ಜಗತ್ತಿನಲ್ಲೇ ಅತ್ಯಂತ ಮೇಧಾವಿಗಳು, ಚಿಂತಕರು, ಲೇಖಕರು ಮತ್ತು ತತ್ತ್ವಜ್ಞಾನಿಗಳು ಹೇಗಾದರು? ಅವರೆಲ್ಲ ತಮ್ಮ ಕ್ಷೇತ್ರದಲ್ಲಿ ಹೇಗೆ ಬೆಳೆದರು? ಅವರ ಆತ್ಮಕಥೆಗಳನ್ನು ಗಮನಿಸಿದರೆ, ಅವರೆಲ್ಲರೂ (Business guide ) ಒಂದಿಲ್ಲೊಂದು ವಿಷಯದಲ್ಲಿ ಪ್ರಾವಿಣ್ಯತೆಯನ್ನು ಗಳಿಸಿದರು ಹಾಗೂ ಬಳಿಕ ಅದನ್ನು ಕೇಳುಗರಿಗೆ ಬೋಧಿಸಿದರು. ಕಲಿಸಿಕೊಡುವ ಬದ್ಧತೆಯನ್ನು ಯಶಸ್ವಿಯಾಗಿ ನಿಭಾಯಿಸಿದರು ಎಂಬುದನ್ನು ನೋಡಬಹುದು.
ನೀವು ಚಿಕ್ಕವರಾಗಿದ್ದಾಗ ಪೋಷಕರು ಮತ್ತು ಶಾಲೆಗಳಲ್ಲಿ ಶಿಕ್ಷಕರು ವೇದಿಕೆಯಲ್ಲಿ ಏನಾದರೂ ಪ್ರತಿಭೆಯನ್ನು ಪ್ರದರ್ಶಿಸುವಂತೆ ಪ್ರೋತ್ಸಾಹ ನೀಡಿರಬಹುದು. ನೀವು ಕೂಡ ಶಾಲೆ-ಕಾಲೇಜುಗಳಲ್ಲಿ ವೇದಿಕೆಯನ್ನೇರಿ ಭಾಷಣ ಮಾಡಿರಬಹುದು, ಸಂಗೀತ-ನೃತ್ಯಾದಿ ಕಲೆಗಳಲ್ಲಿ ಭಾಗವಹಿಸಿರಬಹುದು. ಆದರೆ ಈ ಸಾಮರ್ಥ್ಯವನ್ನು ಎಷ್ಟೋ ಸಲ ಉದ್ಯೋಗ-ಕರಿಯರ್, ಬಿಸಿನೆಸ್ ಮತ್ತು ಬದುಕಿನ ನಂತರದ ಭಾಗಗಳಲ್ಲಿ ಬಲಪಡಿಸಿರುವುದಿಲ್ಲ. ಮರೆತೇ ಬಿಟ್ಟಿರುತ್ತೇವೆ. ಇದು ಸರಿಯಲ್ಲ.
ಬಲ್ಲವರು ಒಂದು ಮಾತನ್ನ ಹೇಳ್ತಾರೆ- ಗಮನವಿಟ್ಟು ಕೇಳಿ- ನೀವು ಏನನ್ನಾದರೂ ಕಲಿಯಬೇಕಿದ್ದರೆ ಅದರ ಬಗ್ಗೆ ಸಾಕಷ್ಟು ಓದಿಕೊಳ್ಳಿ. ನೀವು ಏನನ್ನಾದರೂ ಅರ್ಥ ಮಾಡಿಕೊಳ್ಳಬೇಕಿದ್ದರೆ ಅದರ ಬಗ್ಗೆ ಬರೆಯಿರಿ. ಆದರೆ ನೀವು ಯಾವುದರಲ್ಲಾದರೂ ಮಾಸ್ಟರ್ ಆಗಬೇಕಿದ್ದರೆ ಅದನ್ನು ಇತರರಿಗೆ ಕಲಿಸಿಕೊಡಿ.
ನೀವು ನಿಮ್ಮ ಜ್ಞಾನ ಮತ್ತು ಕೌಶಲಗಳನ್ನು ಹೆಚ್ಚಿಸುತ್ತಾ ಹೋದಂತೆ, ನಿಮ್ಮ ನೆಟ್ ವರ್ಕ್ ಬೆಳೆಯುತ್ತದೆ. ನಿಮ್ಮ ಸಂಪನ್ಮೂಲ ಮತ್ತು ವ್ಯಕ್ತಿತ್ವದ ಘನತೆ ವೃದ್ಧಿಸುತ್ತದೆ. ಅದು ನಿಮ್ಮ ಅನುಭವಕ್ಕೆ ಬರದೆ ಇರುವುದಿಲ್ಲ. ಅದರ ಪ್ರಯೋಜನವನ್ನು ನಿಮ್ಮದಾಗಿಸಬಹುದು. ನೀವು ಯಾವುದೇ ಕ್ಷೇತ್ರದಲ್ಲಿ ಇರಬಹುದು. ಅದರಲ್ಲಿ ಆಳವಾಗಿ ಕಲಿಯುವುದು ನಿಮ್ಮ ಜೀವಾಳವಾಗಿ ಬಿಡಬೇಕು. ಅದುವೇ ಯಶಸ್ಸಿಗೆ ಕೀಲಿ ಕೈ ಇದ್ದ ಹಾಗೆ.
ನೀವು ಯಾವುದರಲ್ಲಾದರೂ ಮಾಸ್ಟರ್ ಆಗಬೇಕಿದ್ದರೆ, ಅದನ್ನು ಮುಚ್ಚಿಡುವ ಅಗತ್ಯವಿಲ್ಲ. ಬಹಿರಂಗವಾಗಿ ಮತ್ತು ನಿರಂತರವಾಗಿ ಅದನ್ನು ಮಾಡುತ್ತಲೇ ಹೋಗಿ. ನಿಮ್ಮ ಐಡಿಯಾಗಳನ್ನು ನಾಚಿಕೆಪಟ್ಟುಕೊಳ್ಳದೆ ಬರೆಯಿರಿ. ಯಾವುದಾದರೂ ಒಂದು ವಿಷಯದ ಬಗ್ಗೆ ಮಾತನಾಡಿ ವಿಡಿಯೊಗಳನ್ನು ಮಾಡಿ ಬಿಡುಗಡೆಗೊಳಿಸಿ. ನಿಮ್ಮ ಮಾತನಾಡುವ ಕೌಶಲ ಸುಧಾರಿಸುತ್ತದೆ. ವೇದಿಕೆಯನ್ನೇರಿ ಮಾತನಾಡಿ. ನಿಮ್ಮ ಕರಿಯರ್ ಯಾವುದೇ ಇರಲಿ, ಬಹಿರಂಗವಾಗಿ ಯಶಸ್ಸಿನ ಮೆಟ್ಟಿಲನ್ನೇರಿ ಬಿಡಿ. ಬದ್ಧತೆಯನ್ನು ನಿರಂತರವಾಗಿ ಪ್ರದರ್ಶಿಸಿ. ಅದು ನಿಮ್ಮನ್ನು ಮಾಸ್ಟರ್ ಆಗಿಸುತ್ತದೆ. ಸಂದೇಹವೇ ಬೇಡ.
ಒಂದು ಐಡಿಯಾವನ್ನು ಸರಳಗೊಳಿಸುವುದು ಮತ್ತು ಇತರರ ಜತೆಗೆ ಯಶಸ್ವಿಯಾಗಿ ಹಂಚಿಕೊಳ್ಳುವುದು- ಈ ಎರಡೂ, ಆ ಐಡಿಯಾವನ್ನು ಅರ್ಥಮಾಡಿಕೊಳ್ಳಲು ಪರಿಣಾಮಕಾರಿ ವಿಧಾನವಾಗುತ್ತದೆ. ನಿಮ್ಮ ಅನುಷ್ಠಾನಕ್ಕೆ ಅದು ಆಧಾರವಾಗುತ್ತದೆ. ನಾವು ದೊಡ್ಡ ದೊಡ್ಡ ಹಾಗೂ ಅನಗತ್ಯ ಪದಗಳನ್ನು ಬಳಸುವ ಮೂಲಕ, ಆ ಐಡಿಯಾದ ಬಗ್ಗೆ ಇರುವ ತಿಳುವಳಿಕೆಯ ಕೊರತೆಯನ್ನು ಬಚ್ಚಿಡಲು ಯತ್ನಿಸಬಹುದು. ಹೆಚ್ಚೇನೂ ಆಗದು. ಹಾಗಂತ ಸಂಕೀರ್ಣ ವಿಚಾರಗಳು ಇಲ್ಲವೆಂದಲ್ಲ. ಆದೆರೆ ಅವುಗಳನ್ನು ಸರಳಗೊಳಿಸುವುದು ಮುಖ್ಯ ಮತ್ತು ಅದುವೇ ಸವಾಲಿನದ್ದು.
1965ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ್ದ ಅಮೆರಿಕದ ವಿಜ್ಞಾನಿ ರಿಚರ್ಡ್ ಫೈನ್‌ಮನ್ ಅತ್ಯಂತ ಸಂಕೀರ್ಣ ವಿಷಯಗಳನ್ನೂ ಚಿಕ್ಕ ಮಗುವಿಗೂ ಅರ್ಥವಾಗುವಂತೆ ಸರಳವಾಗಿ ಹೇಳಬಲ್ಲ ಸಾಮರ್ಥ್ಯ ಗಳಿಸಿದ್ದ. ಸೆಲ್ಫ್ -ಡೆವಲಪ್‌ಮೆಂಟ್ ವಿಚಾರದಲ್ಲಿ ಫೈನ್‌ಮನ್ ಮೆಥಡ್ ಎಂಬ ಪವರ್ ಫುಲ್ ವಿಧಾನವೇ ಇದೆ. ಇದು ಅನಗತ್ಯ ಸಂಕೀರ್ಣತೆಯನ್ನು ಕಳಚುತ್ತದೆ. ಪರಿಕಲ್ಪನೆಯೊಂದರ ಪರಿಶುದ್ಧ ರೂಪವನ್ನು ಮಾತ್ರ ನೀಡುತ್ತದೆ. ಹಾಗೂ ನೀವು ಮಾಸ್ಟರ್ ಆಗಲು ಬಯಸುವ ವಿಚಾರದ ಬಗ್ಗೆ ಆಳವಾದ ಜ್ಞಾನವನ್ನು ಕೊಡುತ್ತದೆ.
ಇದನ್ನೂ ಓದಿ: Peenya Flyover : ವಾಹನ ಸವಾರರೇ ಗಮನಿಸಿ ಜನವರಿ 16 ರಿಂದ ಪೀಣ್ಯ ಫ್ಲೈಓವರ್ ಬಂದ್!
ರಿಚರ್ಡ್ ಫೈನ್‌ಮನ್ ಪದ್ಧತಿಯಲ್ಲಿ ನಾಲ್ಕು ಹಂತಗಳಿವೆ. ಕಲಿಕೆ, ಕಲಿತದ್ದನ್ನು ಮಗುವಿಗೆ ಕಲಿಸುವುದು, ಹಂಚಿಕೊಳ್ಳುವುದು ಮತ್ತು ಕೊನೆಯದಾಗಿ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸುವುದು. ಮೊದಲನೆಯದಾಗಿ ನೀವು ಅರ್ಥ ಮಾಡಿಕೊಳ್ಳಬೇಕಾದ ವಿಷಯವನ್ನು ಗುರುತಿಸುವುದು. ಸಂಶೋಧಿಸುವುದು. ಎರಡನೇ ಹಂತದಲ್ಲಿ ಮಕ್ಕಳಿಗೆ ಕೂಡ ಅರ್ಥವಾಗುವಂತೆ ಸರಳಗೊಳಿಸುವುದು. ಮೂರನೆಯದಾಗಿ ಇತರರಿಗೆ ನಿಮ್ಮ ಐಡಿಯಾವನ್ನು ಹಂಚುವುದು. ನಾಲ್ಕನೆಯದಾಗಿ ನಿಮ್ಮ ವಿವರಣೆಗಳು ಜನರಿಗೆ ಅರ್ಥವಾಗಿದೆಯೇ ಎಂಬುದರ ಬಗ್ಗೆ ಪ್ರತಿಕ್ರಿಯೆಗಳನ್ನು ಪಡೆಯುವುದು.