ನವ ದೆಹಲಿ: ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ನ ಇತ್ತೀಚಿನ ವರದಿಯ ಪ್ರಕಾರ ಭಾರತವು ಬ್ರಿಟನ್ ಅನ್ನು ಹಿಂದಿಕ್ಕಿ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕತೆಯಾಗಿ (Economy) ಹೊರಹೊಮ್ಮಿದೆ.
ಐಎಂಎಫ್ ಪ್ರಕಾರ ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿ ಬಳಿಕ 5ನೇ ಅತಿ ದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿದೆ. ಬ್ರಿಟನ್ 6 ನೇ ಸ್ಥಾನಕ್ಕೆ ಇಳಿದಿದೆ. ಭಾರತವು ಹತ್ತು ವರ್ಷದ ಹಿಂದೆ 11ನೇ ಸ್ಥಾನದಲ್ಲಿತ್ತು. ಬ್ರಿಟನ್ ೫ರಲ್ಲಿತ್ತು. ಬ್ರಿಟನ್‌ನಲ್ಲಿ ಈಗ ಕಳೆದ ೪೦ ವರ್ಷಗಳಲ್ಲಿ ಕಂಡರಿಯದಷ್ಟು ಹಣದುಬ್ಬರ ಉಂಟಾಗಿದೆ. ಆರ್ಥಿಕ ಹಿಂಜರಿತದ ಅಪಾಯವನ್ನು ಅದು ಎದುರಿಸುತ್ತಿದೆ.
ಕರ್ಮ ಸಿದ್ಧಾಂತ ನೆನಪಿಸಿದ ಆನಂದ್ ಮಹೀಂದ್ರಾ: ಭಾರತವು ಬ್ರಿಟನ್ ಹಿಂದಿಕ್ಕಿ 5ನೇ ಬೃಹತ್ ಎಕಾನಮಿ ಆಗಿರುವುದಕ್ಕೆ ಟ್ವೀಟ್ ಮಾಡಿರುವ ಉದ್ಯಮಿ ಆನಂದ್ ಮಹೀಂದ್ರಾ, ” ಕರ್ಮ ಸಿದ್ಧಾಂತ ಕೆಲಸ ಮಾಡುತ್ತದೆ. ಸತತ ಹೋರಾಟ ಮತ್ತು ತ್ಯಾಗ ಬಲಿದಾನಗಳ ಮೂಲಕ ಸ್ವಾತಂತ್ರ್ಯ ಗಳಿಸಿದ ಪ್ರತಿಯೊಬ್ಬ ಭಾರತೀಯರಿಗೂ ಇದು ಹೃದಯವನ್ನು ತುಂಬುವ ಸುದ್ದಿ. ಭಾರತವು ಅರಾಜಕತೆ ಮತ್ತು ಅವ್ಯವಸ್ಥೆಗೆ ಕುಸಿಯಲಿದೆ ಎಂದು ಭಾವಿಸಿದ್ದವರಿಗೆ ಇದು ಮೌನವಾದ, ಆದರೆ ಪ್ರಬಲ ಪ್ರತ್ಯುತ್ತರವಾಗಿದೆʼʼ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಭಾರತಕ್ಕೆ ಹೆಮ್ಮೆಯ ಕ್ಷಣ: ಉದಯ್ ಕೋಟಕ್: ” ನಮ್ಮ ವಸಾಹತುಶಾಹಿ ಆಡಳಿತಗಾರನಾಗಿದ್ದ ಬ್ರಿಟನ್ ಅನ್ನು ಹಿಂದಿಕ್ಕಿ ಭಾರತ 5ನೇ ದೊಡ್ಡ ಎಕಾನಮಿ ಆಗಿರುವುದು ಎಲ್ಲರಿಗೂ ಹೆಮ್ಮೆಯ ಕ್ಷಣ. ಭಾರತ ಈಗ 3.5 ಲಕ್ಷ ಕೋಟಿ ಡಾಲರ್ ಗಾತ್ರದ ಆರ್ಥಿಕತೆಯಾಗಿದ್ದರೆ, ಬ್ರಿಟನ್ ಎಕಾನಮಿ 3.2 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಿದೆ. ಹೀಗಿದ್ದರೂ ಭಾರತದ ಜನಸಂಖ್ಯೆ 140 ಕೋಟಿ, ಬ್ರಿಟನ್‌ನದ್ದು 6.8 ಕೋಟಿ ರೂ. ನಮ್ಮ ತಲಾ ಜಿಡಿಪಿ 2,500 ಡಾಲರ್ ಆಗಿದ್ದರೆ, ಅವರದ್ದು 47,000 ಡಾಲರ್. ನಾವು ಮತ್ತಷ್ಟು ಬೆಳೆಯಬೇಕಾಗಿದೆ ಎಂದು ಉದ್ಯಮಿ ಉದಯ್ ಕೋಟಕ್ ಹೇಳಿದ್ದಾರೆ.