ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೊ ವೈರಲ್ ಆಗಿತ್ತು. ಅದರಲ್ಲಿ Apple ಸ್ಮಾರ್ಟ್ ವಾಚ್ ಧರಿಸಿದ ಹುಡುಗನೊಬ್ಬ ವ್ಯಕ್ತಿಯೊಬ್ಬರ ಕಾರಿನ ಮುಂಭಾಗದ ಗಾಜನ್ನು ಒರೆಸುವ ನೆಪದಲ್ಲಿ ಪೇಟಿಎಂ FASTag ಅಕೌಂಟ್‌ನಿಂದ ಹಣ ಲಪಟಾಯಿಸಿದ್ದಾನೆ ಎಂದು ಆರೋಪಿಸಲಾಗಿತ್ತು.
ವಿಡಿಯೊದಲ್ಲಿ ಹುಡುಗ ಕಾರಿನ ಗಾಜನ್ನು ಒರೆಸುವಾಗ ಅಲ್ಲಿದ್ದ FASTag ಸ್ಟಿಕ್ಕರ್ ಮೇಲೆ ವಾಚನ್ನು ಆಡಿಸಿ ಸ್ಕ್ಯಾನ್ ಮಾಡಿದಂತೆ ಕಾಣುತ್ತಿತ್ತು. ಇದರೊಂದಿಗೆ FASTag ಅಕೌಂಟ್‌ನಿಂದ ಹಣ ಲಪಟಾಯಿಸಿದ್ದಾನೆ ಎಂಬ ಶಂಕೆ ಬರುವಂತಿತ್ತು. ಏಕೆಂದರೆ ವಿಡಿಯೊದಲ್ಲಿ ಕಾರಿನಲ್ಲಿ ಇದ್ದ ವ್ಯಕ್ತಿ ಹುಡುನನ್ನು ಕರೆದು ವಿಚಾರಿಸಿದಾಗ, ಆತ FASTag ಅಕೌಂಟ್‌ನಲ್ಲಿನ ಡೇಟಾಗಳನ್ನು ಸೆಳೆದಿರುವುದಾಗಿ ಒಪ್ಪಿಕೊಳ್ಳುತ್ತಾನೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸುತ್ತಿರುವ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಮ್ FASTag ಇಂಥ ವಂಚನೆಯ ಸಾಧ್ಯತೆಯನ್ನು ಸ್ಪಷ್ಟವಾಗಿ ನಿರಾಕರಿಸಿದೆ.
ನೋಂದಾಯಿತ ಟೋಲ್ ಮತ್ತು ಪಾರ್ಕಿಂಗ್ ಪ್ಲಾಜಾ ನಿರ್ವಾಹಕರು ಮಾತ್ರ ನಿರ್ದಿಷ್ಟ ಸ್ಥಳದಲ್ಲಿ FASTag ಹಣಕಾಸು ವರ್ಗಾವಣೆ ಮಾಡಲು ಸಾಧ್ಯವೇ ಹೊರತು ಇತರ ಯಾವುದೇ ಅನಧಿಕೃತ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಸಾಧ್ಯವಿಲ್ಲ. ಹೀಗಾಗಿ FASTag ಸ್ಕ್ಯಾನಿಂಗ್ ಸಂಪೂರ್ಣ ಸುರಕ್ಷಿತ ಎಂದು ತಿಳಿಸಿದೆ.
ಜಾಲತಾಣಗಳಲ್ಲಿ ವಿವಾದಾಸ್ಪದ ವಿಡಿಯೊ ವೈರಲ್ ಆಗುತ್ತಿದ್ದಂತೆ ಅನೇಕ ಮಂದಿ ಸಾರಿಗೆ ಸಚಿವ ನಿತಿನ್ ಗಡ್ಕರಿ, ಎನ್‌ಎಚ್‌ಎಐ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಆತಂಕದಿಂದ ಪ್ರಶ್ನಿಸಿದ್ದರು.
ಸೈಬರ್ ಭದ್ರತೆ ತಜ್ಞ ಡಾ. ಅನಂತ್ ಪ್ರಭು ಏನೆನ್ನುತ್ತಾರೆ?
ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊ ಹಿನ್ನೆಲೆಯಲ್ಲಿ ಖ್ಯಾತ ಸೈಬರ್ ಭದ್ರತೆ ತಜ್ಞರಾದ ಡಾ. ಅನಂತ್ ಪ್ರಭು ಪ್ರತಿಕ್ರಿಯಿಸಿದ್ದಾರೆ. ವೈರಲ್ ಆಗಿರುವ ವಿಡಿಯೊ ದಿಕ್ಕುತಪ್ಪಿಸುವಂತಿದ್ದು, ಜನತೆ ಭಯಪಡಬೇಕಿಲ್ಲ. FASTag ಸ್ಟಿಕ್ಕರ್ ಕಿತ್ತು ಹಾಕಬೇಕಿಲ್ಲ ಎಂದಿದ್ದಾರೆ.
Gen ೨ FASTag ಗಳಲ್ಲಿ ಒಂದು ಚಿಪ್, ನಾಲ್ಕು ಮಾದರಿಯ ಮೆಮೊರಿಗಳು ಇರುತ್ತವೆ. ರಿಸರ್ವ್ಡ್ ಮೆಮೊರಿ, ಇಪಿಸಿ ಮೆಮೊರಿ, ಟಿಐಡಿ ಮೊಮೊರಿ ಮತ್ತು ಯೂಸರ್ ಮೆಮೊರಿ. ಹೀಗಾಗಿ ಇದು ೯೯% ಸುರಕ್ಷಿತವಾಗಿದ್ದು, ಕಾರು ಮಾಲೀಕರು ಆತಂಕಪಡಬೇಕಿಲ್ಲ ಎಂದು ತಿಳಿಸಿದ್ದಾರೆ.