Site icon Vistara News

Rakesh Jhunjhunwala | ಸಾರಥಿಯ ನಿರ್ಗಮನಕ್ಕೆ ಆಕಾಸ ಏರ್‌ ಕಂಬನಿ, ಏರ್‌ಲೈನ್ಸ್‌ ಭವಿಷ್ಯವೇನು?

akasa air

ಮುಂಬಯಿ: ಬಿಲಿಯನೇರ್‌ ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ (Rakesh Jhunjhunwala) ಅವರ ನಿಧನದ ಬಳಿಕ, ಕೇವಲ ಒಂದು ವಾರದ ಹಿಂದೆಯಷ್ಟೇ ಅವರು ಆರಂಭಿಸಿರುವ ಆಕಾಸ ಏರ್‌ನ ಭವಿಷ್ಯವೇನಾಗಲಿದೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.

“ರಾಕೇಶ್‌ ಜುಂಜುನ್‌ವಾಲಾ ಅವರ ಅಕಾಲಿಕ ನಿಧನಕ್ಕೆ ನಾವು ತೀವ್ರ ಶೋಕತಪ್ತರಾಗಿದ್ದೇವೆ. ಜುಂಜುನ್‌ವಾಲಾ ಅವರ ಕುಟುಂಬ ವರ್ಗ ಹಾಗೂ ಬಂಧು ಬಳಗ, ಸ್ನೇಹಿತರ ದುಃಖದಲ್ಲಿ ಏರ್‌ಲೈನ್‌ ಕೂಡ ಭಾಗಿಯಾಗಿದೆ. ಜುಂಜುನ್‌ ವಾಲಾ ಅವರ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇವೆ. ಆಕಾಸ ಏರ್‌ ಬಗ್ಗೆ ಜುಂಜುನ್‌ ವಾಲಾ ಅತೀವ ವಿಶ್ವಾಸ ಮತ್ತು ನಂಬಿಕೆ ಇಟ್ಟಿದ್ದರು. ವಿಶ್ವದರ್ಜೆಯ ವಿಮಾನವನ್ನು ನಿರ್ಮಿಸುವುದು ಅವರ ಕನಸಾಗಿತ್ತು. ಪ್ರತಿಯೊಬ್ಬ ಭಾರತೀಯ, ಕಂಪನಿಯ ಉದ್ಯೋಗಿ ಮತ್ತು ಗ್ರಾಹಕರು ಚೆನ್ನಾಗಿರಬೇಕು ಎಂದು ಅವರು ಸದಾ ಬಯಸುತ್ತಿದ್ದರು. ಅದಮ್ಯ ಸ್ಫೂರ್ತಿಯ ಸೆಲೆಯಾಗಿದ್ದರು. ಆಕಾಸ್‌ ಏರ್‌ ಜುಂಜುನ್‌ ವಾಲಾ ಅವರ ಆದರ್ಶ, ಮೌಲ್ಯಗಳನ್ನು ಎತ್ತಿ ಹಿಡಿಯಲಿದೆʼʼ ಎಂದು ಆಕಾಸ ಏರ್‌ ಟ್ವೀಟ್‌ ಮಾಡಿದೆ.

ರಾಕೇಶ್‌ ಜುಂಜುನ್‌ವಾಲಾ ಅವರು ಸ್ಮಾರ್ಟ್‌ ಹೂಡಿಕೆದಾರರಾಗಿದ್ದರು. ರಾಜಕೀಯವಾಗಿಯೂ ಪ್ರಮುಖರೊಡನೆ ಸಂಪರ್ಕವನ್ನು ಹೊಂದಿದ್ದರು. ಅವರು ಪ್ರತಿಯೊಂದು ಹೂಡಿಕೆಯನ್ನೂ ಅಚ್ಚುಕಟ್ಟಾಗಿ, ಸಾಕಷ್ಟು ಯೋಚಿಸಿಯೇ ಮಾಡುತ್ತಿದ್ದರು. ಇದೇ ರೀತಿ ಆಕಾಸ ಏರ್‌ನಲ್ಲೂ ಹೂಡಿಕೆ ಮಾಡಿರಬಹುದು. ಆಕಾಸ ಏರ್‌ಗೆ ಉತ್ತಮ ರೀತಿಯಲ್ಲಿ ಹಣಕಾಸು ವ್ಯವಸ್ಥೆ ನಡೆದಿದೆ. ಹೀಗಾಗಿ ಏರ್‌ಲೈನ್‌ ತನ್ನ ಹಾರಾಟ ಮತ್ತು ಸೇವೆಯನ್ನು ಮುಂದುವರಿಸುತ್ತದೆ. ಹೀಗಿದ್ದರೂ ರಾಕೇಶ್‌ ಜುಂಜುನ್‌ ವಾಲಾ ಅವರ ವೃತ್ತಿಪರತೆ, ಕಾರ್ಪೊರೇಟ್‌ ವ್ಯವಹಾರಗಳ ಕುರಿತ ಅವರ ಜ್ಞಾನ, ಅನುಭವದ ಪ್ರಯೋಜನಗಳು ಸಂಸ್ಥೆಗೆ ಮಿಸ್‌ ಆಗಬಹುದು ಎನ್ನುತ್ತಾರೆ ವೈಮಾನಿಕ ಕ್ಷೇತ್ರದ ತಜ್ಞರಾದ ದಿವೇಶ್‌ ಅಗ್ರವಾಲ್.‌

ಆಕಾಸ ಏರ್‌ ಈಗಾಗಲೇ ಸುಸಜ್ಜಿತ ಹಾಗೂ ವೃತ್ತಿಪರ ತಂಡ, ಆಡಳಿತ ಮಂಡಳಿಯೊಂದಿಗೆ ತನ್ನ ಸೇವೆಯನ್ನು ಆರಂಭಿಸಿದೆ. ಸಿಇಒ ಆಗಿ ಜೆಟ್‌ ಏರ್‌ವೇಸ್‌ನ ಮಾಜಿ ಸಿಇಒ ವಿನಯ್‌ ದುಬೆ ಅವರಿದ್ದಾರೆ. ಅವರು ಸಹ ಸಂಸ್ಥಾಪಕರೂ ಆಗಿದ್ದಾರೆ.

“ರಾಕೇಶ್‌ ಜುಂಜುನ್‌ವಾಲಾ ಅವರ ನಿಧನ ಅಕಾಲಿಕವಾಗಿದೆ. ಆಕಾಸ ಏರ್‌ನ ಭವಿಷ್ಯದ ಪ್ಲಾನ್‌ ಎಂಬುದು ಬಹಿರಂಗವಾಗಿಲ್ಲ. ಜುಂಜುನ್‌ವಾಲಾ ಅವರ ತಿಳುವಳಿಕೆ, ಮಾರ್ಗದರ್ಶನ ಇನ್ನು ಮುಂದೆ ಆಕಾಸ್‌ ಏರ್‌ಗೆ ಸಿಗದಿರಬಹುದು. ಆದರೆ ಏರ್‌ಲೈನ್‌ ತನ್ನ ಪ್ಲಾನ್‌ ಪ್ರಕಾರ ಮುಂದುವರಿಯುವ ಸಾಧ್ಯತೆಯೇ ಹೆಚ್ಚುʼʼ ಎನ್ನುತ್ತಾರೆ ದಿವೇಶ್‌ ಅಗ್ರವಾಲ್.‌

Exit mobile version