ಲಂಡನ್: ಬ್ರಿಟನ್ ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ ಎಂದು ಅಲ್ಲಿನ ಹಣಕಾಸು ಸಚಿವ ಜೆರ್ಮಿ ಹಂಟ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚಳ ಮತ್ತು ವೆಚ್ಚ ಕಡಿತವನ್ನು (Britain in Recession) ಘೋಷಿಸಿದ್ದಾರೆ.
ಒಟ್ಟು 66 ಶತಕೋಟಿ ಡಾಲರ್ ಮೊತ್ತದ ( 5.34 ಲಕ್ಷ ಕೋಟಿ ರೂ.) ವಿತ್ತೀಯ ಯೋಜನೆಯನ್ನು ಜರ್ಮಿ ಹಂಟ್ ಘೋಷಿಸಿದ್ದಾರೆ. ಸಾರ್ವಜನಿಕ ವೆಚ್ಚ ನಿಯಂತ್ರಣ ಮತ್ತು ತೆರಿಗೆ ಏರಿಕೆಯನ್ನು ಇದು ಒಳಗೊಂಡಿದೆ.
ಬ್ರಿಟನ್‌ನ ಆರ್ಥಿಕತೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿ ಬಲಪಡಿಸಲು ಈ ಕ್ರಮಗಳು ಅಗತ್ಯ ಎಂದು ಸಚಿವರು ಹೇಳಿದ್ದಾರೆ. ಮಾಜಿ ಪ್ರಧಾನಿ ಲಿಜ್ ಟ್ರುಸ್ ಅವರು ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಸವಾಲನ್ನು ಎದುರಿಸಲಾಗದೆ ರಾಜೀನಾಮೆ ನೀಡಿದ್ದರು. ಬಳಿಕ ರಿಷಿ ಸುನಕ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಹಣಕಾಸು ಸಚಿವರೂ ಆಗಿದ್ದ ಸುನಕ್ ಅವರು ಬ್ರಿಟನ್ ಅನ್ನು ಆರ್ಥಿಕ ಹಿಂಜರಿತದಿಂದ ಪಾರು ಮಾಡಬಹುದು ಎಂಬ ನಿರೀಕ್ಷೆ ಉಂಟಾಗಿದೆ.
ಬ್ರಿಟನ್‌ನಲ್ಲಿ ಈ ವರ್ಷ 9.1% ಮತ್ತು ೨೦೨೩ರಲ್ಲಿ 7.4% ಹಣದುಬ್ಬರ ನಿರೀಕ್ಷಿಸಲಾಗಿದೆ. ಲಕ್ಷಾಂತರ ಜನತೆ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಅಕ್ಟೋಬರ್‌ನಲ್ಲಿ 11.1% ಹಣದುಬ್ಬರ ದಾಖಲಾಗಿತ್ತು. ಇದು 41 ವರ್ಷಗಳಲ್ಲಿಯೇ ಗರಿಷ್ಠ ಮಟ್ಟವಾಗಿದೆ.
ಸರ್ಕಾರದ ನಿರ್ಧಾರದಿಂದ ತೆರಿಗೆ ಹೊರೆಯ ಪ್ರಮಾಣವು ಜಿಡಿಪಿಯ 37.1 ಕ್ಕೆ ಏರಿಕೆಯಾಗಲಿದ್ದು, ಎರಡನೇ ಜಾಗತಿಕ ಯುದ್ಧದ ಬಳಿಕ ಗರಿಷ್ಠ ಮಟ್ಟದ ತೆರಿಗೆ ಹೊರೆಯಾಗಿದೆ.