- ಪಾಕಿಸ್ತಾನದಲ್ಲಿ ಈಗ ಪ್ರತಿ ಲೀಟರ್ ಪೆಟ್ರೋಲ್ ದರ 180 ರೂ.
- ಪ್ರತಿ ಲೀಟರ್ ಡೀಸೆಲ್ ದರ 174 ರೂ.
- ಪ್ರತಿ ಲೀಟರ್ ಸೀಮೆ ಎಣ್ಣೆ ದರ 155 ರೂ.
ಇಸ್ಲಾಮಾಬಾದ್: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದಲ್ಲಿ ಪೆಟ್ರೋಲ್ ದರ 30 ರೂ. ದಿಢೀರ್ ಹೆಚ್ಚಳವಾಗಿದೆ. ಅಲ್ಲೀಗ ಪ್ರತಿ ಲೀಟರ್ ಪೆಟ್ರೋಲ್ ದರ 180 ರೂ.ಗೆ ಜಿಗಿದಿದೆ.
ಪೆಟ್ರೋಲ್ ದರವನ್ನು ಏರಿಸಬೇಕಾದ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ಬೇರೆ ದಾರಿ ಇಲ್ಲ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತ್ ಇಸ್ಮಾಯಿಲ್ ಹೇಳಿದ್ದಾರೆ. ಈ ಭಾರಿ ದರ ಹೆಚ್ಚಳಕ್ಕೆ ಪಾಕಿಸ್ತಾನದ ಜನತೆ ಕಂಗಲಾಗಿದ್ದಾರೆ. ಗುರುವಾರ ಮಧ್ಯರಾತ್ರಿಯಿಂದ ದರ ಹೆಚ್ಚಳ ಜಾರಿಯಾಗಿದೆ. ಡೀಸೆಲ್ ದರ ಲೀಟರ್‌ಗೆ 174 ರೂ.ಗೆ ಏರಿಕೆಯಾಗಿದೆ. ಸೀಮೆ ಎಣ್ಣೆ ದರ 155 ರೂ.ಗೆ ಹೆಚ್ಚಳವಾಗಿದೆ.
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ಜತೆ ಕತಾರ್‌ನಲ್ಲಿ ಆರ್ಥಿಕ ನೆರವು ಪಡೆಯುವ ಬಗ್ಗೆ ಮಾತುಕತೆ ವಿಫಲವಾದ ಬಳಿಕ ಪಾಕ್ ಸರಕಾರ ತೈಲ ದರ ಹೆಚ್ಚಳದ ಕಠಿಣ ನಿರ್ಧಾರ ಕೈಗೊಂಡಿದೆ. ಅಮೆರಿಕದಿಂದ 600 ಕೋಟಿ ಡಾಲರ್ ಆರ್ಥಿಕ ನೆರವಿನ ಯೋಜನೆ ನಿಂತು ಹೋಗಿರುವುದರಿಂದ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ.
ಪಾಕಿಸ್ತಾನ ಸರಕಾರ ತನ್ನ ಆರ್ಥಿಕತೆಯ ಸುಧಾರಣೆಗೆ ತೈಲ ಸಬ್ಸಿಡಿಗಳನ್ನು ಕೈಬಿಡಬೇಕು ಎಂದು ಐಎಂಎಫ್ ಕಟ್ಟುನಿಟ್ಟಾಗಿ ತಿಳಿಸಿದೆ. ಹೀಗಾಗಿ ಐಎಂಎಫ್ ನಿಂದ ನೆರವು ಪಡೆಯಲು ಪಾಕಿಸ್ತಾನ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಭಾರತವನ್ನು ಹೊಗಳಿದ ಇಮ್ರಾನ್ ಖಾನ್
ಪಾಕಿಸ್ತಾನ ಸರಕಾರ ಪೆಟ್ರೋಲ್-ಡೀಸೆಲ್-ಸೀಮೆ ಎಣ್ಣೆ ದರವನ್ನು ಏರಲು ಬಿಟ್ಟು ಜನದ್ರೋಹಿ ತೀರ್ಮಾನ ಕೈಗೊಂಡಿದೆ. ಇದು ಸಂವೇದನಾ ರಹಿತ ಸರಕಾರ. ರಷ್ಯಾ ಜತೆಗೆ ಡೀಲ್ ಮಾಡಿಕೊಂಡು ಅಗ್ಗದ ದರದಲ್ಲಿ ತೈಲ ಖರೀದಿಸಲೂ ವಿಫಲವಾಗಿದೆ ಎಂದು ಅಲ್ಲಿನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಟೀಕಿಸಿದ್ದಾರೆ. ಭಾರತವು ಅಮೆರಿಕದ ಜತೆಗೆ ಮೈತ್ರಿ ಉಳಿಸಿಕೊಂಡು, ರಷ್ಯಾದಿಂದ ಅಗ್ಗದ ದರದಲ್ಲಿ ತೈಲವನ್ನೂ ಪಡೆಯಲು ಯಶಸ್ಸು ಗಳಿಸಿದೆ. ಇದರ ಪರಿಣಾಮ ಭಾರತ ಪೆಟ್ರೋಲ್ ದರದಲ್ಲಿ ಲೀಟರ್‌ಗೆ 25 ರೂ. ಇಳಿಸುವಲ್ಲಿಯೂ ಸಫಲವಾಗಿದೆ. ಆದರೆ ಪಾಕಿಸ್ತಾನ ಈ ತೈಲ ಬೆಲೆ ಏರಿಕೆಯಿಂದ ತೀವ್ರ ಹಣದುಬ್ಬರಕ್ಕೆ ಒಳಗಾಗಲಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಹೀಗಿದ್ದರೂ, ದೇಶದ ಹಿತದೃಷ್ಟಿಯಿಂದ ಪೆಟ್ರೋಲ್-ಡೀಸೆಲ್ ದರ ಏರಿಸಲಾಗಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಮರ್ಥಿಸಿಕೊಂಡಿದ್ದಾರೆ.