ವಿಶ್ವದಲ್ಲೇ ಅತ್ಯಂತ ಪ್ರಬಲ ಮತ್ತು ಪ್ರಭಾವಶಾಲಿ ಕರೆನ್ಸಿಗಳ (currency) ಬಗ್ಗೆ ನಮಗೆ ತಿಳಿದಿದೆ. ಆದರೆ ಅತ್ಯಂತ ಕಡಿಮೆ ಮೌಲ್ಯವಿರುವ ಕರೆನ್ಸಿ (Cheapest Currency) ಬಗ್ಗೆ ಎಷ್ಟು ಮಂದಿಗೆ ಗೊತ್ತು? ಕೆಲವು ದೇಶಗಳ ಕರೆನ್ಸಿಗಳು ತೀರಾ ಕಡಿಮೆ ಮೌಲ್ಯವನ್ನು ಹೊಂದಿದೆ. ಒಂದಲ್ಲ ಒಂದು ರೀತಿಯ ವ್ಯವಹಾರ ನಡೆಸುವ ನಾವು ಈ ಅಗ್ಗದ ಕರೆನ್ಸಿಗಳ ಬಗ್ಗೆ ತಿಳಿದುಕೊಳ್ಳಬೇಕಿದೆ.
ಬ್ರಿಟಿಷ್ ಪೌಂಡ್ ಸ್ಟರ್ಲಿಂಗ್ (British Pound Sterling), ಸ್ವಿಸ್ ಫ್ರಾಂಕ್ (Swiss Franc) ಮತ್ತು ಯುಎಸ್ ಡಾಲರ್ (US Dollar) ವಿಶ್ವದಲ್ಲೇ ಎಲ್ಲರಿಗೂ ಪರಿಚಿತ ದುಬಾರಿ ಮೌಲ್ಯ ಹೊಂದಿರುವ ಕರೆನ್ಸಿಗಳಾಗಿವೆ. ಆದರೆ ವಿಶ್ವದ ಅತ್ಯಂತ ಕಡಿಮೆ ಬೆಲೆಬಾಳುವ ಕರೆನ್ಸಿಗಳ ಪಟ್ಟಿ ಮಾಡುವುದು ತುಸು ಕಷ್ಟ. ಯಾಕೆಂದರೆ ಆರ್ಥಿಕ ಪರಿಸ್ಥಿಗಳು ಅತ್ಯಂತ ವೇಗವಾಗಿ ಬದಲಾಗುತ್ತದೆ. ಇದು ಒಂದು ರೀತಿಯಲ್ಲಿ ಎಲ್ಲರಿಗೂ ಸವಾಲಾಗಿರುತ್ತದೆ.
ಇತ್ತೀಚೆಗೆ ಗಮನಾರ್ಹವಾದ ಅಪಮೌಲ್ಯೀಕರಣವನ್ನು ಅನುಭವಿಸಿದ ನಿರ್ದಿಷ್ಟ ರಾಷ್ಟ್ರೀಯ ಕರೆನ್ಸಿಗಳನ್ನು ಗುರುತಿಸಲಾಗಿದೆ. ಇದರಲ್ಲಿ ಯುಎಸ್ ಡಾಲರ್ ಮತ್ತು ಭಾರತೀಯ ರೂಪಾಯಿಗೆ ಹೋಲಿಸಿದರೆ ವಿಶ್ವದ ಹತ್ತು ದೇಶಗಳ ಕರೆನ್ಸಿಗಳು ಅತ್ಯಂತ ಕಡಿಮೆ ಮೌಲ್ಯ ಹೊಂದಿದೆ. ಇದರಲ್ಲಿ ಇರಾನಿನ ರಿಯಾಲ್, ವಿಯೆಟ್ನಾಮೀಸ್ ಡಾಂಗ್, ಸಿಯೆರಾ ಲಿಯೋನಿಯನ್ ಲಿಯೋನ್, ಲಾವೊ/ಲಾವೋಟಿಯನ್ ಕಿಪ್, ಇಂಡೋನೇಷಿಯನ್ ರುಪಿಯಾ, ಉಜ್ಬೇಕಿಸ್ತಾನಿ ಸೋಮ್, ಗಿನಿಯನ್ ಫ್ರಾಂಕ್, ಪರಾಗ್ವೆಯ ಗೌರಾನಿ, ಕಾಂಬೋಡಿಯನ್ ರಿಯಲ್, ಉಗಾಂಡಾದ ಶಿಲ್ಲಿಂಗ್ ಸೇರಿದೆ.
ಇರಾನಿನ ರಿಯಾಲ್ (IRR)
ಪ್ರಸ್ತುತ 1 ಭಾರತೀಯ ರೂಪಾಯಿಯು 501.73 ಐಆರ್‌ಆರ್‌ಗೆ ಸಮನಾಗಿದೆ. ಇರಾನಿನ ರಿಯಾಲ್ ಅನ್ನು ವಿಶ್ವದ ಅತ್ಯಂತ ಕಡಿಮೆ ಮೌಲ್ಯಯುತ ಕರೆನ್ಸಿ ಎಂದು ಗುರುತಿಸಲಾಗಿದೆ. ಇದಕ್ಕೆ ದೇಶದಲ್ಲಿ ನಡೆಯುವ ರಾಜಕೀಯ ಅಶಾಂತಿ, ಇರಾನ್-ಇರಾಕ್ ಯುದ್ಧ ಮತ್ತು ಪರಮಾಣು ಕಾರ್ಯಕ್ರಮದಂತಹ ಅಂಶಗಳು ಕಾರಣ ಎನ್ನಲಾಗುತ್ತದೆ.
ವಿಯೆಟ್ನಾಮೀಸ್ ಡಾಂಗ್ (VND)
ವಿಯೆಟ್ನಾಂ ಐತಿಹಾಸಿಕವಾಗಿ ಕೇಂದ್ರೀಕೃತ ಆರ್ಥಿಕತೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾರುಕಟ್ಟೆ ಆರ್ಥಿಕತೆಯನ್ನು ಸ್ಥಾಪಿಸಲು ಪ್ರಯತ್ನಗಳನ್ನು ಮಾಡಲಾಗಿದ್ದರೂ ಇನ್ನೂ ಬಹಳ ದೂರ ಹೋಗಬೇಕಾಗಿದೆ. ಪ್ರಸ್ತುತ, ವಿಯೆಟ್ನಾಮೀಸ್ ಡಾಂಗ್ ಗಣನೀಯ ಅಪಮೌಲ್ಯವನ್ನು ಅನುಭವಿಸುತ್ತಿದೆ. ಇಲ್ಲಿ 1 ಭಾರತೀಯ ರೂಪಾಯಿಯು 297.72ವಿಎನ್ ಡಿಗೆ ಸಮನಾಗಿದೆ.
ಲಾವೋ/ಲಾವೋಟಿಯನ್ ಕಿಪ್ (LAK)
1952ರಲ್ಲಿ ಸ್ಥಾಪನೆಯಾದಾಗಿನಿಂದ ಲಾವೊ ಕರೆನ್ಸಿಯ ಮೌಲ್ಯವು ತುಲನಾತ್ಮಕವಾಗಿ ಕಡಿಮೆಯಾಗಿದೆ. ಇಲ್ಲಿ ಪ್ರಸ್ತುತ 1 ಭಾರತೀಯ ರೂಪಾಯಿಯು 263.00 ಎಲ್‌ಎಕೆಗೆ ಸಮವಾಗಿದೆ.
ಸಿಯೆರಾ ಲಿಯೋನಿಯನ್ ಲಿಯೋನ್ (SLL)
ಆಫ್ರಿಕನ್ ರಾಷ್ಟ್ರವಾದ ಸಿಯೆರಾ ಲಿಯೋನ್ ತೀವ್ರ ಬಡತನವನ್ನು ಎದುರಿಸುತ್ತಿದೆ. ವಿನಾಶಕಾರಿ ಅಂತರ್ಯುದ್ಧ ಸೇರಿದಂತೆ ಪಶ್ಚಿಮ ಆಫ್ರಿಕಾದಲ್ಲಿ ಹಗರಣಗಳು, ಭ್ರಷ್ಟಾಚಾರ ಮತ್ತು ಯುದ್ಧಗಳ ಇತಿಹಾಸವನ್ನು ದೇಶ ಹೊಂದಿದೆ. ಇದರಿಂದಾಗಿ ಕರೆನ್ಸಿ ಮೌಲ್ಯ ಮತ್ತು ದೇಶದ ಆರ್ಥಿಕತೆ ಎರಡೂ ಕುಸಿದಿದೆ. ಇಲ್ಲಿ ಭಾರತೀಯ 1 ರೂಪಾಯಿಯು 267.39 ಎಸ್ ಎಲ್ ಎಲ್‌ಗೆ ಸಮವಾಗಿದೆ.
ಇಂಡೋನೇಷಿಯನ್ ರುಪಿಯಾ (IDR)
ಕಳೆದ ಏಳು ವರ್ಷಗಳಿಂದ ಇಂಡೋನೇಷ್ಯಾದ ರೂಪಾಯಿ ಯಾವುದೇ ಸುಧಾರಣೆಯನ್ನು ತೋರಿಸಿಲ್ಲ. ವಿದೇಶಿ ವಿನಿಮಯ ಮೀಸಲು ಕಡಿಮೆಯಾಗುವುದು, ಕರೆನ್ಸಿಯನ್ನು ರಕ್ಷಿಸುವಲ್ಲಿ ಕೇಂದ್ರೀಯ ಬ್ಯಾಂಕ್ ವಿಫಲತೆ ಮತ್ತು ಸರಕು ರಫ್ತಿನ ಮೇಲೆ ದೇಶದ ಭಾರೀ ಅವಲಂಬನೆ ಸೇರಿದಂತೆ ವಿವಿಧ ಅಂಶಗಳು ಇದಕ್ಕೆ ಕಾರಣ. ಇದಲ್ಲದೆ, ಸರಕುಗಳ ಬೆಲೆಗಳಲ್ಲಿನ ಕುಸಿತವು ಕರೆನ್ಸಿಯ ಮೌಲ್ಯದಲ್ಲಿನ ಇಳಿಕೆಗೆ ಮತ್ತಷ್ಟು ಕೊಡುಗೆ ನೀಡಿದೆ. ರೂಪಾಯಿಯ ಸಾರ್ವಭೌಮ ಬಾಂಡ್‌ಗಳ ಗಮನಾರ್ಹ ಭಾಗವನ್ನು ಹೊಂದಿರುವ ವಿದೇಶಿ ಹೂಡಿಕೆದಾರರ ಉಪಸ್ಥಿತಿಯು ಬಂಡವಾಳದ ಹರಿವಿಗೆ ಅಪಾಯವನ್ನುಂಟು ಮಾಡುತ್ತದೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 185.66 ಐಡಿಆರ್‌ಗೆ ಸಮವಾಗಿದೆ.
ಉಜ್ಬೇಕಿಸ್ತಾನಿ ಸೋಮ್ (UZS)
ಉಜ್ಬೇಕಿಸ್ತಾನ್‌ನ ಆರ್ಥಿಕತೆಯು ದುರ್ಬಲವಾಗಿದೆ. ಇದು ದುರ್ಬಲ ಕರೆನ್ಸಿಗೆ ಕಾರಣವಾಗಿದೆ. ಸಾಂಕ್ರಾಮಿಕ ರೋಗವು ರಾಷ್ಟ್ರದ ಆರ್ಥಿಕತೆಯ ಮೇಲೆ ಪ್ರಭಾವ ಬೀರಿದ್ದರೂ, 2022ರ ಮೂರನೇ ತ್ರೈಮಾಸಿಕದಲ್ಲಿ ಆಂತರಿಕ ಕಾರ್ಯಾಚರಣೆಗಳು ಪುನರಾರಂಭಗೊಂಡಿದೆ. ಆದರೂ ಕೈಗಾರಿಕಾ ಉತ್ಪಾದನೆಯಲ್ಲಿನ ಕುಸಿತವು ಕರೆನ್ಸಿಯ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 150.24 ಯುಝೆಡ್‌ಎಸ್‌ಗೆ ಸಮವಾಗಿದೆ.
ಗಿನಿಯನ್ ಫ್ರಾಂಕ್ (GNF)
ಗಿನಿಯನ್ ಫ್ರಾಂಕ್ ಗಿನಿಯಾದ ಅಧಿಕೃತ ಕರೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರವು ವ್ಯಾಪಕ ಭ್ರಷ್ಟಾಚಾರ ಮತ್ತು ರಾಜಕೀಯ ಅಶಾಂತಿಯಿಂದ ಬಳಲುತ್ತಿದೆ. ಇದು ಅದರ ಕರೆನ್ಸಿಯನ್ನು ದುರ್ಬಲಗೊಳಿಸಿದೆ. ವರ್ಷದಿಂದ ವರ್ಷಕ್ಕೆ, ರಾಷ್ಟ್ರದ ಕರೆನ್ಸಿಯ ಮೌಲ್ಯವು ಕಡಿಮೆಯಾಗುತ್ತಲೇ ಇದೆ.ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 102.41 ಜಿಎನ್ ಎಫ್ ಗೆ ಸಮವಾಗಿದೆ.
ಪರಗ್ವೆಯ ಗೌರಾನಿ (PYG)
ಹೆಚ್ಚಿನ ಹಣದುಬ್ಬರ, ಭ್ರಷ್ಟಾಚಾರ, ಹೆಚ್ಚಿನ ನಿರುದ್ಯೋಗ ಮತ್ತು ಹೆಚ್ಚಿದ ಬಡತನದ ಪರಿಣಾಮವಾಗಿ ದೇಶವು ವಿನಾಶಕಾರಿ ಆರ್ಥಿಕ ಕುಸಿತವನ್ನು ಅನುಭವಿಸಿತು. ಈ ಪ್ರತಿಯೊಂದು ಅಂಶಗಳು ಕರೆನ್ಸಿಯ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಿವೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 89.88 ಪಿವೈಜಿಗೆ ಸಮವಾಗಿದೆ.
ಕಾಂಬೋಡಿಯನ್ ರಿಯಲ್ (KHR)
ದುರ್ಬಲವಾದ ಕಾಂಬೋಡಿಯನ್ ರಿಯಲ್ ಹಿಂದಿನ ಪ್ರಮುಖ ಕಾರಣವೆಂದರೆ ದೇಶದ ಹೆಚ್ಚಿನ ಡಾಲರೀಕರಣ. 80ರ ದಶಕದ ಉತ್ತರಾರ್ಧ ಮತ್ತು 90ರ ದಶಕದ ಆರಂಭದಲ್ಲಿ ರಾಜಕೀಯ ಅಸಾಮರ್ಥ್ಯಗಳಿಂದಾಗಿ ದೇಶದ ರಿಯಲ್‌ನಲ್ಲಿ ವಿದೇಶಿ ಹೂಡಿಕೆಯನ್ನು ನಡೆಸಿ ಸಾರ್ವಜನಿಕ ವಿಶ್ವಾಸವನ್ನು ಗಳಿಸಲಾಯಿತು. 90 ರ ದಶಕದಲ್ಲಿ ಯುಎಸ್ ಡಾಲರ್ ಜನರಿಗೆ ಅನುಕೂಲಕರವಾಯಿತು. ಅತ್ಯಧಿಕ ಮಟ್ಟದಲ್ಲಿ ಯುಎಸ್ ಡಾಲರ್ ದೇಶದಲ್ಲಿ ಚಲಾವಣೆಯಾಯಿತು. ಹೀಗಾಗಿ ಶೇ. 90 ರಷ್ಟು ರಿಯಲ್ ಡಾಲರ್ ರೂಪದಲ್ಲಿದೆ. ಕಳೆದ ಎರಡು ದಶಕಗಳಲ್ಲಿ ನ್ಯಾಷನಲ್ ಬ್ಯಾಂಕ್ ಆಫ್ ಕಾಂಬೋಡಿಯಾ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇದು ರಿಯಲ್ ಚಲಾವಣೆಯಲ್ಲಿ ಶೇ. 80ರಷ್ಟು ಹೆಚ್ಚಳಕ್ಕೆ ಕಾರಣವಾಯಿತು. ಆದರೂ ಇದು ಇನ್ನೂ ಹೆಚ್ಚು ಯುಎಸ್ ಡಾಲರ್ ಅನ್ನು ಅವಲಂಬಿಸಿದೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 48.62 ರಿಯಲ್ ಗೆ ಸಮವಾಗಿದೆ.
ಉಗಾಂಡಾ ಶಿಲ್ಲಿಂಗ್ (UGX)
1966ರಲ್ಲಿ ಉಗಾಂಡಾದ ಶಿಲ್ಲಿಂಗ್ ಪೂರ್ವ ಆಫ್ರಿಕಾದ ಶಿಲ್ಲಿಂಗ್ ಅನ್ನು ಬದಲಿಸಿತು. ಪ್ರಸ್ತುತ ಉಗಾಂಡಾದ ಶಿಲ್ಲಿಂಗ್ ಅತ್ಯಂತ ಕಡಿಮೆ ಬೆಲೆಬಾಳುವ ಕರೆನ್ಸಿಗಳಲ್ಲಿ ಒಂದಾಗಿದೆ. ಇದಿ ಅಮೀನ್ ಆಳ್ವಿಕೆಯ ಅಡಿಯಲ್ಲಿ ಉಗಾಂಡಾವು ರಾಷ್ಟ್ರದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ವಲಸೆ ಕಾನೂನುಗಳಂತಹ ಕ್ರಮಗಳಿಂದ ಗಮನಾರ್ಹ ಹಿನ್ನಡೆ ಅನುಭವಿಸಿತು. ಅಧ್ಯಕ್ಷರ ಆರ್ಥಿಕ ಕುಸಿತದ ಪರಿಣಾಮಗಳು ದೇಶದ ಪ್ರಗತಿಗೆ ಅಡ್ಡಿಯಾಗುತ್ತಲೇ ಇವೆ. ಆದರೂ ಇತ್ತೀಚಿನ ವರ್ಷಗಳಲ್ಲಿ ಕರೆನ್ಸಿಯ ಮೌಲ್ಯವು ಹೆಚ್ಚಿದೆ. ಇಲ್ಲಿ ಪ್ರಸ್ತುತ ಭಾರತೀಯ 1 ರೂಪಾಯಿಯು 44.22 ಯುಜಿಎಕ್ಸ್ ಆಗಿದೆ.
ಈ ಹತ್ತು ಅಗ್ಗದ ದೇಶಗಳ ಕರೆನ್ಸಿಯೊಂದಿಗೆ ಭಾರತೀಯ ರೂಪಾಯಿ ಮೌಲ್ಯದ ಹೋಲಿಕೆಯು 2024ರ ಆಗಸ್ಟ್ 19ರ ಅಂಕಿ ಅಂಶಗಳನ್ನು ಆಧರಿಸಿ ನೀಡಲಾಗಿದೆ. ಇದು ಕೆಲವೊಮ್ಮೆ ಕೊಂಚ ಏರಿಳಿತ ಕಾಣಬಹುದು.