ಬೆಂಗಳೂರು: ಬಂಗಾರದ ದರದಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಇಳಿಕೆಯಾಗಿದೆ. ಪ್ರತಿ 10 ಗ್ರಾಮ್ ಚಿನ್ನದ ದರದಲ್ಲಿ ಶುಕ್ರವಾರ 540 ರೂ. ತಗ್ಗಿದ್ದು, 50,780 ರೂ. ಇತ್ತು. 22 ಕ್ಯಾರಟ್ ಅಥವಾ (Gold Price) ಆಭರಣ ಚಿನ್ನದ ದರದಲ್ಲಿ 500 ರೂ. ಇಳಿಕೆಯಾಗಿದ್ದು, 46,550 ರೂ. ಇತ್ತು. 1 ಕೆಜಿ ಬೆಳ್ಳಿಯ ದರದಲ್ಲಿ 720 ರೂ. ಏರಿಕೆಯಾಗಿದ್ದು, 58,000 ರೂ.ಗೆ ವೃದ್ಧಿಸಿತು. ಪ್ಲಾಟಿನಮ್ ದರದಲ್ಲಿ 150 ರೂ. ವೃದ್ಧಿಸಿದ್ದು, ಪ್ರತಿ 10 ಗ್ರಾಮ್‌ಗೆ 21,560 ರೂ.ಗೆ ವೃದ್ಧಿಸಿದೆ.
ಚಿನ್ನದ ದರ ಕಳೆದ ಎರಡು ತಿಂಗಳಿನಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಅಮೆರಿಕದಲ್ಲಿ ಬಡ್ಡಿ ದರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದ್ದು, ಡಾಲರ್ ಪ್ರಾಬಲಯ ಹೆಚ್ಚಿದೆ. ಹೀಗಾಗಿ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದು, ದರ ಇಳಿಕೆಗೆ ಕಾರಣವಾಗಿದೆ.
ಕಳೆದ ಒಂದು ವಾರದಲ್ಲಿ ಚಿನ್ನದ ದರದಲ್ಲಿ 1,250 ರೂ. ಇಳಿಕೆಯಾಗಿದೆ. 52,030 ರೂ.ಗಳಿಂದ 50,780 ರೂ.ಗೆ ತಗ್ಗಿದೆ. ಹೀಗಿದ್ದರೂ, ಬೆಳ್ಳಿಗೆ ಕೈಗಾರಿಕಾ ವಲಯದಲ್ಲಿ ಬೇಡಿಕೆ ಚೇತರಿಸಿದ್ದು, ದರದಲ್ಲಿ ಹೆಚ್ಚಳ ಕಂಡು ಬಂದಿದೆ.