ಮಳೆಗಾಲ ಮುಗಿದಿದೆ. ಆದರೆ ರಾಜಕೀಯ ಪಕ್ಷಗಳು ಮತದಾರರಿಗೆ ಉಚಿತ ಕೊಡುಗೆಗಳ ಸುರಿಮಳೆಗರೆಯುವುದನ್ನು ಮಾತ್ರ ಬಿಟ್ಟಿಲ್ಲ. (ವಿಸ್ತಾರ Explainer) ದೇಶಾದ್ಯಂತ ಪುಕ್ಕಟೆ ಯೋಜನೆಗಳ (Freebies) ಭರಾಟೆ ಮುಗಿಲುಮುಟ್ಟಿದೆ. ಮತ್ತೊಂದು ಕಡೆ ವಿವೇಚನಾರಹಿತವಾಗಿ ಉಚಿತ ಯೋಜನೆಗಳನ್ನು ಜಾರಿಗೊಳಿಸಿದ್ದ ರಾಜ್ಯಗಳಲ್ಲಿ ಆರ್ಥಿಕ ಬಿಕ್ಕಟ್ಟು ಕೂಡ ಸೃಷ್ಟಿಯಾಗಿದ್ದು, ಅವುಗಳು ಮಿನಿ ಲಂಕಾಗಳಾಗುವ ಭೀತಿಯೂ ಇದೆ.
ಆಮ್ ಆದ್ಮಿಯ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಭಾರತೀಯ ಜನತಾ ಪಕ್ಷದ ಭದ್ರಕೋಟೆ ಗುಜರಾತ್‌ನಲ್ಲಿ ಪಕ್ಷದ ಅಸ್ತಿತ್ವ ವಿಸ್ತರಿಸಲು ಯತ್ನಿಸಿದ್ದಾರೆ. ಇದಕ್ಕೂ ಮುನ್ನ ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಪಕ್ಷಕ್ಕೆ ಅಭೂತಪೂರ್ವ ಗೆಲುವನ್ನು ದೊರಕಿಸಿಕೊಟ್ಟಿದ್ದಾರೆ. ಈ ಮೂರೂ ಕಡೆಗಳಲ್ಲಿ ಚುನಾವಣೆಯನ್ನು ಗೆಲ್ಲಲು ಸಿದ್ಧ ಸೂತ್ರವೊಂದನ್ನು ರೆಡಿ ಮಾಡಿದ್ದರು. ಅದುವೇ ಉಚಿತ ಕೊಡುಗೆಗಳ ಘೋಷಣೆಗಳು. ಇತ್ತೀಚಿನ ಗುಜರಾತ್ ಚುನಾವಣೆಯಲ್ಲಿ ಗಮನಿಸಿ, ಕೇಜ್ರಿವಾಲ್ ಅವರು ಪ್ರತಿ ತಿಂಗಳು 300 ಯುನಿಟ್ ವಿದ್ಯುತ್ ವಿತರಣೆ, 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ಮಾಸಿಕ 1000 ರೂ. ಭತ್ಯೆ, ಪ್ರತಿಯೊಬ್ಬ ಯುವಕನಿಗೆ ಖಾತರಿಯ ಉದ್ಯೋಗ ಮತ್ತು ನಿರುದ್ಯೋಗಿಗಳಿಗೆ ಮಾಸಿಕ 3,000 ರೂ. ಭತ್ಯೆ ನೀಡುವುದಾಗಿ ಘೋಷಿಸಿದ್ದರು.
ಕೇಜ್ರಿವಾಲ್ ಅವರು ಇಂಥ ಸ್ಕೀಮ್‌ಗಳನ್ನು ಜನ ಕಲ್ಯಾಣ ಯೋಜನೆಗಳು (welfare) ಎಂದು ಬಣ್ಣಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು ರೆವಡಿ (ಎಳ್ಳು, ಸಕ್ಕರೆ ಲೇಪಿಸಿದ ಸಿಹಿ ಮಿಠಾಯಿ) ಎನ್ನುತ್ತಿದ್ದರು. ಹಾಗೂ ಉಚಿತ ಯೋಜನೆಗಳು ಅತಿಯಾದಾಗ ನಿಜವಾಗಿಯೂ ಅಗತ್ಯವಿರುವ ಅಭಿವೃದ್ಧಿ ಯೋಜನೆಗಳು ಮುಗ್ಗರಿಸಿ ದೇಶ ಹಿಂದುಳಿಯುತ್ತದೆ ಎನ್ನುತ್ತಿದ್ದರು. ಎಲ್ಲ ಪಕ್ಷಗಳೂ ತಾವೇನೂ ಕಮ್ಮಿ ಇಲ್ಲ ಎಂಬಂತೆ ಉಚಿತ ಕೊಡುಗೆಗಳನ್ನು ಘೋಷಿಸುತ್ತವೆ. ಅಂಗೈಯಲ್ಲೇ ಅರಮನೆ ತೋರಿಸುತ್ತಿವೆ. ಈ ಸೂತ್ರದ ಮೂಲಕವೇ ಅಧಿಕಾರದ ಗದ್ದುಗೆ ಹಿಡಿದವರಿದ್ದಾರೆ. ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಅವರು 2019ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಹಲವಾರು ಉಚಿತ ಕೊಡುಗೆಗಳ ಸ್ಕೀಮ್‌ಗಳನ್ನು ಘೋಷಿಸಿದ್ದರು. ಆದರೆ ಇವುಗಳ ಪರಿಣಾಮ ಆಂಧ್ರಪ್ರದೇಶದ ಆರ್ಥಿಕತೆಯೂ ಈಗ ಹಿಂದುಳಿಯುತ್ತಿದೆ.
ಜಗನ್ ಮೋಹನ್ ರೆಡ್ಡಿ ಅವರು ಮಕ್ಕಳನ್ನು ಶಾಲೆಗೆ ಕಳಿಸುವ ಪೋಷಕರಿಗೆ 15,000 ರೂ, ರೈತರಿಗೆ ಉಚಿತ ವಿದ್ಯುತ್ ಅಥವಾ ನಗದು ವರ್ಗಾವಣೆ, ಪ್ರತಿ ರೈತರಿಗೆ ವಾರ್ಷಿಕ 7,500 ರೂ. ನೆರವು, ಆಟೋ ಚಾಲಕರಿಗೆ 24,000 ರೂ. ಹಾಗೂ ಸ್ವಂತ ಆಟೊ, ನೇಕಾರರ ಕುಟುಂಬಕ್ಕೆ 10,000 ರೂ. ಘೋಷಿಸಿದ್ದರು. ಇವುಗಳಿಂದ ಸರ್ಕಾರದ ಬೊಕ್ಕಸಕ್ಕೆ 27,451 ಕೋಟಿ ರೂ. ವೆಚ್ಚವಾಗುತ್ತಿತ್ತು. ಅಂದರೆ ಜಿಎಸ್‌ಡಿಪಿಯ (Gross state domestic product) ಶೇ.2ರಷ್ಟು. ಕಳೆದ ವರ್ಷ ಆಂಧ್ರಪ್ರದೇಶ ಕೇಂದ್ರದಿಂದ ಹಣಕಾಸು ನೆರವನ್ನೂ ಯಾಚಿಸಿತ್ತು.
ಪ್ರತಿಪಕ್ಷಗಳು ನೇತೃತ್ವ ವಹಿಸಿರುವ ರಾಜ್ಯಗಳಿಗೆ ಮಾತ್ರ ಇಂಥ ಉಚಿತ ಕೊಡುಗೆಗಳ ಭರಾಟೆ ಸೀಮಿತವಾಗಿಲ್ಲ. ಮಧ್ಯಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರವಿದೆ. ಅಲ್ಲಿಯೂ 21,000 ಕೋಟಿ ರೂ. ಮೌಲ್ಯದ ಅಥವಾ ಜಿಎಸ್‌ಡಿಪಿಯ 1.6% ಕ್ಕೆ ಸಮನಾಗುವಷ್ಟು ಬೃಹತ್ ಉಚಿತ ಕೊಡುಗೆಗಳನ್ನು ಪ್ರಕಟಿಸಲಾಗಿತ್ತು. ರೈತರಿಗೆ ಮತ್ತು ಗೃಹ ವಲಯದ ಬಳಕೆದಾರರಿಗೆ ವಿದ್ಯುತ್ ಸಬ್ಸಿಡಿ ನೀಡಲು ಬಳಕೆಯಾಗಿತ್ತು. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು 2022ರ ವಿಧಾನಸಭೆ ಚುನಾವಣೆಗೆ ಮುನ್ನ ಯುವಜನತೆಗೆ 1 ಕೋಟಿ ಉಚಿತ ಸ್ಮಾರ್ಟ್ ಫೋನ್ ಮತ್ತು ಟಾಬ್ಲೆಟ್ ವಿತರಿಸುವುದಾಗಿ ಘೋಷಿಸಿದ್ದರು. ಇದಕ್ಕೆ 2,000 ಕೋಟಿ ರೂ. ಬೇಕಾಗುತ್ತದೆ.
ಮಿನಿ ಲಂಕೆಗಳಾಗುತ್ತಿರುವ ರಾಜ್ಯಗಳು:
ಉಚಿತ ಕೊಡುಗೆಗಳ ಹಾವಳಿಯಿಂದಾಗಿ ಹಲವು ರಾಜ್ಯಗಳು ಇಂದು ಆರ್ಥಿಕ ಸಂಕಷ್ಟಕ್ಕೀಡಾಗಿವೆ ಎಂಬುದು ಕಳವಳಕಾರಿ ಸಂಗತಿಯಾಗಿದೆ. ತಮಿಳುನಾಡು ರಾಜಕೀಯ ಇಂಥ ಪುಕ್ಕಟೆ ಸ್ಕೀಮ್‌ಗಳನ್ನು ಈ ಹಿಂದಿನಿಂದಲೂ ಅನುಸರಿಸುತ್ತಾ ಬಂದಿದೆ. ಕಲರ್ ಟಿವಿ, ಮಿಕ್ಸರ್ ಗ್ರೈಂಡರ್, ಚಿನ್ನವನ್ನೂ ವಿತರಿಸುವ ಘೋಷಣೆಗಳು ಇಲ್ಲಿ ಸಾಮಾನ್ಯವಾಗಿತ್ತು.
ಹಾಗಾದರೆ ಭಾರತದ ರಾಜ್ಯವೊಂದು ಲಂಕಾ ಮಾದರಿಯಲ್ಲಿ ದಿವಾಳಿಯಾದೀತೇ? ಸಾಧ್ಯವಿಲ್ಲ. ಏಕೆಂದರೆ ರಾಜ್ಯ ಸರ್ಕಾರಗಳು ತಾಂತ್ರಿಕವಾಗಿ ಕೇಂದ್ರ ಸರ್ಕಾರದ ಭಾಗಗಳಾಗಿವೆ. ಆದ್ದರಿಂದ ರಾಜ್ಯ ಸರ್ಕಾರವೊಂದು ಆರ್ಥಿಕವಾಗಿ ದಿವಾಳಿಯಾಗುವ ಅಂಚಿಗೆ ತಲುಪಿದರೆ ಕೇಂದ್ರ ಸರ್ಕಾರ ನೆರವಿಗೆ ಧಾವಿಸುತ್ತದೆ. ಅಥವಾ ತಾನು ನೀಡಬೇಕಾಗಿರುವುದನ್ನು ಮುಂಗಡವಾಗಿ ಕೊಡುತ್ತದೆ. ಆದರೂ ರಾಜ್ಯದ ವಿತ್ತೀಯ ಪರಿಸ್ಥಿತಿ ದುರ್ಬಲವಾಗುತ್ತದೆ.
ಎಚ್ಚರಿಕೆಯ ಗಂಟೆ ಬಾರಿಸಿರುವ ಆರ್‌ಬಿಐ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರ ಇಂಥ ಉಚಿತ ಕೊಡುಗೆಗಳ ಪರಿಣಾಮಗಳನ್ನು ವಿಶ್ಲೇಷಿಸಿದೆ. ಇವುಗಳನ್ನು ಮೆರಿಟ್ ಇರುವಂಥದ್ದು ಹಾಗೂ ಮೆರಿಟ್ ಇಲ್ಲದಿರುವಂಥದ್ದು ಎಂಬುದಾಗಿ ವರ್ಗೀಕರಿಸಿದೆ. ಉದಾಹರಣೆಗೆ ಉಚಿತ ವಿದ್ಯುತ್, ನೀರು, ಸಾರಿಗೆ ವ್ಯವಸ್ಥೆಯನ್ನು ಮೆರಿಟ್ ಇರುವಂಥದ್ದು ಎಂದಿದೆ. ಆದರೆ ವಿದ್ಯುತ್ ಬಿಲ್ ಮನ್ನಾ, ಕೃಷಿ ಸಾಲ ಮನ್ನಾ, ಕಲರ್ ಟಿವಿ, ಮಿಕ್ಸರ್ ಗ್ರೈಂಡರ್, ಕುಕ್ಕರ್ ವಿತರಣೆ ಇತ್ಯಾದಿಗಳನ್ನು ಮೆರಿಟ್ ಇಲ್ಲದ ಅಥವಾ ಅನಗತ್ಯ ಸ್ಕೀಮ್‌ಗಳು ಎಂದು ಪರಿಗಣಿಸಿದೆ.
ಕೋವಿಡ್ ಬಿಕ್ಕಟ್ಟಿನ ಬಳಿಕ ರಾಜ್ಯಗಳ ಆದಾಯ ಮಂದಗತಿಯಲ್ಲಿದೆ. ಇಂಥ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ.ಗಳ ಉಚಿತ ಕೊಡುಗೆಗಳ ವಿತರಣೆಯಿಂದ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಮಿನಿ ಲಂಕಾ ಆಗಬಹುದು ಎಂದು ಹಿರಿಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಐದು ರಾಜ್ಯಗಳ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಎಂದು ಆರ್‌ಬಿಐನ ಆರ್ಥಿಕ ನೀತಿ ಸಂಶೋಧನಾ ವಿಭಾಗ ಎಚ್ಚರಿಸಿದೆ. ಅವುಗಳೆಂದರೆ ಬಿಹಾರ, ರಾಜಸ್ಥಾನ, ಕೇರಳ ಮತ್ತು ಪಶ್ಚಿಮ ಬಂಗಾಳ. ಈ ರಾಜ್ಯಗಳಲ್ಲಿ ಸಾಲದ ಪ್ರಮಾಣ ಗಣನೀಯ ಏರಿಕೆಯಾಗಿದೆ. ಜಿಎಸ್‌ಡಿಪಿಯ 30% ಮೀರಿರುವುದು ಅಪಾಯಕಾರಿ ಎಂದು ಆರ್‌ಬಿಐನ ಡೆಪ್ಯುಟಿ ಗವರ್ನರ್ ಮೈಕೆಲ್ ದೇಬಬ್ರತ ನೇತೃತ್ವದ ಸಮಿತಿ ಎಚ್ಚರಿಸಿದೆ. 15ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ ಜಿಎಸ್‌ಡಿಪಿಯ (Gross domestic product) 20%ರಷ್ಟು ಸಾಲ ಇರಬಹುದು. ಅದನ್ನು ದಾಟುವುದು ಅಪಾಯಕಾರಿ. ಅಂದರೆ ಇದರ ಪರಿಣಾಮ ಈ ರಾಜ್ಯಗಳು ಸಾಲದ ಮರು ಪಾವತಿಗೆ ಮತ್ತೆ ಸಾಲ ಮಾಡಬೇಕಾಗುತ್ತದೆ. ಇತರ ಅರ್ಧ ಡಜನ್ ರಾಜ್ಯಗಳೂ ಇದೇ ಅಪಾಯದ ಅಂಚಿನಲ್ಲಿವೆ ಎಂದು ಆರ್‌ಬಿಐ ಸಮಿತಿಯ ವರದಿ ಎಚ್ಚರಿಸಿದೆ.
ಮೋದಿ vs ಕೇಜ್ರಿವಾಲ್
ಕೆಲವು ರಾಜ್ಯಗಳಲ್ಲಿ ಆರ್ಥಿಕ ಪರಿಸ್ಥಿತಿ ದುಸ್ಥಿತಿಯಲ್ಲಿರಲು ಕಾರಣಗಳು ಇವೆ. ಸರ್ಕಾರಿ ಉದ್ಯೋಗಿಗಳ ವೇತನ, ಪಿಂಚಣಿ, ಆಡಳಿತಾತ್ಮಕ ವೆಚ್ಚಗಳು ತೆರಿಗೆ ಆದಾಯವನ್ನು ಕಬಳಿಸುತ್ತಿರುವುದು ಮುಖ್ಯ ಕಾರಣ. ನಾನಾ ಉಚಿತ ಯೋಜನೆಗಳಿಗೆ ನೀಡುವ ಸಬ್ಸಿಡಿ ವೆಚ್ಚ, ವಿದ್ಯುತ್ ವಿತರಣೆ ಕಂಪನಿಗಳ ಸಾಲ ಪ್ರಭಾವ ಬೀರಿದೆ.
ಉಚಿತ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಹಾಗೂ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಲವು ಸಂದರ್ಭಗಳಲ್ಲಿ ಪರಸ್ಪರ ಭಿನ್ನ ನಿಲುವುಗಳನ್ನು ಬಹಿರಂಗಪಡಿಸಿದ್ದಾರೆ. ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಉಚಿತ ಕೊಡುಗೆಗಳ ದುಷ್ಪರಿಣಾಮಗಳನ್ನು ವಿವರಿಸಿದ್ದರು. ದೇಶದ ರಾಜಕಾರಣದಿಂದ ಪುಕ್ಕಟೆ ಯೋಜನೆಗಳ ಮಾನಸಿಕತೆಯನ್ನು ತೊಲಗಿಸಬೇಕು ಎಂದು ಹೇಳಿದ್ದರು. ಪರೋಕ್ಷವಾಗಿ ಪ್ರತಿಪಕ್ಷ ಆಡಳಿತವಿರುವ ರಾಜ್ಯಗಳ ಬಗ್ಗೆ ಪ್ರಸ್ತಾಪಿಸಿದ್ದರು.
ಮತ್ತೊಂದು ಕಡೆ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ತಿರುಗೇಟು ನೀಡಲು ಹೀಗೆನ್ನುತ್ತಾರೆ- ಉಚಿತ ಶಿಕ್ಷಣ, ಆರೋಗ್ಯ, ಔಷಧ ವಿತರಣೆಗೆ ಏಕಾಏಕಿ ವಿರೋಧ ಏಕೆ? ಕೇಂದ್ರ ಸರ್ಕಾರದ ಹಣಕಾಸಿನಿಂದ ಇವುಗಳನ್ನು ಒದಗಿಸುವುದಿದ್ದರೆ ಸರಿಯೇ? ರಾಜ್ಯ ಸರ್ಕಾರಗಳು ಮಾತ್ರ ಮಾಡಬಾರದೇ? ತಿಂಗಳಿಗೆ 1000 ರೂ. ವಿತರಿಸುವುದು ಪುಕ್ಕಟೆ ಅಲ್ಲ, ಅದು ಜನರ ಹಕ್ಕು. 2014ರಿಂದೀಚೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೂಡ ಹಲವಾರು ಉಚಿತ ಯೋಜನೆಗಳನ್ನು, ಸಬ್ಸಿಡಿ ನೆರವುಗಳನ್ನು ಪ್ರಕಟಿಸಿದೆ. ಪಿಎಂ ಜನ್ ಧನ್ ಯೋಜನೆಯಡಿಯಲ್ಲಿ ಬಡ ಮಹಿಳೆಯರ ಖಾತೆಗೆ ಮಾಸಿಕ 500 ರೂ. ಹಾಕಿಲ್ಲವೇ. ಕೋವಿಡ್ ಬಿಕ್ಕಟ್ಟಿನ ಸಂದರ್ಭ ಬಡವರಿಗೆ ಉಚಿತ ಆಹಾರ ಧಾನ್ಯ ನೀಡಿಲ್ಲವೇ, ಕೋವಿಡ್ ಬಿಕ್ಕಟ್ಟಿನ ಸಂದರ್ಭ ವಿತ್ತೀಯ ಕೊರತೆ ನಿಯಂತ್ರಣದ ಮಿತಿಯನ್ನು ಕೇಂದ್ರ ಸರ್ಕಾರ ಮೀರಿಲ್ಲವೇ (FRBM Target) ಎನ್ನುತ್ತಾರೆ ಕೇಜ್ರಿವಾಲ್.
ಕೇಂದ್ರ ಸರ್ಕಾರದ ಉಚಿತ ಯೋಜನೆಗಳ ವಿರುದ್ಧ ಕೇಜ್ರಿವಾಲ್ ಅವರ ಆರೋಪಗಳಿಗೆ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತ್ಯುತ್ತರ ನೀಡಿದ್ದಾರೆ. ಬಡವರಿಗೆ ನೆರವಾಗುವ ಉಚಿತ ಕೊಡುಗೆಗಳನ್ನು ನೀಡಬಾರದು ಎಂದು ಯಾರೂ ಹೇಳುವುದಿಲ್ಲ. ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಕಲ್ಪಿಸುವುದನ್ನು ಯಾರೂ ಪುಕ್ಕಟೆ ಎನ್ನುವುದಿಲ್ಲ. ಅದು ಪ್ರತಿ ಸರ್ಕಾರದ ಆದ್ಯತೆಯಾಗಿರುತ್ತದೆ. ಕೆಲ ರಾಜಕೀಯ ಪಕ್ಷಗಳು ಉಚಿತವಾಗಿ ಟಿವಿ ಸೆಟ್, ಅಡುಗೆ ಉಪಕರಣಗಳು, ಚಿನ್ನಾಭರಣಗಳು, ಮೊಬೈಲ್ ಫೋನ್, ಲ್ಯಾಪ್‌ಟಾಪ್, ಕೆಲ ಯುನಿಟ್ ಉಚಿತ ವಿದ್ಯುತ್, ವಾಷಿಂಗ್ ಮೆಷೀನ್, ಸೀರೆ ಇತ್ಯಾದಿಗಳ ವಿತರಣೆ ಸಲ್ಲದು. ಇದು ವ್ಯವಸ್ಥೆಯ ಅದಕ್ಷತೆಗೆ ಕಾರಣವಾಗುತ್ತದೆ. ಇಂಥದ್ದನ್ನು ನಿರುತ್ತೇಜನಗೊಳಿಸಬೇಕು ಎನ್ನುತ್ತಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
ಹೆಚ್ಚುತ್ತಿರುವ ಸಾಲದ ರೆಡ್ ಅಲರ್ಟ್:
ಕಳೆದ 2 ವರ್ಷಗಳಿಂದ ರಾಜ್ಯಗಳಲ್ಲಿ ಜಿಡಿಪಿಗೆ ಸಾಲದ ಪ್ರಮಾಣದ ಅನುಪಾತ 20% ಇದ್ದರೆ ಸೂಕ್ತ. ಅದನ್ನು ಮೀರುವುದು ಒಳ್ಳೆಯದಲ್ಲ. ಆದರೆ ಹಲವು ರಾಜ್ಯಗಳಲ್ಲಿ ಅನುಪಾತ 30%ಕ್ಕೂ ಹೆಚ್ಚು ಇದೆ. ಪಟ್ಟಿ ಇಲ್ಲಿದೆ.
ರಾಜ್ಯ | ಜಿಎಸ್ಡಿಪಿಗೆ ಸಾಲದ ಅನುಪಾತ(%) |
ಆಂಧ್ರಪ್ರದೇಶ | 32.5% |
ಬಿಹಾರ | 38.6% |
ಛತ್ತೀಸ್‌ಗಢ | 26.1% |
ಗುಜರಾತ್ | 19% |
ಹರಿಯಾಣ | 29.4% |
ಜಾರ್ಖಂಡ್ | 33% |
ಕರ್ನಾಟಕ | 26.6% |
ಕೇರಳ | 37% |
ಮಧ್ಯಪ್ರದೇಶ | 31.3% |
ಮಹಾರಾಷ್ಟ್ರ | 17.9% |
ಒಡಿಶಾ | 18.3% |
ಪಂಜಾಬ್ | 53.3% |
ರಾಜಸ್ಥಾನ | 39.5% |
ತಮಿಳುನಾಡು | 27% |
ತೆಲಂಗಾಣ | 24.7% |
ಉತ್ತರಪ್ರದೇಶ | 34.9% |
ಪಶ್ಚಿಮಬಂಗಾಳ | 34.4% |
ಉಚಿತ ಯೋಜನೆಗಳ ಬಗ್ಗೆ ಯಾರು ಏನೆನ್ನುತ್ತಾರೆ?
ರಾಜಕೀಯದಲ್ಲಿ ಸ್ವಾರ್ಥ ಇದ್ದರೆ ಯಾರಾದರೂ ಬಂದು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಉಚಿತವಾಗಿ ಕೊಡುತ್ತೇವೆ ಎಂದು ಘೋಷಿಸಬಹುದು. ಆದರೆ ಇಂಥ ಹೆಜ್ಜೆಗಳು ನಮ್ಮ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳಲಿವೆ. ದೇಶ ಸ್ವಾವಲಂಬಿಯಾಗುವುದನ್ನು ತಡೆಯಲಿದೆ. ಇಂಥ ಸ್ವಾರ್ಥ ರಾಜಕಾರಣದಿಂದ ಪ್ರಾಮಾಣಿಕ ತೆರಿಗೆದಾರರ ಮೇಲಿನ ಹೊರೆಯೂ ಹೆಚ್ಚುತ್ತದೆ.
-ನರೇಂದ್ರ ಮೋದಿ, ಪ್ರಧಾನ ಮಂತ್ರಿ
ರಾಜಕೀಯ ಪಕ್ಷಗಳು ಇಂಥ ಘೋಷಣೆಗಳನ್ನು ಹೊರಡಿಸುವುದನ್ನು ನಾವು ತಡೆಯಲಾಗದು. ಆದರೆ ಸರಿಯಾದ ಭರವಸೆ ಯಾವುದು ಎಂಬುದು ಪ್ರಶ್ನೆ. ಉಚಿತವಾಗಿ ಶಿಕ್ಷಣ, ನೀರು, ಆರೋಗ್ಯ ನೀಡುವ ಭರವಸೆಯನ್ನು ಪುಕ್ಕಟೆ ಎನ್ನಲು ಸಾಧ್ಯವೇ? ಉಚಿತ ವಿದ್ಯುತ್, ಕೆಲವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಫ್ರೀಯಾಗಿ ಕೊಡುವುದನ್ನು ಜನ ಕಲ್ಯಾಣ ಎನ್ನಬಹುದೇ? ಸಾರ್ವಜನಿಕರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸುವುದು ಹೇಗೆ ಎಂಬುದು ಮುಖ್ಯ.
-ಸುಪ್ರೀಂಕೋರ್ಟ್
ಚುನಾವಣೆ ವೇಳೆ ನೀವು ಏನನ್ನಾದರೂ ಭರವಸೆ ನೀಡಬಹುದು, ಆದರೆ ಅದನ್ನು ಭರಿಸುವ ಆರ್ಥಿಕ ಸಾಮರ್ಥ್ಯ ರಾಜ್ಯಕ್ಕೆ ಇದೆಯೇ ಎಂಬುದನ್ನು ಪರಿಗಣಿಸಿ. ನೀವು ಗೆಲ್ಲಬಹುದು, ಆದರೆ ಗೆದ್ದ ಬಳಿಕ ಭರವಸೆಯನ್ನು ಈಡೇರಿಸುವುದು ಹೇಗೆ ಎಂಬುದನ್ನು ಗಮನಿಸಿ
–ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ
ಜನತೆಗೆ ಉಚಿತವಾಗಿ ನೀಡುವುದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುವುದಿಲ್ಲ. ಆದರೆ ಅಧಿಕಾರಸ್ಥರು ತಮ್ಮ ಸ್ನೇಹಿತರಿಗೆ ಲಕ್ಷಾಂತರ ಕೋಟಿ ರೂ. ನೀಡುವುದರಿಂದ ಬಿಕ್ಕಟ್ಟು ಸೃಷ್ಟಿಯಾಗುತ್ತದೆ.
ಅರವಿಂದ್ ಕೇಜ್ರಿವಾಲ್, ಮುಖ್ಯಮಂತ್ರಿ, ದಿಲ್ಲಿ.
ರಾಜ್ಯದಲ್ಲಿ ಬಡ ಜನತೆಗೆ ಉಚಿತವಾಗಿ ನೀಡುವುದು ಆರ್ಥಿಕ ನ್ಯಾಯವನ್ನು ಒದಗಿಸುತ್ತದೆ. ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಉತ್ತಮ ಮಾರ್ಗೋಪಾಯ.
ಎಂ.ಕೆ ಸ್ಟಾಲಿನ್, ಸಿಎಂ ತಮಿಳುನಾಡು.
ನೀವು ಉದ್ಯಮಿಗಳಿಗೆ ನೀಡುವುದು ನೆರವು ಎನ್ನುವುದಾದರೆ, ಬಡವರಿಗೆ ನೀಡುವುದು ಪುಕ್ಕಟೆಯಾಗುವುದು ಹೇಗೆ? ಅವರು ತಮ್ಮ ಮನೆಯನ್ನು ನಡೆಸಬೇಡವೇ?
ಕಮಲ್‌ನಾಥ್, ಮಾಜಿ ಸಿಎಂ, ಮಧ್ಯಪ್ರದೇಶ.
ಜನ ಕಲ್ಯಾಣ ಯೋಜನೆಗಳಿಗೆ ಪ್ರಧಾನ ಮಂತ್ರಿಯವರು ರೆವಡಿ (ಎಳ್ಳು, ಸಕ್ಕರೆ ಮಿಶ್ರಿತ ಮಿಠಾಯಿ) ಎನ್ನುವುದು ನಾಚಿಕೆಗೇಡು. ಒಂದು ಕೋಟಿ ಜನರಿಗೆ ಪಿಂಚಣಿ ನೀಡುತ್ತಿರುವುದಕ್ಕೆ ಹೆಮ್ಮೆ ಇದೆ.
ಅಶೋಕ್ ಗೆಹ್ಲೋಟ್, ಸಿಎಂ, ರಾಜಸ್ಥಾನ
=================
ರಾಜ್ಯಗಳು ಮತ್ತು ವೆಚ್ಚದ ಆದ್ಯತೆಗಳು:
ಪಶ್ಚಿಮ ಬಂಗಾಳ:
ವಿದ್ಯುತ್: ಪ್ರತಿ ತ್ರೈಮಾಸಿಕದಲ್ಲಿ 75 ಯುನಿಟ್ ವಿದ್ಯುತ್ ಬಳಸುವವರಿಗೆ ಉಚಿತ. ವಾರ್ಷಿಕ ವೆಚ್ಚ: 5,103 ಕೋಟಿ ರೂ.
ಸಾಧನಗಳು: ವಿದ್ಯಾರ್ಥಿಗಳಿಗೆ ಟಾಬ್ಲೆಟ್ ವಿತರಿಸಲು ನೆರವು. 950,000 ವಿದ್ಯಾರ್ಥಿಗಳಿಗೆ ತಲಾ 10,000 ರೂ. ನೆರವು. ಆಶಾ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ಖರೀದಿಸಲು 8,000 ರೂ.
ಎಸ್‌ಸಿ/ಎಸ್‌ಟಿ ಸಮುದಾಯದ ಹಿರಿಯ ನಾಗರಿಕರಿಗೆ 1,000 ಪಿಂಚಣಿ, ಸರ್ಕಾರದ ಬೊಕ್ಕಸಕ್ಕೆ 3,000 ಕೋಟಿ ರೂ. ವೆಚ್ಚ, 25-60 ವರ್ಷ ವಯಸ್ಸಿನ 1.5 ಕೋಟಿ ಬಡ ಮಹಿಳೆಯರಿಗೆ 17000 ಕೋಟಿ ರೂ. ನೆರವು, 78 ಲಕ್ಷ ಶಾಲಾ ಬಾಲಕಿಯರಿಗೆ 1648 ಕೋಟಿ ರೂ. ನೆರವು. 2 ಕೋಟಿ ಕುಟುಂಬಗಳಿಗೆ 2,500 ಕೋಟಿ ರೂ. ಮೌಲ್ಯದ ವಿಮೆ. 70 ಲಕ್ಷ ರೈತರಿಗೆ 3,000 ಕೋಟಿ ರೂ. ನೆರವು.
ಆಂಧ್ರಪ್ರದೇಶ:
ವಿದ್ಯುತ್: 18 ಲಕ್ಷ ರೈತರಿಗೆ ಪ್ರತಿ ದಿನ 9 ಗಂಟೆ ಉಚಿತ ವಿದ್ಯುತ್. ವೆಚ್ಚ 8,559 ಕೋಟಿ ರೂ. ವೆಚ್ಚ.ʼ
ಸಾಧನಗಳು: 470,000 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, 500 ಕೋಟಿ ರೂ. ನೆರವು.
ಸ್ಮಾರ್ಟ್‌ಫೋನ್: 60 ಲಕ್ಷ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್.
ನೇರ ನಗದು ವಿತರಣೆ ಮೂಲಕ 55,000 ಕೋಟಿ ರೂ. ವಿತರಣೆ, ಡಿಬಿಟಿಯೇತರ ಯೋಜನೆಗಳಿಗೆ 17,305 ಕೋಟಿ ರೂ. ವಿತರಣೆ.
ಮಧ್ಯಪ್ರದೇಶ:
ವಿದ್ಯುತ್: 100 ಯುನಿಟ್ ತನಕ ವಿದ್ಯುತ್‌ಗೆ ಕೇವಲ 100 ರೂ. ವಾರ್ಷಿಕ 5,000 ಕೋಟಿ ರೂ. ವೆಚ್ಚ. 2019ರಲ್ಲಿ ರೈತರಿಗೆ 7,154 ಕೋಟಿ ರೂ. ನೆರವು.
ತಮಿಳುನಾಡು:
ವಿದ್ಯುತ್: 22 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ, ಗೃಹ ವಲಯದ ಬಳಕೆದಾರರಿಗೆ 100 ಯುನಿಟ್ ತನಕ ಉಚಿತ ವಿದ್ಯುತ್. ಸಬ್ಸಿಡಿ ವೆಚ್ಚ 8,000 ಕೋಟಿ ರೂ.
ಸಾಧನಗಳು: 1.04 ಕೋಟಿ ಕುಟುಂಬಗಳಿಗೆ ಉಚಿತ ಟಿ.ವಿ ಸೆಟ್ (2001-10) ವಿದ್ಯಾರ್ಥಿಗಳಿಗೆ 6,350 ಕೋಟಿ ರೂ. ವೆಚ್ಚದಲ್ಲಿ 45 ಲಕ್ಷ ಲ್ಯಾಪ್‌ಟಾಪ್ ವಿತರಣೆ.
ಸಾಲಮನ್ನಾ: 16 ಲಕ್ಷ ರೈತರ 12,111 ಕೋಟಿ ರೂ. ಬೆಳೆ ಸಾಲ ಮನ್ನ. ( 2021)
ಉತ್ತರಪ್ರದೇಶ: 1 ಕೋಟಿ ವಿದ್ಯಾರ್ಥಿಗಳಿಗೆ ಟಾಬ್ಲೆಟ್ ವಿತರಣೆ, 45 ಲಕ್ಷ ಸಣ್ಣ ರೈತರಿಗೆ 25,000 ಕೋಟಿ ರೂ. ಸಾಲ ವಿತರಣೆ.
ಪಂಜಾಬ್: ರೈತರಿಗೆ 6,947 ಕೋಟಿ ರೂ. ಮೌಲ್ಯದ ಉಚಿತ ವಿದ್ಯುತ್ ವಿತರಣೆ, ಎಸ್‌ಸಿ, ಬಿಸಿ,ಒಬಿಸಿ ಕುಟುಂಬಗಳಿಗೆ 6,800 ಕೋಟಿ ರೂ. ಉಚಿತ ವಿದ್ಯುತ್. 10,000 ಕೋಟಿ ರೂ. ಮೌಲ್ಯದ ಬೆಳೆ ಸಾಲ ಮನ್ನಾ (2018-21)
ಹರಿಯಾಣ: ವಿದ್ಯುತ್ ಸಬ್ಸಿಡಿಗೆ 2020-21ರಲ್ಲಿ 5,739 ಕೋಟಿ ರೂ. ವೆಚ್ಚ
ಕೇರಳ: ಮಾಸಿಕ 500 ವ್ಯಾಟ್‌ಗಿಂತ ಕಡಿಮೆ ಲೋಡ್ ಬಳಕೆಯ ಕುಟುಂಬಗಳಿಗೆ 30 ಯುನಿಟ್ ಉಚಿತ ವಿದ್ಯುತ್. ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್. 55 ಲಕ್ಷ ಜನತೆಗೆ ಮಾಸಿಕ 1,300 ರೂ. ಪಿಂಚಣಿ, 88 ಲಕ್ಷ ಕುಟುಂಬಗಳಿಗೆ 1,000 ರೂ. ಮೌಕ್ಯದ ಓಣಂ ಕಿಟ್. 1000 ಬಡ ಕುಟುಂಬಗಳಿಗೆ ಉಚಿತ ನೀರು ಪೂರೈಕೆ.
ಬಿಹಾರ: 6,043 ಕೋಟಿ ರೂ. ವಿದ್ಯುತ್ ಸಬ್ಸಿಡಿ ವಿತರಣೆ.
ರಾಜಸ್ಥಾನ: 5,000 ಕೋಟಿ ರೂ. ವೆಚ್ಚದಲ್ಲಿ 50 ಯುನಿಟ್ ತನಕ ವಿದ್ಯುತ್ ಉಚಿತ. 1.18 ಕೋಟಿ ಕುಟುಂಬಗಳಿಗೆ ಪ್ರಯೋಜನ ನಿರೀಕ್ಷೆ.
ಸಾಧನ: 1.3 ಕೋಟಿ ಮಹಿಳೆಯರಿಗೆ 12,000 ಕೋಟಿ ರೂ. ವೆಚ್ಚದಲ್ಲಿ ಉಚಿತ ಸ್ಮಾರ್ಟ್‌ಫೋನ್ ವಿತರಣೆ. 21 ಲಕ್ಷ ರೈತ ಕುಟುಂಬಗಳ 7,821 ಕೋಟಿ ರೂ. ಸಾಲ ಮನ್ನಾ. 1 ಕೋಟಿ ಜನರಿಗೆ ಪಿಂಚಣಿಗೆ 8,000 ಕೋಟಿ ರೂ. ವೆಚ್ಚ.
==========
ರಾಜ್ಯಗಳಲ್ಲಿ 2014-2020ರಲ್ಲಿ ಕೃಷಿ ಸಾಲ ಮನ್ನಾಗಳ ವಿವರ
ಪಂಜಾಬ್ | 10,000 ಕೋಟಿ ರೂ. |
ಮಧ್ಯಪ್ರದೇಶ | 36,500 ಕೋಟಿ ರೂ. |
ಮಹಾರಾಷ್ಟ್ರ | 45,000 ಕೋಟಿ ರೂ |
ಕರ್ನಾಟಕ | 44,000 ಕೋಟಿ ರೂ |
ಉತ್ತರಪ್ರದೇಶ | 36,000 ಕೋಟಿ ರೂ |
ಛತ್ತೀಸ್‌ಗಢ | 6,100 ಕೋಟಿ ರೂ |
ತೆಲಂಗಾಣ | 17,000 ಕೋಟಿ ರೂ |
ಆಂಧ್ರಪ್ರದೇಶ | 24,000 ಕೋಟಿ ರೂ |