ನವ ದೆಹಲಿ: ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಹಲವು ಹೊಸ ನಿಯಮ ನಿಬಂಧನೆಗಳನ್ನು ಜಾರಿಗೆ ತರಲು ಡೆಡ್‌ಲೈನ್ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಕ್ಟೋಬರ್ 1ರವರೆಗೆ ವಿಸ್ತರಿಸಿದೆ.
ಈ ಮೊದಲು ಡೆಡ್‌ಲೈನ್ ಜುಲೈ 1ಕ್ಕೆ ನಿಗದಿಪಡಿಸಲಾಗಿತ್ತು. ಹಲವು ಔದ್ಯಮಿಕ ಪ್ರತಿನಿಧಿಗಳಿಂದ ಪಡೆದ ಅಭಿಪ್ರಾಯವನ್ನು ಮಾನ್ಯ ಮಾಡಿ ಈ ಡೆಡ್‌ಲೈನ್ ವಿಸ್ತರಣೆ ಮಾಡಲಾಗಿದೆ ಎಂದು ಆರ್‌ಬಿಐ ಜೂನ್ 21ರಂದು ಹೇಳಿಕೆಯಲ್ಲಿ ತಿಳಿಸಿದೆ.
ಯಾವು ನಿಯಮಗಳಿಗೆ ಗಡುವು ವಿಸ್ತರಣೆ?
ವಿತರಿಸಿದ 30 ದಿನಗಳೊಳಗೆ ಗ್ರಾಹಕರು ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸದಿದ್ದರೆ, ಕಾರ್ಡ್ ಅನ್ನು ಸಕ್ರಿಯಗೊಳಿಸಲು ಬ್ಯಾಂಕ್‌ಗಳು ಅಥವಾ ಕಾರ್ಡ್-ವಿತರಕರು ಬಳಕೆದಾರರಿಂದ ಒಟಿಪಿ (ಒನ್‌ಟೈಮ್ ಪಾಸ್‌ವರ್ಡ್) ಪಡೆಯಬೇಕು. ಗ್ರಾಹಕರು ಕಾರ್ಡ್ ಅನ್ನು ಸಕ್ರಿಯಗೊಳಿಸಲು ಒಪ್ಪಿಗೆಯನ್ನು ನೀಡದಿದ್ದರೆ, ವಿತರಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಏಳು ಕೆಲಸದ ದಿನಗಳಲ್ಲಿ ಕಾರ್ಡ್ ಅನ್ನು ರದ್ದುಗೊಳಿಸಬೇಕು.
ಕ್ರೆಡಿಟ್ ಕಾರ್ಡ್‌ನಲ್ಲಿ ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವ ಮೊದಲು ಕಾರ್ಡ್ ವಿತರಕರು ಸ್ಪಷ್ಟವಾದ ಒಪ್ಪಿಗೆಯನ್ನು ಕೇಳಬೇಕು. ಕಾರ್ಡ್ ವಿತರಕರು ಕಾರ್ಡುದಾರರಿಂದ ಸ್ಪಷ್ಟವಾದ ಒಪ್ಪಿಗೆಯನ್ನು ಪಡೆಯದೆಯೇ ಕಾರ್ಡ್‌ದಾರರಿಗೆ ಸೂಚಿಸಲಾದ ಕ್ರೆಡಿಟ್ ಮಿತಿಯನ್ನು ವಿಸ್ತರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಆರ್‌ಬಿಐ ಹೇಳಿದೆ.
ಇದಲ್ಲದೆ, ಕನಿಷ್ಠ ಬಾಕಿ ಮೊತ್ತ ಸೇರಿದಂತೆ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಪಾವತಿಸಲು ನಿಯಮಗಳು ಮತ್ತು ಷರತ್ತುಗಳನ್ನು ನಿಗದಿಪಡಿಸಲಾಗಿದೆ. ಪಾವತಿಸದ ಶುಲ್ಕಗಳು, ಲೆವಿ, ತೆರಿಗೆಗಳ ಮೇಲೆ ಶುಲ್ಕ ವಿಧಿಸುವುದು, ಸಂಯುಕ್ತ ಬಡ್ಡಿ ವಿಧಿಸುವುದು ಮಾಡುವಂತಿಲ್ಲ ಎಂದು ಆರ್‌ಬಿಐ ತಿಳಿಸಿದೆ.
ಇದನ್ನೂ ಓದಿ: ಕಳೆದ 2 ವರ್ಷಗಳಿಂದ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ದುಡ್ಡು ಹೆಚ್ಚಳ, 2021ರಲ್ಲಿ 14 ವರ್ಷಗಳಲ್ಲೇ ಗರಿಷ್ಠ
ಇನ್ನೂ ಕೆಲವು ನಿಯಮಾವಳಿಗಳಿಗೆ ಜುಲೈ 1 ಡೆಡ್‌ಲೈನ್ ಆಗಿದೆ. ಕಳೆದ ಏಪ್ರಿಲ್‌ನಲ್ಲಿ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವಾಗ ಕಾರ್ಡ್-ವಿತರಕರು ಅನುಸರಿಸಬೇಕಾದ ಮಾರ್ಗಸೂಚಿಗಳ ಪಟ್ಟಿಯನ್ನು ಆರ್‌ಬಿಐ ಬಿಡುಗಡೆ ಮಾಡಿತ್ತು. ಹೊಸ ನಿಯಮಗಳು ಜುಲೈ 1ರಿಂದ ಜಾರಿಗೆ ಬರಲಿವೆ. ಇದು ಬಿಲ್ಲಿಂಗ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಕ್ಲೋಸಿಂಗ್‌ಗೆ ಸಂಬಂಧಿಸಿದ ಸೂಚನೆಗಳನ್ನು ಸಹ ಒಳಗೊಂಡಿದೆ. ಇವು ಪ್ರತಿ ವರ್ಗೀಕೃತ ಬ್ಯಾಂಕ್‌ಗಳಿಗೆ (ಪಾವತಿ ಬ್ಯಾಂಕ್‌ಗಳು, ರಾಜ್ಯ ಸಹಕಾರ ಬ್ಯಾಂಕ್‌ಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳನ್ನು ಹೊರತುಪಡಿಸಿ) ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ (NBFC) ಅನ್ವಯಿಸುತ್ತವೆ.
ಪ್ರತಿ ತಿಂಗಳ 10ನೇ ತಾರೀಕಿನಂದು ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ತಯಾರಾದರೆ, ನಿಮ್ಮ ಕ್ರೆಡಿಟ್ ಕಾರ್ಡ್‌ನ ಬಿಲ್ಲಿಂಗ್ ಅವಧಿಯು ಹಿಂದಿನ ತಿಂಗಳ 11ನೇ ತಾರೀಕಿನಂದು ಪ್ರಾರಂಭವಾಗುತ್ತದೆ ಮತ್ತು ಪ್ರಸ್ತುತ ತಿಂಗಳ 10ನೇ ತಾರೀಕಿಗೆ ಕೊನೆಗೊಳ್ಳುತ್ತದೆ. ಕ್ರೆಡಿಟ್ ಕಾರ್ಡ್‌ನ ಬಿಲ್ಲಿಂಗ್ ಸ್ಟೇಟ್‌ಮೆಂಟ್‌ನಲ್ಲಿ ವಿಳಂಬವಾಗಬಾರದು. ಬಿಲ್/ಸ್ಟೇಟ್‌ಮೆಂಟ್ ಕಳುಹಿಸಲಾಗಿದೆ, ತಕ್ಷಣವೇ ಇಮೇಲ್ ಮಾಡಲಾಗಿದೆ ಮತ್ತು ಗ್ರಾಹಕರಿಗೆ ಬಡ್ಡಿಯನ್ನು ವಿಧಿಸುವ ಮೊದಲು ಕನಿಷ್ಠ ಹದಿನೈದು ದಿನಗಳ ಅವಧಿಯನ್ನು ನೀಡಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಆರ್‌ಬಿಐ ವಿಧಿಸಿದೆ.
ತಡವಾದ ಬಿಲ್ಲಿಂಗ್ ಬಗ್ಗೆ ದೂರುಗಳಿವೆ. ಇವನ್ನು ತಡೆಯಲು ಕಾರ್ಡ್ ವಿತರಕರು ಇಂಟರ್ನೆಟ್/ಮೊಬೈಲ್ ಬ್ಯಾಂಕಿಂಗ್ ಮೂಲಕ ಬಿಲ್ ಮತ್ತು ಅಕೌಂಟ್ ಸ್ಟೇಟ್‌ಮೆಂಟ್ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆರ್‌ಬಿಐ ಹೇಳಿದೆ.
ಇದನ್ನೂ ಓದಿ: ವಿಸ್ತಾರ MoneyGuide: ಗೂಗಲ್ ಪೇ, ಪೇಟಿಎಂ ಜತೆ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಲು ಆರ್‌ಬಿಐ ಗ್ರೀನ್ ಸಿಗ್ನಲ್