ನವ ದೆಹಲಿ: ಅಮೆರಿಕ ಮತ್ತು ಯುರೋಪ್‌ನಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಿಸಿನೆಸ್ ರಿಸ್ಕ್ ಬಗ್ಗೆ ವಿವರವಾದ ವರದಿಯನ್ನು ಇನ್ನೆರಡು ವಾರದೊಳಗೆ ಸಲ್ಲಿಸಲು ಸಾರ್ವಜನಿಕ ಬ್ಯಾಂಕ್‌ಗಳಿಗೆ (Public sector banks) ಕೇಂದ್ರ ಸರ್ಕಾರ ಸೂಚಿಸಿದೆ. ಹೀಗಿದ್ದರೂ ಕಳೆದ ಶನಿವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜತೆಗಿನ ಮಾತುಕತೆಯ ವೇಳೆ ಸಾರ್ವಜನಿಕ ಬ್ಯಾಂಕ್ ಮುಖ್ಯಸ್ಥರು, ಈಗ ಯಾವುದೇ ಆತಂಕಕ್ಕೆ ಕಾರಣ ಇಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಶನಿವಾರ ಪಿಎಸ್‌ಬಿ ಮುಖ್ಯಸ್ಥರ ಜತೆಗೆ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಅಮೆರಿಕದಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್, ಸಿಗ್ನೇಚರ್ ಬ್ಯಾಂಕ್ ಪತನವಾಗಿರುವುದು ಹಾಗೂ ಯುರೋಪಿನಲ್ಲಿ ಕ್ರೆಡಿಟ್ ಸ್ವೀಸ್ ಬ್ಯಾಂಕ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿತ್ತು.
ಬಡ್ಡಿ ದರ ಏರಿಕೆಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿತ್ತ ಸಚಿವರು ಸೂಚಿಸಿದರು. ಜಾಗತಿಕ ಬ್ಯಾಂಕಿಂಗ್ ಬಿಕ್ಕಟ್ಟಿನ ಅಲ್ಪಕಾಲೀನ ಮತ್ತು ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಚರ್ಚಿಸಲಾಯಿತು.