ನವ ದೆಹಲಿ: ಐರೋಪ್ಯ ರಾಷ್ಟ್ರಗಳು ರಷ್ಯಾ ಮೂಲದ ಕಚ್ಚಾ ತೈಲ ಆಮದಿಗೆ (Oil) ವಿಧಿಸಿರುವ ನಿಷೇಧ ಡಿಸೆಂಬರ್ 5ಕ್ಕೆ ಜಾರಿಯಾಗುತ್ತಿದೆ. ಈ ನಡುವೆ ಭಾರತದ ಸಾರ್ವಜನಿಕ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪ್ ಲಿಮಿಟೆಡ್ (IOC) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (BPCL), ರಷ್ಯಾದಿಂದ ಕಚ್ಚಾ ತೈಲ ಆಮದನ್ನು ಸ್ಥಗಿತಗೊಳಿಸಿವೆ.
ಮುಂದಿನ ನಡೆಯ ಬಗ್ಗೆ ಸ್ಪಷ್ಟತೆ ದೊರೆಯುವ ತನಕ ರಷ್ಯಾದಿಂದ ತೈಲ ಖರೀದಿಸದಿರಲು ಸಾರ್ವಜನಿಕ ತೈಲ ಕಂಪನಿಗಳು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ. ರಷ್ಯಾ ಮೂಲದ ಡಿಸ್ಕೌಂಟ್ ದರದ ಕಚ್ಚಾ ತೈಲ ಆಮದು ಭಾರತಕ್ಕೆ ನಿರ್ಣಾಯಕವಾಗಿದೆ. ಒಂದು ವೇಳೆ ಯುರೋಪ್, ರಷ್ಯಾದ ತೈಲ ಖರೀದಿಯನ್ನು ಸ್ಥಗಿತಗೊಳಿಸಿದರೆ, ಕೊಲ್ಲಿ ರಾಷ್ಟ್ರಗಳ ತೈಲದ ಪೂರೈಕೆ ಮೇಲೆ ಒತ್ತಡ ಉಂಟಾಗಲಿದ್ದು, ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಇದು ಭಾರತಕ್ಕೆ ಮತ್ತೊಂದು ಸವಾಲಾಗಬಹುದು.
ಈಗಾಗಲೇ ರಷ್ಯಾ-ಉಕ್ರೇನ್ ಸಂಘರ್ಷದ ಪರಿಣಾಮ ಸ್ವತಃ ಯುರೋಪ್ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾವನ್ನು ದಂಡಿಸಲು ನಿಷೇಧವನ್ನು ಹೇರಲು ಮುಂದಾಗಿವೆ. ಆದರೆ ಇದರಿಂದ ಸ್ವತಃ ಯುರೋಪಿಗೂ ಸಂಕಷ್ಟವಾಗುವ ಭೀತಿ ತಲೆದೋರಿದೆ.
ದರಕ್ಕೆ ಮಿತಿ ಹಾಕುವ ಪ್ರಸ್ತಾಪ ಪರಿಶೀಲನೆ? ರಾಯ್ಟರ್ಸ್‌ನ ಇತ್ತೀಚಿನ ವರದಿಯ ಪ್ರಕಾರ, ರಷ್ಯಾ ತೈಲ ದರದ ಮೇಲೆ ಮಿತಿ ವಿಧಿಸುವ ಪ್ರಸ್ತಾಪವನ್ನು ಪರಿಶೀಲಿಸುವುದಾಗಿ ಭಾರತ ತಿಳಿಸಿದೆ. ದರ ಮಿತಿ ವಿಧಿಸುವ ದೇಶಗಳಿಗೆ ತೈಲ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಸಿದ್ದಾರೆ. ರಷ್ಯಾದಿಂದ ಡಿಸ್ಕೌಂಟ್ ದರದಲ್ಲಿ ತೈಲ ಪಡೆದಿರುವ ಭಾರತ, ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.