Site icon Vistara News

e-commerce | ಅಮೆಜಾನ್-ಫ್ಲಿಪ್‌ಕಾರ್ಟ್‌ ನಡುವೆ ಪೈಪೋಟಿ, ಗ್ರಾಹಕರಿಗೆ ಲಾಭ ನಿರೀಕ್ಷೆ

e commerce

ಕೆ. ಗಿರಿಪ್ರಕಾಶ್

ಬೆಂಗಳೂರು: ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ನಡುವೆ ಮುಂಬರುವ ಹಬ್ಬದ ಸೀಸನ್‌ನಲ್ಲಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ. ಇದರ ಪರಿಣಾಮ ಗ್ರಾಹಕರಿಗೆ (e-commerce) ಹೆಚ್ಚಿನ ಡಿಸ್ಕೌಂಟ್‌ ದೊರೆತು ಅನುಕೂಲವಾಗುವ ಸಾಧ್ಯತೆ ಇದೆ.

ಅಮೆರಿಕದಲ್ಲಿ ಬ್ಲ್ಯಾಕ್‌ ಫ್ರೈಡೇ ಸೇಲ್‌ ಅಥವಾ ಚೀನಾದಲ್ಲಿ ಹೊಸ ವರ್ಷದ ಮೊದಲು ನಡೆಯುವ ಸಿಂಗಲ್ಸ್‌ ಡೇ ವಿಶೇಷ ದಿನದ ವಹಿವಾಟಿಗೆ ಇದನ್ನು ಹೋಲಿಸಲಾಗಿದೆ. ಅಮೆಜಾನ್‌ ಇಂಡಿಯಾದಲ್ಲಿ 8.5 ಲಕ್ಷ ಮಾರಾಟಗಾರರು ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ 3.75 ಲಕ್ಷ ಮಾರಾಟಗಾರರು ಭಾಗವಹಿಸುವ ನಿರೀಕ್ಷೆ ಇದ್ದು, ಭಾರತೀಯ ಇ-ಕಾಮರ್ಸ್‌ ಮಾರುಕಟ್ಟೆಯಲ್ಲಿ ಈ ಎರಡು ಕಂಪನಿಗಳು ತಲಾ 30% ಪಾಲನ್ನು ಹೊಂದಿವೆ. ರಿಯಲ್‌ಮಿ, ಐಕ್ಯುಒಒ, ವನ್‌ ಪ್ಲಸ್‌, ಶಿವೊಮಿ ಸ್ಮಾರ್ಟ್‌ ಫೋನ್‌ಗಳು ಡಿಸ್ಕೌಂಟ್‌ ದರದಲ್ಲಿ ಮಾರಾಟವಾಗುವ ನಿರೀಕ್ಷೆ ಇದೆ. ಅಮೆಜಾನ್‌ ಎಸ್‌ಬಿಐ ಜತೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಎಸ್‌ಬಿಐ ಕಾರ್ಡ್‌ದಾರರು ತಮ್ಮ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ ಬಳಸುವ ಮೂಲಕ 10% ತನಕ ತಮ್ಮ ಮೊದಲ ಖರೀದಿಯಲ್ಲಿ ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ.‌

ರೆಡ್‌ಸೀರ್‌ ಸ್ಟ್ರಾಟಕಿ ಕನ್ಸಲ್ಟೆಂಟ್ಸ್‌ ಪ್ರಕಾರ, ಈ ಸಲ ಹಬ್ಬಗಳ ಸೀಸನ್‌ನಲ್ಲಿ ಇ-ಕಾಮರ್ಸ್‌ ವ್ಯವಹಾರ 86,900 ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ 28% ಹೆಚ್ಚಳವಾಗಬಹುದು. ದೀಪಾವಳಿಯ ಸಂದರ್ಭ ಮೊದಲ ಸೇಲ್ಸ್‌ ಇವೆಂಟ್‌ ನಡೆಯಲಿದ್ದು, ಮೊದಲ ವಾರ 46,610 ಕೋಟಿ ರೂ. ಬಿಸಿನೆಸ್‌ ನಿರೀಕ್ಷಿಸಲಾಗಿದೆ. ಕಳೆದ ವರ್ಷ 37,920 ಕೋಟಿ ರೂ. ವಹಿವಾಟು ನಡೆದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 28% ಏರಿಕೆಯಾಗುವ ಅಂದಾಜಿದೆ.

2018ರ ಕೋವಿಡ್‌ ಪೂರ್ವ ವ್ಯಾಪಾರಕ್ಕೆ ಹೋಲಿಸಿದರೆ 2019ರಲ್ಲಿ ಆನ್‌ಲೈನ್‌ ಮೂಲಕ ವಹಿವಾಟು ಮೂರು ಪಟ್ಟು ಹೆಚ್ಚಳವಾಗಿತ್ತು. ಎರಡನೇ ಸ್ತರದ ಪಟ್ಟಣಗಳಲ್ಲೂ ವಹಿವಾಟು ವಿಸ್ತರಣೆಯಾಗಿತ್ತು ಎನ್ನುತ್ತಾರೆ ರೆಡ್‌ಸೀರ್‌ ಸ್ಟ್ರಾಟಜಿ ಕನ್ಸಲ್ಟೆಂಟ್‌ನ ಅಸೋಸಿಯೇಟ್‌ ಪಾರ್ಟ್‌ನರ್‌ ಸಂಜಯ್‌ ಕೊಠಾರಿ.

ವಿಸ್ತರಣೆಗೆ ಕಾರಣಗಳು:

2018ರಿಂದೀಚೆಗೆ ರಜೆಯ ವಾರಗಳಲ್ಲಿ ಇಂಟರ್‌ನೆಟ್‌ ಬಳಸುವವರ, ಆನ್‌ ಲೈನ್‌ ಶಾಪಿಂಗ್‌ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. 2018ರಲ್ಲಿ 18% ಹಾಗೂ 2022ರಲ್ಲಿ 38% ಹೆಚ್ಚಳವಾಗಿದೆ. ಹಾಲಿಡೇ ಸೇಲ್ಸ್‌ಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡುತ್ತಿದೆ. ಇದರ ಪ್ರಯೋಜನವನ್ನು ಪಡೆಯುತ್ತಾರೆ. ಹೀಗಾಗಿ ಬಿಸಿನೆಸ್‌ ಹೆಚ್ಚುತ್ತಿದೆ ಎನ್ನುತ್ತಾರೆ ಕೊಠಾರಿ. ಜತೆಗೆ ಲೈವ್‌ ವಿಡಿಯೊ ಕಾಮರ್ಸ್‌ ಇತ್ಯಾದಿ ಹೊಸ ಮಾದರಿಯ ಇ-ಕಾಮರ್ಸ್‌ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆ ಇದೆ.

ಹಬ್ಬದ ಋತುವಿನಲ್ಲಿ ಹಲವಾರು ಕೆಟಗರಿಗಳಲ್ಲಿ ಬಿಸಿನೆಸ್‌ ನಡೆಯುತ್ತದೆ. ಈ ವರ್ಷ ಫ್ಯಾಷನ್‌ ಕೆಟಗರಿಯಲ್ಲಿ ಹೆಚ್ಚು ಬಿಸಿನೆಸ್‌ ನಿರೀಕ್ಷಿಸಲಾಗಿದೆ. ಹೀಗಾಗಿ ಫ್ಯಾಷನ್‌ ರಿಟೇಲರ್‌ಗಳು ಹೆಚ್ಚು ಭಾಗವಹಿಸುವ ಸಾಧ್ಯತೆ ಇದೆ. ಆನ್‌ಲೈನ್‌ ರಿಟೇಲ್‌ ವಹಿವಾಟಿನಲ್ಲಿ 2022ರಲ್ಲಿ ಒಟ್ಟು 5.37 ಲಕ್ಷ ಕೋಟಿ ರೂ. ಮೌಲ್ಯದ ವಸ್ತುಗಳು ಮಾರಾಟವಾಗುವ ನಿರೀಕ್ಷೆ ಇದೆ.

ಭಾರತದ ಇ-ಕಾಮರ್ಸ್‌ ಬಿಸಿನೆಸ್‌ 2027ರ ವೇಳೆಗೆ 200 ಶತಕೋಟಿ ಡಾಲರ್‌ (15.80 ಲಕ್ಷ ಕೋಟಿ ರೂ.) ಮಟ್ಟಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಹೀಗಿದ್ದರೂ 2020ರಲ್ಲಿ ಆಫ್‌ಲೈನ್‌ ಬಿಸಿನೆಸ್‌ ಗೆ ಕೋವಿಡ್‌ ಬಿಕ್ಕಟ್ಟಿನಿಂದಾಗಿ ಭಾರಿ ಹೊಡೆತ ಬಿದ್ದಿತ್ತು. ಇದರ ಪರಿಣಾಮ ಬಹುತೇಕ ರಿಟೇಲರ್‌ಗಳು ಆನ್‌ಲೈನ್‌ಗೆ ಬದಲಾಗಿದ್ದರು.

ಈ ನಡುವೆ ಸ್ಪರ್ಧಾತ್ಮಕ ಆಯೋಗವು ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ವಿರುದ್ಧ ಸ್ಪರ್ಧಾತ್ಮಕ ನೀತಿಗಳ ಉಲ್ಲಂಘನೆಗೆ ಸಂಬಂಧಿಸಿ ತನಿಖೆ ನಡೆಸಿದೆ. ಕೆಲವು ಪೂರೈಕೆದಾರರನ್ನು ತಮ್ಮ ವೇದಿಕೆಗಳಲ್ಲಿ ಅಕ್ರಮವಾಗಿ ಮುಂಚೂಣಿಗೆ ತರುತ್ತಿವೆ ಎಂಬ ಆರೋಪ ಇವುಗಳ ಮೇಲಿದೆ.

ಏನೇ ಆದರೂ ಕೋವಿಡ್‌ ಬಿಕ್ಕಟ್ಟು ಉಪಶಮನವಾಗಿದ್ದು, ಫ್ಲಿಪ್‌ ಕಾರ್ಟ್‌ ಮತ್ತು ಅಮೆಜಾನ್‌ನಲ್ಲಿ ಹಬ್ಬದ ಅವಧಿಯಲ್ಲಿ ವ್ಯಾಪಾರ ಹೆಚ್ಚಳ ನಿರೀಕ್ಷಿಸಲಾಗಿದೆ.

(ಲೇಖಕರು ವಿಸ್ತಾರನ್ಯೂಸ್‌ನ ಬಿಸಿನೆಸ್‌ & ಎಕಾನಮಿ ವಿಭಾಗದ ಕನ್ಸಲ್ಟಿಂಗ್‌ ಎಡಿಟರ್)

Exit mobile version