Site icon Vistara News

ವಿಸ್ತಾರ Explainer: GST ಕ್ರಾಂತಿಗೆ 5 ವರ್ಷ, ಇದರಿಂದಾದ ಲಾಭವೇನು? ನಷ್ಟವೇನು?

New GST Rules New GST rules effective from today, what is the benefit Here are the details

ಜಿಎಸ್‌ಟಿ ಇಂದು ಜನಜೀವನದ ಭಾಗವೇ ಅಗಿ ಬಿಟ್ಟಿದೆ. ಇದು ಪಕ್ಕಾ ತೆರಿಗೆ ವಿಷಯವಾದರೂ ತೆರಿಗೆ, ಹಣಕಾಸು, ಆರ್ಥಿಕ, ರಾಜಕೀಯ, ಸಾಮಾಜಿಕ, ಅಕಾಡೆಮಿಕ್‌ ವಲಯದಲ್ಲಿ ಇದು ಬಹು ಚರ್ಚಿತ. ಏಕೆಂದರೆ ಇದು ಜನಜೀವನದ ಮೇಲೆ ನೇರವಾಗಿ ಪ್ರಭಾವ ಬೀರುವ ಸ್ವತಂತ್ರ ಭಾರತದ ಅತಿ ದೊಡ್ಡ ಪರೋಕ್ಷ ತೆರಿಗೆ ಸುಧಾರಣೆ. ಆದ್ದರಿಂದ ಇದನ್ನು ಕ್ರಾಂತಿಕಾರಕ ಎಂದು ಕರೆಯಲಾಗಿದೆ. ಜತೆಗೆ ಇದು ಹಲವಾರು ವಿಚಾರಗಳಲ್ಲಿ ಟೀಕೆಗೂ ಒಳಗಾಗಿದೆ.

ಮೊದಲೆಲ್ಲ ಬಜೆಟ್‌ ದಿನ ಬಂದಾಗ ತೆರಿಗೆ ಬದಲಾವಣೆಯಿಂದ ಯಾವುದು ದುಬಾರಿಯಾಗುತ್ತದೆ, ಯಾವುದು ಅಗ್ಗವಾಗುತ್ತದೆ ಎಂದು ಜನ ಕುತೂಹಲದಿಂದ ಪತ್ರಿಕೆ ಬಿಡಿಸಿ ಓದುತ್ತಿದ್ದರು. ಈಗ ಸನ್ನಿವೇಶ ಬದಲಾಗಿದೆ. ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಏನಾಗಲಿದೆ? ಜಿಎಸ್‌ಟಿ ದರ ಪರಿಷ್ಕರಣೆಯಾಗಿ ಯಾವುದು ತುಟ್ಟಿಯಾಗಲಿದೆ ಅಥವಾ ಅಗ್ಗವಾಗಲಿದೆ ಎಂದು ಜನ ಗಮನಿಸುತ್ತಾರೆ. ಅಂಥ ಜಿಎಸ್‌ಟಿ ಜಾರಿಯಾಗಿ ಇಂದಿಗೆ ೫ ವರ್ಷ ಭರ್ತಿಯಾಗಿದೆ. ಕಳೆದ ೫ ವರ್ಷಗಳ ಹಿನ್ನೋಟದಲ್ಲಿ ಅನೇಕ ಮಹತ್ವದ ಬದಲಾವಣೆಗಳನ್ನು ಕಾಣಬಹುದು. ಜಿಎಸ್‌ಟಿಯಿಂದ ಜನ ಸಾಮಾನ್ಯರು, ತೆರಿಗೆದಾರರು, ವ್ಯಾಪಾರಸ್ಥರು, ಉದ್ಯಮಿಗಳಿಗೆ ಆಗಿರುವ ಪ್ರಯೋಜನ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತೆರಿಗೆ ಸಂಗ್ರಹ ಮತ್ತು ವಿತ್ತೀಯ ಸ್ಥಿತಿಗತಿಗಳ ಮೇಲೆ ಉಂಟಾಗಿರುವ ಪರಿಣಾಮಗಳು, ಸಾಧಕ-ಬಾಧಕಗಳನ್ನು ಅವಲೋಕಿಸಲು ಇದು ಸಕಾಲ.

ಒಂದು ದೇಶ ಒಂದು ಮಾರುಕಟ್ಟೆ, ಒಂದು ತೆರಿಗೆ

ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್‌ಟಿಯ ಮೂಲ ಉದ್ದೇಶ, ದೇಶದಲ್ಲಿ ಚಾಲ್ತಿಯಲ್ಲಿದ್ದ ಸಂಕೀರ್ಣ ಪರೋಕ್ಷ ತೆರಿಗೆಯನ್ನು ಸುಧಾರಿಸುವುದಾಗಿತ್ತು. ಡಜನುಗಟ್ಟಲೆ ಇದ್ದ ಪರೋಕ್ಷ ತೆರಿಗೆಗಳನ್ನು ಬೆರಳೆಣಿಕೆಗೆ ಇಳಿಸಿ ಏಕರೂಪಕ್ಕೆ ತರುವುದಾಗಿತ್ತು. ಇವತ್ತು ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಜಿಎಸ್‌ಟಿಯ ಶ್ರೇಣಿಗಳು ಮತ್ತು ದರದಲ್ಲಿ ವ್ಯತ್ಯಾಸ ಇರುವುದಿಲ್ಲ. ೨೦೧೭ರ ಜುಲೈ ೧ರಂದು ಜಾರಿಗೆ ಬಂದ ಈ ಪರೋಕ್ಷ ತೆರಿಗೆ ಪದ್ಧತಿಯು ೧೩ ಲಕ್ಷ ತೆರಿಗೆದಾರರನ್ನು ಏಕೀಕೃತ ತೆರಿಗೆ ವ್ಯವಸ್ಥೆಗೆ ಒಳಪಡಿಸಿದೆ. ತೆರಿಗೆದಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಹಿತಾಸಕ್ತಿಗೆ ಪೂರಕವಾಗಿ ಈ ವ್ಯವಸ್ಥೆಯನ್ನು ರಚಿಸಲಾಗಿದೆ ಎನ್ನುತ್ತದೆ ಸರ್ಕಾರ.

ಜನ ಸಾಮಾನ್ಯರಿಗೆ ಪ್ರಯೋಜನ ಏನು?

ಹಲವಾರು ತೆರಿಗೆಗಳ ನಿರ್ಮೂಲನೆ

ಜಿಎಸ್‌ಟಿ ಬಂದ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಚಾಲ್ತಿಯಲ್ಲಿದ್ದ ಡಜನುಗಟ್ಟಲೆ ತೆರಿಗೆಗಳಿಂದಾಗಿ ಜನ ಎರಡೆರಡು ತೆರಿಗೆಗಳನ್ನು ಕಟ್ಟುವಂತಾಗಿತ್ತು. ಜಿಎಸ್‌ಟಿಯಿಂದ 17 ಪ್ರಮುಖ ತೆರಿಗೆಗಳು ಮತ್ತ ೧೩ ಸೆಸ್‌ಗಳು ವಿಲೀನವಾಗಿವೆ. ಈ ಎಲ್ಲ ಹೆಚ್ಚುವರಿ ತೆರಿಗೆಗಳು ರದ್ದಾಗಿರುವುದು ಜನ ಸಾಮಾನ್ಯರಿಗೆ ಆಗಿರುವ ಅನುಕೂಲ.

ಜಿಎಸ್‌ಟಿಗೆ ಮುನ್ನ ಒಟ್ಟಾರೆ ತೆರಿಗೆ ಹೊರೆ ೨೫-೩೦% ಇತ್ತು. ಅದು ಈಗ ಗಣನೀಯ ಇಳಿಕೆಯಾಗಿದೆ. ಈಗ ಮಾರುಕಟ್ಟೆಯಲ್ಲಿರುವ ಬಹುತೇಕ ವಸ್ತುಗಳು ೧೮% ಶ್ರೇಣಿಯ ಒಳಗಿರುವುದು ಮತ್ತು ನಿತ್ಯ ಬಳಕೆಯ ಬಹುತೇಕ ವಸ್ತುಗಳು ೫% ಶ್ರೇಣಿಯ ಒಳಗಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ತಜ್ಞರು.

ಬೆಲೆ ಇಳಿಕೆ

ದಿನ ಬಳಕೆಯ ಅನೇಕ ವಸ್ತುಗಳು ೫% ಜಿಎಸ್‌ಟಿ ದರದ ಒಳಗೆಯೇ ಬರುತ್ತವೆ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ. ಅದರ ಪ್ರಕಾರ ೯೫% ವಸ್ತುಗಳು ೧೮% ಶ್ರೇಣಿಯ ಒಳಗೆ ಬರುತ್ತವೆ.

ಪಾರದರ್ಶಕತೆ

ಜಿಎಸ್‌ಟಿ ಜಾರಿಯಿಂದ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ವ್ಯಾಪಕ ಡಿಜಿಟಲೀಕರಣವಾಗಿದೆ. ಇದು ಪಾರದರ್ಶಕತೆಯನ್ನು ಹೆಚ್ಚಿಸಿದೆ. ರಿಫಂಡ್‌ನಿಂದ ಜಿಎಸ್‌ಟಿ ರಿಟರ್ನ್ಸ್‌ ತನಕ ಎಲ್ಲವೂ ಈಗ ಆನ್‌ಲೈನ್‌ನಲ್ಲಿ ನಡೆಯುತ್ತದೆ.

ಭ್ರಷ್ಟಾಚಾರ ನಿಯಂತ್ರಣ‌, ಮಧ್ಯವರ್ತಿಗಳ ನಿರ್ಮೂಲನೆ

ಸಣ್ಣ ಉದ್ದಿಮೆ ಅಥವಾ ಮಧ್ಯಮ ಉದ್ದಿಮೆ ಇಲ್ಲವೇ ಬೃಹತ್‌ ಉದ್ದಿಮೆಯಲ್ಲಿ ವ್ಯವಹಾರಗಳಿಗೆ ಏಕರೂಪದ ತೆರಿಗೆ ಶ್ರೇಣಿಯ ಪರಿಣಾಮ ಭ್ರಷ್ಟಾಚಾರವನ್ನು ಹತ್ತಿಕ್ಕಲು ಸಾಧ್ಯವಾಗಿದೆ ಎನ್ನುತ್ತಾರೆ ಅಲಾನ್‌ಕಿಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಂಕಿತ್‌ ಅಗ್ರವಾಲ್. ಮಧ್ಯವರ್ತಿಗಳ ನಿರ್ಮೂಲನೆ, ಲಾಭಕೋರತನ ತಡೆ (Anti-profiteering) ಸಾಧ್ಯವಾಗಿರುವುದರಿಂದ ಆರ್ಥಿಕತೆಗೆ ಸಹಕಾರಿಯಾಗಿದೆ ಎನ್ನುತ್ತಾರೆ ಅವರು.

ಇ-ವೇ ಬಿಲ್‌ಗಳಿಂದ ಉತ್ಪಾದಕತೆ ಹೆಚ್ಚಳ

ಜಿಎಸ್‌ಟಿಯ ಪರಿಣಾಮ ಸಾರಿಗೆ ಕ್ಷೇತ್ರದಲ್ಲಿ ವೆಚ್ಚ ಉಳಿತಾಯಕ್ಕೆ ಸಹಕಾರಿಯಾಗಿದೆ. ಟ್ರಕ್‌ ಮಾಲೀಕರುಗಳಿಗೆ ಸಾಗಣೆ ವೆಚ್ಚದಲ್ಲಿ ಕನಿಷ್ಠ ೧೦-೧೫% ಉಳಿತಾಯವಾಗುತ್ತದೆ. ಇದು ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗಿದೆ. ಇ-ವೇ ಬಿಲ್‌ ಕೂಡ ಈ ನಿಟ್ಟಿನಲ್ಲಿ ಸಹಕಾರಿಯಾಗಿದೆ.

ಪೆಟ್ರೋಲ್-ಡೀಸೆಲ್‌ ಮೇಲೆ ಜಿಎಸ್‌ಟಿ ಏಕಿಲ್ಲ?

ದೇಶದ ಹಲವಾರು ರಾಜ್ಯಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ಗೆ ಬಳಕೆದಾರರು ಕೊಡುವ ದರದಲ್ಲಿ ಸುಮಾರು ೫೦% ತೆರಿಗೆಯೇ ಆಗಿರುತ್ತದೆ. ಈವೆರಡೂ ಅಗತ್ಯ ವಸ್ತುಗಳಾಗಿದ್ದು, ಜನ ಸಾಮಾನ್ಯರೂ ನಿತ್ಯ ಬಳಸುವ ಇಂಧನವಾಗಿದೆ. ಆದರೆ ಇವೆರಡರ ಮೇಲಿನ ಭಾರಿ ತೆರಿಗೆ ಹೊರೆಯನ್ನು ಇಳಿಸಲು ಸರ್ಕಾರಗಳು ಮುಂದಾಗುತ್ತಿಲ್ಲ. ಆದರೆ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಒಂದು ವೇಳೆ ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಗರಿಷ್ಠ ಜಿಎಸ್‌ಟಿ ವಿಧಿಸಿದರೂ ೨೮%ಕ್ಕೆ ಮುಗಿಯುತ್ತದೆ. ಆದ್ದರಿಂದ ಈ ಇಂಧನವನ್ನು ಜಿಎಸ್‌ಟಿಗೆ ತರಬೇಕು ಎಂಬ ಒತ್ತಡ ಮತ್ತು ಸವಾಲು ಎರಡೂ ಮುಂದಿದೆ. ಇದು ಶೀಘ್ರ ಇತ್ಯರ್ಥವಾಗಬೇಕು. ಇದರಿಂದ ಜನ ಸಾಮಾನ್ಯರಿಗೂ ಅನುಕೂಲವಾಗಲಿದೆ.

ಉದ್ದಿಮೆಗೆ ಜಿಎಸ್‌ಟಿಯಿಂದ ಲಾಭವೇನು?

ಜಿಎಸ್‌ಟಿಯಿಂದ ಉದ್ದಿಮೆಗೆ ಸಾಕಷ್ಟು ಪ್ರಯೋಜನವಾಗಿದೆ. ಸಂಕೀರ್ಣ ತೆರಿಗೆಗಳು, ಚೆಕ್‌ ಪೋಸ್ಟ್‌ಗಳ ನೂರೆಂಟು ಅಡೆತಡೆಗಳು ಇನ್ನಿಲ್ಲವಾಗಿವೆ. ಇದರಿಂದ ಸಮಯ ಮತ್ತು ಹಣ ಎರಡರ ಉಳಿತಾಯ ಉದ್ದಿಮೆಗೆ ಲಭಿಸಿದೆ. ಏಕರೂಪದ ತೆರಿಗೆಯಾದ್ದರಿಂದ ಲೆಕ್ಕಾಚಾರಕ್ಕೆ ಸುಲಭ. ಖರೀದಿದಾರರಿಗೆ ತಾನು ಕೊಡುವ ತೆರಿಗೆಯ ಪೂರ್ಣ ಲೆಕ್ಕ ಸಿಗುತ್ತದೆ. ತೆರಿಗೆಯಲ್ಲಿ ಉದ್ದಿಮೆಗೆ ಉಂಟಾಗುವ ಉಳಿತಾಯ ಮತ್ತೆ ಉತ್ಪಾದನೆಗೆ ಹೂಡಿಕೆಯಾಗುವುದರಿಂದ ಎಕಾನಮಿಗೆ ಅನುಕೂಲಕರ. ವಾರ್ಷಿಕ ೪೦ ಲಕ್ಷ ರೂ. ತನಕದ ವಹಿವಾಟು ನಡೆಸುವವರಿಗೆ ಜಿಎಸ್‌ಟಿ ಇರುವುದಿಲ್ಲ. ಈ ಹಿಂದೆ ಈ ಮಿತಿ ೨೦ ಲಕ್ಷ ರೂ. ಇತ್ತು. ಈಗ ಅದನ್ನು ವಿಸ್ತರಿಸಿ ಸಣ್ಣ ಉದ್ದಿಮೆದಾರರಿಗೆ ರಿಲೀಫ್‌ ನೀಡಲಾಗಿದೆ. ಸರಕುಗಳ ರಫ್ತಿನ ಮೇಲೆ ಕಸ್ಟಮ್ಸ್‌ ಸುಂಕ ಕಡಿತಗೊಳಿಸಿರುವುದರಿಂದ ರಫ್ತುದಾರರಿಗೆ ತೆರಿಗೆ ಇಳಿದಿದೆ. ಇವೆಲ್ಲದರ ಪರಿಣಾಮ ತೆರಿಗೆದಾರರ ನೆಲೆ ವಿಸ್ತರಿಸಿದೆ.

ಕೇಂದ್ರ-ರಾಜ್ಯಗಳ ನಡುವೆ ಜಿಎಸ್‌ಟಿ ಸಂಘರ್ಷ

ಜಿಎಸ್‌ಟಿ ಆರಂಭವಾದಂದಿನಿಂದಲೂ ಪ್ರತಿಪಕ್ಷಗಳು ಮಾಡುತ್ತಿರುವ ಟೀಕೆ ಏನೆಂದರೆ, ಜಿಎಸ್‌ಟಿ ಮೂಲಕ ಕೇಂದ್ರ ಸರ್ಕಾರ, ರಾಜ್ಯಗಳ ಆದಾಯ ಮೂಲಗಳನ್ನು ಕಸಿದುಕೊಂಡಿದೆ. ಹಾಗೂ ಜಿಎಸ್‌ಟಿ ನಷ್ಟ ಪರಿಹಾರವನ್ನು ೫ ವರ್ಷಗಳಿಂದಾಚೆಗೂ ವಿಸ್ತರಿಸಬೇಕು ಎಂಬುದು.

ಜಿಎಸ್‌ಟಿ ಮೂಲಕ ಕೇಂದ್ರ ಸರ್ಕಾರವು ರಾಜ್ಯಗಳ ಆದಾಯ ಮೂಲಗಳನ್ನು ಕಸಿದುಕೊಂಡಿದೆ ಎಂಬುದಕ್ಕೆ ತರ್ಕವಿಲ್ಲ ಎನ್ನುತ್ತಾರೆ ತೆರಿಗೆ ತಜ್ಞರು. ಜಿಎಸ್‌ಟಿ ನಷ್ಟದಲ್ಲಿ ರಾಜ್ಯಗಳಿಗೆ ಉಂಟಾಗುವ ನಷ್ಟ ಪರಿಹಾರವನ್ನೂ ಕೇಂದ್ರ ಕಾಲಾನುಕಾಲಕ್ಕೆ ವಿತರಿಸುತ್ತಿದೆ. ಒಂದು ವಿಧದಲ್ಲಿ ಪರೋಕ್ಷ ತೆರಿಗೆಯನ್ನು ಸಂಗ್ರಹಿಸುವ ತಾಪತ್ರಯ ರಾಜ್ಯ ಸರ್ಕಾರಗಳಿಗೆ ತಪ್ಪಿದೆ. ಕಂದಾಯ ನಷ್ಟಕ್ಕೆ ಸರ್ಕಾರ ಪರಿಹಾರವನ್ನೂ ನೀಡುತ್ತಿದೆ ಎಂಬ ವಾದವೂ ಇದೆ.

ಎರಡನೆಯದಾಗಿ ಜಿಎಸ್‌ಟಿ ಮಂಡಳಿಯ ಇತ್ತೀಚಿನ ಹಾಗೂ ೪೭ನೇ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ೨೦೨೨ರ ಜೂನ್‌ನಿಂದಾಚೆಗೆ ರಾಜ್ಯಗಳಿಗೆ ಜಿಎಸ್‌ಟಿ ನಷ್ಟ ಪರಿಹಾರ ಮುಂದುವರಿಸಬೇಕೇ ಬೇಡವೇ ಎಂಬುದರ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಏಕೆಂದರೆ ಕೆಲ ರಾಜ್ಯಗಳು ನಷ್ಟ ಪರಿಹಾರ ಅನಗತ್ಯ ಎಂದಿವೆ. ಮತ್ತೆ ಕೆಲ ರಾಜ್ಯಗಳು ಸ್ವಲ್ಪ ಕಾಲ ಪರಿಹಾರ ಬೇಕೆಂದಿವೆ. ಹೀಗಾಗಿ ಎಲ್ಲ ಅಂಶಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.

ಜಿಎಸ್‌ಟಿ ಮಂಡಳಿಯ ಮುಂದಿರುವ ಸವಾಲುಗಳೇನು?

ಜಿಎಸ್‌ಟಿಯ ಸರಾಸರಿ ಮಾಸಿಕ ಸಂಗ್ರಹ (ಕೋಟಿ ರೂ.ಗಳಲ್ಲಿ)

2017-18ರಲ್ಲಿ82,294 ಕೋಟಿ ರೂ.
2018-1998,114
2019-20101,843
2020-2194,733
2021-22123,747
2022-23 (ಮೇ ತನಕ)155,000

ಪ್ರಮುಖ ರಾಜ್ಯಗಳಲ್ಲಿ ೨೦೨೨ ಜೂನ್‌ನಲ್ಲಿ ಜಿಎಸ್‌ಟಿ ಸಂಗ್ರಹ (ಕೋಟಿ ರೂ.ಗಳಲ್ಲಿ)

ಕರ್ನಾಟಕ8,845 ಕೋಟಿ ರೂ.
ಮಹಾರಾಷ್ಟ್ರ22,341
ಗುಜರಾತ್‌9,207
ಉತ್ತರಪ್ರದೇಶ6,835
ಹರಿಯಾಣ6,714
ಮಧ್ಯಪ್ರದೇಶ2,837
ದಿಲ್ಲಿ4,313
ಜಾರ್ಖಂಡ್2,315
ರಾಜಸ್ಥಾನ3,386
ತಮಿಳುನಾಡು8,027

Exit mobile version