Site icon Vistara News

ʼಆಕಾಸʼಕ್ಕೆ ಮೂರೇ ಗೇಣು! ಕೈಗೆಟಕುವ ದರದಲ್ಲಿ ವಿಮಾನ ಪ್ರಯಾಣ, ಭಾನುವಾರ ಶುರು!

akasa air

ಭಾರತದ ಆಕಾಶದಲ್ಲಿ ಹೊಚ್ಚ ಹೊಸ ಏರ್‌ಲೈನ್‌ ಆಕಾಸ ಏರ್ ತನ್ನ ಹಾರಾಟವನ್ನು ‌ ಆಗಸ್ಟ್‌ ೭ರಂದು ಆರಂಭಿಸುತ್ತಿದ್ದು, ಪ್ರಯಾಣಿಕರನ್ನು ಆಕರ್ಷಿಸಲು ಸಜ್ಜಾಗಿದೆ. ಖ್ಯಾತ ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ ಅವರ ಕನಸಿನ ಕೂಸಾಗಿರುವ ಆಕಾಸ ಏರ್‌ಲೈನ್‌, ಭಾರಿ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ! ಹಾಗಾದರೆ ಆಕಾಸ ಏರ್‌ಲೈನ್‌ ಹುಟ್ಟುಹಾಕಿರುವ ನಿರೀಕ್ಷೆಗಳೇನು? ಇದರಿಂದ ಭಾರತದ ವಿಮಾನಯಾನ ರಂಗದಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆ? ಜನ ಸಾಮಾನ್ಯರಿಗೂ ವಿಮಾನದಲ್ಲಿ ಸುಲಭವಾಗಿ ಪ್ರಯಾಣಿಸುವಂತಾಗಲು ಆಕಾಸ ಏರ್‌ ನೆರವಾಗಲಿದೆಯೇ? ಏರ್‌ಟಿಕೆಟ್‌ ವೆಚ್ಚ ಕಡಿಮೆಯಾಗಲಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ವಿಸ್ತಾರ ನ್ಯೂಸ್‌ನ ಬಿಸಿನೆಸ್‌ & ಎಕಾನಮಿ ವಿಭಾಗದ ಕನ್ಸಲ್ಟಿಂಗ್‌ ಎಡಿಟರ್‌ ಆಗಿರುವ ಗಿರಿ ಪ್ರಕಾಶ್‌ ಅವರು ವಿವರಿಸಿದ್ದಾರೆ.

ಆಕಾಸ ಏರ್‌ನ ಮೊದಲ ವಿಮಾನ ಹಾರಾಟ ಆರಂಭ ಆ.೭ರಿಂದ ಶುರುವಾಗುತ್ತಿದೆ. ಹಾಗಾದರೆ ಭಾರತದ ವಿಮಾನಯಾನ ರಂಗದಲ್ಲಿ ಏನಾದರೂ ಹೊಸ ಬದಲಾವಣೆಯನ್ನು ನಿರೀಕ್ಷಿಸಬಹುದೇ?

ಬಹಳ ಬದಲಾವಣೆಯನ್ನು ನಿರೀಕ್ಷಿಸಬಹುದು. ಮೊದಲನೆಯದಾಗಿ ಪ್ರಯಾಣಿಕರಿಗೆ ಹೊಸ ಆಯ್ಕೆ ಸಿಗುತ್ತದೆ. ಏರ್‌ಲೈನ್‌ಗಳ ಸಂಖ್ಯೆ ಹೆಚ್ಚಾದರೆ ಏರ್‌ ಟಿಕೆಟ್‌ ದರ ಇಳಿಕೆಯಾಗಬಹುದು. ಆಕಾಸ ಏರ್‌ ಅಗ್ಗದ ವೆಚ್ಚದ ಏರ್‌ಲೈನ್‌ ವಿಭಾಗದಲ್ಲಿ ಇರುವುದರಿಂದ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಟಿಕೆಟ್‌ ಸಿಗುವುದರಿಂದ ದೊಡ್ಡಮಟ್ಟಿನ ಅನುಕೂಲವಾಗಲಿದೆ. ಎರಡನೆಯದಾಗಿ ವಿಮಾನಯಾನದ ಸಂಪರ್ಕ ಹೆಚ್ಚುತ್ತದೆ. ಏರ್‌ಲೈನ್‌ಗಳ ನಡುವೆ ಪೈಪೋಟಿ ಉಂಟಾಗುತ್ತದೆ. ಇದು ಇಂಡಸ್ಟ್ರಿಗೂ, ಬಳಕೆದಾರರಿಗೂ ಅನುಕೂಲ.

ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ವಿಮಾನಯಾನದ ಕನಸು ನನಸಾಗಲಿದೆಯೇ?

ಹೌದು. ಆಕಾಸ ಏರ್‌ಲೈನ್‌ ಭಾನುವಾರ ಆರಂಭವಾಗುತ್ತಿದೆ. ಬಳಿಕ ಜೆಟ್‌ ಏರ್‌ವೇಸ್‌ ಪುನರಾರಂಭವಾಗುತ್ತದೆ. ಇನ್ನೂ ಒಂದೆರಡು ಏರ್‌ಲೈನ್‌ಗಳು ಅಸ್ತಿತ್ವಕ್ಕೆ ಬರಲಿದೆ. ಇದು ಬಹಳ ಒಳ್ಳೆಯದು. ಮೂಲತಃ ವಿಮಾನಗಳಲ್ಲಿ ಬಳಕೆಯಾಗುವ ಎಟಿಎಫ್‌ ( Aviation Turbine Fuel) ಇಂಧನದ ದರ ಹೆಚ್ಚಳವಾಗಿದೆ. ಎಟಿಎಫ್‌ ಜಿಎಸ್‌ಟಿ ವ್ಯಾಪ್ತಿಗೆ ಸದ್ಯ ಬಂದಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾಗಿದೆ. ರಾಜ್ಯ ಸರ್ಕಾರಗಳು ಎಟಿಎಫ್‌ ಮೇಲೆ ಅಬಕಾರಿ ಸುಂಕವನ್ನು ವಿಧಿಸುತ್ತವೆ. ಹೀಗಾಗಿ ಏರ್‌ ಟಿಕೆಟ್‌ ವೆಚ್ಚ ದುಬಾರಿಯಾಗಿದೆ. ಅದರ ಬದಲಿಗೆ ಎಟಿಎಫ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಅಥವಾ ರಾಜ್ಯ ಸರ್ಕಾರಗಳೇ ಎಟಿಎಫ್‌ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದರೆ, ಏರ್‌ಲೈನ್‌ಗಳಿಗೆ ಇಂಧನ ವೆಚ್ಚ ಕಡಿಮೆಯಾಗಲಿದೆ. ಹಾಗೂ ಅದನ್ನು ಗ್ರಾಹಕರಿಗೆ ವರ್ಗಾಯಿಸಬಹುದು. ಆಗ ಟಿಕೆಟ್‌ ದರ ಕಡಿಮೆಯಾಗುತ್ತದೆ. ಎರಡನೆಯದಾಗಿ ಹಲವು ಏರ್‌ಪೋರ್ಟ್‌ಗಳು ಖಾಸಗೀಕರಣವಾಗಿವೆ. ದಿಲ್ಲಿ, ಬೆಂಗಳೂರು, ಮುಂಬಯಿ, ಅಲ್ಲಿ ಏರ್‌ಲೈನ್‌ಗಳಿಗೆ ತಗಲುವ ವೆಚ್ಚ ಹೆಚ್ಚುತ್ತದೆ. ವಿಮಾನದ ಲ್ಯಾಂಡಿಂಗ್‌, ಟೇಕಾಫ್‌ಗೆ ತಗಲುವ ಖರ್ಚಿನಲ್ಲಿ ಹೆಚ್ಚಳವಾಗಿದೆ. ಆದರೆ ಇನ್ನೂ ಒಂದೆರಡು ವರ್ಷಗಳಲ್ಲಿ ಜನರಿಗೆ ರೈಲ್ವೆ ಟಿಕೆಟ್‌ನಂತೆ ಏರ್ ಟಿಕೆಟ್‌ ಕಡಿಮೆ ಬೆಲೆಗೆ ಸಿಗುವ ವಿಶ್ವಾಸ ಇದೆ.

ರಾಕೇಶ್‌ ಜುಂಜುನ್‌ವಾಲಾ ಷೇರು ಮಾರುಕಟ್ಟೆಯ ದಿಗ್ಗಜರು. ಏರ್‌ಲೈನ್‌ ಇಂಡಸ್ಟ್ರಿಯಲ್ಲಿ ಅವರಿಂದ ಏನನ್ನು ನಿರೀಕ್ಷಿಸಬಹುದು?

ಆಕಾಸ ಏರ್‌ನಲ್ಲಿ ರಾಕೇಶ್‌ ಜುಂಜುನ್‌ವಾಲಾ ೪೦% ಷೇರುಗಳನ್ನು ಹೊಂದಿದ್ದಾರೆ. ೨೫ ಮಿಲಿಯನ್‌ ಡಾಲರ್‌ ಹೂಡಿಕೆ ಮಾಡಿದ್ದಾರೆ. (ಅಂದಾಜು ೧೯೭ ಕೋಟಿ ರೂ.) ಏರ್‌ಲೈನ್‌ ಕ್ಷೇತ್ರದಲ್ಲಿ ಸುದೀರ್ಘ ವೃತ್ತಿಪರ ಅನುಭವ ಇರುವವರನ್ನು ಆಕಾಸ ಏರ್‌ಗೆ ಕರೆ ತಂದಿದ್ದಾರೆ. ವಿನಯ್‌ ದುಬೆ ಅವರು ಆಕಾಸ್‌ ಏರ್‌ನ ಸಹ ಸಂಸ್ಥಾಪಕ ಮತ್ತು ಸಿಇಒ. ಅವರು ಈ ಹಿಂದೆ ಜೆಟ್‌ ಏರ್‌ವೇಸ್‌ನ ಸಿಇಒ ಆಗಿದ್ದರು. ಆದಿತ್ಯ ಘೋಷ್‌ ಹಲವಾರು ವರ್ಷ ಇಂಡಿಗೊದ ಸಿಇಒ ಆಗಿದ್ದರು. ಇಂಡಿಗೊ ಏರ್‌ಲೈನ್‌ ಈಗ ಮಾರುಕಟ್ಟೆಯಲ್ಲಿ ೫೮% ಪಾಲನ್ನು ಗಳಿಸಿರುವುದರಲ್ಲಿ ಅವರ ಪಾತ್ರ ದೊಡ್ಡದು. ಅವರು ಈಗ ಆಕಾಸ ಏರ್‌ಲೈನ್‌ಗೆ ಸೇರ್ಪಡೆಯಾಗಿದ್ದಾರೆ. ಆಕಾಸ ಏರ್‌ಲೈನ್‌ ಆಡಳಿತ ಮಂಡಳಿಯಲ್ಲಿ ರಾಕೇಶ್‌ ಜುಂಜುನ್‌ವಾಲಾ ಅವರನ್ನು ಪ್ರತಿನಿಧಿಸಲಿದ್ದಾರೆ. ಅದೇ ರೀತಿ ಪ್ರವೀಣ್‌ ನಾಯರ್‌ ಕೂಡ ಸಹ ಸಂಸ್ಥಾಪಕರು. ರಾಕೇಶ್‌ ಜುಂಜುನ್‌ವಾಲಾ ತಾವಾಗಿಯೇ ಆಕಾಸ ಏರ್‌ಲೈನ್‌ನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ವೃತ್ತಿಪರರ ಮೂಲಕ ನಡೆಸುತ್ತಾರೆ. ಅದು ಏರ್‌ಲೈನ್‌ಗೂ ಒಳ್ಳೆಯದು. ಸಾಮಾನ್ಯವಾಗಿ ಬೇರೆ ಏರ್‌ಲೈನ್‌ಗಳಲ್ಲಿ ಸ್ಥಾಪಕರೇ ನಡೆಸುತ್ತಾರೆ. ಅವರಿಗೆ ಏರ್‌ಲೈನ್‌ ನಡೆಸಿ ಅನುಭವ ಇರಲೂಬಹುದು, ಇಲ್ಲದೆಯೂ ಇರಬಹುದು. ಉದಾಹರಣೆಗೆ ವಿಜಯ್‌ ಮಲ್ಯ ಅವರಿಗೆ ಲಿಕ್ಕರ್‌ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದವರು. ಕಿಂಗ್‌ಫಿಶರ್‌ ಚೇರ್ಮನ್‌ ಆಗಿದ್ದರು. ಆದರೆ ಲಿಕ್ಕರ್‌ ಬಿಸಿನೆಸ್‌ ಅನ್ನು ಏರ್‌ಲೈನ್‌ ಬಿಸಿನೆಸ್‌ಗೆ ಹೋಲಿಸಲಾಗದು. ಮದ್ಯದ ಉದ್ದಿಮೆಯಲ್ಲಿ ೪೦ % ಲಾಭ ಸಿಗುತ್ತದೆ. ಆದರೆ ಏರ್‌ಲೈನ್‌ ಇಂಡಸ್ಟ್ರಿಯಲ್ಲಿ ೧೦ ವರ್ಷ ಆದ ಮೇಲೆ ೨% ಲಾಭ ಸಿಗುತ್ತದೆ. ಕಿಂಗ್‌ಫಿಶರ್‌ ವಿಫಲವಾಗಲು ಇದೂ ಒಂದು ಕಾರಣ. ಆಕಾಸ ಏರ್‌ಲೈನ್‌ ನುರಿತ ವೃತ್ತಿಪರರಿಂದ ನಡೆಯಲಿರುವುದರಿಂದ ಸಫಲವಾಗುವ ನಿರೀಕ್ಷೆ ಇದೆ.

ವಿಮಾನಯಾನದ ಸುರಕ್ಷತೆ ಕುರಿತ ಸ್ಥಿತಿ ಗತಿ ಹೇಗಿದೆ?

ಬೋಯಿಂಗ್‌ನ ಎರಡು ೭೩೭ ಮ್ಯಾಕ್ಸ್‌ ವಿಮಾನಗಳು ೨೦೧೮-೨೦೨೦ರ ಅವಧಿಯಲ್ಲಿ ಭೀಕರ ಅಪಘಾತಕ್ಕೀಡಾಯಿತು. ಬೋಯಿಂಗ್‌ ಸಂಸ್ಥೆ ವಿಮಾನದ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತ್ತು. ಈಗ ಆಕಾಸ ಏರ್‌, ೭೨ ಬೋಯಿಂಗ್‌ ೭೩೭ ಮ್ಯಾಕ್ಸ್‌ ೮ ವಿಮಾನಗಳನ್ನು ಖರೀದಿಸುತ್ತಿದೆ. ಇದರ ಬೆಲೆ ೯ ಶತಕೋಟಿ ಡಾಲರ್‌ (ಅಂದಾಜು ೭೧,೧೦೦ ಕೋಟಿ ರೂ.). ಬಹಳ ಧೈರ್ಯ ಮಾಡಿ ಆಕಾಸ ಏರ್‌ ಈ ಮೆಗಾ ಆರ್ಡರ್‌ ಅನ್ನು ಮಾಡಿದೆ. ಮೊದಲ ಬಾರಿಗೆ ಬಾಡಿಗೆ ವಿಮಾನಗಳ ಬದಲಿಗೆ ಹೊಸ ವಿಮಾನಗಳನ್ನೇ ರಾಕೇಶ್‌ ಜುಂಜುನ್‌ವಾಲಾ ಖರೀದಿಸಿದ್ದಾರೆ. ಸಾಮಾನ್ಯವಾಗಿ ಹೊಸ ಏರ್‌ಲೈನ್‌ಗಳು ೪-೫ ವರ್ಷ ಹಳೆಯ ವಿಮಾನಗಳನ್ನು ಲೀಸ್‌ಗೆ ಪಡೆದು ಹಾರಾಟ ಆರಂಭಿಸುತ್ತಾರೆ. ಆದರೆ ಜುಂಜುನ್‌ವಾಲಾ ಹೊಸ ವಿಮಾನಗಳನ್ನೇ ಖರೀದಿಸುತ್ತಿದ್ದಾರೆ. ಮಾತ್ರವಲ್ಲದೆ ಬೋಯಿಂಗ್‌ ೭೩೭ ಮ್ಯಾಕ್ಸ್‌ನಂಥ ೧೮೯ ಪ್ರಯಾಣಿಕರನ್ನು ಕರೆದೊಯ್ಯಬಲ್ಲ ವಿಮಾನವನ್ನೇ ಖರೀದಿಸುತ್ತಿದ್ದಾರೆ. ಇದು ದೊಡ್ಡ ಸಾಹಸವೇ ಸರಿ. ಭಾರತದಲ್ಲಿ ಏರ್‌ಲೈನ್‌ ಯಶಸ್ವಿಯಾಗಬೇಕಾದ ಅಗತ್ಯ ಇದೆ.

ಆಕಾಸ ಏರ್‌ಗೆ ಮುಂದಿರುವ ಸವಾಲುಗಳೇನು?

ಆಕಾಸ ಏರ್‌ಗೆ ಸಹಜವಾಗಿ ದೊಡ್ಡ ಸವಾಲು ಇದೆ. ಇಂಡಿಗೊ ಏರ್‌ಲೈನ್‌ ಮಾರುಕಟ್ಟೆ ಪಾಲು ೫೮% ಇದೆ. ಪ್ರಯಾಣಿಕರಿಗೆ ಹೊಸ ವಿಮಾನಯಾನದ ಅನುಭವ ನೀಡುವುದಾಗಿ ಹೇಳಿದ್ದಾರೆ. ಅದು ಹೇಗೆ ಎಂಬುದು ಗೊತ್ತಿಲ್ಲ. ೧.೯ ಕೋಟಿ ಪ್ರಯಾಣಿಕರು ಭಾರತದಲ್ಲಿ ವಿಮಾನಗಳನ್ನು ಬಳಸುತ್ತಿದ್ದಾರೆ. ಅದು ಹೆಚ್ಚಿದರೆ ಆಕಾಸ ಏರ್‌ಗೆ ಅನುಕೂಲವಾಗಲಿದೆ. ಈಗ ಹಲವು ಮಂದಿ ಏರ್‌ ಟಿಕೆಟ್‌ ದರ ದುಬಾರಿಯಾದ್ದರಿಂದ ಪ್ರಯಾಣ ಮಾಡದಿರಬಹುದು. ಆಕಾಸ್‌ ಏರ್‌ ಎರಡು ಮಹತ್ವದ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದೆ. ಅವೆಂದರೆ ಮುಂಬಯಿ-ಅಹಮದಾಬಾದ್‌ ಮತ್ತು ಬೆಂಗಳೂರು-ಕೊಚ್ಚಿನ್‌ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸುತ್ತಿದ್ದಾರೆ. ಆದರೆ ಈ ಮಾರ್ಗದಲ್ಲಿ ಪೈಪೋಟಿಯೂ ಇದೆ.

ಬೆಂಗಳೂರಿಗರಿಗೆ ಆಕಾಸ ಏರ್‌ಲೈನ್‌ನಿಂದ ಪ್ರಯೋಜನ ಏನು?

ಆಕಾಸ ಏರ್‌ ಬೆಂಗಳೂರು-ಕೊಚ್ಚಿನ್‌ ನಡುವೆ ವಿಮಾನ ಹಾರಾಟ ಆರಂಭಿಸುತ್ತಿದೆ. ಮುಂಬಯಿ-ಅಹಮದಾಬಾದ್‌ ಬಳಿಕ ಎರಡನೇ ಮಾರ್ಗವಾಗಿ ಬೆಂಗಳೂರು-ಕೊಚ್ಚಿನ್‌ ಅನ್ನು ಆಯ್ಕೆ ಮಾಡಿರುವುದು ಗಮನಾರ್ಹ. ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಮಾರ್ಗಗಳಲ್ಲಿ ಇದೂ ಒಂದು. ಕಿಂಗ್‌ಫಿಶರ್‌ ಆರಂಭವಾದಾಗ ಮೊದಲ ವಿಮಾನ ಮುಂಬಯಿ-ಬೆಂಗಳೂರು ನಡುವೆ ಹಾರಿತ್ತು. ಬೆಂಗಳೂರಿಗೆ ಆಕಾಸ ಏರ್‌ ಭಾರಿ ಮಹತ್ವ ನೀಡಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್‌ನಲ್ಲಿ ಉದ್ಘಾಟಿಸಲಿದ್ದಾರೆ. ದಕ್ಷಿಣ ಏಷ್ಯಾದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಏರ್‌ಪೋರ್ಟ್‌ಗಳಲ್ಲಿ ಇದೂ ಒಂದಾಗಿದೆ. ಸ್ಪೈಸ್‌ ಜೆಟ್‌, ಏರ್‌ ವಿಸ್ತಾರ, ಗೋ ಫಸ್ಟ್, ಇಂಡಿಗೊ, ಏರ್‌ ಏಷ್ಯಾ, ಏರ್‌ ಇಂಡಿಯಾ, ಮುಂಬರಲಿರುವ ಆಕಾಸ ಏರ್‌ ಸೇರಿದಂತೆ ಏಳೆಂಟು ಏರ್‌ಲೈನ್‌ಗಳಿಂದ ಭಾರತದ ವೈಮಾನಿಕ ರಂಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಭವಿಷ್ಯದಲ್ಲಿ ನಿರೀಕ್ಷಿಸಬಹುದು.

ಆಕಾಸ ಏರ್‌ ಹಾರಾಟ ಯಾವಾಗ? ಎಲ್ಲಿಂದ ಎಲ್ಲಿಗೆ?

Exit mobile version