Site icon Vistara News

ವಿಸ್ತಾರ Explainer | Aadhaar card | ಆಧಾರ್‌ ಕಾರ್ಡ್‌ ಕಳೆದಾಗ ಸುಮ್ಮನಿದ್ದರೆ ಡೇಂಜರ್!

aadhaar

ಆಧಾರ್‌ ಕಾರ್ಡ್‌ ಸಂಖ್ಯೆ ಈಗ ಅತ್ಯಂತ ವಿಶ್ವಾಸಾರ್ಹ ಗುರುತಿನ ದಾಖಲೆ. ದೇಶಾದ್ಯಂತ ಜನತೆ ಇದನ್ನು ಬಳಸುತ್ತಾರೆ. ಆದರೆ ನೀವು ಮುದ್ರಿತ ಆಧಾರ್‌ ಕಾರ್ಡ್‌ ಅನ್ನು ಕಳೆದುಕೊಂಡಾಗ ಸುಮ್ಮನಿದ್ದರೆ, ಅಪಾಯಕ್ಕೀಡಾಗುವ ಸಾಧ್ಯತೆಯೂ ಇದೆ.

ಮಂಗಳೂರಿನ ಹೊರ ವಲಯದ ನಾಗುರಿಯಲ್ಲಿ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ‌ (Mangalore Blast) ಪ್ರಕರಣಕ್ಕೆ ಸಂಬಂಧಪಟ್ಟಂತೆ, ಗಾಯಾಳು ವ್ಯಕ್ತಿಯ ಬಳಿ ಪತ್ತೆಯಾಗಿದ್ದ ಆಧಾರ್‌ ಕಾರ್ಡ್‌ ನಕಲಿ ಎಂದು ತಿಳಿದುಬಂದ ಬೆನ್ನಲ್ಲೇ ಅಸಲಿ ವ್ಯಕ್ತಿಯ ವಿಚಾರಣೆ ಪ್ರಾರಂಭವಾಗಿತ್ತು. ಬಳಿಕ ಅಸಲಿ ಕಾರ್ಡ್‌ದಾರ ಪ್ರೇಮ್‌ ರಾಜ್‌ ಹುಟಗಿ ಎಂಬುವವರು ತುಮಕೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ತಮ್ಮ ಆಧಾರ್‌ ಕಾರ್ಡ್‌ ಕಳೆದುಹೋಗಿದ್ದರ ಬಗ್ಗೆ ವಿವರಣೆ ನೀಡಿದರು.

ಹುಬ್ಬಳ್ಳಿಯ ಮೂಲದ ಪ್ರೇಮರಾಜ್‌ ಹುಟಗಿ, ತುಮಕೂರಿನಲ್ಲಿ ರೈಲ್ವೆ ಹಳಿಯ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ತುಮಕೂರಿನಲ್ಲಿ ವಾಸವಾಗಿದ್ದಾರೆ. ಕಳೆದ ಎರಡು ವರ್ಷದಲ್ಲಿ ಎರಡು ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಮಂಗಳೂರಿನ ಆಟೊದಲ್ಲಿ ಸ್ಫೋಟ ಉಗ್ರರ ಕೃತ್ಯವಾಗಿರುವುದರಿಂದ ಪ್ರೇಮರಾಜ್‌ ಅವರು ಪೊಲೀಸ್‌ ವಿಚಾರಣೆಯನ್ನು ಎದುರಿಸಬೇಕಾಯಿತು. ಹೀಗಾಗಿ ಆಧಾರ್‌ ಕಾರ್ಡ್‌, ವಾಹನಗಳ ಲೈಸೆನ್ಸ್‌, ಇತರ ದಾಖಲಾತಿಗಳು ಕಳೆದು ಹೋದಾಗ, ದುರ್ಬಳಕೆ ಆಗದಂತೆ ಎಚ್ಚರ ವಹಿಸಬೇಕು. ಹಾಗಾದರೆ ಆಧಾರ್‌ ಕಳೆದಾಗ ಏನು ಮಾಡಬೇಕು? ಇಲ್ಲಿದೆ ವಿವರ.

ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ:

ಮುದ್ರಿತ ಆಧಾರ್‌ ಕಾರ್ಡ್‌ (Printed copy of Aadhaar) ಆಕಸ್ಮಿಕವಾಗಿ ಕಳೆದುಹೋದರೆ, ಏನು ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರದ MY GOV ಬ್ಲಾಗ್‌ನಲ್ಲಿ ವಿವರಿಸಲಾಗಿದೆ. ಅದರ ಪ್ರಕಾರ, ಆಧಾರ್‌ ಕಾರ್ಡ್‌ ಕಳೆದಾಗ, ಮೊದಲನೆಯದಾಗಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಬೇಕು. ಯಾವುದೇ ಮಹತ್ವದ ದಾಖಲೆ ಕಳೆದಾಗ, ಎಫ್‌ಐಆರ್‌ ದಾಖಲಿಸಬಹುದು. ಬಳಿಕ ನೀವು ಸುಲಭವಾಗಿ ಆನ್‌ಲೈನ್‌ ಮೂಲಕ ಆಧಾರ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಆಧಾರ್‌ ಕಾರ್ಡ್‌ ಕಳೆದು ಹೋದರೆ ನೀವು ಆಧಾರ್‌ ಸಂಖ್ಯೆ ಹಾಗೂ ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನು ಯುಐಡಿಎಐ ವೆಬ್‌ಸೈಟ್‌ನಲ್ಲಿ ( https://uidai.gov.in) ಅರ್ಜಿ ಸಲ್ಲಿಸಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. mAadhaar ಮೊಬೈಲ್‌ ಅಪ್ಲಿಕೇಶನ್‌ ಅನ್ನೂ ಬಳಸಬಹುದು. ಮೂಲ ಪ್ರತಿ ಬೇಕಿದ್ದರೆ, ಸ್ಪೀಡ್‌ ಪೋಸ್ಟ್‌ ಮೂಲಕ ತರಿಸಿಕೊಳ್ಳಬಹುದು. ಆಧಾರ್‌ ಕಾರ್ಡ್‌ನಲ್ಲಿರುವ ವಿಳಾಸಕ್ಕೆ ತಲುಪುತ್ತದೆ. ಇದಕ್ಕೆ 50 ರೂ. ಶುಲ್ಕ ತಗಲುತ್ತದೆ.

ಆಧಾರ್‌ ಪ್ರತಿ ಪಡೆಯಲು ಆರ್ಡರ್‌ ಮಾಡುವ ವಿಧಾನ ಹೀಗಿದೆ.

೧. ಆನ್‌ಲೈನ್‌ನಲ್ಲಿ uidai.gov.in ವೆಬ್‌ಸೈಟ್‌ಗೆ ತೆರಳಿ. order Aadhar reprint ಆಯ್ಕೆ ಮಾಡಿಕೊಳ್ಳಿ.

2. ಆಧಾರ್‌ ಸಂಖ್ಯೆಯನ್ನು ನಮೂದಿಸಿ

3. ಒಟಿಪಿ ಪ್ರಕ್ರಿಯೆಗೆ ಸೆಕ್ಯುರಿಟಿ ಕೋಡ್‌ ನಮೂದಿಸಿ

4. ಪಡೆದ ಒಟಿಪಿ ನಮೂದಿಸಿ

5. Preview ಮೂಲಕ ವಿವರಗಳನ್ನು ಪರಿಶೀಲಿಸಿ.

6. ಮೇಕ್‌ ಪೇಮೆಂಟ್‌ ಕ್ಲಿಕ್ಕಿಸಿ

7. ಆನ್‌ಲೈನ್‌ ಪೇಮೆಂಟ್‌ ಮೋಡ್‌

8. ಡೌನ್‌ಲೋಡ್‌ ಮಾಡಿಕೊಳ್ಳಿ.

9. ಆಧಾರ್‌ ಕಾರ್ಡ್‌ ಸ್ಪೀಡ್‌ ಪೋಸ್ಟ್‌ನಲ್ಲಿ ನಿಮಗೆ ತಲುಪುತ್ತದೆ.

e-Lost Report : ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಸೌಲಭ್ಯ

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯು ಇ-ಲಾಸ್ಟ್‌ ರಿಪೋರ್ಟ್ಸ್‌ ಎಂಬ ಸೌಲಭ್ಯವನ್ನು ಜಾರಿಗೊಳಿಸಿದೆ. ಇದರ ವಿಶೇಷತೆ ಏನೆಂದರೆ, ನಾಗರಿಕರು ಕಳೆದುಹೋದ ತಮ್ಮ ದಾಖಲೆಗಳು ಅಥವಾ ವಸ್ತುಗಳ ಬಗ್ಗೆ ಆನ್‌ಲೈನ್‌ನಲ್ಲಿ ಸುಲಭವಾಗಿ ವಿವರಗಳನ್ನು ದಾಖಲಿಸಬಹುದು. ಇದೂ ಮಹತ್ವದ ದಾಖಲೆಯಾಗುತ್ತದೆ. ಇದರಿಂದ ಎರಡು ಪ್ರಯೋಜನ ಇದೆ. ಕಳೆದು ಹೋಗಿರುವ ನಿಮ್ಮ ದಾಖಲೆಗಳು ಯಾವುದಾದರೂ ಠಾಣೆಯಲ್ಲಿ ಸಿಕ್ಕಿದರೆ, ಪೊಲೀಸರು ನಿಮ್ಮನ್ನು ಸಂಪರ್ಕಿಸಿ ಮರಳಿಸುತ್ತಾರೆ. ಎರಡನೆಯದಾಗಿ, ನಿಮ್ಮ ದಾಖಲೆ ಕಳೆದುಹೋಗಿರುವುದನ್ನು ಖಾತರಿಪಡಿಸಲು ಒಂದು ದಾಖಲೆಯಾಗುತ್ತದೆ. ವೆಬ್‌ಸೈಟ್‌ ಐಡಿ: https://kspapp.in/ksp/api/elost-reports

ಆಧಾರ್‌ ಕಾರ್ಡ್‌ ದುರ್ಬಳಕೆ ತಡೆಯಲು ಸ‌ಲಹೆ

ನಿಮ್ಮ ಆಧಾರ್‌ ಕಾರ್ಡ್‌ ದುರ್ಬಳಕೆ ತಡೆಯಲು ಉಪಯುಕ್ತ ಟಿಪ್ಸ್‌ ಇಲ್ಲಿದೆ.

1. ಆಧಾರ್‌ ಒಟಿಪಿಯನ್ನು ನಿಮ್ಮ ಪರವಾಗಿ ಬೇರೆಯವರ ಜತೆ ಹಂಚಿಕೊಳ್ಳದಿರಿ.

2. ಇ-ಆಧಾರ್‌ ಅನ್ನು ಡೌನ್‌ಲೋಡ್‌ ಮಾಡಿದ ಬಳಿಕ ಫೈಲ್‌ ಅನ್ನು ಡಿಲೀಟ್‌ ಮಾಡಿ.

3. ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಇ-ಆಧಾರ್‌ ಡೌನ್‌ಲೋಡ್‌ ಮಾಡಿ.

4. ನೀವು ಹಲವು ಸ್ಥಳಗಳಲ್ಲಿ, ಹಲವು ಸಂದರ್ಭಗಳಲ್ಲಿ ಆಧಾರ್‌ ಬಳಸಿದ್ದರೆ, ಆಧಾರ್‌ ಅಥೆಂಟಿಕೇಶನ್‌ ಹಿಸ್ಟರಿಯನ್ನು ಪರಿಶೀಲಿಸಿ. ಕಳೆದ ಆರು ತಿಂಗಳಿನ 50 ಅಥೆಂಟಿಕೇಶನ್‌ಗಳನ್ನು ಪರಿಶೀಲಿಸಬಹುದು.

5. ಆಧಾರ್‌ ದುರ್ಬಳಕೆ ಆಗದಂತೆ ಬಯೋ ಮೆಟ್ರಿಕ್ಸ್‌ ಅನ್ನು ಲಾಕ್‌ ಮಾಡಬಹುದು.

6. ಮಾಸ್ಕ್‌ಡ್‌ ಆಧಾರ್‌ (Masked Aadhaar) ಬಳಸುವ ಮೂಲಕ ನಿಮ್ಮ ಆಧಾರ್‌ ಸಂಖ್ಯೆಯನ್ನು ಬಹಿರಂಗಪಡಿಸದೆ ವ್ಯವಹರಿಸಬಹುದು.

7. ನಿಮ್ಮ ಇತ್ತೀಚಿನ ಬಳಕೆಯ ಮೊಬೈಲ್‌ ನಂಬರ್‌ ಅನ್ನು ಆಧಾರ್‌ ದಾಖಲೆಯಲ್ಲೂ ಅಪ್‌ ಡೇಟ್‌ ಮಾಡಿಟ್ಟಿರಿ.

Exit mobile version