ಮುಂಬಯಿ: ಭಾರತದ ವಾರ್ಷಿಕ ಆರ್ಥಿಕ ಬೆಳವಣಿಗೆಯ ಮುನ್ನೋಟದ ಪ್ರಕಾರ 6%ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಮುಂದಿನ ಕೆಲ ವರ್ಷಗಳ ಕಾಲ ಇದೇ ಮಟ್ಟದಲ್ಲಿ ಮುಂದುವರಿಯುವ ಸಾಧ್ಯತೆ ಇದೆ. (GDP Growth) ಆದರೆ ಇದೇನೂ ಕೆಟ್ಟದಲ್ಲ, ಬದಲಿಗೆ ಒಳ್ಳೆಯದೇ ಎಂದು ಗೋಲ್ಡ್ಮನ್ ಸ್ಯಾಕ್ಸ್ ಗ್ರೂಪ್, ಬಾರ್‌ಕ್ಲೇಸ್ ಮತ್ತು ಇತರ ಸಂಸ್ಥೆಗಳ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶೇ.6ರ ಜಿಡಿಪಿ ಬೆಳವಣಿಗೆಯಿಂದ ಹಣದುಬ್ಬರವನ್ನು ನಿಯಂತ್ರಿಸಲು ಹಾದಿ ಸುಗಮವಾಗಲಿದೆ ಎಂದು ಬಾರ್‌ಕ್ಲೇಸ್‌ನ ಆರ್ಥಿಕ ತಜ್ಞ ರಾಹುಲ್ ಬಜೋರಿಯಾ ತಿಳಿಸಿದ್ದಾರೆ. 2022ರ ಆರಂಭದಿಂದಲೂ ಹಣದುಬ್ಬರ ಆರ್‌ಬಿಐನ 2-6% ಗುರಿಗಿಂತ ಮೇಲ್ಮಟ್ಟದಲ್ಲಿದೆ. ಆರ್‌ಬಿಐ ಇದನ್ನು 2024ರ ವೇಳೆಗೆ 4%ಕ್ಕೆ ತಗ್ಗಿಸಲು ಕಾರ್ಯಪ್ರವೃತ್ತವಾಗಿದೆ.
ಜಿಡಿಪಿ 6%ಕ್ಕೆ ಇಳಿಯುವುದರಿಂದ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಎಕಾನಮಿ ಎಂಬ ಹೆಗ್ಗಳಿಕೆ ಬಹುಶಃ ಹೋಗಬಹುದು. ಆದರೆ ಬೇಡಿಕೆ ಕಡಿಮೆಯಾಗುವುದರಿಂದ ಹಣದುಬ್ಬರ ನಿಯಂತ್ರಿಸಬಹುದು. ವಿತ್ತೀಯ ಮತ್ತು ಚಾಲ್ತಿ ಖಾತೆ ಕೊರತೆಯ ಅವಳಿ ಸಮಸ್ಯೆಯನ್ನು ನಿರ್ವಹಿಸಬಹುದು. ಕಳೆದ ಮೇನಿಂದ 1.90% ಬಡ್ಡಿ ದರ ಏರಿಕೆ ಆಗಿರುವುದರಿಂದ ಹಣದುಬ್ಬರ ಇಳಿಕೆಯನ್ನೂ ನಿರೀಕ್ಷಿಸಲಾಗಿದೆ ಎನ್ನುತ್ತಾರೆ ಗೋಲ್ಡ್ಮನ್ ಸ್ಯಾಕ್ಸ್‌ನ ಶಂತನು ಸೇನಗುಪ್ತಾ.
ಬಹುತೇಕ ಇತರ ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ. ಜಾಗತಿಕ ಆರ್ಥಿಕತೆಯ ಮಂದಗತಿಯ ಪರಿಣಾಮ ಸದ್ಯ ಸವಾಲುಗಳಿವೆ. ಹೀಗಾಗಿ ಜಿಡಿಪಿ ಶೇ.6ಕ್ಕೆ ಇಳಿದರೆ ಚಿಂತೆಯ ವಿಷಯವಲ್ಲ ಎನ್ನುತ್ತಾರೆ ಅವರು.