Site icon Vistara News

EXPLAINER: ಡಾಲರ್‌ ಎದುರು ರೂಪಾಯಿ ಬೆಲೆ ಕುಸಿದಾಗ ಏನಾಗುತ್ತದೆ?

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ನ ಅಬ್ಬರಕ್ಕೆ ರೂಪಾಯಿ ಸೇರಿದಂತೆ ಪ್ರಮುಖ ಕರೆನ್ಸಿಗಳ ಮೌಲ್ಯ ಕುಸಿತ ಕಳೆದೆರಡು ದಿನಗಳಿಂದ ಸುದ್ದಿಯಲ್ಲಿದೆ. ಮೇ 9ರಂದು ದಾಖಲೆಯ 77.46ಕ್ಕೆ ಕುಸಿತಕ್ಕೀಡಾಗಿದ್ದ ರೂಪಾಯಿ ಮೌಲ್ಯ ಈಗ 77.35 ರೂ.ಗಳ ಮಟ್ಟದಲ್ಲಿದೆ. ಈ ರೀತಿ ರೂಪಾಯಿ ದುರ್ಬಲವಾದಾಗ ಏನಾಗುತ್ತದೆ ಎಂಬುದು ಜನ ಸಾಮಾನ್ಯರನ್ನು ಕಾಡುವ ಪ್ರಶ್ನೆ. ಉತ್ತರ ಇಲ್ಲಿದೆ.

ರೂಪಾಯಿ ಬೆಲೆ ಕುಸಿತ ಎಂದರೇನು?
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಜಗತ್ತಿನ ಪ್ರಮುಖ ಕರೆನ್ಸಿಗಳ ಕೊಡು ಕೊಳ್ಳುವಿಕೆಗೆ ನಿಗದಿತ ದರ ಇರುತ್ತದೆ. ಡಾಲರ್‌ ಇಲ್ಲಿ ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಪ್ರಾಮುಖ್ಯತೆ ಗಳಿಸಿದೆ. ಡಾಲರ್‌ ಎದುರು ರೂಪಾಯಿ ಸೇರಿದಂತೆ ಇತರ ಕರೆನ್ಸಿಗಳ ಮೌಲ್ಯ ಎಷ್ಟಿದೆ ಎಂಬುದು ನಿರ್ಣಾಯಕವಾಗುತ್ತದೆ. ಪ್ರತಿ 1 ಡಾಲರ್‌ಗೆ ಈಗ 77 ರೂಪಾಯಿ 35 ಪೈಸೆ ಕೊಡಬೇಕು. ಪ್ರತಿ ದಿನ ಈ ಮೌಲ್ಯ ಹೆಚ್ಚು ಅಥವಾ ಕಡಿಮೆ ಆಗಬಹುದು. ಡಾಲರ್‌ ಎದುರು ರೂಪಾಯಿ ಕಿಮ್ಮತ್ತು ಕಡಿಮೆಯಾದಾಗ ಬೆಲೆ ಏರಿಕೆಯ ದೃಷ್ಟಿಯಿಂದ ಮಾರಕವಾಗುತ್ತದೆ.

ರೂಪಾಯಿ ಮೌಲ್ಯ ಕುಸಿತದ ಪರಿಣಾಮಗಳೇನು?
ಬೆಲೆ ಏರಿಕೆ:
ಡಾಲರ್‌ ಎದುರು ರೂಪಾಯಿಯ ಮೌಲ್ಯ ಕುಸಿದಾಗ ಭಾರತಕ್ಕೆ ಆಮದು ಖರ್ಚು ಹೆಚ್ಚುತ್ತದೆ. ಏಕೆಂದರೆ ಬಹುತೇಕ ಆಮದು ವ್ಯವಹಾರಗಳು ಡಾಲರ್‌ ಮೂಲಕ ನಡೆಯುತ್ತದೆ. ಆಗ ಡಾಲರ್‌ ಖರೀದಿಸಲು ಹೆಚ್ಚೆಚ್ಚು ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಉದಾಹರಣೆಗೆ ಕಳೆದ ವಾರ ಒಂದು ಡಾಲರ್‌ ಪಡೆಯಲು 70 ರೂ. ಸಾಕಿತ್ತು ಎನ್ನಿ. ಈಗ 77 ರೂ. ಕೊಡಬೇಕು ಎಂದರೆ 7 ರೂ. ತುಟ್ಟಿ ಆಯಿತಲ್ಲವೇ. ಆಮದು ದುಬಾರಿಯಾದಾಗ ಬೆಲೆ ಏರಿಕೆಯಾಗುತ್ತದೆ.

ಚಿನ್ನ, ತೈಲ, ಖಾದ್ಯ ತೈಲ ತುಟ್ಟಿ
ಭಾರತವು ಚಿನ್ನ, ಪೆಟ್ರೋಲಿಯಂ ಉತ್ಪನ್ನಗಳು, ಖಾದ್ಯ ತೈಲಕ್ಕೆ ಆಮದನ್ನು ಬಹುವಾಗಿ ಅವಲಂಬಿಸಿದೆ. ದೇಶದ ಆಮದಿನ ಬಹುಪಾಲು ಖರ್ಚು ಇದಕ್ಕೆ ತಗಲುತ್ತದೆ. ರೂಪಾಯಿ ಬೆಲೆ ಕುಸಿದರೆ ಇವುಗಳನ್ನು ಡಾಲರ್‌ ಕೊಟ್ಟು ಖರೀದಿಸುವುದೂ ದುಬಾರಿಯಾಗುತ್ತದೆ. ಆದ್ದರಿಂದ ಇವುಗಳ ಬೆಲೆ ಏರುತ್ತದೆ. ಈಗಾಗಲೇ ರಷ್ಯಾ-ಉಕ್ರೇನ್‌ ಸಂಘರ್ಷದ ಪರಿಣಾಮ ತೈಲೋತ್ಪನ್ನಗಳು ಹಾಗೈ ಖಾದ್ಯ ತೈಲಗಳ ದರ ಏರಿಕೆಯಾಗಿದೆ. ಇದು ಮತ್ತಷ್ಟು ತುಟ್ಟಿಯಾದರೆ ಅಚ್ಚರಿ ಇಲ್ಲ. ಟಿ.ವಿ, ರೆಫ್ರಿಜರೇಟರ್‌, ವಾಷಿಂಗ್‌ ಮೆಷೀನ್‌ ಇತ್ಯಾದಿ ಎಲೆಕ್ಟ್ರಾನಿಕ್ಸ್‌ ವಸ್ತುಗಳೂ ದುಬಾರಿಯಾಗುತ್ತವೆ. ವಿದೇಶ ಪ್ರವಾಸ, ವಿದೇಶದಲ್ಲಿ ಶಿಕ್ಷಣ ವೆಚ್ಚ ಕೂಡ ಏರಿಕೆಯಾಗುತ್ತದೆ. ಹೀಗಾಗಿ ಬಡವರು ಮತ್ತು ಮಧ್ಯಮ ವರ್ಗದ ಜನತೆಗೆ ದೈನಂದಿನ ಖರ್ಚು ವೆಚ್ಚಗಳ ಏರಿಕೆಯಿಂದ ಭಾರಿ ಸಂಕಷ್ಟವಾಗುತ್ತದೆ.

ಉದ್ದಿಮೆಗಳಿಗೆ ಕಚ್ಚಾ ಸಾಮಾಗ್ರಿ ದುಬಾರಿ
ರೂಪಾಯಿ ಕುಸಿದಾಗ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಆಮದು ಮಾಡುವ ಯಂತ್ರೋಪಕರಣಗಳು, ಕಚ್ಚಾ ಸಾಮಾಗ್ರಿಗಳ ದರ ಹೆಚ್ಚಳವಾಗುತ್ತದೆ. ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗುತ್ತದೆ.

ಆರ್‌ಬಿಐ ಮಧ್ಯಪ್ರವೇಶದ ಪ್ರಯೋಜನವೇನು?
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಕುಸಿತವಾದ ಸಂದರ್ಭ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಮಧ್ಯಪ್ರವೇಶಿಸುತ್ತದೆ. ಡಾಲರ್‌ ಗಳನ್ನು ಬಿಡುಗಡೆಗೊಳಿಸಿ ರೂಪಾಯಿ ಕುಸಿತವನ್ನು ತಡೆಯುತ್ತದೆ. ಈ ಹಿಂದೆ ಅನೇಕ ಸಲ ಆರ್‌ ಬಿಐ ಈ ರೀತಿಯಾಗಿ ಮಧ್ಯಪ್ರವೇಶಿಸಿದೆ. ೭೮ ರೂ.ಗೆ ಕುಸಿಯುವುದಕ್ಕೆ ಮುನ್ನ ಆರ್‌ ಬಿಐ ರಕ್ಷಣೆ ನಿರ್ಣಾಯಕವಾಗುತ್ತದೆ.

ಭಾರತಕ್ಕಿರುವ ಅನುಕೂಲಕರ ಅಂಶ ಏನು?
ಭಾರತದ ವಿದೇಶಿ ವಿನಿಮಯ ಸಂಗ್ರಹ 607 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಇದು ದೇಶದ 12 ತಿಂಗಳಿಗೂ ಹೆಚ್ಚಿನ ಆಮದು ವೆಚ ಭರಿಸಲು ಸಾಕು. ಜಗತ್ತಿನ ನಾಲ್ಕನೇ ಅತಿ ದೊಡ್ಡ ವಿದೇಶಿ ವಿನಿಮಯ ಸಂಗ್ರಹ ಭಾರತದಲ್ಲಿದೆ. (ಚೀನಾ, ಜಪಾನ್‌, ಸ್ವಿಜರ್ಲೆಂಡ್‌, ಭಾರತ) ಇದು ಭಾರತಕ್ಕಿರುವ ಅನುಕೂಲಕರ ಅಂಶ.

ವಿಶಾಲವಾದ ಮಾರುಕಟ್ಟೆ
ಭಾರತ ಜಗತ್ತಿನ ಪ್ರಮುಖ ಮಾರುಕಟ್ಟೆ. ಭಾರತದ ಮಧ್ಯಮವರ್ಗದ ಜನತೆ ಇಡೀ ಜಗತ್ತಿಗೆ ಅದ್ಭುತವಾದ ಮಾರುಕಟ್ಟೆಯನ್ನು ಇಲ್ಲಿ ಸೃಷ್ಟಿಸಿದೆ. ಇದು ದೇಶೀಯ ಹಾಗೂ ವಿದೇಶಿ ಕಂಪನಿಗಳ ಆಕರ್ಷಣೆಯಾಗಿ ಉಳಿದಿದೆ. ಆದ್ದರಿಂದ ಯಾವುದೇ ಸಂದರ್ಭದಲ್ಲೂ ಆರ್ಥಿಕ ಚಟುವಟಿಕೆಗಳಿಗೆ ಆಸ್ಪದ ಇರುತ್ತದೆ.

ರಫ್ತುದಾರರಿಗೆ ಅನುಕೂಲ

ರೂಪಾಯಿ ಮೌಲ್ಯ ಇಳಿಕೆಯಿಂದ ಐಟಿ ತಂತ್ರಜ್ಞಾನ ಸೇವೆಯ ರಫ್ತುದಾರ ಕಂಪನಿಗಳಿಗೆ ಆದಾಯ ವೃದ್ಧಿಸುತ್ತದೆ. ಅವುಗಳು ಡಾಲರ್‌ ಲೆಕ್ಕದಲ್ಲಿ ಆದಾಯ ಗಳಿಸುವುದರಿಂದ ರೂಪಾಯಿಗೆ ಪರಿವರ್ತನೆಯಾದಾಗ ಲಾಭಾಂಶ ಹೆಚ್ಚುತ್ತದೆ.

Exit mobile version