Site icon Vistara News

ನೆಟ್‌ಫ್ಲಿಕ್ಸ್‌ ಬಳಕೆದಾರರ ಸಂಖ್ಯೆಯಲ್ಲಿ 10 ಲಕ್ಷ ಕುಸಿತ, ಆದಾಯ ಹೆಚ್ಚಿಸಲು ಕಸರತ್ತು

netflix

ಸ್ಯಾನ್‌ ಫ್ರಾನ್ಸಿಸ್ಕೊ: ಒಟಿಟಿ ಸ್ಟ್ರೀಮಿಂಗ್‌ ವಲಯದ ದಿಗ್ಗಜ ಕಂಪನಿಯಾದ ನೆಟ್‌ಫ್ಲಿಕ್ಸ್‌ನ ಬಳಕೆದಾರರ ಸಂಖ್ಯೆಯಲ್ಲಿ ೧೦ ಲಕ್ಷ ಕುಸಿತವಾಗಿದೆ.

ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ ೯೭೦,೦೦೦ ಚಂದಾದಾರರನ್ನು ಕಂಪನಿ ಕಳೆದುಕೊಂಡಿದೆ. ಹೀಗಿದ್ದರೂ, ನಿರೀಕ್ಷಿಸಿದ್ದಕ್ಕಿಂತ ಕಡಿಮೆ ನಷ್ಟವಾಗಿದೆ ಎಂದು ವರದಿಯಾಗಿದೆ. ಈಗಲೂ ನೆಟ್‌ಫ್ಲಿಕ್ಸ್‌ ೨೨.೧ ಕೋಟಿ ಬಳಕೆದಾರರ ನೆಲೆಯನ್ನು ಒಳಗೊಂಡಿದೆ. ೨೦೧೧ರ ಏಪ್ರಿಲ್‌ನಲ್ಲಿ ಕಂಪನಿ ಮೊದಲ ಬಾರಿಗೆ ತನ್ನ ಗ್ರಾಹಕರನ್ನು ಕಳೆದುಕೊಂಡಿತ್ತು. ಬಳಿಕ ನೂರಾರು ಹುದ್ದೆಗಳನ್ನೂ ಕಡಿತಗೊಳಿಸಿತ್ತು.

ಹೊಸ ಗ್ರಾಹಕರನ್ನು ಕಂಡುಕೊಳ್ಳುವುದು ಮತ್ತು ಆದಾಯವನ್ನು ಹೆಚ್ಚಿಸಿಕೊಳ್ಳುವುದು ನಮ್ಮ ಸವಾಲಾಗಿದೆ ಎಂದು ನೆಟ್‌ಫ್ಲಿಕ್ಸ್‌ ತಿಳಿಸಿದೆ. ೨೦೨೧ರ ಅಕ್ಟೋಬರ್-ಡಿಸೆಂಬರ್‌ನಲ್ಲಿ ನೆಟ್‌ಫ್ಲಿಕ್ಸ್‌ ೨ ಲಕ್ಷ ಚಂದಾದಾರರನ್ನು ಕಳೆದುಕೊಂಡಿತ್ತು. ಇದರ ಪರಿಣಾಮ ಕಂಪನಿಯ ಷೇರುಗಳ ಬೆಲೆ ಇಳಿಕೆಯಾಗಿದೆ. ಅಮೆರಿಕ ಮತ್ತು ಕೆನಡಾದಲ್ಲಿ ತನ್ನ ಚಂದಾದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಳೆದುಕೊಳ್ಳುತ್ತಿದೆ.

ಒಟಿಟಿ ಸ್ಟ್ರೀಮಿಂಗ್‌ ವಲಯದಲ್ಲಿ ಅಮೆಜಾನ್‌ ಪ್ರೈಮ್‌,‌ ಎಚ್‌ಬಿಒ ಮ್ಯಾಕ್ಸ್‌, ಡಿಸ್ನಿ ಪ್ಲಸ್‌ನ ಪೈಪೋಟಿಯನ್ನು ನೆಟ್‌ಫ್ಲಿಕ್ಸ್‌ ಎದುರಿಸುತ್ತಿದೆ. ಗ್ರಾಹಕರನ್ನು ಕಳೆದುಕೊಳ್ಳಲು ಇದೂ ಒಂದು ಕಾರಣವಾಗಿದೆ. ದರವನ್ನು ಏರಿಸುವುದೂ ಸವಾಲಾಗಿ ಪರಿಣಮಿಸಿದೆ.

ಆದಾಯ ಹೆಚ್ಚಿಸಲು ಹೊಸ ಪ್ಲಾನ್‌ ಜಾರಿ: ನೆಟ್‌ಫ್ಲಿಕ್ಸ್‌ ತನ್ನ ಗ್ರಾಹಕರಿಗೆ “ಪಾಸ್‌ವರ್ಡ್‌ ಶೇರಿಂಗ್‌ ಪೇಮೆಂಟ್‌ ಪ್ಲಾನ್‌ʼ ಎಂಬ ಹೊಸ ಯೋಜನೆಯನ್ನು ೫ ದೇಶಗಳಲ್ಲಿ ಪರಿಚಯಿಸಿದೆ. ಅರ್ಜೆಂಟೀನಾ, ಕೆರಿಬಿಯನ್‌ ವಲಯದ ಡೊಮ್ನಿಕನ್‌ ರಿಪಬ್ಲಿಕ್‌, ಸಾಲ್ವಡಾರ್‌, ಗ್ವಾಟೆಮಾಲಾ ಮತ್ತು ಹೊಂಡುರಾಸ್‌ನಲ್ಲಿ “ಆಡ್‌ ಎ ಹೋಮ್‌ʼ ಎಂಬ ಹೊಸ ಫೀಚರ್‌ ಅಳವಡಿಸಿದೆ. ಯಾರಾದರೂ ಚಂದಾದಾರರು ಕಡಿಮೆ ವೆಚ್ಚದಲ್ಲಿ ನೆಟ್‌ಫ್ಲಿಕ್ಸ್‌ ಅನ್ನು ಹೆಚ್ಚುವರಿಯಾಗಿ ಶೇರ್‌ ಮಾಡಲು ಇದರಿಂದ ಸಾಧ್ಯವಾಗುತ್ತದೆ. ನೆಟ್‌ ಫ್ಲಿಕ್ಸ್‌ನ ಚಂದಾದಾರಿಕೆಯ ಪಾಸ್‌ ವರ್ಡ್‌ ಬಳಸಿಕೊಂಡು ಇತರರು ಪುಕ್ಕಟೆಯಾಗಿ ವೀಕ್ಷಿಸಿದಾಗ ಕಂಪನಿಗೆ ಸಂಭವನೀಯ ಆದಾಯದಲ್ಲಿ ನಷ್ಟವಾದಂತಾಗುತ್ತದೆ. ಹೊಸ ಪ್ಲಾನ್‌ ಮೂಲಕ ಗ್ರಾಹಕರನ್ನು ಉಳಿಸಿಕೊಳ್ಳುವುದರ ಜತೆಗೆ ತನ್ನ ಆದಾಯವನ್ನೂ ಹೆಚ್ಚಿಸಲು ನೆಟ್‌ಫ್ಲಿಕ್ಸ್‌ ಹೊಸ ಪ್ರಯೋಗ ನಡೆಸುತ್ತಿದೆ.

ನೆಟ್‌ಫ್ಲಿಕ್ಸ್‌ ಪ್ರಕಾರ ವಿಶ್ವಾದ್ಯಂತ ಅದರ ಬಳಕೆದಾರರು ತಮ್ಮ ಲಾಗಿನ್‌ ಮಾಹಿತಿಯನ್ನು ಹಣ ಪಾವತಿಸದ ಇತರ ೧೦ ಕೋಟಿಗೂ ಹೆಚ್ಚು ಮಂದಿಗೆ ಹಂಚಿದ್ದಾರೆ.

Exit mobile version