Site icon Vistara News

Ajay Banga : ವಿಶ್ವಬ್ಯಾಂಕ್‌ ಅಧ್ಯಕ್ಷ ಹುದ್ದೆಗೆ ಅಜಯ್‌ ಬಾಂಗಾ ಅಮೆರಿಕ ಅಭ್ಯರ್ಥಿ, ಚೀನಾ ಆಕ್ಷೇಪ

Indian-Origin Ajay Banga Set To Become World Bank President

ನವ ದೆಹಲಿ: ವಿಶ್ವಬ್ಯಾಂಕ್‌ನ ಅಧ್ಯಕ್ಷ ಹುದ್ದೆಗೆ ಭಾರತೀಯ ಮೂಲದ ಅಜಯ್‌ ಬಾಂಗಾ ಅವರನ್ನು ಅಮೆರಿಕದ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ನಾನಾ ದೇಶಗಳ ಬೆಂಬಲ ಗಳಿಸಲು ಬಾಂಗಾ ಇದೀಗ ಹೊರಟಿದ್ದು, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Ajay Banga) ಮೊದಲಾದವರನ್ನು ಭೇಟಿಯಾಗುತ್ತಿದ್ದಾರೆ. ಈಗಾಗಲೇ ಆಫ್ರಿಕಾ, ಯುರೋಪ್‌ ಪ್ರವಾಸವನ್ನು ಪೂರೈಸಿದ್ದಾರೆ.

ವಿಶ್ವಬ್ಯಾಂಕ್‌, ಜಾಗತಿಕ ಅಭಿವೃದ್ಧಿ ಕುರಿತ ಸವಾಲುಗಳು, ಭಾರತದ ಆದ್ಯತೆಗಳ ಬಗ್ಗೆ ಅಜಯ್‌ ಬಾಂಗಾ ಅವರು ಪ್ರಧಾನಿ ಮೋದಿ ಜತೆ ಚರ್ಚಿಸಲಿದ್ದಾರೆ. ಭಾರತವು ಅಜಯ್‌ ಬಾಂಗಾ ಅವರನ್ನು ಬೆಂಬಲಿಸಿದೆ. ಬಾಂಗ್ಲಾದೇಶ, ಕೊಲಂಬಿಯಾ, ಈಜಿಪ್ತ್‌, ಫ್ರಾನ್ಸ್‌, ಜರ್ಮನಿ, ಘಾನಾ, ಇಟಲಿ, ಜಪಾನ್‌, ಕೀನ್ಯಾ, ಸೌದಿ ಅರೇಬಿಯಾ, ಕೊರಿಯಾ, ಬ್ರಿಟನ್‌ ಈಗಾಗಲೇ ಬಾಂಗಾ ಅವರನ್ನು ಬೆಂಬಲಿಸಿದೆ.

ಅಜಯ್‌ ಬಾಂಗಾ (63) 1959ರಲ್ಲಿ ಪುಣೆಯಲ್ಲಿ ಜನಿಸಿದರು. ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ಮಾಡಿರುವ ಅವರು, 2010-2021 ರ ಅವಧಿಯಲ್ಲಿ ಮಾಸ್ಟರ್‌ ಕಾರ್ಡ್‌ ಕಂಪನಿಯ ಸಿಇಒ ಆಗಿದ್ದರು.

ಚೀನಾ ಆಕ್ಷೇಪ

ವಿಶ್ವಬ್ಯಾಂಕ್‌ ಅಧ್ಯಕ್ಷ ಹುದ್ದೆಗೆ ಅಜಯ್‌ ಬಾಂಗಾ ಬದಲಿಗೆ ಬೇರೆ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಚೀನಾ ಹೇಳಿದೆ. ಅಮೆರಿಕದ ಜತೆಗೆ ಚೀನಾದ ಸಂಬಂಧ ಬಿಗಡಾಯಿಸುತ್ತಿರುವುದನ್ನೂ ಇದು ಬಿಂಬಿಸಿದೆ. ಮೆರಿಟ್‌ ಆಧಾರದಲ್ಲಿ ಬೇರೆ ಅಭ್ಯರ್ಥಿಯನ್ನು ಬೆಂಬಲಿಸಲು ಬಯಸಿರುವುದಾಗಿ ಚೀನಾ ಹೇಳಿದೆ.

ವಿಶ್ವಬ್ಯಾಂಕ್‌ ಜಾಗತಿಕ ಮಟ್ಟದಲ್ಲಿ ಪ್ರಭಾವಿ ಹಣಕಾಸು ಸಂಸ್ಥೆಯಾಗಿದ್ದು, ಜಾಗತಿಕ ಬಡತನ ನಿರ್ಮೂಲನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ. ಹಣಕಾಸು ನೆರವು ನೀಡುತ್ತದೆ. ಇದರಲ್ಲಿ ಇದುವರೆಗೆ ಅಮೆರಿಕ ಮೂಲದವರೇ ಅಧ್ಯಕ್ಷರಾಗಿದ್ದಾರೆ. ಅಜಯ್‌ ಬಾಂಗಾ ಭಾರತೀಯ ಮೂಲದವರಾಗಿದ್ದರೂ, ಈಗ ಅಮೆರಿಕದ ನಾಗರಿಕರಾಗಿದ್ದಾರೆ. ಈ ಅಮೆರಿಕದ ಪ್ರಾಬಲ್ಯವನ್ನು ಅಂತ್ಯಗೊಳಿಸಲು ಚೀನಾ ಬಯಸುತ್ತಿದೆ.

ತಾಂತ್ರಿಕವಾಗಿ ವಿಶ್ವಬ್ಯಾಂಕ್‌ ಮಂಡಳಿಯ 25 ಕಾರ್ಯಕಾರಿ ನಿರ್ದೇಶಕರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ನಾಮ ನಿರ್ದೇಶನ ಪ್ರಕ್ರಿಯೆ ಮಾರ್ಚ್‌ 29ಕ್ಕೆ ಮುಕ್ತಾಯವಾಗುತ್ತಿದೆ. ಜರ್ಮನಿ ಮಹಿಳಾ ಬ್ಯಾಂಕ್‌ ಅಧ್ಯಕ್ಷರನ್ನು ಬಯಸಿದೆ.

ಭಾರತೀಯ ಮೂಲದವರಿಂದ ದೇಶಕ್ಕೆ ಲಾಭವಾಗಿದೆಯೇ?

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಅಜಯ್‌ ಬಾಂಗಾ, ಸುಂದರ್‌ ಪಿಚೈ, ಸತ್ಯ ನಾಡೆಳ್ಳಾ, ಪರಾಗ್‌ ಅಗ್ರವಾಲ್‌, ಇಂದ್ರಾ ನೂಯಿ ಮೊದಲಾದವರು ಭಾರತೀಯ ಮೂಲದವರದರೂ, ಭಾರತೀಯರಲ್ಲ. ದ್ವಿಪೌರತ್ವಕ್ಕೆ ಭಾರತ ಅವಕಾಶ ನೀಡುವುದಿಲ್ಲ. ಹೀಗಿದ್ದರೂ ಅವರನ್ನು ಭಾರತದ ಮಕ್ಕಳೆಂದು ಭಾರತೀಯರು ಆದರಿಸುತ್ತಾರೆ. ಆದರೆ ಅವರಿಂದ ಭಾರತಕ್ಕೆ ಏನಾದರೂ ಲಾಭವಾಗಿದೆಯೇ, ಇಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದ್ದಾರೆಯೇ ಎಂದರೆ ಉತ್ತರ ಸಿಗುವುದಿಲ್ಲ. ಬದಲಿಗೆ ನಿರಾಸೆಯಾಗುತ್ತದೆ. ಆದ್ದರಿಂದ ಭಾರತ ತನ್ನದೇ ನಾಗರಿಕರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಬೇಕು. ಪ್ರೋತ್ಸಾಹಿಸಬೇಕು ಎನ್ನುತ್ತಾರೆ ವಿಶ್ಲೇಷಕರು.

ಚೀನಾ ಮಾದರಿ: ಚೀನಾ ತನ್ನದೇ ನಾಗರಿಕರನ್ನು ಅಂತಾರಾಷ್ಟ್ರೀಯ ಸಂಸ್ಥೆಗಳ ಉನ್ನತ ಹುದ್ದೆಗೆ ಆಯ್ಕೆ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಉದಾಹರಣೆಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ನಿರ್ದೇಶಕರಾಗಿ ಚೀನಾದ ಕ್ಯೂ ಡೊಂಗ್ಯು ನೇಮಕವಾಗಿದ್ದಾರೆ. ಇಂಟರ್‌ ನ್ಯಾಶನಲ್‌ ಸಿವಿಲ್‌ ಏವಿಯೇಶನ್‌ ಆರ್ಗನೈಸೇಶನ್‌ ಅಧ್ಯಕ್ಷರಾಗಿ ಫಾಂಗ್‌ ಲಿಯು, ಇಂಟರ್‌ ನ್ಯಾಶನಲ್ ಟೆಲಿಕಮ್ಯುನಿಕೇಶನ್‌ ಯೂನಿಯನ್‌ ಕಾರ್ಯದರ್ಶಿಯಾಗಿ ಹುಲಿನ್‌ ಜಾವೊ, ಇಂಡಸ್ಟ್ರಿಯಲ್‌ ಡೆವಲಪ್‌ಮೆಂಟ್‌ ಆರ್ಗನೈಸೇಶನ್‌ ಕಾರ್ಯಕಾರಿ ನಿರ್ದೇಶಕರಾಗಿ ಇ ಯಂಗ್‌ ಚೀನಾ ಪ್ರಜೆಗಳಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ನಿರ್ದೇಶಕಿ ಮಾರ್ಗರೇಟ್‌ ಚಾನ್‌ ಅವರು ಹಾಂಕಾಂಗ್‌ ಮೂಲದವರು.

Exit mobile version