ನವ ದೆಹಲಿ: ಬಂಜರು ಭೂಮಿ ಇರುವ ಕಡೆಗಳಲ್ಲಿ ವಾಣಿಜ್ಯಾತ್ಮಕವಾಗಿ ಪಾಪಾಸು ಕಳ್ಳಿ ಗಿಡಗಳನ್ನು ಬೆಳೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇವುಗಳನ್ನು ಜೈವಿಕ ಇಂಧನ, ಆಹಾರ ಉದ್ದೇಶಕ್ಕೆ (Cactus plantation) ಬಳಸಿಕೊಳ್ಳಲು ಪರಿಶೀಲನೆ ನಡೆದಿದೆ.
ಮುಂಬರುವ 2023-24ರ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಮಾರ್ಗಸೂಚಿ ಪ್ರಕಟವಾಗುವ ನಿರೀಕ್ಷೆ ಇದೆ. ಈ ಬಗ್ಗೆ ಕಳೆದ ಒಂದು ತಿಂಗಳಿನಲ್ಲಿಯೇ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ಹಲವಾರು ಸುತ್ತುಗಳಲ್ಲಿ ಮಾತುಕತೆ ನಡೆದಿದೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಈ ಸಭೆಗಳ ಅಧ್ಯಕ್ಷತೆ ವಹಿಸಿದ್ದರು.
ಏನಿದರ ಪ್ರಯೋಜನ? ಪಾಪಸ್ ಕಳ್ಳಿ ಗಿಡಗಳಿಗೆ ಅದರದ್ದೇ ಆದ ವೈದ್ಯಕೀಯ ಮೌಲ್ಯ ಇದೆ. ಇವುಗಳ ಸಾರಗಳಿಗೆ ಸೋಂಕು ನಿರೋಧಕ ಸಾಮರ್ಥ್ಯ ಇದೆ. ಅತಿಯಾದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಔಷಧ ತಯಾರಿಸುವಾಗ ಬಳಸುತ್ತಾರೆ. ಆಹಾರದ ರೂಪದಲ್ಲಿಯೂ ಪಾಪಸ್ ಕಳ್ಳಿ ಗಿಡದ ಎಲೆ ಮತ್ತು ಹಣ್ಣನ್ನು ಬಳಸುತ್ತಾರೆ. ಜೈವಿಕ ಇಂಧನವಾಗಿಯೂ ಬಳಸುವ ಬಗ್ಗೆ ಸಂಶೋಧನೆಗಳು ನಡೆದಿವೆ. ಬರಡು ಭೂಮಿಯಲ್ಲೂ ಇವುಗಳು ಬೆಳೆಯುತ್ತವೆ. ಆದರೆ ಪಾಪಸ್ ಕಳ್ಳಿ ಗಿಡಗಳನ್ನು ನೃವಾಗಿ ಜಾನುವಾರುಗಳಿಗೆ ಮೇವಾಗಿ ಬಳಸುವಂತಿಲ್ಲ.