ನವ ದೆಹಲಿ: ಕೇಂದ್ರ ಸರ್ಕಾರ 16ನೇ ಹಣಕಾಸು ಆಯೋಗವನ್ನು ( 16th Finance Commission) ಶೀಘ್ರದಲ್ಲಿಯೇ ರಚಿಸುವ ಸಾಧ್ಯತೆ ಇದೆ. 2026ರ ಏಪ್ರಿಲ್ 1ರಿಂದ ಮುಂದಿನ 6 ವರ್ಷಗಳಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ ಹೇಗೆ ಇರಬೇಕು ಎಂಬುದನ್ನು ಈ ಆಯೋಗ ಸಲಹೆ ನೀಡುವುದರಿಂದ ಮಹತ್ವ ಪಡೆದಿದೆ. ಕೇಂದ್ರ-ರಾಜ್ಯಗಳ ಹಣಕಾಸು ಸಂಬಂಧಗಳ ಬಗ್ಗೆ ಹಣಕಾಸು ಆಯೋಗ ಸಲಹೆ ನೀಡುತ್ತದೆ ಮತ್ತು ಇದು ಸಾಂವಿಧಾನಿಕ ಮಂಡಳಿಯಾಗಿದೆ.
ಈ ಹಿಂದೆ 15ನೇ ಹಣಕಾಸು ಆಯೋಗವು ತನ್ನ ವರದಿಯನ್ನು 2020ರ ನವೆಂಬರ್ 9ರಂದು ಸಲ್ಲಿಸಿತ್ತು. 2021-22ರಿಂದ 2025-26 ತನಕದ ಅವಧಿಗೆ ಸಲಹೆ ನೀಡಿತ್ತು. 15ನೇ ಆಯೋಗದ ನೇತೃತ್ವವನ್ನು ಎನ್‌ಕೆ ಸಿಂಗ್ ವಹಿಸಿದ್ದು, 14ನೇ ಹಣಕಾಸು ಆಯೋಗದ ಸಲಹೆಯಂತೆ ಅದೇ ಮಟ್ಟದಲ್ಲಿ, ಅಂದರೆ 42% ರ ಮಟ್ಟವನ್ನು ಉಳಿಸಿದ್ದಾರೆ. ಅಂದರೆ ಕೇಂದ್ರೀಯ ತೆರಿಗೆಗಗಳಲ್ಲಿ ರಾಜ್ಯಗಳಿಗೆ ಪಾಲು 42% ಇರುತ್ತದೆ. ಬಳಿಕ ಯಾವ ರಾಜ್ಯಗಳಿಗೆ ಎಷ್ಟು ಪಾಲ ಎಂಬುದನ್ನೂ ಹಣಕಾಸು ಆಯೋಗವೇ ಶಿಫಾರಸು ಮಾಡುತ್ತದೆ. ಅದರ ಆಧಾರದಲ್ಲಿ ಕೇಂದ್ರ ಸರ್ಕಾರ ತೆರಿಗೆಯನ್ನು ರಾಜ್ಯಗಳ ನಡುವೆ ಹಂಚಿಕೆ ಮಾಡುತ್ತದೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ಸಾಲ, ವಿತ್ತೀಯ ಕೊರತೆ, ಹೆಚ್ಚುವರಿ ಸಾಲ ಇತ್ಯಾದಿಗಳ ಬಗ್ಗೆ ಹಣಕಾಸು ಆಯೋಗ ಸಲಹೆ ನೀಡುತ್ತದೆ. ಕೇಂದ್ರ ಸರ್ಕಾರ 2025-26ರ ವೇಳೆಗೆ ವಿತ್ತೀಯ ಕೊರತೆಯನ್ನು ಜಿಡಿಪಿಯ 4.5%ಕ್ಕೆ ಇಳಿಸಲು ಗುರಿ ಹಾಕಿಕೊಂಡಿದೆ.
ಹಣಕಾಸು ಆಯೋಗ ರಚನೆ 1951ರ ನವೆಂಬರ್ 22ರಂದು ಮೊದಲ ಬಾರಿಗೆ ನಡೆಯಿತು. ಅಂದರೆ ಈಗ 71 ವರ್ಷದ ಇತಿಹಾಸವನ್ನು ಆಯೋಗ ಹೊಂದಿದೆ. ಭಾರತದ ಆರ್ಥಿಕ ಸ್ಥಿರತೆಯ ನಿಟ್ಟಿನಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಕೇಂದ್ರ-ರಾಜ್ಯಗಳ ಹಣಕಾಸು ಸಂಬಂಧ, ಸಹಕಾರ ಒಕ್ಕೂಟ ವ್ಯವಸ್ಥೆ, ಸಾರ್ವಜನಿಕ ವೆಚ್ಚದ ಗುಣಮಟ್ಟ ನಿರ್ವಹಣೆಗೆ ನಿರ್ಣಾಯಕವಾಗಿದೆ.