ನವ ದೆಹಲಿ: ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿಗಳ ಬಡ್ಡಿ ದರ (fixed deposit rate) ಏರಿಕೆಯ ಟ್ರೆಂಡ್ ಇನ್ನು ಮುಂದುವರಿಯುವ ಸಾಧ್ಯತೆ ಇಲ್ಲ ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಕಾರಣ ಆರ್‌ಬಿಐ 2000 ರೂ. ನೋಟುಗಳನ್ನು ಹಿಂತೆಗೆದುಕೊಂಡಿರುವುದು. ಹೀಗಾಗಿ ಜನತೆಗೆ ಎಫ್‌ಡಿಗಳಲ್ಲಿ ಗರಿಷ್ಠ ಬಡ್ಡಿ ದರದ ಅವಕಾಶ ಸೀಮಿತ ಅವಧಿಗೆ ಸಿಗಬಹುದು. ಬಳಿಕ ಬಡ್ಡಿ ದರ ಇಳಿಯುವ ಸಾಧ್ಯತೆಯೇ ಹೆಚ್ಚು ಎಂದು ವರದಿಯಾಗಿದೆ.
ಈ ನಿಟ್ಟಿನಲ್ಲಿ 2000 ರೂ. ನೋಟು ಹಿಂತೆಗೆತ ನಿರ್ಣಾಯಕವಾಗಲಿದೆ. ಆದ್ದರಿಂದ ಎಫ್‌ಡಿಗಳಲ್ಲಿ ಹೂಡಿಕೆಗೆ ಇದು ಸಕಾಲ ಎನ್ನುತ್ತಾರೆ ಹಣಕಾಸು ತಜ್ಞರು. ಹಾಗಾದರೆ ನಿಶ್ಚಿತ ಠೇವಣಿಗಳ ಬಡ್ಡಿ ದರ ಇಳಿಕೆಗೆ ಕಾರಣವಾಗಬಹುದಾದ ಅಂಶಗಳೇನು ಎಂಬುದನ್ನು ನೋಡೋಣ.
ಬ್ಯಾಂಕ್ ಎಫ್‌ಡಿ ದರ ಇಳಿಕೆ ಸಾಧ್ಯತೆಗೆ ಕಾರಣವೇನು?
ಸಾಲಗಳಿಗೆ ಬೇಡಿಕೆ ಸೃಷ್ಟಿಯಾದಾಗ ಅದನ್ನು ವಿತರಿಸಲು ಬೇಕಾದ ಫಂಡ್ ಅಥವಾ ನಿಧಿಯನ್ನು ಸಂಗ್ರಹಿಸುವ ಸವಾಲು ಬ್ಯಾಂಕ್‌ಗಳಿಗೆ ಸಹಜವಾಗಿಯೇ ಎದುರಾಗುತ್ತದೆ. ಹೀಗಾಗಿ ಎಫ್‌ಡಿ ಬಡ್ಡಿ ದರಗಳನ್ನು ಬ್ಯಾಂಕ್‌ಗಳು ಏರಿಸುತ್ತವೆ. ಅಧಿಕ ಬಡ್ಡಿ ದರದ ಆಸೆಯಿಂದ ಜನತೆ ಬ್ಯಾಂಕ್ ಗಳಲ್ಲಿ ದುಡ್ಡನ್ನು ಠೇವಣಿ ಇಡುತ್ತಾರೆ. ಆದರೆ ಆರ್‌ಬಿಐ 2000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿರುವುದರಿಂದ ಜನರು ಆ ನೋಟನ್ನು ಬ್ಯಾಂಕ್‌ಗಳಿಗೆ ಜಮೆ ಮಾಡುತ್ತಿದ್ದಾರೆ. ಇದರ ಪರಿಣಾಮ ಬ್ಯಾಂಕ್‌ಗಳಲ್ಲಿ ಠೇವಣಿ ಸಂಗ್ರಹವೂ ಏರಿಕೆಯಾಗುತ್ತದೆ. ಬ್ಯಾಂಕ್‌ಗಳಲ್ಲಿ ತಾತ್ಕಾಲಿಕವಾಗಿ ನಗದು ಲಭ್ಯತೆ ಹೆಚ್ಚುತ್ತದೆ. ಆಗ ಎಫ್‌ಡಿ ಬಡ್ಡಿ ದರ ಏರಿಸುವ ಅಗತ್ಯ ಬರುವುದಿಲ್ಲ. ಹೀಗಾಗಿ ಎಫ್‌ಡಿ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಸೃಷ್ಟಿಯಾಗಿದೆ ಎನ್ನುತ್ತಾರೆ ಬ್ಯಾಂಕಿಂಗ್ ತಜ್ಞರು.
ಒಂದು ಅಂದಾಜಿನ ಪ್ರಕಾರ 2000 ರೂ. ನೋಟು ಹಿಂತೆಗೆತದಿಂದ ಬ್ಯಾಂಕ್‌ಗಳಿಗೆ 1.5-1.6 ಲಕ್ಷ ಕೋಟಿ ರೂ. ಹರಿದು ಬರಬಹುದು. ಅದು ಠೇವಣಿ ರೂಪದಲ್ಲಿ ಜಮೆಯಾಗಲಿದೆ. ಹೀಗಾಗಿ ಎಫ್‌ಡಿ ಬಡ್ಡಿ ದರ ಇಳಿಕೆಗೆ ಹಾದಿಯಾಗಿದೆ.
ಎರಡನೆಯದಾಗಿ ರಿಟೇಲ್ ಹಣದುಬ್ಬರ ಕಳೆದ ಎರಡು ತಿಂಗಳಿನಿಂದ 6%ಕ್ಕಿಂತ ಕೆಳಮಟ್ಟದಲ್ಲಿದೆ. ಇದು ಮಾರ್ಚ್‌ನಲ್ಲಿ 5.66% ಹಾಗೂ ಏಪ್ರಿಲ್‌ನಲ್ಲಿ 6% ಇತ್ತು. ಹೀಗಾಗಿ ಇದು ಕೂಡ ಎಫ್‌ಡಿ ದರಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಎಫ್‌ಡಿ ಬಡ್ಡಿ ದರದಲ್ಲಿ 3 ವರ್ಷಗಳ ಅವಧಿಯದ್ದಕ್ಕೆ 0.20-0.30% ಇಳಿಕೆ ನಿರೀಕ್ಷಿಸಲಾಗಿದೆ. ಭಾರತದಲ್ಲಿ ಮಧ್ಯಮ ವರ್ಗದ ಜನತೆ ಸಾಮಾನ್ಯವಾಗಿ ಉಳಿತಾಯ ಪ್ರವೃತ್ತಿ ಹೊಂದಿದವರು. ಅದರಲ್ಲೂ ಇಳಿಗಾಲದ ಹಣಕಾಸು ಭದ್ರತೆಗೆ ಬ್ಯಾಂಕ್ ಎಫ್‌ಡಿ ಬಡ್ಡಿ ದರವನ್ನು ಅನೇಕ ಮಂದಿ ಅವಲಂಬಿಸುತ್ತಾರೆ. ಹೀಗಾಗಿ ಈ ಸಂದರ್ಭ ಅಂದರೆ ಬಡ್ಡಿ ದರ ಉನ್ನತ ಮಟ್ಟದಲ್ಲಿ ಇದ್ದಾಗ ಹೂಡಿಕೆ ಮಾಡುವುದು ಸೂಕ್ತ ಎನ್ನುತ್ತಾರೆ ತಜ್ಞರು.
ಎಸ್‌ಬಿಐನಿಂದ 14,000 ಕೋಟಿ ರೂ. ಸಂಗ್ರಹ: ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ ಮೇ 23ರ ಬಳಿಕ ಇಲ್ಲಿಯತನಕ 2000 ರೂ. ಮುಖಬೆಲೆಯ 14,000 ಕೋಟಿ ರೂ. ಮೌಲ್ಯದ ನೋಟುಗಳನ್ನು ಸ್ವೀಕರಿಸಿದೆ. ಇದರಲ್ಲಿ 3,000 ಕೋಟಿ ರೂ. ನೋಟುಗಳು ವಿನಿಮಯವಾಗಿದೆ.
ಇದನ್ನೂ ಓದಿ: Gold rate : ಅಮೆರಿಕದ ಸಾಲ ಬಿಕ್ಕಟ್ಟಿನ ಎಫೆಕ್ಟ್, ಮತ್ತಷ್ಟು ಇಳಿಯಲಿದೆಯಾ ಚಿನ್ನದ ದರ?