ನವ ದೆಹಲಿ: ದೇಶೀಯವಾಗಿ ವಿಮಾನ ಪ್ರಯಾಣ ಮತ್ತು (Domestic tourism) ಹೋಟೆಲ್ ಬುಕಿಂಗ್ಸ್ ಕೋವಿಡ್ ಪೂರ್ವ ಮಟ್ಟವನ್ನೂ ಮೀರಿದೆ ಎಂದು ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.
ಇದು ದೇಶೀಯ ಟೂರಿಸಂ ವಲಯಕ್ಕೆ ಚೇತೋಹಾರಿಯಾಗಿ ಪರಿಣಮಿಸಿದೆ. ಡಿಸೆಂಬರ್ 26ರಂದು 4,23,000 ಪ್ರಯಾಣಿಕರು ದೇಶೀಯ ಮಾರ್ಗಗಳಲ್ಲಿ ವಿಮಾನ ಪ್ರಯಾಣ ಬೆಳೆಸಿದ್ದಾರೆ. ಇದು ಕೋವಿಡ್ ಪೂರ್ವ ಮಟ್ಟಕ್ಕಿಂತಲೂ ಹೆಚ್ಚು.
ಮೇಕ್ ಮೈ ಟ್ರಿಪ್‌ನ ಸಿಒಒ ವಿಪುಲ್ ಪ್ರಕಾಶ್ ಅವರ ಪ್ರಕಾರ, ದೇಶೀಯ ಮಾರ್ಗಗಳಲ್ಲಿ ಪ್ರಯಾಣಿಕರ ವಿಹಾರ ಗಣನೀಯ ಹೆಚ್ಚಳ ದಾಖಲಿಸಿದೆ. ವಯನಾಡು, ಮೈಸೂರು, ಊಟಿ, ಕೊಡಗು, ಗ್ಯಾಂಗ್ಟಕ್, ಡೆಹರಾಡೂನ್, ಆಗ್ರಾ, ಡಾರ್ಜಿಲಿಂಗ್ ಮೊದಲಾದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಯಲ್ಲೂ ಹೆಚ್ಚಳವಾಗಿದೆ.
ಕಾಶ್ಮೀರ, ಗೋವಾ, ಅಂಡಮಾನ್ ನಿಕೋಬಾರ್‌ಗೂ ಪ್ರವಾಸಿಗರ ಭೇಟಿ ಹೆಚ್ಚಳವಾಗಿದೆ. ಕಾಶ್ಮೀರಕ್ಕೆ 2022ರಲ್ಲಿ 22 ಲಕ್ಷ ಪ್ರವಾಸಿಗರು ಭೇಟಿ ನೀಡಿರುವುದು ಹೊಸ ದಾಖಲೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಆಧ್ಯಾತ್ಮಿಕ ಪ್ರವಾಸಕ್ಕೂ ಭಾರತೀಯರು ಆದ್ಯತೆ ನೀಡುತ್ತಾರೆ. ವಾರಾಣಾಸಿ, ಪ್ರಯಾಗ್ ರಾಜ್, ಪುರಿ, ವೈಷ್ಣೋದೇವಿ, ತಿರುಪತಿಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ.