ನವ ದೆಹಲಿ: ಕಳೆದ ಮಾರ್ಚ್‌ನಲ್ಲಿ ಮೂಲ ಸೌಕರ್ಯ ವಲಯದ ಬೆಳವಣಿಗೆ (core sector growth) 3.6% ಕ್ಕೆ ಇಳಿಕೆಯಾಗಿದೆ. ಫೆಬ್ರವರಿಯಲ್ಲಿ 6%ರಷ್ಟಿತ್ತು ಎಂದು ಶುಕ್ರವಾರ ಬಿಡುಗಡೆಯಾದ ಅಂಕಿ ಅಂಶಗಳು ತಿಳಿಸಿವೆ. ಕಲ್ಲಿದ್ದಲು, ರಸಗೊಬ್ಬರ, ಉಕ್ಕು, ನೈಸರ್ಗಿಕ ಅನಿಲ ಮತ್ತು ರಿಫೈನರಿ ಉತ್ಪನ್ನಗಳ ತಯಾರಿಕೆ 2023ರಲ್ಲಿ ಏರಿಕೆಯಾಗಿತ್ತು.
ಕಳೆದ ಮಾರ್ಚ್‌ನಲ್ಲಿ ಕಚ್ಚಾ ತೈಲ ಉತ್ಪಾದನೆ ಮತ್ತು ಸಂಸ್ಕರಣೆ, ಸಿಮೆಂಟ್, ವಿದ್ಯುತ್ ಉತ್ಪಾದನೆ ವಲಯದಲ್ಲಿ ಚಟುವಟಿಕೆ ಕಡಿಮೆಯಾಗಿತ್ತು ಎಂದು ವರದಿ ತಿಳಿಸಿದೆ.
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ (International Monetary Fund) ಭಾರತವು ಪ್ರಸಕ್ತ ಸಾಲಿನಲ್ಲಿ 6% ಜಿಡಿಪಿ ಬೆಳವಣಿಗೆಯನ್ನು ದಾಖಲಿಸಲಿದೆ ಎಂದು ತನ್ನ ವರದಿಯಲ್ಲಿ ಅಂದಾಜಿಸಿದೆ. ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿ ಮುಂದುವರಿಯಲಿದೆ. ಹಣದುಬ್ಬರ, ಜಾಗತಿಕ ಆರ್ಥಿಕತೆಯ ಮಂದಗತಿ, ರಷ್ಯಾ-ಉಕ್ರೇನ್ ಸಮರ, ಕೋವಿಡ್ -19ರ ಬಿಕ್ಕಟ್ಟಿನ ಪ್ರತಿಕೂಲ ಪರಿಣಾಮದ ಹೊರತಾಗಿಯೂ ಕಳೆದ ಮೂರು ವರ್ಷಗಳಲ್ಲಿ ಭಾರತದ ಬೆಳವಣಿಗೆಯ ವೇಗ ಗಮನಾರ್ಹ ಎಂದು ಐಎಂಎಫ್ ತಿಳಿಸಿದೆ.
ಕಳೆದ ಏಪ್ರಿಲ್ 11 ರಂದು ಐಎಂಎಫ್ ತನ್ನ world economic outlook ವರದಿಯನ್ನು ಬಿಡುಗಡೆಗೊಳಿಸಿದ್ದು, ಭಾರತೀಯ ಆರ್ಥಿಕತೆ ಪ್ರಸಕ್ತ ಸಾಲಿನಲ್ಲಿ 5.9% ಪ್ರಗತಿ ಸಾಧಿಸಲಿದೆ ಎಂದು ತಿಳಿಸಿದೆ. ಇದರೊಂದಿಗೆ ವಿಶ್ವದಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಎಕಾನಮಿಯಾಗಿ ಹೊರಹೊಮ್ಮಲಿದೆ ಎಂದಿದೆ.
ಭಾರತವು ಡಿಜಿಟಲೀಕರಣದ ನೆರವಿನಿಂದ ಕೋವಿಡ್-19 ಬಿಕ್ಕಟ್ಟಿನ ಪರಿಹಾರ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಹೊಸ ಅವಕಾಶಗಳನ್ನು ತೆರೆದಿದೆ ಎಂದು ಐಎಂಎಫ್ ವರದಿ ತಿಳಿಸಿದೆ.
ಈ ವರ್ಷ ಮತ್ತು ಮುಂದಿನ ವರ್ಷ ಜಗತ್ತಿನ ಬೆಳವಣಿಗೆಯ ಜವಾಬ್ದಾರಿಯನ್ನು ಪ್ರಗತಿಶೀಲ ರಾಷ್ಟ್ರಗಳು ವಹಿಸಲಿವೆ. ಅದರಲ್ಲೂ ಭಾರತ ಒಂದೇ ಜಗತ್ತಿನ ಪ್ರಗತಿಯಲ್ಲಿ 15% ಕೊಡುಗೆಯನ್ನು ನೀಡಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ನ (International Monetary Fund) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಾಲಿನಾ ಜಾರ್ಜಿವಾ (Kristalina Georgieva) ಭವಿಷ್ಯ ನುಡಿದಿದ್ದಾರೆ.
ಭಾರತದ ಆರ್ಥಿಕತೆ ಪ್ರಬಲವಾಗಿ ಬೆಳೆಯುತ್ತಿದೆ. (bright spot) ಜಾಗತಿಕ ಅಭಿವೃದ್ಧಿಯ ಚಾಲಕ ಶಕ್ತಿಯಾಗಲಿದೆ. ಅದು ದೇಶಗಳನ್ನು ಒಗ್ಗೂಡಿಸುವ ವಿಶಿಷ್ಟ ಸ್ಥಾನದಲ್ಲಿದೆ. ಜಾಗತಿಕ ಆರ್ಥಿಕತೆ ಅನಿಶ್ಚಿತತೆಯಲ್ಲಿ ಇರುವ ಸಂದರ್ಭದಲ್ಲಿ ಭಾರತದ ಸ್ಥಾನ ವಿಶಿಷ್ಟವಾಗಿದೆ. ಜಿ20 ಗ್ರೂಪ್‌ನ ಅಧ್ಯಕ್ಷ ಸ್ಥಾನವನ್ನೂ ವಹಿಸಿಕೊಂಡಿರುವುದು ಮಹತ್ವಪೂರ್ಣ ಎಂದು ಕ್ರಿಸ್ಟಾಲಿನಾ ಜಾರ್ಜಿವಾ ಹೇಳಿದ್ದಾರೆ.