿಂಡೆನ್‌ಬರ್ಗ್‌ ರೀಸರ್ಚ್‌ (Hindenburg Research) ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಕಂಪನಿ. ಇದೇ ಜನವರಿ ೨೪ರಿಂದ ಭಾರತದಲ್ಲಿ ಇದು ಸುದ್ದಿಯಲ್ಲಿದೆ. ಷೇರು ಮಾರುಕಟ್ಟೆ ಹಾಗೂ ಕಾರ್ಪೊರೇಟ್‌ ವಲಯದಲ್ಲಿ ಎಲ್ಲರೂ ಹಿಂಡೆನ್‌ಬರ್ಗ್‌, ಅದಾನಿ ಗ್ರೂಪ್‌ ಮೇಲೆ ನಡೆಸಿರುವ ದಾಳಿಯ ಬಗ್ಗೆ ಚರ್ಚಿಸುತ್ತಿದ್ದಾರೆ. ಹಿಂಡೆನ್‌ ಬರ್ಗ್‌ 32,000 ಪದಗಳ ವರದಿಯನ್ನು ಪ್ರಕಟಿಸಿದ ಬಳಿಕ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ 11.8 ಲಕ್ಷ ಕೋಟಿ ರೂ. ಕರಗಿದೆ. ಅದಾನಿ ಗ್ರೂಪ್‌ನ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 8 ಲಕ್ಷ ಕೋಟಿ ರೂ.ಗಳ ಭಾರಿ ನಷ್ಟವಾಗಿದೆ. ಬ್ಯಾಂಕ್‌ಗಳ ಷೇರುಗಳೂ ಮುಗ್ಗರಿಸಿವೆ. ಹೀಗಾಗಿ ಹೂಡಿಕೆದಾರರು ಕೂಡ ಮುಂದೇನು (Hindenburg founder) ಎಂಬ ತೀವ್ರ ಕಳವಳದಲ್ಲಿದ್ದಾರೆ.

ಮತ್ತೊಂದು ಕಡೆ ಅದಾನಿ ಗ್ರೂಪ್‌‌ (Adani group) ವಿರುದ್ಧ ಮತ್ತು ಹಿಂಡೆನ್‌ ಬರ್ಗ್‌ ಆರೋಪಗಳನ್ನು ಮುಂದುವರಿಸಿದೆ. ಅದಾನಿ ಗ್ರೂಪ್‌ ಷೇರುಗಳು ವಾಸ್ತವಿಕ ಬೆಲೆಗಿಂತ 80% ಹೆಚ್ಚು ಕೃತಕ ಬೆಲೆಯಲ್ಲಿ ಮಾರಾಟವಾಗುತ್ತಿವೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹ ನಡೆಸಿರುವ ಅವ್ಯವಹಾರಗಳೇ ಇದಕ್ಕೆ ಕಾರಣ ಎಂದು ಹಿಂಡೆನ್‌ಬರ್ಗ್‌ ದೂರಿದೆ. ಇದಕ್ಕೆ ಪ್ರತಿಯಾಗಿ ಅದಾನಿ ಗ್ರೂಪ್‌ 413 ಪುಟಗಳ ಪ್ರತಿಕ್ರಿಯೆ ನೀಡಿದೆ. ಹಿಂಡೆನ್‌ ಬರ್ಗ್‌ ವರದಿ ಕೇವಲ ಅದಾನಿ ಗ್ರೂಪ್‌ ಮೇಲೆ ನಡೆಸಿರುವ ದಾಳಿ ಮಾತ್ರವಲ್ಲ, ಭಾರತದ ಸಮಗ್ರತೆಯ ಮೇಲೆ ನಡೆಸಿದ ದಾಳಿ ಎಂದು ಹೇಳಿದೆ. ಆದರೆ ಅದು ಕೂಡ ಸರಿ ಇಲ್ಲ ಎಂದು ಹಿಂಡೆನ್‌ಬರ್ಗ್‌ ಆರೋಪಿಸಿದೆ. ಹಾಗಾದರೆ ಇಂಥ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಹಿಂಡೆನ್‌ಬರ್ಗ್‌ ರಿಸರ್ಚ್‌ನ ಸ್ಥಾಪಕ ನಾಥನ್ ಆ್ಯಂಡರ್ಸನ್‌ ಅಂದರೆ ಯಾರು?

ನಾಥನ್ ಆ್ಯಂಡರ್ಸನ್‌ ಹಿನ್ನೆಲೆ ಏನು?

ನಾಥನ್ ಆ್ಯಂಡರ್ಸನ್‌ ಒಬ್ಬ ಚಾರ್ಟರ್ಡ್‌ ಅಕೌಂಟೆಂಟ್. (CFA, CAIA) ವಯಸ್ಸು 38 ವರ್ಷ. ಅಮೆರಿಕದ ಕನೆಕ್ಟಿಕಟ್‌ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಬಿಸಿನೆಸ್‌ ಬಗ್ಗೆ ಪದವಿ ಪೂರ್ಣಗೊಳಿಸಿದ್ದಾರೆ. ‌ ಮೊದಲಿನಿಂದಲೂ ದೊಡ್ಡ ಪ್ರಶ್ನೆಗಳನ್ನು ಮುಂದಿಡುತ್ತಿದ್ದರು. ವಾಲ್‌ ಸ್ಟ್ರೀಟ್‌ ನಿಯತಕಾಲಿಕೆಯ ಬ್ಯಾಡ್‌ ಬೆಟ್ಸ್‌ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಆ್ಯಂಡರ್ಸನ್‌, ಬುಕ್‌ ಆಫ್‌ ಗಿನ್ನೆಸ್‌ನ ಪದ್ಧತಿ ಆಧುನಿಕ ವಿಕಾಸದ ಥಿಯರಿಗೆ ಹೊಂದುವುದಿಲ್ಲ ಎಂದು ಬಾಲ್ಯದಲ್ಲೇ ವಾದಿಸಿದ್ದ ಸಂಗತಿಯನ್ನು ವಿವರಿಸಿದ್ದರು.

ಆ್ಯಂಡರ್ಸನ್‌ 2004 ಮಾರ್ಚ್ ಮತ್ತು 2005 ಜನವರಿ ನಡುವೆ ಇಸ್ರೇಲಿನ ಮಾಧ್ಯಮ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಬಳಿಕ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು. ಕ್ಲಾರಿಟಿಸ್ಪ್ರಿಂಗ್‌ ಎಂಬ ಹಣಕಾಸು ಕಂಪನಿಯನ್ನು ಸ್ಥಾಪಿಸಿದ್ದರು. ಬಳಿಕ 2018ರಲ್ಲಿ ಹಿಂಡೆನ್‌ ಬರ್ಗ್‌ ರೀಸರ್ಚ್‌ ಸಂಸ್ಥೆಯನ್ನು ಹುಟ್ಟು ಹಾಕಿದರು. ಇಸ್ರೇಲಿನಲ್ಲಿ ಹಣಕಾಸು ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಮುನ್ನ ಕೆಲ ಕಾಲ ಆಂಬ್ಯುಲೆನ್ಸ್‌ ಚಾಲಕನಾಗಿಯೂ ಸೇವೆಯಲ್ಲಿದ್ದರು.

ಆ್ಯಂಡರ್ಸನ್‌ ಅವರ ಲಿಂಕ್ಡ್‌ ಇನ್‌ ಪ್ರೊಫೈಲ್‌ ಪ್ರಕಾರ, ಹಿಂಡೆನ್‌ ಬರ್ಗ್‌ ರಿಸರ್ಚ್‌ ಹಣಕಾಸು ಕುರಿತ ವಿಧಿ ವಿಜ್ಞಾನದಲ್ಲಿ ಪರಿಣತಿ ಗಳಿಸಿದೆ. ಈಕ್ವಿಟಿ, ಕ್ರೆಡಿಟ್‌, ಡಿರೈವಟಿಸ್‌ಗಳ ಬಗ್ಗೆ ಸಂಶೋಧನೆ ನಡೆಸುತ್ತೇವೆ ಎನ್ನುತ್ತಾರೆ ಅವರು. ಕ್ವಿಂಟೆಸ್ಸೆನ್ಷಿಯಲ್‌ ಕ್ಯಾಪಿಟಲ್‌ ಮ್ಯಾನೇಜ್‌ಮೆಂಟ್‌ನ ಸ್ಥಾಪಕ ಗ್ಯಾಬ್ರಿಯೆಲ್‌ ಗ್ರೊಗೊ ಪ್ರಕಾರ ಆ್ಯಂಡರ್ಸನ್‌ ಬುದ್ಧಿವಂತ, ಹಾಸ್ಯಪ್ರಜ್ಞೆ ಇರುವ ವ್ಯಕ್ತಿ. ಅತ್ಯಂತ ವೇಗವಾಗಿ ಕೆಲಸ ಮಾಡಬಲ್ಲ.

2020ರಲ್ಲಿ ಎಲೆಕ್ಟ್ರಿಕ್‌ ವಾಹನ ಉತ್ಪಾದಕ ನಿಕೋಲಾ ತಂತ್ರಜ್ಞಾನವನ್ನು ತಪ್ಪಾಗಿ ಪ್ರತಿನಿಧಿಸಿದೆ, ಕಾನೂನು ಉಲ್ಲಂಘಿಸಿದೆ ಎಂದು ಆರೋಪಿಸುವ ವರದಿ ಮೂಲಕ ಆ್ಯಂಡರ್ಸನ್‌ ಸುದ್ದಿಯಾಗಿದ್ದರು. ಬಳಿಕ ಅಮೆರಿಕದ ತನಿಖಾ ಸಂಸ್ಥೆಗಳು ನಿಕೋಲಾದ ಸ್ಥಾಪಕ ಟ್ರೆವರ್‌ ಮಿಲ್ಟನ್‌ನನ್ನು ಬಂಧಿಸಿತ್ತು. ಭ್ರಷ್ಟಾಚಾರ ಸಾಬೀತಾಗಿತ್ತು. ಕಂಪನಿಯ ವಿಶಲ್‌ಬ್ಲೋವರ್ಸ್‌ ತಮಗೆ ಸಹಕರಿಸಿದರು ಎಂದು ಆ್ಯಂಡರ್ಸನ್‌ ಹೇಳಿದ್ದರು.

ಹಿಂಡೆನ್‌ಬರ್ಗ್‌ ಹೆಸರು ಹೇಗೆ ಬಂತು?

ರೈಟ್‌ ಸೋದರರು ವಿಮಾನ ಕಂಡು ಹಿಡಿಯುವುದಕ್ಕೆ ಮೊದಲು ಹೈಡ್ರೋಜನ್‌ ತುಂಬಿದ ದೊಡ್ಡ ಬಲೂನನ್ನು ಹೊಂದಿರುವ ಏರ್‌ಶಿಪ್‌ ಮೂಲಕ ಹಾರಾಟ ನಡೆಸುವ ವ್ಯವಸ್ಥೆ ಯುರೋಪ್‌ನಲ್ಲಿತ್ತು. ಹಿಂಡೆನ್‌ಬರ್ಗ್‌ ಎಂಬುದು ಅಂಥ ಏರ್‌ಶಿಪ್‌ ಒಂದರ ಹೆಸರು. ಜರ್ಮನಿಯ ಕಂಪನಿಯೊಂದು ಹಿಂಡೆನ್‌ ಬರ್ಗ್‌ ವಿಮಾನವನ್ನು ಜರ್ಮನಿಯ ಫ್ರಾಂಕ್‌ ಫರ್ಟ್‌ನಿಂದ ಅಮೆರಿಕದ ನ್ಯೂಜೆರ್ಸಿಗೆ ಹಾರಾಟ ನಡೆಸಿತ್ತು. 1937ರ ಮೇನಲ್ಲಿ ನಡೆದ ಈ ಹಾರಾಟ ಭೀಕರ ದುರಂತದಲ್ಲಿ ಅಂತ್ಯವಾಯಿತು. ಹೇಳಿ ಕೇಳಿ ಹೈಡ್ರೋಜನ್‌ ಅತ್ಯಂತ ದಹನಶೀಲ ಅನಿಲ. ಬಲು ಅಪಾಯಕಾರಿ. ಬಲೂನ್‌ ವಿಮಾನ ಕೆಳಗೆ ಇಳಿಯುವಾಗ ಏನೋ ಅವಘಡಕ್ಕೀಡಾಗಿ ಹಿಂಡನ್‌ ಬರ್ಗ್‌ ಏರ್‌ಶಿಪ್‌ಗೆ ಬೆಂಕಿ ಹತ್ತಿಕೊಂಡು ಕೆಲವೇ ಕ್ಷಣಗಳಲ್ಲಿ ಎಲ್ಲರೂ ನೋಡನೋಡುತ್ತಿದ್ದಂತೆಯೇ ಭಸ್ಮವಾಯಿತು. ಅದರಲ್ಲಿದ್ದ ಸುಮಾರು 90 ಜನರ ಪೈಕಿ 36 ಮಂದಿ ಸಜೀವ ದಹನವಾದರು. ಈ ದುರಂತದ ಬಳಿಕ ಹಿಂಡೆನ್‌ ಬರ್ಗ್‌ ಏರ್‌ಶಿಪ್‌ಗಳ ಹಾರಾಟವನ್ನು ಬಂದ್‌ ಮಾಡಲಾಯಿತು. ಈ ಹಿಂಡೆನ್‌ಬರ್ಗ್‌ ಅವಘಡ ಮಾನವ ನಿರ್ಮಿತ ದುರಂತ ಎಂದು ಕುಖ್ಯಾತಿ ಗಳಿಸಿದೆ. ಇದೇ ಹೆಸರನ್ನು ಆ್ಯಂಡರ್ಸನ್‌ ತಮ್ಮ ಕಂಪನಿಗೂ ಇಟ್ಟಿದ್ದಾರೆ. ನಾವು ಹಣಕಾಸು ಜಗತ್ತಿನಲ್ಲಿ ಹಿಂಡನ್‌ ಬರ್ಗ್‌ ಮಾದರಿಯ ಮಾನವ ನಿರ್ಮಿತ ದುರಂತಗಳನ್ನು ಪತ್ತೆ ಹೆಚ್ಚುತ್ತೇವೆ. ಅನುಮಾನಾಸ್ಪದ ಚಟುವಟಿಕೆಗಳು, ಅವ್ಯವಹಾರ, ಭ್ರಷ್ಟಾಚಾರಗಳ ಬಗ್ಗೆ ಸಂಶೋಧನೆ ನಡೆಸುತ್ತೇವೆ ಎನ್ನುತ್ತದೆ ಕಂಪನಿಯ ವೆಬ್‌ಸೈಟ್.

ಹಿಂಡೆನ್‌ ಬರ್ಗ್‌ ಈ ಹಿಂದೆ 2020ರಲ್ಲಿ ಅಮೆರಿಕದ ನಿಕೋಲಾ ಆಟೊಮೊಬೈಲ್‌ ಕಂಪನಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವರದಿ ಪ್ರಕಟಿಸಿದ ಬಳಿಕ ಕಂಪನಿಯ ಸ್ಥಾಪಕ ಟ್ರೆವರ್‌ ಮಿಲ್ಟನ್‌ ರಾಜೀನಾಮೆ ಸಲ್ಲಿಸಿದ್ದರು. ಚೀನಾದ ವಿನ್ಸ್‌ ಫೈನಾನ್ಸ್‌, ಚೀನಾ ಮೆಟಲ್‌ ರಿಸೋರ್ಸಸ್‌ ಯುಟಿಲೈಸೇಶನ್‌ ಸೇರಿದಂತೆ ಹತ್ತಾರು ಕಂಪನಿಗಳ ವಿರುದ್ಧ ವರದಿಗಳನ್ನು ಪ್ರಕಟಿಸಿದೆ. ಟೆಸ್ಲಾ ಕಂಪನಿಯೂ ತನ್ನ ತಂತ್ರಜ್ಞಾನದ ಬಗ್ಗೆ ಸುಳ್ಳು ಹೇಳಿದೆ ಎಂದು ಆರೋಪಿಸಿತ್ತು. ಕೊನೆಗೆ ಟೆಸ್ಲಾ ಅಮೆರಿಕದ ಸೆಕ್ಯುರಿಟೀಸ್‌ & ಎಕ್ಸ್‌ಚೇಂಜ್‌ ಕಮೀಶನ್‌ನಲ್ಲಿ 125 ದಶಲಕ್ಷ ಡಾಲರ್‌ ಕೊಟ್ಟು ಭ್ರಷ್ಟಾಚಾರ ಆರೋಪಗಳನ್ನು ಇತ್ಯರ್ಥಪಡಿಸಿತ್ತು. ಅದಾನಿ ಗ್ರೂಪ್‌ ಅಮೆರಿಕದ ಕೋರ್ಟ್‌ನಲ್ಲಿ ಬೇಕಾದರೆ ಕೋರ್ಟ್‌ ಕೇಸ್‌ ದಾಖಲಿಸಲಿ ಎಂದು ಹಿಂಡೆನ್‌ ಬರ್ಗ್‌ ಸವಾಲು ಹಾಕಿದೆ.

10ಕ್ಕಿಂತಲೂ ಕಡಿಮೆ ಉದ್ಯೋಗಿಗಳು, ವೆಬ್‌ಸೈಟ್‌ನಲ್ಲಿ ವಿಳಾಸ ಇಲ್ಲ

ನ್ಯೂಯಾರ್ಕ್‌ ಮೂಲದ ಹಿಂಡನ್‌ ಬರ್ಗ್‌ ಸಂಸ್ಥೆಯ ಬಗ್ಗೆ ಹೆಚ್ಚಿನ ವಿವರಗಳು ಅದರ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ವರದಿಗಳ ಪ್ರಕಾರ ಹತ್ತಕ್ಕೂ ಕಡಿಮೆ ಉದ್ಯೋಗಿಗಳನ್ನು ಅದು ಹೊಂದಿದೆ. ಹೀಗಾಗಿ ಸ್ವತಃ ಹಿಂಡೆನ್‌ಬರ್ಗ್‌ ವಿರುದ್ಧವೂ ಆರೋಪಗಳಿವೆ. ಗೌತಮ್‌ ಅದಾನಿಯವರ ಏಳಿಗೆಯನ್ನು ಸಹಿಸಲಾಗದೆ ಸುಳ್ಳು ಆರೋಪಗಳನ್ನು ಪ್ರಕಟಿಸಿ, ಷೇರುಗಳನ್ನು ಕುಸಿಯುವಂತೆ ಮಾಡಲಾಗಿದೆ ಎಂಬ ದೂರೂ ಇದೆ. ಆದರೆ ಅದಾನಿ ಗ್ರೂಪ್‌ ವಿರುದ್ಧದ ವರದಿಯಲ್ಲಿ ಹಿಂಡೆನ್‌ ಬರ್ಗ್‌ ತಾನು ಶಾರ್ಟ್‌ ಸೆಲ್ಲಿಂಗ್‌ ಮಾಡಿರುವುದಾಗಿ ತಿಳಿಸಿದೆ. ಆದರೆ ಎಷ್ಟು ಮೊತ್ತಕ್ಕೆ ಮಾಡಿರುವುದಾಗಿ ಬಹಿರಂಗಪಡಿಸಿಲ್ಲ. ಹಾಗಾದರೆ ಏನಿದು ಶಾರ್ಟ್‌ ಸೆಲ್ಲಿಂಗ್?‌

ಶಾರ್ಟ್‌ ಸೆಲ್ಲಿಂಗ್‌ ಒಂದು ಹೂಡಿಕೆಯ ಕಾರ್ಯತಂತ್ರ. ಮಾರುಕಟ್ಟೆಯಲ್ಲಿ ಒಂದು ಷೇರು ಅಥವಾ ಬಾಂಡ್‌ಗಳ ದರ ಇಂತಿಷ್ಟು ಮಟ್ಟಕ್ಕೆ ಕುಸಿಯಲಿದೆ ಎಂದು ಮೊದಲೇ ಗುರುತಿಸಿ, ಆ ದರಕ್ಕೆ ಕುಸಿದಾಗ ತಾನೇ ಖರೀದಿಸುವುದಾಗಿ ಒಪ್ಪಂದ ಮಾಡಿಕೊಂಡು ಷೇರುಗಳನ್ನು ಹಾಲಿ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುವುದು. ಉದಾಹರಣೆಗೆ 100 ರೂ. ದರದ ಷೇರನ್ನು 50 ರೂ.ಗೆ ಕುಸಿಯಲಿದೆ ಎಂದು ಶಾರ್ಟ್‌ ಪೊಸಿಶನ್‌ ಮಾಡಿ ಮಾರಾಟ ಮಾಡುವುದು. 50 ರೂ.ಗೆ ಕುಸಿದಾಗ ಖರೀದಿಸುವುದು. ಆಗ ಶಾರ್ಟ್‌ ಸೆಲ್ಲರ್‌ಗೆ 50 ರೂ. ಲಾಭವಾಗುತ್ತದೆ. ಆದರೆ ಒಂದು ವೇಳೆ ಷೇರು ದರ ಕುಸಿಯದೆ 150 ರೂ.ಗೆ ಏರಿದರೆ, ಶಾರ್ಟ್‌ ಸೆಲ್ಲರ್‌ಗೆ 50 ರೂ. ನಷ್ಟವೂ ಆಗಬಹುದು. ಆದ್ದರಿಂದ ಷೇರು ದರ ಕುಸಿದಾಗ ಶಾರ್ಟ್‌ ಸೆಲ್ಲರ್‌ಗಳು ಲಾಭ ಗಳಿಸುತ್ತಾರೆ. ಹಿಂಡೆನ್‌ ಬರ್ಗ್‌ ಇದೀಗ ಅದಾನಿ ಗ್ರೂಪ್‌ ಕಂಪನಿಗಳ ಷೇರು ದರ ಕುಸಿತದ ಹಿನ್ನೆಲೆಯಲ್ಲಿ ಲಾಭ ಮಾಡಿಕೊಂಡಿದೆ ಎಂಬ ಗುಮಾನಿ ಇದೆ. ಸುಪ್ರೀಂಕೋರ್ಟ್‌ನಲ್ಲಿ ವಕೀಲ ಎಂಎಲ್‌ ಶರ್ಮಾ ಅವರು ಹಿಂಡೆನ್‌ ಬರ್ಗ್‌ ವಿರುದ್ಧ ಇದೀಗ ತನಿಖೆಗೆ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಶಾರ್ಟ್‌ ಸೆಲ್ಲಿಂಗ್‌ ಮೂಲಕ ಷೇರು ಮಾರುಕಟ್ಟೆಯಲ್ಲಿ ಅಮಾಯಕ ಹೂಡಿಕೆದಾರರನ್ನು ಭೀತಿಗೆ ಒಳಪಡಿಸಿ ಷೇರು ದರ ಕುಸಿಯುವಂತೆ ಮಾಡಿ, ಹಿಂಡೆನ್‌ ಬರ್ಗ್‌ ದುರ್ಲಾಭ ಮಾಡಿಕೊಂಡಿದೆ. ಹೀಗಾಗಿ ಶಾರ್ಟ್‌ ಸೆಲ್ಲಿಂಗ್‌ ಅನ್ನು ಅಕ್ರಮ ಎಂದು ಪರಿಗಣಿಸಬೇಕು ಎಂದು ಎಂಎಲ್‌ ಶರ್ಮಾ ಕೋರಿದ್ದಾರೆ. ಆ್ಯಂಡರ್ಸನ್‌ ನಿಂದ ಪರಿಹಾರ ವಸೂಲಿ ಮಾಡಿ ಹೂಡಿಕೆದಾರರಿಗೆ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಮೆರಿಕದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ಬರ್ಗ್‌ ಸಂಸ್ಥೆಯು ಅದಾನಿ ಗ್ರೂಪ್‌ ವಿರುದ್ಧ 2022ರ ಜನವರಿ 24ರಂದು ಸ್ಫೋಟಕ ವರದಿಯನ್ನು ಬಿಡುಗಡೆಗೊಳಿಸಿತ್ತು.‌ ಒಟ್ಟು 88 ಪ್ರಶ್ನೆಗಳನ್ನು ಮುಂದಿಟ್ಟಿತ್ತು. ಮಾರುಕಟ್ಟೆಯಲ್ಲಿ ಅವ್ಯವಹಾರದ ಮೂಲಕ ಅದಾನಿ ಗ್ರೂಪ್‌ ತನ್ನ ಕಂಪನಿಗಳ ಷೇರು ದರಗಳನ್ನು ಕೃತಕವಾಗಿ ಏರಿಸಿದೆ. ಮಾರಿಷಸ್‌ನಲ್ಲಿ ನಕಲಿ ಕಂಪನಿಗಳನ್ನು ಸೃಷ್ಟಿಸಿ, ಷೇರು ಮಾರುಕಟ್ಟೆಯಲ್ಲಿ ಗಳಿಸಿದ ಹಣವನ್ನು ಲೂಟಿ ಹೊಡೆದಿದೆ ಎಂದು ಗಂಭೀರವಾಗಿ ಆರೋಪಿಸಿತ್ತು. ಇದಾದ ಬಳಿಕ ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಎಲ್ಲ ಕಂಪನಿಗಳ ಷೇರುಗಳೂ ನಿರಂತರವಾಗಿ ಕುಸಿಯುತ್ತಿವೆ. ಅದಾನಿ ಎಂಟರ್‌ಪ್ರೈಸಸ್‌ನ ಮುಂದುವರಿದ ಷೇರುಗಳ ಬಿಡುಗಡೆಗೆ ಕೇವಲ ಮೂರು ದಿನ ಬಾಕಿ ಇದ್ದಾಗ, ಹಿಂಡೆನ್‌ಬರ್ಗ್‌ನ ವರದಿ ಬಿಡುಗಡೆಯಾಗಿತ್ತು. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ ದರ ತೀವ್ರ ಕುಸಿತಕ್ಕೀಡಾಯಿತು.‌ ಗೌತಮ್‌ ಅದಾನಿಯವರ ಸಂಪತ್ತು ಫೋರ್ಬ್ಸ್‌ ಪ್ರಕಾರ ಅರ್ಧಕ್ಕರ್ಧ ಇಳಿದಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 150 ಶತಕೋಟಿ ಡಾಲರ್‌ನಷ್ಟಿದ್ದ (12 ಲಕ್ಷ ಕೋಟಿ ರೂ.) ಅದಾನಿಯವರ ಸಂಪತ್ತು 74 ಶತಕೋಟಿ ಡಾಲರ್‌ಗೆ (5.99 ಲಕ್ಷ ಕೋಟಿ ರೂ.) ತಗ್ಗಿದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಕಂಪನಿಗಳಲ್ಲಿ ಹೂಡಿಕೆದಾರರಿಗೆ ಆಗಿರುವ ನಷ್ಟ 8 ಲಕ್ಷ ಕೋಟಿ ರೂ.ಗೂ ಹೆಚ್ಚು.

ಆನ್‌ಲೈನ್‌ ಬ್ರೋಕರೇಜ್‌ ವಲಯದ ಜೆರೋಧಾ ಕಂಪನಿಯ ಸ್ಥಾಪಕ ನಿಖಿಲ್‌ ಕಾಮತ್‌ ಹೇಳುವ ಮಾತು ಗಮನಾರ್ಹ. ಹಿಂಡೆನ್‌ ಬರ್ಗ್‌ ರೀಸರ್ಚ್‌ ಏನೇ ಹೇಳಬಹುದು, ಆದರೆ ಅದರ ಬಗ್ಗೆ ಎಚ್ಚರ ವಹಿಸಬೇಕು. ಅದರ ವರದಿಗಳು ಪಕ್ಷಪಾತಿಯಾಗಿದೆ ಎಂಬುದನ್ನು ಗಮನಿಸಲೇಬೇಕು. ಏಕೆಂದರೆ ಹಿಂಡೆನ್‌ಬರ್ಗ್‌ ತನ್ನ ವರದಿಯನ್ನು ಒಳ್ಳೆಯ ಹೃದಯದಿಂದ ಜನರಿಗೆ ಒಳ್ಳೆಯ ವಿಷಯವನ್ನು ತಿಳಿಸಬೇಕು ಎಂಬ ಉದ್ದೇಶದಿಂದ ಬಿಡುಗಡೆಗೊಳಿಸಿಲ್ಲ. ಆದರೆ ಅವರು ಅದಾನಿ ಷೇರಿನ ಮೇಲೆ ಶಾರ್ಟ್‌ ಪೊಸಿಷನ್‌ ಅನ್ನು ತೆಗೆದುಕೊಂಡಿದ್ದಾರೆ. ಆದ್ದರಿಂದ ವರದಿ ಪಕ್ಷಪಾತ ಧೋರಣೆ ಹೊಂದಿರುವುದನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು. ಇದೇ ವೇಳೆ ಅದಾನಿ ಕಂಪನಿಗಳಲ್ಲಿ ನಿಜವಾಗಿಯೂ ಏನಾಗಿದೆ ಎಂಬುದರ ಬಗ್ಗೆ ವಿಸ್ತೃತ ವಿವರಗಳನ್ನು ತಿಳಿದುಕೊಳ್ಳಬೇಕು ಎನ್ನುತ್ತಾರೆ ನಿಖಿಲ್‌ ಕಾಮತ್.‌

ಹೀಗಾಗಿ ಹಿಂಡೆನ್‌ ಬರ್ಗ್‌ ಸ್ಥಾಪಕ ನಾಥನ್ ಆ್ಯಂಡರ್ಸನ್‌ ಭಿನ್ನ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಮುಖ್ಯವಾಗಿ ಶಾರ್ಟ್‌ ಸೆಲ್ಲಿಂಗ್‌ ಸೃಷ್ಟಿಸುವ ಅಪಾಯಗಳ ಬಗ್ಗೆ ಜಗತ್ತು ಮಾತನಾಡುವಂತಾಗಿದೆ. ಅದಾನಿ ಗ್ರೂಪ್‌ ವಿರುದ್ಧ ಆರೋಪಗಳನ್ನು ಮಾಡಿದ ತಕ್ಷಣ ಅದುವೇ ಅಂತಿಮ ತೀರ್ಪು ಆಗುವುದಿಲ್ಲ. ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ನಷ್ಟಗಳಿಗೆ ಪರಿಹಾರ? ಹೀಗಾಗಿ ಹಿಂಡೆನ್‌ ಬರ್ಗ್‌ ವರ್ಸಸ್‌ ಅದಾನಿ ಪ್ರಕರಣ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ವ್ಯಾಪಕ ಚರ್ಚೆ, ಜಿಜ್ಞಾಸೆಗೆ ಕಾರಣವಾಗಿದೆ.

Exit mobile version