Site icon Vistara News

Business Ideas : ಕೇವಲ 5000 ರೂ.ಗಳಲ್ಲಿ ಆರಂಭಿಸಬಹುದಾದ ಹೊಸ ಬಿಸಿನೆಸ್‌ ಐಡಿಯಾ

business

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಣ್ಣ ಬಂಡವಾಳದಲ್ಲಿ ( Business Ideas ) ಯಾವುದಾದರೂ ಸ್ವಂತ ವ್ಯಾಪಾರ ಶುರು ಮಾಡಿ ಲಾಭ ಗಳಿಸಬೇಕು. ತಮ್ಮ ಕಾಲಮೇಲೆ ತಾವೇ ನಿಲ್ಲಬೇಕು. ಸಾಧ್ಯವಾದರೆ ಹತ್ತಾರು ಜನರಿಗೆ ಕೆಲಸವನ್ನೂ ಕೊಡಬೇಕು ಎಂಬ ಆಕಾಂಕ್ಷೆ ಅನೇಕ ಮಂದಿಯಲ್ಲಿ ಉಂಟಾಗುತ್ತಿದೆ. ಆದರೆ ಅಂಥ ಬಿಸಿನೆಸ್‌ ಯಾವುದು ಎಂಬ ಬಗ್ಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆಯನ್ನು ಕಾಣಬಹುದು. ಈ ನಿಟ್ಟಿನಲ್ಲಿ ವಿಸ್ತಾರ ಬಿಸಿನೆಸ್‌ & ಪ್ರಾಪರ್ಟಿ ಚಾನೆಲ್‌ನಲ್ಲಿ ಕೇವಲ 5,000 ರೂ. ಗಳ ಚಿಕ್ಕ ಬಂಡವಾಳದಲ್ಲಿ ಆರಂಭಿಸಬಹುದಾದ ಹತ್ತು ಬಿಸಿನೆಸ್‌ ಐಡಿಯಾಗಳ ವಿವರಗಳನ್ನು ನೀಡಲಾಗುತ್ತಿದೆ. ಅದರ ವಿವರಗಳನ್ನು ನೋಡೋಣ.

ಮೊದಲ ಐಡಿಯಾ- ಟಿಫಿನ್‌ ಸರ್ವೀಸ್:‌ ನೀವು 5 ಸಾವಿರ ರೂ.ಗಳಲ್ಲಿ ಒಂದಷ್ಟು ಅಡುಗೆ ಪಾತ್ರೆಗಳನ್ನು ಖರೀದಿಸಬಹುದು. ಒಂದಷ್ಟು ಕರಪತ್ರ ಅಥವಾ ಬ್ರೋಶರ್‌ಗಳನ್ನು ಸಿದ್ಧಪಡಿಸಬಹುದು. ಜತೆಗೆ ನೀವು ಚೆನ್ನಾಗಿ ಅಡುಗೆ ಮಾಡಲು ಕಲಿತಿದ್ದರೆ, ಟಿಫಿನ್‌ ಸರ್ವೀಸ್‌ ಅನ್ನು ಸುಲಭವಾಗಿ ಆರಂಭಿಸಬಹುದು. ಜನರಿಗೆ ಮನೆಯೂಟವನ್ನು ಪೂರೈಸಬಹುದು. ಆರಂಭದಲ್ಲಿ ತಿಂಗಳಿಗೆ 20 ಸಾವಿರ ರೂ.ಗಳಿಂದ 30 ಸಾವಿರ ರೂ. ತನಕ ಗಳಿಸಬಹುದು. ನಗರ ಪ್ರದೇಶಗಳಲ್ಲಿ ಈ ಬಿಸಿನೆಸ್‌ ಜನಪ್ರಿಯವಾಗುತ್ತಿದೆ.

ಎರಡನೇ ಐಡಿಯಾ- ಕನ್ಸಲ್ಟೆಂಟ್‌ ಸರ್ವೀಸ್:‌ ನೀವು ಯಾವುದೇ ವೃತ್ತಿಯಲ್ಲಿ 10-15 ವರ್ಷ ಕೆಲಸ ಮಾಡಿದರೆ, ಅದೇ ನಿಮಗೆ ಕನ್ಸಲ್ಟೆಂಟ್‌ ಸರ್ವೀಸ್‌ ಮಾಡಲು ಮೊದಲ ಅರ್ಹತೆಯಾಗುತ್ತದೆ. ಉದಾಹರಣೆಗೆ ಯಾವುದಾದರೂ ಕಂಪನಿಯಲ್ಲಿ ಹತ್ತಾರು ವರ್ಷಗಳ ಕಾಲ ಕ್ವಾಲಿಟಿ ಕಂಟ್ರೋಲರ್‌ ಅಥವಾ ನಿರ್ದಿಷ್ಟ ವಿಭಾಗದಲ್ಲಿ ಮ್ಯಾನೇಜರ್‌ ಹಂತದ ತನಕ ಕೆಲಸ ಮಾಡಿದ್ದರೆ, ನೀವು ಕ್ವಾಲಿಟಿ ಕಂಟ್ರೋಲ್‌, ಬಿಸಿನೆಸ್‌ ಮ್ಯಾನೇಜ್‌ ಮೆಂಟ್‌ ಬಗ್ಗೆ ಕನ್ಸಲ್ಸೆನ್ಸಿಯಾಗಿ ನಿಮ್ಮದೇ ಸರ್ವೀಸ್‌ ಬಿಸಿನೆಸ್‌ ಆರಂಭಿಸಬಹುದು. ಪ್ರತಿಯಾಗಿ ನಿರ್ದಿಷ್ಟ ಶುಲ್ಕವನ್ನು ಪಡೆಯಬಹುದು. ಇದಕ್ಕೆ ನಿಮ್ಮ ಕೌಶಲವನ್ನು, ಜ್ಞಾನವನ್ನು ಬಳಸಿದರೆ ಸಾಕು. ಮನೆಯಿಂದಲೇ ಈ ಬಿಸಿನೆಸ್‌ ಆರಂಭಿಸಬಹುದು.

ಮೂರನೇ ಐಡಿಯಾ – ಟ್ರಾನ್ಸ್‌ಲೇಶನ್‌ ಸರ್ವೀಸ್‌ ಬಿಸಿನೆಸ್:‌ ನೀವು ಎರಡು ಭಾಷೆಗಳ ನಡುವೆ ಅನುವಾದ ಮಾಡುವ ಸಾಮರ್ಥ್ಯ ಗಳಿಸಿದ್ದರೆ, ಅದನ್ನೇ ನಿಮ್ಮ ಹೊಸ ಬಿಸಿನೆಸ್‌ ಮಾಡಬಹುದು. ಉದಾಹರಣೆಗೆ ಇಂಗ್ಲಿಷ್‌ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರ ಮಾಡಲು ಗೊತ್ತಿದ್ದರೆ, ಅದರಿಂದಲೇ ಹಣ ಗಳಿಸಬಹುದು. ಪುಸ್ತಕಗಳನ್ನು ಅನುವಾದಿಸಬಹುದು. ಪಬ್ಲಿಕ್‌ ರಿಲೇಶನ್‌ಶಿಪ್‌ ಕಂಪನಿಗಳಿಗೆ ಪ್ರಕಟಣೆಗಳನ್ನು ಅನುವಾದಿಸಿ ಕೊಡಬಹುದು. ಜಾಹೀರಾತು ಕಂಪನಿಗಳಿಗೂ ಅನುವಾದ ಸೇವೆಯ ಅಗತ್ಯ ಇರುತ್ತದೆ. ಇಲ್ಲೂ ನಿಮ್ಮ ಭಾಷಾಂತರ ಕೌಶಲವೇ ಮೂಲ ಬಂಡವಾಳ.

ಇದನ್ನೂ ಓದಿ: Money Guide: ಹೊಸ ವರ್ಷದಲ್ಲಿ ಆರ್ಥಿಕ ಶಿಸ್ತು ರೂಢಿಸಿಕೊಳ್ಳಲು ಇಲ್ಲಿದೆ ಟಿಪ್ಸ್‌

ನಾಲ್ಕನೇ ಐಡಿಯಾ- ಪ್ಯಾಕಿಂಗ್‌ ಬಿಸಿನೆಸ್:‌ ವಿದ್ಯಾರ್ಥಿಗಳು, ಗೃಹಿಣಿಯರು, ನಿರುದ್ಯೋಗಿಗಳು, ಕಡಿಮೆ ಸಂಬಳ ಬರುತ್ತಿದ್ದು, ಏನಾದರೂ ಪಾರ್ಟ್‌ ಟೈಮ್‌ ಬಿಸಿನೆಸ್‌ ಅನ್ನು ಮಾಡಬೇಕು ಹಾಗೂ ಕಡಿಮೆ ಬಂಡವಾಳದಲ್ಲಿ ಮಾಡಬೇಕು ಎಂದು ಬಯಸುವವರು ಅತ್ಯಂತ ಸುಲಭವಾಗಿ ಮಾಡಬಹುದಾದ ಬಿಸಿನೆಸ್‌ ಪ್ಯಾಕಿಂಗ್‌ ಬಿಸಿನೆಸ್.‌ ನೀವು ಕಿರಾಣಿ ಅಂಗಡಿ ಅಥವಾ ದಿನಸಿ ಅಂಗಡಿಗಳಲ್ಲಿ ಜೀರಿಗೆ, ಚಕ್ಕೆ, ಲವಂಗ, ಸಾಸಿವೆ, ಸೊಂಪು, ಡ್ರೈ ಫ್ರುಟ್ಸ್‌, ಸ್ನ್ಯಾಕ್ಸ್‌ಗಳನ್ನು ಸಣ್ಣ ಸಣ್ಣ ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುವುದನ್ನು ನೋಡಬಹುದು. ಈ ರೀತಿಯ ಪದಾರ್ಥಗಳನ್ನು ನೀವು ಪ್ಯಾಕಿಂಗ್‌ ಮಾಡಿ ಅಂಗಡಿಗಳಿಗೆ ಮಾರಾಟ ಮಾಡಬಹುದು. ಇದಕ್ಕೆ ಬೇಕಾಗುವ ಎಲ್ಲ ಸಾಮಾಗ್ರಿಗಳೂ ಮಾರುಕಟ್ಟೆಯಲ್ಲಿ ಹೋಲ್‌ ಸೇಲ್‌ ದರದಲ್ಲಿ ಸಿಗುತ್ತವೆ. ದಿನಕ್ಕೆ ಎರಡು ಸಾವಿರ ರೂಪಾಯಿ ತನಕ ಇದರಲ್ಲಿ ಸಂಪಾದನೆ ಮಾಡಬಹುದು.

ಐದನೇ ಐಡಿಯಾ- ಮನೆಯಲ್ಲಿಯೇ ತಯಾರಿಸುವ ಸೋಪ್: ಮನೆಯಲ್ಲಿಯೇ ಸೋಪುಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಇದಕ್ಕೆ ಆನ್‌ಲೈನ್‌ ಮಾರುಕಟ್ಟೆಯನ್ನೂ ಕಂಡುಕೊಳ್ಳಬಹುದು. ಇದರ ವಿಶೇಷತೆ ಏನೆಂದರೆ ಸೋಪು ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳ ಬೆಲೆ ಕಡಿಮೆ. ನುಗ್ಗೆ ಸೊಪ್ಪನ್ನು ಒಣಗಿಸಿ ಪೌಡರ್‌ ಮಾಡಿ, ಅಲೆವೆರಾ, ಆಲಿವ್‌ ಆಯಿಲ್‌, ರೋಸ್‌ ವಾಟರ್ ಹಾಕಿಯೂ ಸೋಪ್‌ ತಯಾರಿಸಬಹುದು.‌ ಕೆಮಿಕಲ್‌ ಹಾಕದೆ ತಯಾರಿಸುವ ಸೋಪಿನಲ್ಲಿ ನೊರೆ ಕಡಿಮೆ ಇರಬಹುದು, ಆದರೆ ಚರ್ಮದ ಆರೋಗ್ಯಕ್ಕೆ ಉತ್ತಮ. ಈ ಅಂಶವನ್ನೇ ಮಾರ್ಕೆಟ್‌ ಸ್ಟ್ರಾಟಜಿಯಾಗಿ ಬಳಸಬಹುದು. ಸ್ವದೇಶಿ ಚಿಂತನೆಗೆ ಒತ್ತು ನೀಡುವ ಮಳಿಗೆಗಳೂ ಇಂಥ ಸೋಪ್‌ ಗಳನ್ನು ಖರೀದಿಸುತ್ತವೆ.

Exit mobile version