ಬೆಂಗಳೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆಗೊಳಿಸಿರುವ 20 ರೂ. ನಾಣ್ಯವನ್ನು (Rs.20 Coin) ಸ್ವೀಕರಿಸಲು ಸರ್ಕಾರಿ ಸಂಸ್ಥೆಗಳೇ ನಿರಾಕರಿಸುತ್ತಿರುವ ಘಟನೆಗಳು ನಡೆಯುತ್ತಿದ್ದು, ಈ ನಾಣ್ಯದ ಬಳಕೆಗೆ ಸಾರ್ವಜನಿಕರು ಹಿಂದೇಟು ಹಾಕುವಂತಾಗಿದೆ.
ಇತ್ತೀಚೆಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಅರವಿಂದ್ ರೋಣದ್ ಅವರು ಟಿಕೆಟ್ ಕೌಂಟರ್‌ನಲ್ಲಿ 20 ರೂ. ನಾಣ್ಯವನ್ನು ಕೊಟ್ಟಾಗ, ಟಿಕೆಟ್ ವಿತರಕರು ನಿರಾಕರಿಸಿದ್ದರು. ಈ ನಾಣ್ಯವನ್ನು ನಮ್ಮ ಮ್ಯಾನೇಜರ್ ಸ್ವೀಕರಿಸುವುದಿಲ್ಲ ಎಂದು ಕಾರಣ ಹೇಳಿದ್ದರು. ಹೀಗಾಗಿ ಹಿಂದೊಮ್ಮೆ ಆತ ತನ್ನ ಕೈಯಿಂದಲೇ 20 ರೂ. ಕೊಟ್ಟಿದ್ದನಂತೆ ಎಂದು ಅರವಿಂದ್ ತಮ್ಮ ಅನುಭವವನ್ನು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.
” 20 ರೂ. ನಾಣ್ಯ ರಾಷ್ಟ್ರೀಯ ಕರೆನ್ಸಿಯಾಗಿದ್ದು, ಅದನ್ನು ತಿರಸ್ಕರಿಸುವ ಹಕ್ಕು ಯಾರೊಬ್ಬರಿಗೂ ಇಲ್ಲ. ಒಂದು ವೇಳೆ ಯಾರಾದರೂ ಈ ನಾಣ್ಯವನ್ನು ಸ್ವೀಕರಿಸಲು ಒಪ್ಪದಿದ್ದರೆ, ಅವರ ವಿರುದ್ಧ ಐಪಿಸಿ ಸೆಕ್ಷನ್ 124 A ಅಡಿಯಲ್ಲಿ ಕ್ರಮ ಜರುಗಿಸಬಹುದುʼʼ ಎನ್ನುತ್ತಾರೆ ಅರವಿಂದ್.
20 ರೂ. ನಾಣ್ಯ ಬಿಡುಗಡೆಯಾಗಿದ್ದು ಯಾವಾಗ? ಕಳೆದ 2019ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 20 ರೂ. ನಾಣ್ಯದ ಚಲಾವಣೆಯನ್ನು ಘೋಷಿಸಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಔಪಚಾರಿಕವಾಗಿ ನಾಣ್ಯವನ್ನು ಬಿಡುಗಡೆಗಳಿಸಿದ್ದರು. ವಿಶೇಷ ಏನೆಂದರೆ ಈ 20 ರೂ. ನಾಣ್ಯವನ್ನು ಅಂಧರೂ ಸುಲಭವಾಗಿ ಗುರುತಿಸುವಂತೆ ಟಂಕಿಸಲಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ 20 ರೂ. ನಾಣ್ಯವನ್ನು ಎಲ್ಲರೂ, ಯಾವುದೇ ಹಿಂಜರಿಕೆ ಇಲ್ಲದೆ ಚಲಾವಣೆ ಮಾಡಬಹುದಾಗಿದೆ.