ನವ ದೆಹಲಿ: ಅಮೆರಿಕವು ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನಗಳನ್ನು ಪೂರೈಸುವ ಡೀಲ್‌ಗೆ ಗ್ರೀನ್ ಸಿಗ್ನಲ್ ತೋರಿಸಿರುವ ಬೆನ್ನಲ್ಲೇ, ಭಾರತವು ಅಮೆರಿಕ ನೇತೃತ್ವದ ಅಂತಾರಾಷ್ಟ್ರೀಯ ವ್ಯಾಪಾರ ಮಾತುಕತೆಯನ್ನು ಮೊಟಕುಗೊಳಿಸಿದೆ.
ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿದ್ದ ಇಂಡೊ-ಪೆಸಿಫಿಕ್ ಎಕನಾಮಿಕ್ ಫ್ರೇಮ್‌ವರ್ಕ್ (Indo-Pacific Economic Framework – IPEF) ಮಾತುಕತೆಯಿಂದ ಭಾರತ ನಿರ್ಗಮಿಸಿದೆ.
ಅಮೆರಿಕವು ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನಗಳನ್ನು ಪೂರೈಸುವ 3,500 ಕೋಟಿ ರೂ. ಮೌಲ್ಯದ ಡೀಲ್‌ಗೆ ಹಸಿರು ನಿಶಾನೆ ತೋರಿದ ಬೆನ್ನಲ್ಲೇ, ಈ ವ್ಯಾಪಾರ ಮಾತುಕತೆಯಿಂದ ಭಾರತ ಹೊರ ನಡೆದಿರುವುದು ಗಮನ ಸೆಳೆದಿದೆ. ಹೀಗಿದ್ದರೂ, ಮಾತುಕತೆ ಮುಂದುವರಿಸಲು ಅಮೆರಿಕ ತನ್ನ ಬಾಗಿಲನ್ನು ಮುಕ್ತವಾಗಿರಿಸಿದೆ ಎಂದು ಅಲ್ಲಿನ ವ್ಯಾಪಾರ ಮಾತುಕತೆಯ ವಕ್ತಾರರಾದ ಕ್ಯಾಥರೀನ್ ಟಾಯ್ ತಿಳಿಸಿದ್ದಾರೆ.
ಭಾರತ, ಆಸ್ಟ್ರೇಲಿಯಾ, ಬ್ರುನೈ, ಫಿಜಿ, ಇಂಡೊನೇಷ್ಯಾ, ಜಪಾನ್, ಕೊರಿಯಾ, ಮಲೇಷ್ಯಾ, ನ್ಯೂಜಿಲೆಂಡ್, ಪಿಲಿಪ್ಪೀನ್ಸ್, ಸಿಂಗಾಪುರ್, ಥಾಯ್ಲೆಂಡ್, ವಿಯೆಟ್ನಾಂ, ಅಮೆರಿಕ ಸೇರಿ 14 ದೇಶಗಳು ಈ ಗ್ರೂಪ್‌ನಲ್ಲಿ ಇತ್ತು.
ಭಾರತ 2019ರಲ್ಲಿ ಚೀನಾ ನೇತೃತ್ವದ ಆರ್‌ಸಿಇಪಿ ( Regional Comprehensive Economic Partnership) ವ್ಯಾಪಾರ ಒಪ್ಪಂದದಿಂದ ಕೂಡ ನಿರ್ಗಮಿಸಿತ್ತು. ಇದೀಗ ಅಮೆರಿಕ ಸಾರಥ್ಯದ ಮುಕ್ತ ವ್ಯಾಪಾರ ಒಪ್ಪಂದದಿಂದಲೂ ಹೊರ ನಡೆದಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನೇತೃತ್ವದ ಸರ್ಕಾರ, ಏಷ್ಯಾದ ದೇಶಗಳ ಜತೆಗೆ ವ್ಯಾಪಾರ ಹೆಚ್ಚಿಸಲು, ಹವಾಮಾನ ಬದಲಾವಣೆ, ತೆರಿಗೆ ಪದ್ಧತಿ ಇತ್ಯಾದಿ ವಿಚಾರಗಳಲ್ಲಿ ಮಾತುಕತೆ ಮತ್ತು ಒಪ್ಪಂದ ಸಾಧಿಸಲು ಈ ಟ್ರೇಡ್ ಗ್ರೂಪ್ ರಚಿಸಲು ಹವಣಿಸಿತ್ತು.
ಅಮೆರಿಕಕ್ಕೆ ತಿರುಗೇಟು ಕೊಟ್ಟಿತೇ ಭಾರತ?
ಪಾಕಿಸ್ತಾನಕ್ಕೆ ಅಮೆರಿಕವು ಎಫ್-16 ಯುದ್ಧ ವಿಮಾನಗಳನ್ನು ಪೂರೈಸುವುದಕ್ಕೆ ಸಮ್ಮತಿಸಿರುವುದಕ್ಕೆ ಸಂಬಂಧಿಸಿ ಭಾರತ ಮೌನವಾಗಿದ್ದರೂ, ಅಧಿಕೃತ ಪ್ರತಿಕ್ರಿಯೆ ನೀಡದಿದ್ದರೂ, ಸದ್ದಿಲ್ಲದೆ ಅಮೆರಿಕ ಸಾರಥ್ಯದ ವ್ಯಾಪಾರ ಒಪ್ಪಂದದಿಂದ ಹೊರ ನಡೆದಿದೆ. ಈ ಮೂಲಕ ತಿರುಗೇಟು ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬೈಡೆನ್ ಸರ್ಕಾರದ ಸ್ಪಷ್ಟನೆ: ಈ ನಡುವೆ ಅಮೆರಿಕವು ಪಾಕಿಸ್ತಾನಕ್ಕೆ ಹೊಸತಾಗಿ ಎಫ್-16 ಯುದ್ಧ ವಿಮಾನಗಳ ನೆರವನ್ನು ನೀಡುತ್ತಿಲ್ಲ. ಕೇವಲ ಬಿಡಿ ಭಾಗಗಳನ್ನು ವ್ಯಾಪಾರ ಮಾಡುತ್ತಿರುವುದಾಗಿ ಸ್ಪಷ್ಟೀಕರಣ ನೀಡಿದೆ. ” ಇದು ವ್ಯಾಪಾರವಷ್ಟೇ, ನೆರವು ಅಲ್ಲʼʼ ಎಂದು ಒತ್ತಿ ಹೇಳಿದೆ.