ಮುಂಬಯಿ: ಹೀಗೊಂದು ಪ್ರಶ್ನೆ ಇದೀಗ ಕಾಡುತ್ತಿದೆ. ಐಪಿಒ ಬಳಿಕ ಎಲ್‌ಐಸಿ ಷೇರು ಮಾರುಕಟ್ಟೆಯಲ್ಲಿ ದುರ್ಬಲವಾಗಿ ಮಂಗಳವಾರ ನೋಂದಣಿಯಾಗಿದೆ. ಇದರ ಪರಿಣಾಮ ರಿಟೇಲ್ ಹೂಡಿಕೆದಾರರು, ಎಲ್ ಐಸಿಯ ಉದ್ಯೋಗಿಗಳು, ಪಾಲಿಸಿದಾರರು ಮತ್ತು ಸಾಂಸ್ಥಿಕ ಹೂಡಿಕೆದಾರರಿಗೆ ನಿರೀಕ್ಷಿತ ಲಾಭವನ್ನು ನೀಡಿಲ್ಲ. ಐಪಿಒದಲ್ಲಿ ಷೇರು ಖರೀದಿಸಿವರೀಗ, ಸ್ವಲ್ಪ ತಡೆದು ಖರೀದಿಸಬಹುದಿತ್ತು ಎಂದುಕೊಂಡರೆ ಅಚ್ಚರಿ ಇಲ್ಲ. ಹಾಗಾದರೆ ದೀರ್ಘಾವಧಿಗೆ ಎಲ್ ಐಸಿ ಷೇರುಗಳು ಹೂಡಿಕೆದಾರರಿಗೆ ಲಾಭದಾಯಕವೇ?
ಬಿಎಸ್‌ಇನಲ್ಲಿ ಮಂಗಳವಾರ ಬೆಳಗ್ಗೆ 867ರೂ.ಗೆ ಎಲ್‌ಐಸಿ ಷೇರು ತನ್ನ ವಹಿವಾಟು ಆರಂಭಿಸಿತ್ತು. ಐಪಿಒದಲ್ಲಿ 949 ರೂ. ನಿಗದಿಯಾಗಿತ್ತು. ಹೀಗಾಗಿ 82 ರೂ. ಅಥವಾ ಶೇ.8.67ರ ನಷ್ಟದೊಂದಿಗೆ ವಹಿವಾಟು ಆರಂಭವಾಯಿತು. ಐಪಿಒದಲ್ಲಿ ಭಾಗವಹಿಸಿದ್ದ ಎಲ್ಲ ವರ್ಗದ ಹೂಡಿಕೆದಾರರಿಗೆ ನಷ್ಟವಾಯಿತು. ಆದರೆ ನಷ್ಟದ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ. ಮುಖ್ಯವಾಗಿ ಸಾಂಸ್ಥಿಕ ಹೂಡಿಕೆದಾರರಿಗೆ ಹೆಚ್ಚು ನಷ್ಟವಾಗಿದೆ. ಪಾಲಿಸಿದಾರರಿಗೆ ಪ್ರತಿ ಷೇರಿನಲ್ಲಿ 60 ರೂ. ಹಾಗೂ ರಿಟೇಲ್ ಷೇರುದಾರರಿಗೆ ಪ್ರತಿ ಷೇರಿಗೆ 45 ರೂ. ಡಿಸ್ಕೌಂಟ್ ನೀಡಿದ್ದರಿಂದ ಹಾಗೂ ಮಂಗಳವಾರ ಷೇರು ಮಾರುಕಟ್ಟೆ ಸೂಚ್ಯಂಕ ಚೇತರಿಸಿದ್ದರಿಂದ ನಷ್ಟದ ಪ್ರಮಾಣ ಕಡಿಮೆಯಾಯಿತು.
ಡಿವಿಡೆಂಡ್, ಮೌಲ್ಯ ಗಳಿಕೆ ನಿರೀಕ್ಷೆ
“ಕೋವಿಡ್-19 ಬಿಕ್ಕಟ್ಟು ಕಾಣಿಸಿದ ಆರಂಭದ ದಿನಗಳಲ್ಲಿ ವಿಮೆ ಕಂಪನಿಗಳ ಷೇರುಗಳು ಜಿಗಿದಿತ್ತು. ಏಕೆಂದರೆ ಆಗ ವಿಮೆ ಖರೀದಿಯ ಭರಾಟೆಯೂ ಇತ್ತು. ಆದರೆ ಈಗ ಕೋವಿಡ್ ಪ್ರಕರಣಗಳ ಸಂಖ್ಯೆ ತಗ್ಗಿದೆ. ಜತೆಗೆ ವಿಮೆ ಕಂಪನಿಗಳ ಷೇರು ದರಗಳೂ ಇಳಿದಿವೆ ” ಎಂದು “ವಿಸ್ತಾರ ಡಿಜಿಟಲ್ ನ್ಯೂಸ್ʼಗೆ ಬೆಂಗಳೂರಿನ ಷೇರು ಮಾರುಕಟ್ಟೆ ತಜ್ಞ ನರಸಿಂಹ ಕುಮಾರ್ ಎಂ ತಿಳಿಸಿದ್ದಾರೆ.
ಸಾಮಾನ್ಯವಾಗಿ ಸಾರ್ವಜನಿಕ ವಲಯದ ಕಂಪನಿಗಳು, ಬ್ಯಾಂಕ್ ಗಳು ಷೇರುದಾರರಿಗೆ ಉತ್ತಮ ಮೊತ್ತದ ಡಿವಿಡೆಂಡ್ ನೀಡುತ್ತವೆ. ಈ ದೃಷ್ಟಿಯಿಂದ ಎಲ್ ಐಸಿ ಷೇರುಗಳು ಆಗಬಹುದು. ಆದರೆ ಅಲ್ಪಕಾಲೀನವಾಗಿ ಲಾಭ ಮಾಡಬೇಕು ಎಂದರೆ ಎಲ್ ಐಸಿ ಷೇರುಗಳು ಸೂಕ್ತವಲ್ಲ. ಹೀಗಿದ್ದರೂ, ಉತ್ತಮ ಬುನಾದಿ ಹೊಂದಿರುವ ಸಂಸ್ಥೆಯಾದ್ದರಿಂದ ಷೇರುಗಳಿಗೆ ಭವಿಷ್ಯದ ದಿನಗಳಲ್ಲಿ ಒಳ್ಳೆಯ ಮೌಲ್ಯ ಸಿಗಬಹುದು ಎನ್ನುತ್ತಾರೆ ಅವರು.
ಖಾಸಗಿ ವಲಯದ ವಿಮೆ ಕಂಪನಿಗಳ ಸ್ಪರ್ಧೆಯೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವುದರಿಂದ ಭವಿಷ್ಯದಲ್ಲಿ ಎಲ್ ಐಸಿ ಈ ಸ್ಪರ್ಧೆಯನ್ನು ಹೇಗೆ ಎದುರಿಸಲಿದೆ ಎಂಬುದೂ ಷೇರುಗಳ ದರದ ಮೇಲೆ ಪ್ರಭಾವ ಬೀರಲಿದೆ.
ವಿಮೆ ಕಂಪನಿಗಳ ಷೇರುಗಳು ಆಟೊಮೊಬೈಲ್, ಎಫ್‌ಎಂಸಿಜಿ ಇತ್ಯಾದಿ ಕಂಪನಿಗಳ ಷೇರುಗಳಂತೆ ಅಲ್ಲ. ವಿಮೆ ಕಂಪನಿಯ ಪ್ರೀಮಿಯಂ ಸಂಗ್ರಹ ದೊಡ್ಡ ಮೊತ್ತದಲ್ಲಿ ಇರಬಹುದು. ಉದಾಹರಣೆಗೆ 2021-22 ರ ಮೊದಲ 6 ತಿಂಗಳುಗಳಲ್ಲಿ ಎಲ್‌ಐಸಿ 1,437 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಎಲ್‌ಐಸಿ ಟಾಪ್ 5 ಷೇರು ಮಾರುಕಟ್ಟೆ ಬಂಡವಾಳದ ಕಂಪನಿಗಳಲ್ಲಿ ಇದೆ. ಆದರೆ ಟಾಪ್ 5ನಲ್ಲಿ ಇರುವ ಇನ್ಫೋಸಿಸ್ 2021ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 5,809 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಷೇರುಗಳ ದರ ಏರಿಕೆಯಲ್ಲಿ ಕಂಪನಿಯ ನಿವ್ವಳ ಲಾಭ ನಿರ್ಣಾಯಕವಾಗಿರುತ್ತದೆ ಎನ್ನುತ್ತಾರೆ ತಜ್ಞರು.
ಷೇರುದಾರರು ಏನು ಮಾಡಬಹುದು?
- ಐಪಿಒ ದರವಾದ 949 ರೂ.ಕ್ಕಿಂತಲೂ ಇಳಿಕೆಯಾಗಿದೆ ಎಂದು ಆತಂಕಪಡಬೇಕಿಲ್ಲ.
- ಎಲ್‌ಐಸಿ ಬೃಹತ್ ಮಾರುಕಟ್ಟೆ ಮೌಲ್ಯ ಇರುವ ಸಂಸ್ಥೆಯಾದ್ದರಿಂದ ಕುಸಿತದ ಪ್ರಮಾಣ ಸೀಮಿತವಾಗಿರುತ್ತದೆ.
- ಪ್ರತಿ ವರ್ಷ ಡಿವಿಡೆಂಡ್ ಆದಾಯ ಲಭ್ಯ
- ಮಾರುಕಟ್ಟೆಯ ಪರಿಸ್ಥಿತಿ ಗಮನಿಸಿಕೊಂಡು ಷೇರು ದರ ಚೇತರಿಸಿದಾಗ ಮಾರಾಟ ಮಾಡಬಹುದು.
ಇದನ್ನೂ ಓದಿ: ಎಲ್‌ಐಸಿ ಷೇರುದಾರರಿಗೆ 42,500 ಕೋಟಿ ರೂ. ನಷ್ಟ