ಬೆಂಗಳೂರು: 2000 ರೂ. ಮುಖಬೆಲೆಯ ನೋಟುಗಳನ್ನು (2000 Rupee Notes) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ವ್ಯವಹಾರದಿಂದ ಹಿಂದೆ ಪಡೆದಿದೆ. ನೋಟುಗಳ ವಿನಿಮಯಕ್ಕೆ ಆರ್‌ಬಿಐ ವಿಧಿಸಿದ ಗಡುವುಗಳು (RBI Deadlines) ಬಹುತೇಕ ಮುಕ್ತಾಯಗೊಂಡಿವೆ. ಆದರೆ, ಈಗ ಕೊಟ್ಟಿರುವ ಕೆಲವೊಂದು ಆಯ್ಕೆಗಳನ್ನು ಬಳಸಿಕೊಂಡು ಅಡ್ಡ ದಾರಿಯಲ್ಲಿ ಪಿಂಕ್ ನೋಟ್‌ಗಳ ವಿನಿಮಯ (2000 Note Exchange) ಭರ್ಜರಿಯಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅಂದರೆ, ಕೆಲವೊಂದು ಮಾಫಿಯಾಗಳು ಸಾರ್ವಜನಿಕರಿಗೆ ಇರುವ ವಿನಿಮಯ ಆಯ್ಕೆಯನ್ನು ಬಳಸಿಕೊಂಡು ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ವಿಸ್ತಾರ ನ್ಯೂಸ್ ಈ ದಂಧೆಯನ್ನು ಬಯಲಿಗೆಳೆದಿದೆ.
2 ಸಾವಿರ ಮುಖಬೆಲೆಯ ನೋಟುಗಳನ್ನು ವ್ಯವಹಾರದಿಂದ ಹಿಂಪಡೆದಿರುವುದಾಗಿ ಮೇ 19ರಂದು ಘೋಷಿಸಿತ್ತು. ಆದರೆ, ಅಕ್ಟೋಬರ್ 8ರವರೆಗೆ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಆರ್‌ಬಿಐಗೆ 2 ಸಾವಿರ ಮುಖಬೆಲೆಯ ಶೇ.97.26ರಷ್ಟು ನೋಟ್ ವಾಪಸ್ ಬಂದಿದೆ. ಉಳಿದ 9,760 ಕೋಟಿ ರೂಪಾಯಿ ವಾಪಸ್ ಬಂದಿಲ್ಲ.
ಈ ನಡುವೆ, ಆರ್‌ಬಿಐ ಸಾರ್ವಜನಿಕ ವ್ಯಕ್ತಿಗಳು 2000 ರೂ. ನೋಟು ವಿನಿಮಯಕ್ಕೆ ಅವಕಾಶವನ್ನು ಬೆಂಗಳೂರು ಸೇರಿದಂತೆ ದೇಶ 19 ಆರ್‌ಬಿಐ ಕಚೇರಿಗಳಲ್ಲಿ ಮುಂದುವರಿಸಿದೆ. ಅಂದರೆ, ಒಬ್ಬ ವ್ಯಕ್ತಿ ಒಮ್ಮೆಗೆ 10 ನೋಟುಗಳನ್ನು ವಿನಿಮಯ ಮಾಡಬಹುದಾಗಿದೆ. ಆದರೆ, ಈ ರೀತಿ ವಿನಿಮಯಕ್ಕೆ ಅವಕಾಶ ನೀಡಿರುವುದು ದಂಧೆಗೆ ಅವಕಾಶ ನೀಡಿದಂತಾಗಿದೆ ಎಂಬ ಆರೋಪವಿದೆ.
ಈಗ ಯಾರೇ ಆದರೂ ಒಮ್ಮೆಗೆ 10 ನೋಟುಗಳನ್ನು ಅಂದರೆ 20000 ರೂ. ಮೌಲ್ಯದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ನೋಟ್ ಎಕ್ಸ್‌ಚೇಂಜ್‌ಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಕಡ್ಡಾಯವಿದೆ. ಹೀಗೆ ಜನ ಸಾಮಾನ್ಯರಿಗೆ ಇರುವ ಅವಕಾಶವನ್ನು ಬೆಂಗಳೂರಿನ ಕೆಲವು ಮಾಫಿಯಾಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ.
ಅದೆಷ್ಟೋ ಮಂದಿ ಕಪ್ಪು ಹಣವನ್ನು ತಂದು ಜನಸಾಮಾನ್ಯರ ಮುಖಾಂತರ ಬದಲಾವಣೆ ಮಾಡಿಕೊಳ್ಳುತ್ತಿವೆ. ಈ ದಂಧೆಗೆ 10 ಪರ್ಸೆಂಟ್ ಕಮಿಷನ್ ನೀಡಲಾಗುತ್ತಿದೆ. ಅಂದರೆ, ಯಾರಾದರೂ ಒಬ್ಬ ವ್ಯಕ್ತಿಯ ಕೈಗೆ 2000 ರೂ.ಗಳ ಹತ್ತು ನೋಟುಗಳನ್ನು ನೋಡಿ ಅವುಗಳನ್ನು ವಿನಿಯಮ ಮಾಡಿಕೊಂಡು ಬರುವಂತೆ ಸೂಚಿಸಲಾಗುತ್ತದೆ. ಅವನು ವಿನಿಮಯ ಮಾಡಿಕೊಂಡು ಬಂದರೆ ಅವನಿಗೆ 2000 ರೂ.ಯನ್ನು ಕಮಿಷನ್ ರೂಪದಲ್ಲಿ ನೀಡಲಾಗುತ್ತಿದೆ.
ಬ್ಯಾಂಕ್ ಮುಂದೆ ಸಾಲು ಸಾಲು ಜನ
ಈ ರೀತಿಯ ದಂಧೆ ಶುರುವಾದ ಹಿನ್ನೆಲೆಯಲ್ಲಿ ಆರ್‌ಬಿಐ ಕಚೇರಿಯ ಮುಂದೆ ಜನರ ಸಾಲೇ ಕಂಡುಬರುತ್ತಿದೆ. ನಿಜವೆಂದರೆ, ಹಿಂದೆ ಆರ್‌ಬಿಐ ನೀಡಿದ್ದ ಗಡುವಿನಲ್ಲಿ ಇಲ್ಲದಷ್ಟು ಜನಸಂದಣಿ ಈಗ ಕಂಡುಬರುತ್ತಿದೆ. ಅಂದು ಕೂಡಾ ಜನಸಾಮಾನ್ಯರಿಗೆ ನೋಟು ವಿನಿಮಯಕ್ಕೆ ಅವಕಾಶವಿತ್ತು. ಆಗ ಬಾರದೆ ಜನರೆಲ್ಲ ಈಗ ಬರುತ್ತಿದ್ದಾರೆ, ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಎಂದರೆ ಇದರ ಹಿಂದೆ ಕರಾಮತ್ತು ಇರುವುದು ಸ್ಪಷ್ಟ ಎಂದು ತಿಳಿದ ವಿಸ್ತಾರ ನ್ಯೂಸ್ ಸ್ಟಿಂಗ್ ಆಪರೇಷನ್ ನಡೆಸಿತ್ತು. ಈ ಸಂದರ್ಭದಲ್ಲಿ ದಂಧೆಯ ಬೇರೆ ಬೇರೆ ಮುಖಗಳು ಕಂಡುಬಂದಿವೆ.
ಹೇಗೆ ನಡೆಯುತ್ತಿದೆ ವಿನಿಮಯ ಕಾರ್ಯಾಚರಣೆ?
ಬೆಂಗಳೂರಿನ ಕೆಲವೊಂದು ಮಾಫಿಯಾಗಳು ಹಣ ವಿನಿಮಯ ದಂಧೆಯಲ್ಲಿ ತೊಡಗಿದಂತೆ ಕಾಣುತ್ತಿದೆ. ಅದು ಸಾರ್ವಜನಿಕರನ್ನು ಬಳಸಿಕೊಂಡು ಹಣ ವಿನಿಮಯಕ್ಕೆ ವ್ಯವಸ್ಥೆ ಮಾಡಿದೆ. ಅಂದರೆ ಯಾರೋ ವ್ಯಕ್ತಿಗಳನ್ನು ಕರೆದುಕೊಂಡು ಬಂದು ಅವರ ಕೈಯಲ್ಲಿ 2000 ರೂ.ಗಳ 10 ನೋಟುಗಳನ್ನು ಕೊಟ್ಟು ಅವುಗಳನ್ನು ವಿನಿಮಯ ಮಾಡಿಸಲಾಗುತ್ತದೆ. ಬಳಿಕ ಅವರು ಹೊರಬರುತ್ತಿದ್ದಂತೆಯೇ ಅವರ ಕೈಯಿಂದ ವಿನಿಮಯ ಮಾಡಿದ ಹಣವನ್ನು ಪಡೆದು ಅವರಿಗೆ 2000 ರೂ.ಗಳನ್ನು ನೀಡಲಾಗುತ್ತದೆ.
ಇಲ್ಲಿ ಅತ್ಯಂತ ಬಡವರು, ಕೂಲಿ ಕೆಲಸದವರು ಬಂದು ಹಣ ಎಕ್ಸ್ ಚೇಂಜ್ ಮಾಡಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಹಣ ನೀಡುವುದು ಮತ್ತು ಮರಳಿ ಪಡೆಯುವ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದೆ. ಆದರೆ, ಯಾರೂ ಇದನ್ನು ಪ್ರಶ್ನಿಸುತ್ತಿಲ್ಲ!