ಸಿಂಗಾಪುರ: ಜರ್ಮನಿಯ ಬಳಿಕ ಇದೀಗ ಸಿಂಗಾಪುರದಲ್ಲಿ ಆರ್ಥಿಕ ಹಿಂಜರಿತ ಸಂಭವಿಸುವ ಆತಂಕ ದಟ್ಟವಾಗಿದೆ. (Recession) ಇದನ್ನು ತಾಂತ್ರಿಕ ಲೆಕ್ಕಾಚಾರದಲ್ಲಿ ರಿಸೆಶನ್ ಎಂದು ಕರೆಯಲಾಗಿದೆ. (Technical recession) ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ ಸಿಂಗಾಪುರದ ಜಿಡಿಪಿ ಬೆಳವಣಿಗೆ ಕುಸಿದಿತ್ತು. ಎರಡನೇ ತ್ರೈಮಾಸಿಕದಲ್ಲೂ, ಅಂದರೆ ಏಪ್ರಿಲ್-ಜೂನ್‌ನಲ್ಲೂ ಇಳಿಕೆ ದಾಖಲಿಸುವ ಸಾಧ್ಯತೆ ಇದೆ. ಇದರ ಪರಿಣಾಮ ತಾಂತ್ರಿಕವಾಗಿ ರಿಸೆಶನ್‌ಗೆ ಸಿಲುಕುವ ಅಪಾಯ ಉಂಟಾಗಿದೆ.
ರಫ್ತನ್ನು ಅವಲಂಬಿಸಿರುವ ಸಿಂಗಾಪುರ ಎಕಾನಮಿ:
ಸಿಂಗಾಪುರದ ಆರ್ಥಿಕತೆಯು ರಫ್ತನ್ನು ಅವಲಂಬಿಸಿದೆ. 2023ರಲ್ಲಿ ಜಾಗತಿಕ ಆರ್ಥಿಕತೆ ಮಂದಗತಿಯ ಪರಿಣಾಮ ಸಿಂಗಾಪುರದ ಆರ್ಥಿಕತೆಗೂ ಹೊಡೆತ ಬೀಳುತ್ತಿದೆ. ಸತತ ಎರಡು ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಕುಸಿದರೆ ತಾಂತ್ರಿಕವಾಗಿ ಆರ್ಥಿಕ ಹಿಂಜರಿತ ಎಂದು ಕರೆಯಲಾಗುತ್ತದೆ. ಮೊದಲ ತ್ರೈಮಾಸಿಕದಲ್ಲಿ ಸಿಂಗಾಪುರದ ಎಕಾನಮಿ 0.4% ಇಳಿದಿತ್ತು.
ಸಿಂಗಾಪುರದ ಸಣ್ಣ ಮತ್ತು ಮುಕ್ತ ಎಕಾನಮಿ ದೊಡ್ಡ ಪ್ರಮಾಣದಲ್ಲಿ ವ್ಯಾಪಾರವನ್ನು ಅವಲಂಬಿಸಿದೆ. ಆದರೆ ಜಾಗತಿಕ ಬೇಡಿಕೆ ಕುಸಿತದ ಪರಿಣಾಮ ಹಿನ್ನಡೆ ಕಾಣುವಂತಾಗಿದೆ. ಜಾಗತಿಕ ಸೆಮಿಕಂಡಕ್ಟರ್ ಉದ್ದಿಮೆಯಲ್ಲೂ ಮಂದಗತಿ ಕಂಡು ಬಂದಿರುವುದು ಸಿಂಗಾಪುರಕ್ಕೆ ಸವಾಲಾಗಿ ಪರಿಣಮಿಸಿದೆ. ಜರ್ಮನಿಯ ಆರ್ಥಿಕತೆ 2023ರಲ್ಲಿ ಹಿಂಜರಿತಕ್ಕೀಡಾಗಿದೆ. ಯುರೋಪಿನ ಪ್ರಬಲ ದೇಶವಾಗಿರುವ ಜರ್ಮನಿಯಲ್ಲಿ ಹಣದುಬ್ಬರ ಏರುಗತಿಯಲ್ಲಿದ್ದು, ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ.
ಇದನ್ನೂ ಓದಿ: Recession In Germany: ವಿಶ್ವದ 4ನೇ ಬೃಹತ್ ವಿತ್ತ ರಾಷ್ಟ್ರ ಜರ್ಮನಿಯಲ್ಲಿ ಆರ್ಥಿಕ ಹಿಂಜರಿತ; ಭಾರತಕ್ಕೂ ಹೊಡೆತ?
ಸಿಂಗಾಪುರದ ಆರ್ಥಿಕತೆ ಇಡೀ ಜಗತ್ತಿನಲ್ಲೇ ಅತ್ಯಂತ ಮುಕ್ತವಾದ ಎಕಾನಮಿ ಎನ್ನಿಸಿತ್ತು. ಅತ್ಯಂತ ಕಡಿಮೆ ಭ್ರಷ್ಟಾಚಾರ ಇರುವ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ತಲಾ ಆದಾಯದಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿತ್ತು. ಸಿಂಗಾಪುರದ ಸರಕಾರಿ ಸ್ವಾಮ್ಯದ ದಿಗ್ಗಜ ಕಂಪನಿಗಳು ಅಲ್ಲಿನ ಎಕಾನಮಿಯ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.
ಸಿಂಗಾಪುರ ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ಸ್, ಟೆಲಿಕಮ್ಯುನಿಕೇಶನ್, ಔಷಧಗಳು, ರಾಸಾಯನಿಕಗಳ ರಫ್ತು ಮೂಲಕ ಆದಾಯ ಗಳಿಸುತ್ತದೆ. ಅಮೆರಿಕ, ಚೀನಾ, ಜಪಾನ್, ಆಸ್ಟ್ರೇಲಿಯಾಕ್ಕೆ ಹೆಚ್ಚಿನ ರಫ್ತು ಮಾಡುತ್ತದೆ.