-ಮಾರುತಿ ಪಾವಗಡ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು ನಾಲ್ಕು ತಿಂಗಳಷ್ಟೇ ಮುಗಿದಿದೆ. ಈಗ ಲೋಕಸಭೆ ಚುನಾವಣೆಯ ಕಾವೇರಿದೆ. ಲೋಕಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಡೆಯಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಕಾಂಗ್ರೆಸ್ ಜತೆ ಕುಸ್ತಿ, ಬಿಜೆಪಿ ಜತೆ ಮೈತ್ರಿ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಘೋಷಣೆ ಮಾಡಿಯೇ ಬಿಟ್ಟಿದ್ದಾರೆ. ಇತ್ತ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಒಂದೇ ಬಾರಿ ಬಿಜೆಪಿ, ಜೆಡಿಎಸ್ ಅಸಮಾಧಾನಿತರನ್ನು ಆಪರೇಷನ್ ಮಾಡದೇ ಒಬ್ಬೊಬ್ಬರನ್ನೇ ಸೆಳೆಯುತ್ತ ಡ್ಯಾಮೇಜ್ ಮಾಡುತ್ತಿದ್ದಾರೆ. ಇನ್ನೊಂದೆಡೆ, ಯಡಿಯೂರಪ್ಪ ಅವರ ಮಾತು ಕೇಳದೆ ನಾವು ತಪ್ಪು ಮಾಡಿದೆವು ಎಂದು ದಿಲ್ಲಿ ನಾಯಕರಿಗೆ ಅನಿಸಿದೆ. ಇತ್ತ ರಾಜ್ಯ ಸರ್ಕಾರಕ್ಕೆ ಬಿಜೆಪಿ, ಜೆಡಿಎಸ್‌ಗಿಂತಲೂ ಬಿ ಕೆ ಹರಿಪ್ರಸಾದ್ ಪ್ರಮುಖ ಪ್ರತಿಪಕ್ಷವಾಗಿ ಕಾಡುತ್ತಿದ್ದಾರೆ.
‘ಗ್ಯಾರಂಟಿʼ ಸರ್ಕಾರದ ವಿರುದ್ಧ ಮೈತ್ರಿ ಅನಿವಾರ್ಯ
ರಾಜ್ಯದಲ್ಲಿ ಮೂರು ಪಕ್ಷಗಳ ಪೈಕಿ ಸಂಘಟನೆಯಲ್ಲಿ ಕಾಂಗ್ರೆಸ್ ಮುಂದಿದೆ. ಚುನಾವಣೆ ಮುನ್ನ, ಬಳಿಕ ಸಹ ಕಾಂಗ್ರೆಸ್ ಗ್ರಾಫ್ ಕಾರ್ಡ್ ಏರುಮುಖವಾಗಿದೆ ಎನ್ನಬಹುದು. ಕಾಂಗ್ರೆಸ್ ಸರ್ಕಾರ ರಚನೆ ಆದ ಬಳಿಕ ಗ್ಯಾರಂಟಿ ಜಾರಿ ಮಾಡಿ ಸದ್ಯ ಜನ ಮನದಲ್ಲಿ ಇನ್ನಷ್ಟು ಗಟ್ಟಿಯಾಗುವ ಪ್ರಯತ್ನ ಮುಂದುವರಿಸಿದೆ. ಹೀಗೆ ಪ್ರಬಲವಾಗಿರುವ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಬಿಜೆಪಿ ಜತೆ ಸಖ್ಯ ಬೆಳೆಸುವುದು ಉತ್ತಮ ಅಂತ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೂ ಅನಿಸಿದೆ. ಹಾಗಾಗಿಯೇ ಅವರು ಅಮಿತ್ ಶಾ, ಮೋದಿ ಜತೆ ದಿಲ್ಲಿ ಮಟ್ಟದಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ಬಾರಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಿದರೆ ಒಂದು ಸ್ಥಾನ ಸಹ ಗೆಲ್ಲುವುದು ಕಷ್ಟ ಎನ್ನುವುದು ಅವರಿಗೆ ಮನವರಿಕೆಯಾಗಿದೆ. ಹೀಗಾಗಿ ಬಿಜೆಪಿ-ಜೆಡಿಎಸ್ ಒಂದಾಗಿ ಕಾಂಗ್ರೆಸ್‌ಗೆ ಚೆಕ್‌ಮೇಟ್ ಕೊಡಲು ತೆರೆಮರೆಯ ಸಿದ್ಧತೆ ನಡೆಯುತ್ತಿದೆ.
ಕುಮಾರಸ್ವಾಮಿಗೆ ಅನಿವಾರ್ಯ, ಡಿಕೆಶಿ ಬ್ರದರ್ಸ್‌ಗೆ ಟೆನ್ಸನ್
ಈ ಮೈತ್ರಿಯಿಂದ ಬಿಜೆಪಿಗಿಂತಲೂ ಜೆಡಿಎಸ್‌ಗೆ ಆಗುವ ಲಾಭವೇ ಜಾಸ್ತಿ. ಕುಮಾರಸ್ವಾಮಿ ಅವರಿಗೆ ಪುತ್ರ ನಿಖಿಲ್‌ಗೆ ರಾಜಕೀಯ ನೆಲೆ ಕೊಡಿಸಲೇಬೇಕು ಎಂಬ ತವಕ. ಹೀಗಾಗಿ ಮೈತ್ರಿಯಾದರೆ ಬೆಂಗಳೂರು ಗ್ರಾಮಾಂತರದಿಂದ ಲೋಕಸಭೆಗೆ ಸ್ಪರ್ಧೆ ಮಾಡಿ, ಗೆದ್ದ ಬಳಿಕ ತೆರವಾಗುವ ಚನ್ನಪಟ್ಟಣ ಕ್ಷೇತ್ರದಿಂದ ನಿಖಿಲ್‌ರನ್ನು ಕಣಕ್ಕೆ ಇಳಿಸಲು ತೀರ್ಮಾನ ಮಾಡಿದ್ದಾರಂತೆ. ಇದನ್ನು ಸಿ ಪಿ ಯೋಗಿಶ್ವರ್ ಕೂಡ ಒಪ್ಪಿಕೊಂಡಿದ್ದಾರಂತೆ. ಈ ನಡೆ ಡಿಕೆಶಿ ಬ್ರದರ್ಸ್ ಗೆ ನಿದ್ದೆಗೆಡಿಸಿದೆಯಂತೆ!
ಯಡಿಯೂರಪ್ಪರನ್ನು ಇಳಿಸಬಾರದಿತ್ತು
ಸಿಎಂ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಇಳಿಸಿರುವ ಬಗ್ಗೆ ರಾಷ್ಟ್ರೀಯ ಬಿಜೆಪಿ ನಾಯಕರು ಈ ಪ್ರಾಯಶ್ಚಿತ್ತ ಪಡುತ್ತಿದ್ದಾರಂತೆ. ಯಡಿಯೂರಪ್ಪ ಸಿಎಂ ಹುದ್ದೆಯಲ್ಲಿ ಮುಂದುವರಿದಿದ್ದರೆ ಕಾಂಗ್ರೆಸ್ ಇಷ್ಟು ಸುಲಭವಾಗಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ಅವರಿಗೆ ಮನವರಿಕೆಯಾಗಿದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಇತ್ತೀಚೆಗೆ ಕರೆ ಮಾಡಿದ್ದ ರಾಷ್ಟ್ರೀಯ ನಾಯಕರು, ನಾವು ತಪ್ಪು ಮಾಡಿದ್ದೇವೆ. ಇನ್ನು ನಮಗೆ ನಿಮ್ಮ ಮಾರ್ಗದರ್ಶನ ಬೇಕು ಎಂದು ಹೇಳಿದರಂತೆ!
ಯಡಿಯೂರಪ್ಪಗೆ ಯತ್ನಾಳ್, ಸಿದ್ದರಾಮಯ್ಯಗೆ ಬಿ ಕೆ ಹರಿಪ್ರಸಾದ್ ಸವಾಲ್
ಪ್ರತಿ ಸರ್ಕಾರದಲ್ಲೂ ಒಬ್ಬರಲ್ಲ ಒಬ್ಬರು ಆಡಳಿತ ಪಕ್ಷದ ಶಾಸಕರು ವಿಪಕ್ಷ ಮಾಡುವ ಕೆಲಸ ಮಾಡುತ್ತಲೇ ಇರುತ್ತಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ರಚನೆಯಾದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಹಾಗೂ ಪುತ್ರ ವಿಜೇಯೇಂದ್ರ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್ ವಾಚಾಮಗೋಚರ ಆರೋಪ ಮಾಡಿದ್ದರು. ಬಿಜೆಪಿಗೆ ನೆಗೆಟಿವ್ ಇಮೇಜ್ ಸೃಷ್ಟಿ ಆಗಲು ಕಾರಣರಾಗಿದ್ದರು. ಈಗ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಸರದಿ. ಸಿದ್ದರಾಮಯ್ಯ ಅವರ ವಿರುದ್ಧ ಅಹಿಂದ ಸಮುದಾಯವನ್ನು ಎತ್ತಿ ಕಟ್ಟಲು ಬಿ ಕೆ ಹರಿಪ್ರಸಾದ್ ಮುಂದಾಗಿದ್ದಾರೆ. ಅಹಿಂದ ವೋಟ್ ಬ್ಯಾಂಕನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿ ರಾಜ್ಯ ಮಟ್ಟದಲ್ಲಿ ನಾಯಕರಾಗಿ ಬೆಳೆಯುವ ಪ್ರಯತ್ನ ಮಾಡ್ತಿದ್ದಾರೆ. ಎಲ್ಲರೂ ಮರೆತಿದ್ದ ವಾಚ್ ಹಗರಣ ಪ್ರಸ್ತಾಪ ಮಾಡಿ ಸಿದ್ದರಾಮಯ್ಯ ಅವರನ್ನು ಇರಸುಮುರಸಿಗೆ ತಳ್ಳಿದ್ದಾರೆ.
ಈ ಅಂಕಣವನ್ನೂ ಓದಿ: ವಿಧಾನಸೌಧ ರೌಂಡ್ಸ್: ಚಂದ್ರಯಾನ ಕ್ರೆಡಿಟ್‌ಗೆ ಬೇಕಿತ್ತೆ ಈ ಪರಿಯ ಕಿತ್ತಾಟ!
ಲೋಕಸಭಾ ಚುನಾವಣೆಗೂ ಮೊದಲು ಡಿಸಿಎಂ ಮಾಡುವಂತೆ ಒತ್ತಡ
ಲೋಕಸಭಾ ಚುನಾವಣೆಗೂ ಮೊದಲೇ ಪ್ರಭಾವಿ ಸಮುದಾಯಗಳಿಗೆ ಡಿಸಿಎಂ ಹುದ್ದೆ ಸೃಷ್ಟಿ ಅನಿವಾರ್ಯ ಅನ್ನೋದನ್ನ ರಾಜ್ಯ ನಾಯಕರು ಹೇಳಿದ್ದಾರೆ. ಡಾ. ಜಿ ಪರಮೇಶ್ವರ್, ಎಂ ಬಿ ಪಾಟೀಲ್, ಮುಸ್ಲಿಂ ಸಮುದಾಯದ ಜಮೀರ್ ಅಹಮದ್‌ಗೆ ಡಿಸಿಎಂ ಹುದ್ದೆ ಮೇಲೆ ಪ್ಯಾರ್ ಆಗಿದೆ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸಮುದಾಯಗಳಿಂದ ಅಧಿಕ ಮತ ಪಡೆದು ಕಾಂಗ್ರೆಸ್ ಅಧಿಕಾರ ಗಿಟ್ಟಿಸಿಕೊಂಡಿದೆ. ಹೀಗಾಗಿ ತಮ್ಮ ಸಮುದಾಯಕ್ಕೆ ಅಧಿಕಾರ ಕೊಡಿ ಎಂದು ಒತ್ತಡ ಹಾಕಲು ಕೆಲವು ಶಾಸಕರು ರೆಡಿಯಾಗಿದ್ದಾರೆ. ಆದರೆ ಇದಕ್ಕೆ ಡಿ ಕೆ ಶಿವಕುಮಾರ್ ಸುತಾರಂ ಪ್ಪುತ್ತಿಲ್ಲ. ಆದರೆ ಕಾಂಗ್ರೆಸ್‌ಗೆ ದೆಹಲಿ ಗದ್ದುಗೆ ಮುಖ್ಯವಾಗಿರುವುದರಿಂದ ಡಿಕೆಶಿಯನ್ನು ಮನವೊಲಿಸಲಾಗುವುದು ಅನ್ನುತ್ತಿವೆ ಹೈಕಮಾಂಡ್ ಮೂಲಗಳು.