Site icon Vistara News

Financial Resolutions : 2024ರಲ್ಲಿ ಶ್ರೀಮಂತರಾಗಲು 9 ಸೂತ್ರಗಳು

cash

ಬೆಂಗಳೂರು: ಹೊಸ ವರ್ಷ 2024 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಪ್ರತಿ ವರ್ಷ ಹಲವಾರು ಮಂದಿ ನಾನಾ ಸಂಕಲ್ಪಗಳನ್ನು ಮಾಡುತ್ತಾರೆ. ಆದರೆ ಹಣಕಾಸು ಕುರಿತ ಸಂಕಲ್ಪಗಳು ( Financial Resolutions) ವಿಶೇಷ ಮತ್ತು ಅಗತ್ಯ ಇದೆ ಎನ್ನುತ್ತಾರೆ ವಿಸ್ತಾರ ನ್ಯೂಸ್‌ ಎಕ್ಸಿಕ್ಯುಟಿವ್‌ ಎಡಿಟರ್‌ ಶರತ್‌ ಎಂ.ಎಸ್‌ ಅವರು. ಅವರು ತಿಳಿಸಿಕೊಟ್ಟಿರುವ, 2024ರಲ್ಲಿ ಶ್ರೀಮಂತರಾಗಲು 9 ಸೂತ್ರಗಳು ಏನು? ವಿಸ್ತಾರ ಮನಿ ಪ್ಲಸ್‌ನಲ್ಲಿನ ಈ ವಿಡಿಯೊವನ್ನು ನೀವು ತಪ್ಪದೆ ವೀಕ್ಷಿಸಬೇಕು. ವಿಡಿಯೊದ ಲಿಂಕ್‌ ಹಾಗೂ ಸಾರವನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: Money Guide: ಹೋಮ್‌ಲೋನ್‌ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ

  1. ಬರೀ ಉಳಿತಾಯ ಮಾಡಬೇಡಿ, ಹೂಡಿಕೆ ಮಾಡಿ: ಇದು ಮೊದಲನೆಯ ಸಂಕಲ್ಪ ಆಗಿರಬೇಕು. ನಿಮ್ಮ ಮನೆಯಲ್ಲಿ ಒಂದು ಡಬ್ಬದಲ್ಲಿ ಅಕ್ಕಿ ಇದೆ ಎಂದಿಟ್ಟುಕೊಳ್ಳಿ. ಅದು ಬೆಳೆಯಲು ಏನು ಮಾಡಬೇಕು? ಕೃಷಿ ಮಾಡಬೇಕು. ಅದೇ ರೀತಿ ನಿಮ್ಮ ಹಣ ಬೆಳೆಯಲು ನಿಮ್ಮ ದುಡ್ಡನ್ನು ಬಿತ್ತಿ ಬೆಳೆಯಬೇಕು. ಅಂದರೆ, ಉಳಿತಾಯ ಮಾಡಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಬೇಕು. ಹಣದುಬ್ಬರದ ಹೆಚ್ಚಳದ ಹಿನ್ನೆಲೆಯಲ್ಲಿ ಜನತೆ ಉಳಿತಾಯದ ಜತೆಗೆ ಸೂಕ್ತವಾದ ರೀತಿಯಲ್ಲಿ ಹೂಡಿಕೆ ಮಾಡಬೇಕು. ಸರಿಯಾದ ಹೂಡಿಕೆಯ ಸಾಧನಗಳಲ್ಲಿ ಇನ್ವೆಸ್ಟ್‌ ಮಾಡಬೇಕು. ಇಲ್ಲದಿದ್ದರೆ ಹಣದುಬ್ಬರವು ನಿಮ್ಮ ಉಳಿತಾಯದ ಹಣದ ಮೌಲ್ಯವನ್ನು ನುಂಗಿ ಹಾಕುತ್ತದೆ. ದುಡ್ಡಿನ ಮೌಲ್ಯ ಕುಸಿಯದಂತೆ ನೋಡಿಕೊಳ್ಳಲು ಹೂಡಿಕೆ ಅವಶ್ಯಕ.
  2. ಶ್ರೀಮಂತರಾಗಿ ಕಾಣಿಸುವುದಕ್ಕಿಂತ ಶ್ರೀಮಂತರಾಗಿ ಇರುವುದು ಮುಖ್ಯ: ನನ್ನ ಬಳಿ ಹಣ ಇದೆಯೋ, ಇಲ್ಲವೋ ಹಣ ಇರುವವರ ರೀತಿ ಕಾಣಿಸಬೇಕು ಎನ್ನುವುದು ಸರಿಯಲ್ಲ. ತೋರಿಕೆಯ ಸಿರಿವಂತಿಕೆ ಅಗತ್ಯವಿಲ್ಲ. ಅದನ್ನು ಮಾಡಿದಾಗ ಹಣವನ್ನು ಕಳೆದುಕೊಳ್ಳುತ್ತೀರಿ. ಏಕೆಂದರೆ ಅದಕ್ಕೆ ಕೊನೆಯೇ ಇರುವುದಿಲ್ಲ. ಯಾವುದಕ್ಕೆ ಖರ್ಚು ಮಾಡಬೇಕು ಎನ್ನುವುದು ಮುಖ್ಯ. ಒಳ್ಳೆಯ ಆಹಾರ, ಹೊಸತನ್ನು ಕಲಿಯಲು, ಮಕ್ಕಳಿಗೆ ಉಪಯೋಗವಾಗುವ ಗ್ಯಾಜೆಟ್‌ ಖರೀದಿಸುತ್ತೀರಾ, ಅದೆಲ್ಲ ಒಳ್ಳೆಯದು. ಆದರೆ ಹತ್ತಾರು ವಾಚು ಕೊಳ್ಳುವುದು ಸರಿಯಲ್ಲ.
  3. ನಿಮ್ಮ ಹಣ ಎಷ್ಟು ವರ್ಷಕ್ಕೆ ಡಬಲ್‌ ಆಗುತ್ತೆ ಎಂಬುದನ್ನು ತಿಳಿಯಿರಿ: ನಿಮ್ಮ ಬಳಿ 10 ಲಕ್ಷ ರೂ. ಇದೆ ಎಂದಿಟ್ಟುಕೊಳ್ಳಿ. ಇದಕ್ಕೆ 17-18% ರಿಟರ್ನ್‌ ಸಿಗುವುದಿದ್ದರೆ ಪ್ರತಿ 3.5 ವರ್ಷಕ್ಕೆ ನಿಮ್ಮ ಹಣ ಡಬಲ್‌ ಆಗುತ್ತದೆ. ಅಂದರೆ 20 ಲಕ್ಷ ರೂ. ಆಗುತ್ತದೆ. ಮತ್ತೆ 3.5 ವರ್ಷ ಕಳೆದರೆ 40 ಲಕ್ಷ ರೂ. ಆಗುತ್ತದೆ. ನೀವು 72ರಿಂದ ನಿರೀಕ್ಷಿತ ರಿಟರ್ನ್‌ ಅನ್ನು ಭಾಗಿಸಿದರೆ ಎಷ್ಟು ವರ್ಷಕ್ಕೆ ಹಣ ಡಬಲ್‌ ಆಗುತ್ತದೆ ಎಂಬುದನ್ನು ತಿಳಿಯಬಹುದು.
  4. ನಿಮ್ಮ ಕಾಲೆಳೆಯುವ ಜನರಿಂದ ದೂರವಿರಿ : ಜೀವನದಲ್ಲಿ ಮಜ-ಮಸ್ತಿ ಎಲ್ಲವೂ ನಿಯಂತ್ರಣದಲ್ಲಿ ಇದ್ದರೆ ಸರಿ. ತಪ್ಪಿದರೆ ನಿಮ್ಮ ಹಣಕಾಸು ಅಭಿವೃದ್ಧಿಯೂ ಮುಗ್ಗರಿಸುತ್ತದೆ. ಅನೇಕ ಸಲ ದುಶ್ಚಟಗಳನ್ನು ಕೈ ಬಿಟ್ಟು, ಅತಿಯಾದ ಮೋಜು ಮಸ್ತಿಯನ್ನು ತೊರೆದು ಸರಿಯಾದ ದಾರಿಯಲ್ಲಿ ನಡೆಯಲು ನಿರ್ಧರಿಸಿದರೂ, ಸ್ನೇಹಿತರು ಅಥವಾ ಗೊತ್ತಿರುವವರೇ ಕಾಲೆಳೆಯುತ್ತಾರೆ. ಉದಾಹರಣೆಗೆ ವ್ಯಕ್ತಿಯೊಬ್ಬ ತನ್ನ ಕುಡಿತವನ್ನೋ, ಸಿಗರೇಟ್‌ ಸೇದುವ ದುರಭ್ಯಾಸವನ್ನೋ ತ್ಯಜಿಸಲು ಸಂಕಲ್ಪ ತೊಡಬಹುದು. ಆದರೆ ಆಗ ಗೆಳೆಯರೇ, ಜೀವನದಲ್ಲಿ ಇಷ್ಟಾದರೂ ಮಜ ಇರದಿದ್ದರೆ ಏನು ಪ್ರಯೋಜನ ಎಂದು ಕಾಲೆಳೆಯಬಹುದು. ಆಗ ಸರಿ ದಾರಿಯಲ್ಲಿ ಹೋಗಬೇಕೆಂದು ಕೊಂಡಿದ್ದ ವ್ಯಕ್ತಿ ಮತ್ತೆ ಹಳೆಯ ಅಭ್ಯಾಸಗಳನ್ನೇ ಮೈಗೂಡಿಸಿದರೆ ಬದುಕು ಮತ್ತೆ ಹಳಿ ತಪ್ಪುತ್ತದೆ. ಅಭಿವೃದ್ಧಿ ಕನಸಿನ ಮಾತಾಗುತ್ತದೆ.
  5. ಕೋಟ್ಯಧಿಪತಿ ಮನಸ್ಥಿತಿ ಇಟ್ಟುಕೊಳ್ಳಿ: ಇವತ್ತು ಹಣದುಬ್ಬರ ಅಥವಾ ಬೆಲೆ ಏರಿಕೆಯ ಪರಿಣಾಮ ಕೋಟಿ ರೂ. ಗಳಿಸಿದರೂ ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಆದರೂ ಸಾಮಾನ್ಯ ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಕೋಟಿ ರೂ. ಎಂದರೆ ದೊಡ್ಡ ಮೊತ್ತ. ಮೂರು ಮಾದರಿಗಳನ್ನು ನೋಡೋಣ. ಸಾಂಪರದಾಯಿಕವಾಗಿ ಒಂದು ಅಥವಾ ಹಲವಾರು ಕಂಪನಿಗಳಲ್ಲಿ 40 ವರ್ಷಗಳ ಕಾಲ ದುಡಿದು, ಕೂಡಿಟ್ಟು, ಉಳಿತಾಯ ಮಾಡಿ ಕೋಟಿ ರೂ. ಸಂಪತ್ತು ಗಳಿಸುವುದು. ಇದು ತಂದೆ-ಅಜ್ಜನ ಕಾಲದ ಸಾಂಪ್ರದಾಯಿಕ ಮಾದರಿ. ಎರಡನೇ ಮಾದರಿ ನೀವು ಗಳಿಸಿದ ಹಣದಲ್ಲಿ ಕನಿಷ್ಠ 35- 50% ಹಣವನ್ನು ಬೇರೆ ಬೇರೆ ಉಳಿತಾಯ ಸಾಧನಗಳಲ್ಲಿ ಹೂಡಿಕೆ ಮಾಡುವುದು. ನೀವು ಸಂಪಾದಿಸುವ ಹಣದಲ್ಲಿ ಸಿಂಹಪಾಲನ್ನು ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿದರೆ ಕೋಟ್ಯಧಿಪತಿಯಾಗಬಹುದು. ಮೂರನೇ ಮಾದರಿಯಲ್ಲಿ ನೀವು ಹಲವಾರು ಕೋಟಿ ರೂ. ಗಳಿಸಲು ಯತ್ನಿಸುವುದು. ಅಂದರೆ ನಿಮ್ಮ ಆಸಕ್ತಿ, ಪ್ರತಿಭೆ, ಸಾಮರ್ಥ್ಯವನ್ನು ಕೇಂದ್ರೀಕರಿಸಿ ಪರಿಶ್ರಮ ಪಡುವುದು. ಉದಾಹರಣೆಗೆ ನೀವು ಯಾವುದೋ ಒಂದು ಕ್ಷೇತ್ರದಲ್ಲಿ ಪರಿಣತರು. ಹಣಕಾಸು ಸಲಹೆಗಳನ್ನು, ಕಾರ್ಯತಂತ್ರಗಳನ್ನು ನೀಡಬಹುದು. ಬೇರೆ ಬೇರೆ ಆನ್‌ ಲೈನ್‌ ಕೋರ್ಸ್‌ ಗಳನ್ನು ಮಾಡಿ ಮಾರಾಟ ಮಾಡಬಹುದು. ಈ ಮೂರನೇ ಮಾರ್ಗ ಕಷ್ಟವಾದರೂ, ಅಸಾಧ್ಯವೇನಲ್ಲ.
  6. ಹೂಡಿಕೆ ಬಗ್ಗೆ ತಿಳಿಯದಿದ್ದರೆ ತಜ್ಞರ ನೆರವು ಪಡೆಯಿರಿ: ತುಂಬ ಜನ ಸ್ಟಾಕ್‌ ಮಾರ್ಕೆಟ್‌ ನಲ್ಲಿ ದುಡ್ಡು ಮಾಡಬಹುದು ಎಂದು ಬಯಸುತ್ತಾರೆ. ಆದರೆ ಸ್ಟಾಕ್‌ ಇನ್ವೆಸ್ಟಿಂಗ್‌ ಮತ್ತು ಟ್ರೇಡಿಂಗ್‌ ಬಗ್ಗೆ ತಿಳಿದಿರುವುದಿಲ್ಲ. ನಿವೃತ್ತಿ ಬದುಕಿಗೆ ಆಧಾರವಾಗುವ ಪಿಂಚಣಿ ನಿಧಿಯನ್ನೇ ದಿಢೀರ್‌ ಸ್ಟಾಕ್‌ ಟ್ರೇಡಿಂಗ್‌ನಲ್ಲಿ ಹಾಕಿ ಕಳೆದುಕೊಳ್ಳುತ್ತಾರೆ. ಇದು ತಪ್ಪು. ನೀವೇ ಕಲಿತು ಹೂಡಿಕೆ ಮಾಡಿದರೆ ಉತ್ತಮ, ಇಲ್ಲದಿದ್ದರೆ ತಜ್ಞರ ನೆರವು ಪಡೆದು ಇನ್ವೆಸ್ಟ್‌ ಮಾಡಬೇಕು. ತಜ್ಞರ ಹಿನ್ನೆಲೆಯನ್ನು ತಿಳಿದು ಮುಂದುವರಿಯಿರಿ.
  7. ಟರ್ಮ್‌ ಇನ್ಷೂರೆನ್ಸ್‌, ಹೆಲ್ತ್‌ ಇನ್ಷೂರೆನ್ಸ್‌ ಪಡೆಯಿರಿ: ಹೆಲ್ತ್‌ ಇನ್ಷೂರೆನ್ಸ್‌ ಮತ್ತು ಟರ್ಮ್‌ ಇನ್ಷೂರೆನ್ಸ್‌ ಎನ್ನುವುದು ವ್ಯಕ್ತಿಯ ವೈಯಕ್ತಿಕ ಸಂಪತ್ತಿನ ಗೋಪುರವನ್ನು ಕಟ್ಟಲು ಭದ್ರ ಬುನಾದಿ. ಕಷ್ಟಪಟ್ಟು ಸಂಪಾದಿಸುತ್ತೀರಾ. ಆದರೆ ಕುಟುಂಬದ ಸದಸ್ಯರೊಬ್ಬರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರೆ ಲಕ್ಷಾಂತರ ರೂ. ವೆಚ್ಚವಾದೀತು. ಆದರೆ ಆರೋಗ್ಯ ವಿಮೆ ಇದ್ದರೆ ಆಸ್ಪತ್ರೆ ವೆಚ್ಚ ನಿಭಾಯಿಸಬಹುದು. ಕುಟುಂಬಕ್ಕೆ ಆಧಾರಸ್ತಂಭವಾಗಿರುವ ವ್ಯಕ್ತಿ ಅಕಸ್ಮಾತ್‌ ಮೃತಪಟ್ಟರೆ ಕುಟುಂಬದ ಆರ್ಥಿಕತೆ ಏರುಪೇರು ಆಗಬಹುದು. ಇದನ್ನು ತಡೆಯಲು ಟರ್ಮ್‌ ಇನ್ಷೂರೆನ್ಸ್‌ ಅಗತ್ಯ.
  8. ದುಡ್ಡನ್ನು ನಕಾರಾತ್ಮಕವಾಗಿ ನೋಡಬೇಡಿ. ಗೌರವಿಸುವುದನ್ನು ಕಲಿಯಿರಿ: ದುಡ್ಡು ಅಂದ ತಕ್ಷಣ ಜನ ನಕಾರಾತ್ಮಕವಾಗಿ ಮಾತನಾಡುತ್ತಾರೆ. ಆದರೆ ಪ್ರಾಮಾಣಿಕವಾಗಿ ದುಡ್ಡು ಸಂಪಾದಿಸುವುದು ಉತ್ತಮ. ದುಡ್ಡು ಅಂದರೆ ನಿರ್ಲಕ್ಷ್ಯ ಮಾಡದಿರಿ.
  9. ನಿರಂತರ ಕಲಿಕೆಗೆ ಒತ್ತು ಕೊಡಿ: ಕಲಿಕೆ ಇಲ್ಲದೆ ಗಳಿಕೆ ಸಾಧ್ಯವಿಲ್ಲ. ನೀವು ಯಾವುದೇ ಕೆಲಸ ಮಾಡಿ, ಹೊಸ ಕೌಶಲಗಳನ್ನು ಕಲಿಯಿರಿ. ಉದಾಹರಣೆಗೆ ವಿಡಿಯೊ ಎಡಿಟರ್‌ ಆಗಿದ್ದರೆ ಹೊಸ ಕ್ಯಾಮೆರಾಗಳು, ಎಡಿಟಿಂಗ್‌ ಸಾಫ್ಟ್‌ ವೇರ್‌ ಬರುತ್ತವೆ. ಅದನ್ನು ಕಲಿಯಿರಿ. ಹಣವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿದುಕೊಳ್ಳಲೂ ಕಲಿಯುವಿಕೆ ಅವಶ್ಯಕ.
Exit mobile version