Site icon Vistara News

BrahMos missile : ಆಕಸ್ಮಿಕವಾಗಿ ಪಾಕಿಸ್ತಾನದೊಳಗೆ ಬಿದ್ದಿದ್ದ ಬ್ರಹ್ಮೋಸ್‌ ಕ್ಷಿಪಣಿ; ಭಾರತಕ್ಕಾದ ನಷ್ಟ ಎಷ್ಟು ಕೋಟಿ ರೂ?

BrahMos missile

ನವದೆಹಲಿ: ಕಳೆದ ವರ್ಷ ಮಾರ್ಚ್‌ನಲ್ಲಿ ಬ್ರಹ್ಮೋಸ್‌ ಕ್ಷಿಪಣಿಯು (Brahmos Missile) ಆಕಸ್ಮಿಕವಾಗಿ ಪಾಕಿಸ್ತಾನದ ನೆಲದ ಮೇಲೆ ಬಿದ್ದ ಪರಿಣಾಮ ನೆರೆ ರಾಷ್ಟ್ರದ ಜತೆಗಿನ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. ಹಾಗೂ ಸರ್ಕಾರದ ಬೊಕ್ಕಸಕ್ಕೆ 24 ಕೋಟಿ ರೂ. ನಷ್ಟವಾಗಿತ್ತು ಎಂದು ಕೇಂದ್ರ ಸರ್ಕಾರ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ. ಈ ಘಟನೆಗೆ ಸಂಬಂಧಿಸಿ ಭಾರತೀಯ ವಾಯುಪಡೆಯ ಮೂವರು ಅಧಿಕಾರಿಗಳನ್ನು ವಜಾಗೊಳಿಸಲಾಗಿತ್ತು. ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿದ ಹಿನ್ನೆಲೆಯಲ್ಲಿ ಮೂವರನ್ನೂ ವಜಾಗೊಳಿಸಲಾಗಿತ್ತು ಎಂದು ಈ ಕ್ರಮವನ್ನು ಸರ್ಕಾರ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ.

ಕಳೆದ ವರ್ಷ ಮಾರ್ಚ್‌ 9ರಂದು ಬ್ರಹ್ಮೋಸ್‌ ಕ್ಷಿಪಣಿಯ ಪರಿಶೀಲನೆ ವೇಳೆ ಅದು ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ಪ್ರವೇಶಿಸಿ, ಅಲ್ಲಿನ ಭೂಭಾಗವೊಂದನ್ನು ಧ್ವಂಸಗೊಳಿಸಿತ್ತು. ಅಚಾತುರ್ಯವನ್ನು ಪಾಕಿಸ್ತಾನ ಖಂಡಿಸಿದ ಹಿನ್ನೆಲೆಯಲ್ಲಿ ಭಾರತವು ಸ್ಪಷ್ಟನೆ ನೀಡಬೇಕಾಯಿತು. ಅಲ್ಲದೆ, ಪ್ರಕರಣದ ಬಗ್ಗೆ ಕೋರ್ಟ್‌ ಆಫ್‌ ಎನ್‌ಕ್ವೈರಿಗೆ (ಸಿಒಐ) ವಹಿಸಲಾಗಿತ್ತು. ಅಚಾತುರ್ಯಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂಬುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಮೂವರನ್ನೂ ವಜಾಗೊಳಿಸಲಾಗಿತ್ತು.

ಭಾರತದ ಕ್ಷಿಪಣಿಯು ಆಕಸ್ಮಿಕವಾಗಿ ಪಾಕಿಸ್ತಾನ ಗಡಿ ಪ್ರವೇಶಿಸಿದಾಗ ನೆರೆ ರಾಷ್ಟ್ರವು ಇದು ಉದ್ದೇಶಪೂರ್ವಕ ದಾಳಿ ಎಂದು ಭಾವಿಸಿ ಪ್ರತಿದಾಳಿಗೆ ಸಿದ್ಧತೆ ನಡೆಸಿತ್ತು ಎಂದು ತಿಳಿದುಬಂದಿದೆ. ವಿಂಗ್‌ ಕಮಾಂಡರ್‌ ಅಭಿನವ್‌ ಶರ್ಮಾ ಅವರು ತಮ್ಮನ್ನು ಪ್ರಕರಣಕ್ಕೆ ಸಂಬಂಧಿಸಿ ಸೇವೆಯಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿದ್ದರು. ಆದರೆ ಅಭಿನವ್‌ ಶರ್ಮಾ ಸೇರಿ ಮೂವರು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿರುವುದು ಸರಿಯಾದ ಕ್ರಮವಾಗಿದೆ. ಪ್ರಕರಣದ ಗಂಭೀರ ಸ್ವರೂಪ, ಪ್ರಕರಣದ ಬಗ್ಗೆ ವಿವರಗಳನ್ನು ತಿಳಿಯಲು ಅಂತಾರಾಷ್ಟ್ರೀಯ ಸಮುದಾಯದ ಕಾತರ, ಸೂಕ್ಷ್ಮತೆಯನ್ನು ಕೂಡ ಪರಿಗಣಿಸಲಾಗಿತ್ತು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಭಾರತೀಯ ವಾಯುಪಡೆಯಲ್ಲಿ 23 ವರ್ಷಗಳ ಬಳಿಕ ಇಂಥ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಘಟನೆಯ ಸಮಗ್ರ ತನಿಖೆ, ಕೋರ್ಟ್‌ ಮಾರ್ಶಲ್ ಬಳಿಕ ಸಾರ್ವಜನಿಕ ಹಿತದೃಷ್ಟಿಯಿಂದ ಈ ವಸ್ತುನಿಷ್ಠ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ದಿಲ್ಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.

ವಾಯುಪಡೆಯ ಕಾಯಿದೆ 1950 ಅಡಿಯಲ್ಲಿ ತಮ್ಮನ್ನು ಸೇವೆಯಿಂದ ವಜಾಗೊಳಿಸಿರುವುದು ಕಾನೂನುಬಾಹಿರ ಎಂದು ವಿಂಗ್‌ ಕಮಾಂಡರ್‌ ಅಭಿನವ್‌ ಶರ್ಮಾ ಪರ ವಕೀಲರು ವಾದಿಸಿದ್ದರು. ಘಟನೆ ನಡೆದಾಗ ಅವರು ಎಂಜಿನಿಯರಿಂಗ್‌ ಆಫೀಸರ್‌ ಆಗಿದ್ದರು. ಅಭಿನವ್‌ ಶರ್ಮಾ ಅವರ ಕರ್ತವ್ಯವು ಮೇಂಟೇನನ್ಸ್‌ಗೆ ಮಾತ್ರ ಸೀಮಿತವಾಗಿತ್ತು. ಕಾರ್ಯಾಚರಣೆಯಲ್ಲಿ ಉಂಟಾಗಿರುವ ಪ್ರಮಾದಕ್ಕೆ ಅವರನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ವಕೀಲರು ಆಗ್ರಹಿಸಿದ್ದರು.

ಅರ್ಜಿದಾರರಿಗೆ ತಮ್ಮ ವೈಫಲ್ಯದ ಅರಿವು ಇದ್ದರೂ, ಇತರ ಅಧಿಕಾರಿಗಳ ಮೇಲೆ ವೃಥಾ ಆರೋಪ ಹೊರಿಸಲು ಯತ್ನಿಸಿದ್ದಾರೆ. ಘಟನೆಗೆ ಇತರರನ್ನು ಬೊಟ್ಟು ಮಾಡಿದ್ದಾರೆ. ಇದು ಸಮಂಜಸವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕ್ಷಿಪಣಿಯ ತಾಂತ್ರಿಕ ನಿರ್ವಹಣೆಯಲ್ಲಿ ವೈಫಲ್ಯವಾಗಿ ಈ ಘಟನೆ ಸಂಭವಿಸಿದೆ. ಕ್ಷಿಪಣಿಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ಪರಿವೀಕ್ಷಣೆಯ ಪ್ರಕ್ರಿಯೆಗಳನ್ನು ಮರು ಪರಿಶೀಲಿಸಲಾಗುವುದು ಎಂದು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ತಿಳಿಸಿದ್ದರು. ಆಗಸ್ಟ್‌ 23ರಂದು ವಾಯುಪಡೆಯ ಮೂವರು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಆದರೆ ವಿಂಗ್‌ ಕಮಾಂಡರ್‌ ಶರ್ಮಾ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಇದನ್ನೂ ಓದಿ: IPEF deal : ಚೀನಾದ ಅವಲಂಬನೆ ತಗ್ಗಿಸಲು ಅಮೆರಿಕ- ಭಾರತ ಸೇರಿ 14 ರಾಷ್ಟ್ರಗಳ ಡೀಲ್‌, ಏನಿದೆ ಇದರಲ್ಲಿ?

Exit mobile version