ವಾಷಿಂಗ್ಟನ್: ಅಮೆರಿಕದ ಎಲೆಕ್ಟ್ರಿಕ್ ಕಾರು ಉತ್ಪಾದಕ ಟೆಸ್ಲಾದ ಸ್ಥಾಪಕ ಎಲನ್ ಮಸ್ಕ್, ತಾಜ್ ಮಹಲ್ ಬಗ್ಗೆ ಮಾಡಿರುವ ಟ್ವೀಟ್ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಸ್ಕ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆಯೇ ಎಂಬ ಊಹಾಪೋಹ ಸೃಷ್ಟಿಯಾಗಿದೆ.
ಟ್ವಿಟರ್‌ನಲ್ಲಿ ನೆಟ್ಟಿಗರೊಬ್ಬರು ಆಗ್ರಾ ಕೋಟೆಯ ವಾಸ್ತು ಶಿಲ್ಪದ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಎಲನ್ ಮಸ್ಕ್, “ಇದು ಅದ್ಭುತವಾಗಿದೆ. ನಾನು ಅಲ್ಲಿಗೆ 2007ರಲ್ಲಿ ಭೇಟಿ ನೀಡಿದ್ದ. ಜತೆಗೆ ವಿಶ್ವದ ನಿಜವಾದ ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಅನ್ನೂ ವೀಕ್ಷಿಸಿದ್ದೆʼʼ ಎಂದು ಮಸ್ಕ್ ಬಣ್ಣಿಸಿದ್ದಾರೆ.
ಮಸ್ಕ್ ತಾಯಿಯವರ ಟ್ವೀಟ್
ತಾಜ್ ಮಹಲ್ ಬಗ್ಗೆ ಮಸ್ಕ್ ಟ್ವೀಟ್‌ಗೆ ಅವರ ತಾಯಿ ಮೇಯಿ ಮಸ್ಕ್ ಕೂಡ ಸ್ಪಂದಿಸಿದ್ದು, ತಮ್ಮ ಕುಟುಂಬದ ಹಿರಿಯರು ತಾಜ್ ಮಹಲ್‌ಗೆ ಭೇಟಿ ಕೊಟ್ಟಿದ್ದ ಪ್ರಸಂಗವನ್ನು ಸ್ಮರಿಸಿದ್ದಾರೆ.
“ನಿನ್ನ ಅಜ್ಜ ಮತ್ತು ಅಜ್ಜಿ ಕೂಡ 1954ರಲ್ಲಿ ದಕ್ಷಿಣ ಆಫ್ರಿಕಾದಿಂದ ಆಸ್ಟ್ರೇಲಿಯಾಕ್ಕೆ ತೆರಳುವಾಗ ಮಾರ್ಗ ಮಧ್ಯೆ ತಾಜ್ ಮಹಲ್‌ಗೂ ಭೇಟಿ ನೀಡಿದ್ದರು. ಈ ಪ್ರವಾಸವನ್ನು ಸಿಂಗಲ್ ಎಂಜಿನ್ ಪ್ರೊಪೆಲರ್ ಇರುವ ಸಣ್ಣ ವಿಮಾನದಲ್ಲಿ ಕೈಗೊಂಡಿದ್ದರು. ಯಾವುದೇ ರೇಡಿಯೊ ಅಥವಾ ಜಿಪಿಎಸ್ ನೆರವಿಲ್ಲದೆ ಈ ಹಾರಾಟ ನಡೆದಿತ್ತು. ಇದರ ಉದ್ದೇಶ ” ಸಾಹಸಭರಿತವಾಗಿ ಜೀವಿಸಿ, ಜಾಗರೂಕತೆಯಿಂದಿರಿʼ ಎಂಬುದಾಗಿತ್ತುʼʼ ಎಂದು ಮಸ್ಕ್ ಅವರನ್ನುದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
ಅವರು ತಮ್ಮ ತಾಯಿ, ತಂದೆ ವಿಮಾನದ ಜತೆಗಿರುವ ಹಾಗೂ ತಾಜ್ ಮಹಲ್ ವೀಕ್ಷಿಸುತ್ತಿರುವ ಚಿತ್ರವನ್ನೂ ಟ್ವೀಟ್ ಮಾಡಿದ್ದಾರೆ.