ವಾಷಿಂಗ್ಟನ್: ಸಾಮಾಜಿಕ ಜಾಲ ತಾಣ ಟ್ವಿಟರ್‌ನಲ್ಲಿ (Twitter) ಇನ್ನು ಮುಂದೆ ಬಳಕೆದಾರರಿಗೆ ಬ್ಲೂ ಟಿಕ್ ಗುರುತು ಬೇಕಿದ್ದರೆ ತಿಂಗಳಿಗೆ 20 ಡಾಲರ್ ಕೊಡಬೇಕಾಗುತ್ತದೆ ಎಂದು ಹೊಸ ಮಾಲೀಕ ಎಲಾನ್ ಮಸ್ಕ್ ತಿಳಿಸಿದ್ದಾರೆ.
ಏನಿದು ಬ್ಲೂ ಟಿಕ್? ಟ್ವಿಟರ್‌ನಲ್ಲಿ ಬಳಕೆದಾರರ ಖಾತೆ ಅಧಿಕೃತ ಎಂಬುದನ್ನು ದೃಢಪಡಿಸಲು ನೀಲಿ ಬಣ್ಣದ ಟಿಕ್ ಮಾರ್ಕ್ ಅನ್ನು ನೀಡಲಾಗುತ್ತದೆ. ಟ್ವಿಟರ್‌ನಲ್ಲಿ ಬಳಕೆದಾರರ ಹೆಸರಿನ ಸಮೀಪ ಇದು ಇರುತ್ತದೆ. ಆದರೆ ಮುಂಬರುವ ದಿನಗಳಲ್ಲಿ ಈ ಟಿಕ್ ಮಾರ್ಕ್ ಬೇಕಿದ್ದರೆ ಮಾಸಿಕ 20 ಡಾಲರ್ ಶುಲ್ಕ ನೀಡಬೇಕಾಗುತ್ತದೆ ಎಂದು ಮಸ್ಕ್ ತಿಳಿಸಿದ್ದಾರೆ.
ಬ್ಲೂ ಟಿಕ್ ಇರುವುದರಿಂದ ಬಳಕೆದಾರರ ಖಾತೆ ಅಧಿಕೃತ ಎಂಬುದು ಇತರರಿಗೂ ಗೊತ್ತಾಗುತ್ತದೆ. ಇದರಿಂದ ಸಿಲೆಬ್ರಿಟಿಗಳಿಗೆ, ನಾನಾ ವೃತ್ತಿಪರರಿಗೆ ಅನುಕೂಲವಾಗುತ್ತದೆ. ಅಸಲಿ ಯಾವುದು ನಕಲಿ ಯಾವುದು ಎಂಬುದು ದೃಢವಾಗುತ್ತದೆ. ಮಾತ್ರವಲ್ಲದೆ ಕಂಪನಿಗಳು, ಬ್ರಾಂಡ್‌ಗಳು, ಸಂಘಟನೆಗಳು ಕೂಡ ಬ್ಲೂ ಟಿಕ್ ಪಡೆಯಬಹುದು. ಮಾತ್ರವಲ್ಲದೆ ಬ್ಲೂ ಟಿಕ್ ಮಾರ್ಕ್ ಇದ್ದರೆ, ಅಂಥ ಬಳಕೆದಾರರಿಗೆ ಟ್ವೀಟ್ ಅನ್ನು ಪರಿಷ್ಕರಿಸಲು ಹಾಗೂ ಅನ್‌ಡೂ ಮಾಡಲು ಅವಕಾಶ ಇರುತ್ತದೆ.
ಟ್ವಿಟರ್ ಬ್ಲೂ ಟಿಕ್ ಅನ್ನು 2021ರಲ್ಲಿ ಆರಂಭಿಸಲಾಗಿತ್ತು. ಬಳಕೆದಾರರಿಗೆ ತಮ್ಮ ಖಾತೆಯ ದೃಢೀಕರಣಕ್ಕೆ ಬ್ಲೂ ಟಿಕ್ ಮಾರ್ಕ್ ಪಡೆಯುವುದು ಕಡ್ಡಾಯವಾಗಿತ್ತು. ಪ್ರಸ್ತುತ ಬ್ಲೂ ಟಿಕ್‌ಗೆ 4.99 ಡಾಲರ್ (409 ರೂ.) ಶುಲ್ಕವಿದೆ. ಆದರೆ ಈ ಇಡೀ ದೃಢೀಕರಣ ಪ್ರಕ್ರಿಯೆ ಪುನಾರಚನೆಯಾಗಲಿದೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
ದೃಢೀಕರಣ ಪ್ರಕ್ರಿಯೆಯನ್ನು ನವೆಂಬರ್ 7ರೊಳಗೆ ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಎಂಜಿನಿಯರ್‌ಗಳು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಟ್ವಿಟರ್ ಕಂಪನಿ ಹೇಳಿರುವುದಾಗಿ ವರದಿಯಾಗಿದೆ.